ಮಂಗಳವಾರ, ಜುಲೈ 27, 2021
27 °C

ಮನೆಯವರ ಕಂಡು ಕಳ್ಳರು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ಇಲ್ಲಿಗೆ ಸಮಿಪದ ಚೊಕ್ಕಬೆಟ್ಟುವಿನ ಮನೆಯಿಂದ ಕಳವಿಗೆ ಯತ್ನಿಸಿದ ಕಳ್ಳರು, ಮನೆಯವರನ್ನು ಕಂಡು, ಕಳವಿಗೆ ಬಳಸುವ ವಸ್ತುಗಳನ್ನೂ ಬಿಟ್ಟು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.ಕಳವಿಗೆ ಉಪಯೋಗಿಸುವ ಅತ್ಯಾಧುನಿಕ ಮಾದರಿಯ ಕೊಕ್ಕೆ, ಕೀಲಿ ಕೈಗಳು, ಹೆಕ್ಸೋ ಬ್ಲೇಡ್, ಗಮ್, ಕೊಕ್ಕೆಯ ಉದ್ದಕ್ಕೆ ಸಹಕಾರಿಯಾಗಿರುವ ತುಂಡು ಪೈಪ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.ಭಾನುವಾರ ರಜಾದಿನವಾಗಿದ್ದರಿಂದ ಮನೆ ಮಂದಿ ರಾತ್ರಿ ಹೋಟೆಲ್‌ನಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗಿದಾಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದರು. ಗಾಬರಿಗೊಂಡ ಮನೆಯವರು ಬೊಬ್ಬೆಹಾಕಿದಾಗ ಕಳ್ಳರು ಕಾಲ್ಕಿತ್ತರು. ಓಡುವ ಅವಸರದಲ್ಲಿ ತಂದಿದ್ದ ವಸ್ತುಗಳನ್ನು ಬಿಟ್ಟುಹೋದರು.ಪೊಲೀಸ್ ನಿರಾಸಕ್ತಿ: ಈ ಪ್ರಕರಣದಲ್ಲಿ ಜಾಗೃತರಾಗಬೇಕಿದ್ದ ಪೊಲೀಸರು ನಿರಾಸಕ್ತಿ ವಹಿಸಿದ್ದಾರೆಂದು    ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಳವಿನ ಬಗ್ಗೆ ರಾತ್ರಿ ಸುರತ್ಕಲ್ ಪೊಲೀಸರಿಗೆ ದೂರವಾಣಿ ಕರೆ ಮಾಡಿದಾಗ ಹಾರಿಕೆಯ ಉತ್ತರ ನೀಡಿದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಸುದ್ದಿಗಾರರು ಠಾಣಾಧಿಕಾರಿಗೆ ವಿಷಯದ ತಿಳಿಸಿದಾಗ ಪೊಲೀಸ್ ಸಿಬ್ಬಂದಿ ಬರುವ ಮನಸ್ಸು ಮಾಡಿದರು.ಕಳವು ಪ್ರಕರಣ ನಿಗ್ರಹಿಸಲು ಇಲಾಖೆಗೆ ಅತ್ಯಾಧುನಿಕ ವಾಹನ ನೀಡಿದ್ದು ಪೊಲೀಸರು ಅದನ್ನು ನೈಜ ಉದ್ದೇಶಕ್ಕೆ ಬಳಸುತ್ತಿಲ್ಲ ಎಂದೂ ಸ್ಥಳೀಯರು ದೂರಿದ್ದಾರೆ.ಸೋಮವಾರ ಬೆಳಿಗ್ಗೆ ಸುರತ್ಕಲ್  ಠಾಣಾಧಿಕಾರಿ ಕೆ.ಯು.ಬೆಳ್ಳಿಯಪ್ಪ, ಸಬ್ ಇನ್‌ಸ್ಪೆಕ್ಟರ್ ಎಚ್.  ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಹಾಗೂ ಮನೆಮಂದಿಗೆ ರಕ್ಷಣೆಯ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.