ಬುಧವಾರ, ಮೇ 12, 2021
19 °C

ಮಮ್ಮಿ-ಡ್ಯಾಡಿ ಬಿಟ್ಟು, ಅಪ್ಪ-ಅಮ್ಮ ರೂಢಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ (ಕೆ.ಎಚ್ ಜಯಪ್ಪ ವೇದಿಕೆ): `ಮಮ್ಮಿ-ಡ್ಯಾಡಿ ಬಿಟ್ಟು, ಅಪ್ಪ-ಅಮ್ಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು~ ಎಂದು ಶಾಸಕ ಎಂ. ಬಸವರಾಜ ನಾಯ್ಕ ಕರೆ ನೀಡಿದರು.ಚನ್ನಗಿರಿ ತಾಲ್ಲೂಕಿನ ಕೆಂಪನಹಳ್ಳಿ- ವೆಂಕಟೇಶ್ವರಪುರ ಗ್ರಾಮದಲ್ಲಿ ಭಾನುವಾರ ನಡೆದ 13ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಇಂದು ತಾಯಿಯನ್ನು `ಅಮ್ಮ~ ಎಂದು ಕರೆಯುವ ಬದಲು `ಮಮ್ಮಿ~, `ಮಮ್~ ಎಂದೂ, ಅಪ್ಪನನ್ನು `ಡ್ಯಾಡಿ~ `ಡಾ~ ಎಂದು ಕರೆಯಲಾಗುತ್ತಿದೆ. ಈ ಮೂಲಕ ಪಾಶ್ಚಾತ್ಯ ಸಂಸ್ಕೃತಿಗೆ ಒತ್ತು ನೀಡಲಾಗುತ್ತಿದೆ.ಹಳ್ಳಿಗಾಡಿನಲ್ಲಿ ಮಾತ್ರ `ತಾಯಿ-ತಂದೆ~ ಪದ ಬಳಕೆಯಲ್ಲಿದೆ. ಕನ್ನಡಿಗರು ಇನ್ನಾದರೂ `ಮಮ್ಮಿ-ಡ್ಯಾಡಿ ಬಿಟ್ಟು `ಅಪ್ಪ-ಅಮ್ಮ~ ಸಂಸ್ಕೃತಿ ರೂಢಿಸಿಕೊಳ್ಳಬೇಕು ಎಂದರು.ಉತ್ತರ ಮತ್ತು ದಕ್ಷಿಣ ಕನ್ನಡದಲ್ಲಿ ಕನ್ನಡದ ಬದಲು ಇತರ ಭಾಷೆಗಳನ್ನು ಬಳಸಲಾಗುತ್ತಿದೆ. ಬೆಂಗಳೂರಿನಲ್ಲಂತೂ ಕನ್ನಡ ಅಂದರೆ ಎನ್ನಡ, ಎಕ್ಕಡ ಎನ್ನುವ ಸ್ಥಿತಿ ಉಂಟಾಗಿದೆ ಎಂದು ವಿಷಾದಿಸಿದ ಅವರು, ಶಿವಮೊಗ್ಗದಲ್ಲಿ ಮಾತ್ರ ಅಪ್ಪಟ `ಕನ್ನಡ~ ಕಂಗೊಳಿಸುತ್ತಿದೆ. ಹಿಂದೆ ಚನ್ನಗಿರಿ ಕೂಡಾ ಶಿವಮೊಗ್ಗ ಜಿಲ್ಲೆಗೆ ಸೇರಿತ್ತು. ಹಾಗಾಗಿ, ಈ ಭಾಗದ ಜನರಲ್ಲಿ ಕನ್ನಡಾಭಿಮಾನ ಹೆಚ್ಚು ಎಂದು ಹೇಳಿದರು.ರಾಜ್ಯಾದ್ಯಂತ ಪ್ರವಾಸ ಕೈಗೊಂಡಾಗ ಬಹುತೇಕರು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಕೆಲವರು ನಾಚಿಕೆ ಪಡುತ್ತಾರೆ. ಆದರೆ, ಕನ್ನಡದಲ್ಲಿ ಮಾತನಾಡಲೂ ಬಾರದವರು ಕೂಡಾ ಶಾಸಕರಾಗಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಈ ನಿಟ್ಟಿನಲ್ಲಿ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.ಸಮ್ಮೇಳನ ಉದ್ಘಾಟಿಸಿದ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಮ್ಮೇಳನಾಧ್ಯಕ್ಷ ಪ್ರೊ.ಎಸ್.ಬಿ. ರಂಗನಾಥ್ ಸಿರಿಗೆರೆ ವಿದ್ಯಾಸಂಸ್ಥೆಯಲ್ಲಿ ಉತ್ತಮ ಆಡಳಿತಗಾರ ಎಂದು ಹೆಸರು ಗಳಿಸಿದ್ದಾರೆ. ಅವರನ್ನು ಸಮ್ಮೇಳನಾ ಅಧ್ಯಕ್ಷರನ್ನಾಗಿ ಮಾಡಿರುವುದು ಅರ್ಥಪೂರ್ಣ. ವೆಂಕಟೇಶ್ವರಪುರ ಗ್ರಾಮದ ಸುತ್ತಮುತ್ತ ಆಂಧ್ರದವರೇ ಹೆಚ್ಚು ಜನರಿದ್ದಾರೆ. ಆದರೆ, ಯಾವುದೇ ಭಾಷಾ ಭೇದವಿಲ್ಲದೇ, ಇಲ್ಲಿನ ಜನ ಕನ್ನಡ ಪ್ರೇಮ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಡಾ.ಚಂದ್ರಶೇಖರ ಕಂಬಾರ ಅವರಿಗೆ 8ನೇ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ನಾಡು-ನುಡಿಯ ಅಭಿವೃದ್ಧಿಗೆ ಸಾಹಿತಿಗಳ ಕೊಡುಗೆ ಅಪಾರ. ಪಂಪ-ರನ್ನ ಅವರಿಂದ ಹಿಡಿದು ಬಸವಣ್ಣನವರೆಗೆ ಅನೇಕರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಹಿಂದೆ ಬರಹಗಾರರಿಗೆ ರಾಜಾಶ್ರಯ ಇರುತ್ತಿತ್ತು. ಆದರೆ, ಇಂದು ಬರಹಗಾರರು, ಪತ್ರಕರ್ತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಲೇಖಕರು ಆರ್ಥಿಕವಾಗಿ ಸಬಲರಾದಾಗ ಇನ್ನೂ ಉತ್ತಮ ಸಾಹಿತ್ಯ ಕೃತಿಗಳು ಬರಲು ಸಾಧ್ಯ~ ಎಂದು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.