ಶುಕ್ರವಾರ, ಜೂನ್ 18, 2021
28 °C

ಮಮತಾ ಪೂಜಾರಿ ಮನೆಯಲ್ಲಿ ಸಂಭ್ರಮ: ತಾಯಿ ಕಿಟ್ಟಿ ಪೂಜಾರಿ ಹರ್ಷ

ಪ್ರಜಾವಾಣಿ ವಾರ್ತೆ/ಪ್ರವೀಣ್ ಪಾಡಿಗಾರ್ Updated:

ಅಕ್ಷರ ಗಾತ್ರ : | |

ಮಂಗಳೂರು: `ಮಗಳ ಛಲ ಖುಷಿ ಕೊಟ್ಟಿದೆ. ಈ ಟೂರ್ನಿಯುದ್ದಕ್ಕೂ ಪ್ರದರ್ಶಿಸಿದ ಕೆಚ್ಚೆದೆಯ ಆಟ ರೋಮಾಂಚಕವಾಗಿತ್ತು~ ಎಂದು ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಅವರ ತಾಯಿ ಕಿಟ್ಟಿ ಪೂಜಾರಿ ಹೇಳಿದರು.ಭಾರತದ ವನಿತೆಯರ ತಂಡ ಚೊಚ್ಚಲ ವಿಶ್ವಕಪ್ ಕಬಡ್ಡಿ ಟೂರ್ನಿ ಗೆದ್ದ ಬಳಿಕ ಮಮತಾ ಪೂಜಾರಿ ಪೋಷಕರು `ಪ್ರಜಾವಾಣಿ~ ಜತೆ ದೂರವಾಣಿ ಮೂಲಕ ಭಾನುವಾರ ಸಡಗರ ಹಂಚಿಕೊಂಡರು.`ಎಳವೆಯಲ್ಲೇ ಅವಳಿಗೆ ಕ್ರೀಡೆ ಮೇಲೆ ಬಹಳ ಪ್ರೀತಿ. ಒಂದನೇ ಕ್ಲಾಸಿನಲ್ಲಿದ್ದಾಗಲೂ ಕ್ರೀಡೆಯಲ್ಲಿ ಬಹುಮಾನ ಗೆದ್ದಿದ್ದಳು. ಮಮತಾ ಅವರಲ್ಲಿ ಅಡಗಿರುವ ಕಬಡ್ಡಿ ಪ್ರತಿಭೆ ಗುರುತಿಸಿದ್ದು, ಪಿಯು ಕಾಲೇಜಿನ ಕೋಚ್ ರಮೇಶ ಸುವರ್ಣ. ಆರಂಭದಲ್ಲಿ ಸಾಕಷ್ಟು ಪ್ರೋತ್ಸಾಹ ನೀಡಿದರು. ತಂದೆ ಭೋಜ ಪೂಜಾರಿ, ಅಣ್ಣ ವಿಶ್ವನಾಥ ಕಷ್ಟಪಟ್ಟು ಆಕೆಗೆ ಬೇಕಾದ ಎಲ್ಲ ಅನುಕೂಲ ಕಲ್ಪಿಸಿ ಉತ್ತೇಜನ ನೀಡಿದರು~ ಎಂದು ಅವರು ಸ್ಮರಿಸಿದರು.`ಮಗಳು ಬಾಲ್ಯದಿಂದಲೂ ಕಷ್ಟಪಟ್ಟು ಮೇಲೆ ಬಂದಿದ್ದಾಳೆ. ಶಾಲೆಗೆ ಹೋಗುವಾಗ ನಿತ್ಯ 2.5ಕಿ.ಮೀ. ನಡೆದು ಸಾಗುತ್ತಿದ್ದಳು. ಸತತ ಅಭ್ಯಾಸ ನಡೆಸುತ್ತಿದ್ದಳು. ಅವಳು ಕಬಡ್ಡಿ ಆಡುತ್ತಿದ್ದಾಗ ಆರಂಭದಲ್ಲಿ ಊರಿನವರು ಹುಡುಗಿಯರಿಗೆ ಏಕೆ ಕಬಡ್ಡಿ ಎಂದು ಪ್ರಶ್ನಿಸುತಿದ್ದರು. ಈಗ ಅವರೇ ಮಗಳ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಾಳೆ. ನನ್ನ ಮಗಳ ಸಾಧನೆ ನನಗೂ ಹೆಮ್ಮೆ ಮೂಡಿಸಿದೆ. ಹಳ್ಳಿಯ ಹೆಣ್ಣು ಮಕ್ಕಳಿಗೆ ನನ್ನ ಮಗಳು ಆದರ್ಶ~ ಎಂದು ಕಿಟ್ಟಿ ಪೂಜಾರಿ ತಿಳಿಸಿದರು.ಪ್ರಬುದ್ಧ ಆಟ: `ಮಮತಾ ನಾಯಕಿ ಆದ ಬಳಿಕ ತುಂಬಾ ಪ್ರಬುದ್ಧವಾಗಿ ಆಡುತ್ತಿದ್ದಾಳೆ. ವಿಶ್ವ ಕಪ್ ಟೂರ್ನಿಯುದ್ದಕ್ಕೂ ಆಕೆ ತಂಡದ ಆಟಗಾರರಿಗೆ ಹೆಚ್ಚು ಅವಕಾಶ ಕಲ್ಪಿಸಿದಳು. ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಪಂದ್ಯ ಗೆಲ್ಲಿಸುವಂಥ ಆಟ ಆಡಿದಳು~ ಎಂದು ಸಹೋದರ ವಿಶ್ವನಾಥ ಪೂಜಾರಿ ಸಂಭ್ರಮ ಹಂಚಿಕೊಂಡರು.`ಅಕ್ಕನ ಸಾಧನೆ ಮಂತ್ರಮುಗ್ಧಗೊಳಿಸಿದೆ. ಅಕ್ಕ ಮನೆಗೆ ಬಂದು ಐದು ತಿಂಗಳೇ ಕಳೆದಿವೆ. ಅವಳು ಭೋಪಾಲ್‌ನಲ್ಲಿ ನಡೆದ ಪೂರ್ವ ತಯಾರಿ ಶಿಬಿರಕ್ಕೆ ಮುನ್ನ ಮನೆಗೆ ಬಂದಿದ್ದಳು. ಅವಳು ಮನೆಗೆ ಮರಳಿದಾಗ ಅವಳಿಗಿಷ್ಟವಾದ ಮೀನು ಸಾರು ಮಾಡುತ್ತೇವೆ. ಗೆದ್ದ ಬಳಿಕ ಮಮತಾ ಫೋನ್ ಮಾಡಿ ನಮ್ಮ ಜತೆ ಮಾತನಾಡಿದಾಗಲಂತೂ ತುಂಭಾ ಖುಷಿ ಆಯಿತು. ಆದರೆ ಹೆಚ್ಚು ಹೊತ್ತು ಮಾತನಾಡಲು ಆಗಲಿಲ್ಲ~ ಎಂದು ತಂಗಿ ಮಧುರಾ ಪೂಜಾರಿ ತಿಳಿಸಿದರು.`ಮಮತಾ ಅವಳಲ್ಲಿ ಅಗಾಧ ಪ್ರತಿಭೆ ಇದೆ ಎಂದು ಆರಂಭದಲ್ಲೇ ಅನಿಸಿತ್ತು. ಅವಳು ಸಾಧನೆ ಮಾಡಿರುವುದು ಸ್ವಂತ ಪರಿಶ್ರಮದಿಂದ. ಅವಳ ಸಾಧನೆ ಹೆಮ್ಮೆ ಮೂಡಿಸಿದೆ~ ಎಂದು ಪದವು ಪೂರ್ವ ಹಂತದಲ್ಲಿ ಮಮತಾ ಅವರ ಕೋಚ್ ಆಗಿದ್ದ ರಮೇಶ್ ಸುವರ್ಣ ತಿಳಿಸಿದರು.`ಮನೆಯವರೆಲ್ಲ ಒಟ್ಟಿಗೆ ಕುಳಿತು ಭಾರತ ತಂಡದ ಎಲ್ಲ ಪಂದ್ಯಗಳನ್ನು ವೀಕ್ಷಿಸಿದೆವು. ನಮ್ಮೂರಿಗೆ 4 ವರ್ಷದ ಹಿಂದಷ್ಟೇ ವಿದ್ಯುತ್ ಬಂತು. ಆಗ ಮಗ ಮೊದಲು ಮಾಡಿದ ಕೆಲಸ ಮನೆಗೆ ಟಿ.ವಿ ತಂದಿದ್ದು. ಎಲ್ಲ ಒಟ್ಟಿಗೆ ಕುಳಿತು ಮಗಳ ಆಟವನ್ನು ಟಿ.ವಿ ಯಲ್ಲಿ ವೀಕ್ಷಿಸುವಾಗ ಆಗುವ ಖುಷಿಗೆ ಪಾರವೇ ಇಲ್ಲ~ ಎಂದು ಕಿಟ್ಟಿ ಪೂಜಾರಿ ಸಂಭ್ರಮಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.