ಗುರುವಾರ , ಜೂನ್ 4, 2020
27 °C

ಮಯ್ಯಾ ಮಾಂತ್ರಿಕತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಯ್ಯಾ ಮಾಂತ್ರಿಕತೆ...

ರುಚಿಕರ,ಸ್ವಾದಿಷ್ಟ ಕರ ವೈವಿಧ್ಯಮಯ ಭಕ್ಷ್ಯಗಳನ್ನು ಬಾಯಿಚಪ್ಪರಿಸಿ ತಿಂದು ತೇಗಿ ಸಂತೃಪ್ತ ಭಾವದಿಂದ ತೆರಳಿದವರು, ಜಿಹ್ವಾ ಚಾಪಲ್ಯದಿಂದ ಮತ್ತೆ ಮತ್ತೆ ದೂರದ ಜಯನಗರದ `ಮಯ್ಯಾ ರೆಸ್ಟೊರೆಂಟ್~ನತ್ತ ಅನಿವಾರ್ಯವಾಗಿ ಹೆಜ್ಜೆ ಹಾಕುತ್ತಿದ್ದ `ಆಹಾರ ಪ್ರೇಮಿ~ಗಳು ಇನ್ನು ಮುಂದೆ ಅಷ್ಟು ದೂರ ಸಾಗಬೇಕಾಗಿಲ್ಲ.

 

ಈ ರೆಸ್ಟೊರೆಂಟ್‌ಗಳು ಮುಂದಿನ ಕೆಲ ದಿನಗಳಲ್ಲಿ ಬೆಂಗಳೂರಿನ ಇನ್ನೂ ಕೆಲವು ಬಡಾವಣೆಗಳಲ್ಲಿ ಆರಂಭಗೊಳ್ಳಲಿವೆ. ಹೀಗಾಗಿ ಮನೆ ಹತ್ತಿರವೇ ಈ ಬ್ರಾಂಡ್‌ನ  ರುಚಿಕರ ಊಟ, ತಿನಿಸುಗಳನ್ನು ಹತ್ತಿರದಲ್ಲಿಯೇ ಸವಿಯುವ ಅವಕಾಶ ದೊರೆಯಲಿದೆ.ಸರಿ ಸುಮಾರು ಎರಡು ವರ್ಷಗಳ ಹಿಂದೆ ಜಯನಗರದಲ್ಲಿ `ಮಯ್ಯಾ ರೆಸ್ಟೊರೆಂಟ್~ ಸ್ಥಾಪಿಸಿ ಅಲ್ಪಾವಧಿಯಲ್ಲಿ ಭೋಜನ ಮತ್ತು ಕುರುಕಲು ತಿಂಡಿಪ್ರಿಯರ ಮನಗೆದ್ದಿರುವ ಸದಾನಂದ ಮಯ್ಯಾ ಅವರು, ಈಗ ನಗರದ ವಿವಿಧ ಭಾಗಗಳಲ್ಲಿ ತಮ್ಮ ರೆಸ್ಟೊರೆಂಟ್ ಮತ್ತು ಮಳಿಗೆಗಳನ್ನು ಆರಂಭಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

 

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮಲ್ಲೇಶ್ವರಂನ 11ನೇ ಅಡ್ಡರಸ್ತೆಯಲ್ಲಿ ಕಳೆದ ವಾರ ಹೊಸ ರೆಸ್ಟೊರೆಂಟ್ ಆರಂಭಿಸಿದ್ದಾರೆ. ಹೀಗಾಗಿ  ತಿಂಡಿ, ಸಿಹಿ ತಿನಿಸು ಮತ್ತು ಊಟವನ್ನು ಮನೆ ಸಮೀಪವೇ ಸೇವಿಸಬಹುದಾಗಿದೆ.ವೈವಿಧ್ಯಮಯ ಆಹಾರ, ಕುರುಕಲು ತಿಂಡಿ, ಸಿಹಿ ತಿನಿಸುಗಳ ಬಗ್ಗೆ ಡಾ. ಸದಾನಂದ ಮಯ್ಯ ಅವರಿಗೆ ಇರುವ ಪ್ರೀತಿ ಅನನ್ಯವಾದದ್ದು. ಆಧುನಿಕತೆಯ ಭರಾಟೆಯಲ್ಲಿ ಕಳೆದ ಹೋಗುತ್ತಿದೆ ಎನ್ನುವ ಆತಂಕ ಮೂಡಿಸಿರುವ ಸಾಂಪ್ರದಾಯಿಕ ಅಡುಗೆ ಕಲೆ ಮತ್ತು ರುಚಿಗೆ ಮರು ಹುಟ್ಟು ನೀಡಿ, ಅದಕ್ಕೆ ಅತ್ಯಾಧುನಿಕ ತಾಂತ್ರಿಕತೆಯ ಸ್ಪರ್ಶ ನೀಡಿ ಹೊಸ ರುಚಿ ಬೆರೆಸಿ ಹಳಬರು ಮತ್ತು ಹೊಸ ಪೀಳಿಗೆಯವರಿಗೂ ಉಣಬಡಿಸುತ್ತಿದ್ದಾರೆ.ಇವರಲ್ಲಿ ಇರುವ ಆಹಾರದ ಮಾಂತ್ರಿಕ ಗುಣಕ್ಕೆ   ಮನಸೋಲದವರೇ ಇಲ್ಲ. ಗ್ರಾಹಕರ ಇಷ್ಟಾನಿಷ್ಟಗಳನ್ನೆಲ್ಲ ಅರಿತುಕೊಂಡು, ಅತ್ಯುತ್ತಮ ಸರಕು   ಗಳನ್ನಷ್ಟೇ ಬಳಸಿ ಆಹಾರ ತಂತ್ರಜ್ಞಾನದಲ್ಲಿ ಸದಾ ನಾವೀನ್ಯತೆ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.ದಶಕಗಳ ಕಾಲ `ಎಂಟಿಆರ್~ ಬ್ರಾಂಡ್ ಕಟ್ಟಿ ಬೆಳೆಸಿ 2007ರಲ್ಲಿ ಅದನ್ನು ನಾರ್ವೆಯ ಓರ್ಕ್ಲಾ ಸಂಸ್ಥೆಗೆ ಮಾರಾಟ ಮಾಡಿ ಅಲ್ಲಿಂದ ಹೊರ ಬಂದು, `ಮಯ್ಯಾ ರೆಸ್ಟೊರೆಂಟ್~ ಹೆಸರಿನಲ್ಲಿ ಹೊಸ ಉದ್ಯಮದ ಸಾಹಸಕ್ಕೆ ಕೈಹಾಕಿರುವ ಸದಾನಂದ ಅವರು, ಅದರಲ್ಲಿಯೂ ತಮ್ಮ ಯಶೋಗಾಥೆ ಮುಂದುವರೆಸಿದ್ದಾರೆ. ಇಲ್ಲಿಯೂ  ಅವರ ಶ್ರದ್ಧೆ, ಬದ್ಧತೆಯ ಮಾಂತ್ರಿಕ ಸ್ಪರ್ಶ ಕೆಲಸ ಮಾಡಿದೆ.ಈಗ ಅವರ ಜೊತೆ ಪುತ್ರ ಸುದರ್ಶನ ಅವರೂ ಕೈಜೋಡಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಮತ್ತು ಆಡಳಿತ ನಿರ್ವಹಣಾ ಸಂಸ್ಥೆಯ (ಐಐಎಂ-ಬೆಂಗಳೂರು) ಪದವೀಧರ ಆಗಿರುವ ಇವರು ಮೊದಲಿನಿಂದಲೂ   ಕುಟುಂಬದ ಪರಂಪರಾಗತ `ಆಹಾರ ಉದ್ಯಮ~ದ ಬಗ್ಗೆ ಒಲವು ರೂಢಿಸಿಕೊಂಡಿದ್ದವರು.ಆಹಾರೆ ಭೋಜನವಿದು... ಎಂದು ಪ್ರತಿಯೊಬ್ಬರೂ ಬಾಯಿ ಚಪ್ಪರಿಸುವ ಭಕ್ಷ್ಯ, ತಿನಿಸುಗಳನ್ನು ತಯಾರಿಸಿ ಉಣ ಬಡಿಸುವ ಉದ್ಯಮಕ್ಕೆ ಸಂಘಟಿತ ಸ್ವರೂಪ ನೀಡಿ ಬೆಳೆಸುವ ಮಾಂತ್ರಿಕ ಸದಾನಂದ ಮಯ್ಯ ಮತ್ತು ವಹಿವಾಟಿಗೆ ಆಧುನಿಕತೆ ಮತ್ತು ತಾರುಣ್ಯದ ಸ್ಪರ್ಶ ನೀಡಲು ತಂದೆಗೆ ಸಹಕಾರ ನೀಡುತ್ತಿರುವ  ಪುತ್ರ ಸುದರ್ಶನ ಅವರ ಜತೆಗಿನ ಸಂದರ್ಶನದ ಆಯ್ದ ಭಾಗಗಳು...* ಈ ಉದ್ದಿಮೆಯಲ್ಲಿ ಹಳೆಯ ಬೇರು, ಹೊಸ ಚಿಗುರಿನ ಸಂಗಮ ಹೇಗಿದೆ?

ಹೊಸ ತಲೆಮಾರು ಸಾಮಾನ್ಯವಾಗಿ ವೇಗಕ್ಕೆ ಆದ್ಯತೆ ನೀಡುತ್ತದೆ. ಆದರೆ, ಈ ವಹಿವಾಟಿನಲ್ಲಿ ಸುದರ್ಶನ ಎಲ್ಲವನ್ನೂ ಕರತಲ ಮಾಡಿಕೊಳ್ಳಲು ಇನ್ನೂ ಕೆಲ ಸಮಯ ಬೇಕಾಗಿದೆ. ಹೀಗಾಗಿ ಸದ್ಯಕ್ಕೆ ನಾನೇ ಮಾರ್ಗದರ್ಶನ ನೀಡುತ್ತ ವೇಗವಾಗಿ ಸಾಗುತ್ತಿರುವೆ. ಕೆಲ ಹೊಸ ಬದಲಾವಣೆಗಳ ಹೊಣೆಗಳನ್ನು ಹೊತ್ತುಕೊಂಡಿರುವ ಸುದರ್ಶನ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.* ಹೊಸ ಉದ್ಯಮದ ಸವಾಲುಗಳೇನು?

1976ರಲ್ಲಿ ಕೆಲ ಕಾಲ ಬಾಗಿಲು ಹಾಕಿ ಆನಂತರ ಉದ್ಯಮಕ್ಕೆ ಮರಳಿದ ನಂತರ ಪಾಲಿಸಿಕೊಂಡು ಬಂದ ವಹಿವಾಟಿನ ಸ್ವರೂಪವನ್ನೇ ಈಗಲೂ ಮುಂದುವರೆಸಿಕೊಂಡು ಬರಲಾಗಿದೆ.ರೆಸ್ಟೋರೆಂಟ್ ಜತೆ ವೈವಿಧ್ಯಮಯ ಸಿಹಿ, ಕುರುಕಲು ತಿಂಡಿ ತಯಾರಿಸುತ್ತ ಹೆಚ್ಚೆಚ್ಚು ಗ್ರಾಹಕರನ್ನು ತಲುಪುತ್ತಿದ್ದೇವೆ. ಸಿಹಿ, ಖಾರ, ಕಾಫಿ, ರೆಸ್ಟೊರೆಂಟ್- ಹೀಗೆ ವಹಿವಾಟಿನಲ್ಲಿ ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿಕೊಂಡು ಮುಂದುವರೆಯುತ್ತಿದ್ದೇವೆ.* ಸಂಸ್ಥೆಯ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ಒಂದಿಷ್ಟು ಮಾಹಿತಿ...

ಸದ್ಯಕ್ಕೆ 500ರಷ್ಟು ಬಗೆ ಬಗೆಯ ವಿಭಿನ್ನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇವೆಲ್ಲವನ್ನೂ ಗ್ರಾಹಕರಿಗೆ ಒಂದೆಡೆಯೇ ಪರಿಚಯಿಸಲು    ಸೂಕ್ತ ಷೋರೂಂ ಸ್ಥಾಪಿಸುತ್ತಿದ್ದೇವೆ.

 

ಮಾಲ್, ಮಳಿಗೆಗಳಲ್ಲಿ ತ್ವರಿತವಾಗಿ ಬಿಕರಿಯಾಗುವ ಉತ್ಪನ್ನಗಳನ್ನಷ್ಟೇ ಪ್ರದರ್ಶಿಸುತ್ತಾರೆ. ಅದಕ್ಕೆ ನಮ್ಮದೇ ಆದ ಷೋರೂಂ ಸ್ಥಾಪಿಸಲು ಮುಂದಾಗಿದ್ದೇವೆ. ಅಗತ್ಯ ಇರುವ ಕಡೆಗಳಲ್ಲಿ ರೆಸ್ಟೊರೆಂಟ್ ಮತ್ತು ಇತರ ಕಡೆಗಳಲ್ಲಿ ಕೇವಲ `ಶಾಪ್ ಇನ್ ಶಾಪ್~ ಮಳಿಗೆಗಳನ್ನು ಆರಂಭಿಸುತ್ತಿದ್ದೇವೆ.* ಮಯ್ಯಾ ರೆಸ್ಟೊರೆಂಟ್ ವಿಸ್ತರಣೆ ಬಗ್ಗೆ..

ಶೀಘ್ರದಲ್ಲಿಯೇ ಇಂದಿರಾ ನಗರದ ಡಬಲ್ ರೋಡ್‌ನಲ್ಲಿ ಇನ್ನೊಂದು ಮಳಿಗೆ ತೆರೆಯಲಾಗುತ್ತಿದೆ.  ಕೋರಮಂಗಲ, ರಾಜಾಜಿನಗರ, ಎಚ್‌ಎಸ್‌ಆರ್ ಲೇಔಟ್‌ಗಳಲ್ಲಿ ಮಳಿಗೆ ತೆರೆಯಲಾಗುವುದು.

 

2012ರ  ಮಾರ್ಚ್ ಹೊತ್ತಿಗೆ ಈ `ಶಾಪ್ ಇನ್ ಶಾಪ್~ ಪರಿಕಲ್ಪನೆಯ ಮಳಿಗೆಗಳು ಕಾರ್ಯಾರಂಭ ಮಾಡಲಿವೆ. ರೆಸ್ಟೋರೆಂಟ್‌ಗಳ ವಿಸ್ತರಣೆಗೆ ಸೂಕ್ತ ಸ್ಥಳದ ಶೋಧದಲ್ಲಿ ಇದ್ದೇವೆ. ನಗರದಲ್ಲಿನ ಐದು ಟೋಟಲ್ ಮಾಲ್‌ಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲಿ ನಮ್ಮದೇ ಮಳಿಗೆ ತೆರೆಯುತ್ತೇವೆ.* ಹೊಸ ಗ್ರಾಹಕರನ್ನು ಹೇಗೆ ಸೆಳೆಯುವಿರಿ?

ಬಳಕೆದಾರರ ಇಷ್ಟಾನಿಷ್ಟ ತಿಳಿದುಕೊಳ್ಳಲು ಹೊಸ ಉತ್ಪನ್ನ ಬಿಡುಗಡೆ ಮಾಡಿ ಅದಕ್ಕೆ ಗ್ರಾಹಕರ ಪ್ರತಿಕ್ರಿಯೆ ನೋಡಿ ಮುಂದುವರೆಯುತ್ತೇವೆ.ಯುವಕರು ಬಹುರಾಷ್ಟ್ರೀಯ ಉತ್ಪನ್ನಗಳ ಬದಲಿಗೆ ಸಾಂಪ್ರದಾಯಿಕ ಕೋಡುಬಳೆ ಮತ್ತಿತರ ತಿನಿಸುಗಳತ್ತ ಗಮನ ಹರಿಸುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದೇ ಉದ್ದೇಶಕ್ಕೆ ಯುವ ಪೀಳಿಗೆ ಗುರಿಯಾಗಿರಿಸಿಕೊಂಡೇ   ಜಾಹೀರಾತು ಆರಂಭಿಸಲಾಗಿದೆ. ಟಿವಿ ಜಾಹೀರಾತು ಕೂಡ ಆರಂಭವಾಗಿದೆ.* ತಂತ್ರಜ್ಞಾನ ಬಳಕೆ ಹೇಗಿದೆ?

ಉತ್ಪನ್ನಗಳನ್ನು ಸಿದ್ಧಪಡಿಸುವಲ್ಲಿ  ಸದ್ಯಕ್ಕೆ `ಸೆಮಿ ನ್ಯಾನೊ~ ಹಂತ ಬಳಸುತ್ತಿದ್ದೇವೆ.  ಇನ್ನೂ ಒಂದು ವರ್ಷ ಬಿಟ್ಟು ನೋಡಿ ಸಾಕಷ್ಟು ಬದಲಾವಣೆ ತಂದಿರುತ್ತೇವೆ. ರುಚಿಯಲ್ಲಿ ಅದ್ಭುತ ಬದಲಾವಣೆ ಕಾಣುವಿರಿ.* ರೆಸ್ಟೋರೆಂಟ್ ಯಶಸ್ಸಿನ ಗುಟ್ಟು ಏನು?


ನಮ್ಮದು   ಕೇಂದ್ರೀಕೃತ ಕಿಚನ್ ಪರಿಕಲ್ಪನೆ. ಅಂದರೆ, ಮಾಸ್ಟರ್ ಕಿಚನ್‌ನಲ್ಲಿಯೇ ಎಲ್ಲ ಬಗೆಯ ತಿನಿಸು, ಆಹಾರ ಉತ್ಪನ್ನ ಸಿದ್ಧಗೊಳ್ಳುತ್ತವೆ. ಮಲ್ಲೇಶ್ವರಂ ರೆಸ್ಟೊರೆಂಟ್‌ಗೂ ಊಟ, ತಿಂಡಿ,  ಇಡ್ಲಿ ಹಿಟ್ಟು, ದೋಸೆ ಹಿಟ್ಟು ಇಲ್ಲಿಂದಲೇ (ಒಡೆ ಹಿಟ್ಟು ಹೊರತುಪಡಿಸಿ) ಪೂರೈಕೆಯಾಗುತ್ತದೆ.

 

ಇದರಿಂದ ಒಂದೇ  ಗುಣಮಟ್ಟದ ತಿನಿಸು ಪೂರೈಸಲು ಸಾಧ್ಯವಾಗುತ್ತದೆ. ಈ ಮಾಸ್ಟರ್ ಕಿಚನ್ ಸಾಮರ್ಥ್ಯ ಸದ್ಯಕ್ಕೆ ಕೇವಲ 20ರಷ್ಟು ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದೇವೆ.  ಶೇ 80ರಷ್ಟು ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳು ಇವೆ.ನಮ್ಮಲ್ಲಿ ಎಲ್ಲವೂ ಯಾಂತ್ರೀಕೃತ. ವಿಶ್ವದಾದ್ಯಂತ ಎಲ್ಲೆಡೆಯಿಂದ ಯಂತ್ರೋಪಕರಣಗಳನ್ನು ತರಿಸಲಾಗಿದೆ. ಬರ್ಫಿ, ಉಂಡೆ, ಕೋಡು ಬಳೆ, ಚಕ್ಕುಲಿ,  ಮೈಸೂರು ಪಾಕ್ ಮತ್ತು ಸದ್ಯದಲ್ಲೇ ಸೋನ್ ಪಾಪಡಿ, ಹೀಗೆ ಎಲ್ಲ ಉತ್ಪನ್ನಗಳ ತಯಾರಿಕೆಯಲ್ಲಿ ಎಲ್ಲವೂ ಸ್ವಯಂ ಚಾಲಿತ. ಸಾಂಪ್ರದಾಯಿಕ ಶೈಲಿಯಲ್ಲಿ ಕೈಯಲ್ಲಿಯೇ  ತಯಾರಿಸಿದ ರುಚಿಯ ಅನುಭವ ನೀಡುವುದು  ನಮ್ಮ ವೈಶಿಷ್ಟ್ಯ. 20 ವರ್ಷಗಳಿಂದ ಎಂಜಿನಿಯರ್‌ಗಳು ನಮ್ಮ ಜತೆಯಲ್ಲಿ ಇದ್ದಾರೆ.* ಮನೆ, ಮನೆಗೆ ತಿಂಡಿ, ಊಟ ಸರಬರಾಜು ವ್ಯವಸ್ಥೆ ಹೇಗೆ?

ಆರಂಭದಲ್ಲಿ ವಯಸ್ಸಾದವರ ಅಗತ್ಯಗಳನ್ನಷ್ಟೆ ಪೂರೈಸಲು ಮುಂದಾಗಿದ್ದೇವು. ಈಗ ಎಲ್ಲರ, ಎಲ್ಲ ಬಗೆಯ ಬೇಕು ಬೇಡಗಳನ್ನು ಪೂರೈಸಲು ಸಿದ್ಧರಾಗಿದ್ದೇವೆ.  ಸದ್ಯಕ್ಕೆ ಜಯನಗರ ಸುತ್ತಮುತ್ತ, ಜೆಪಿ, ಬನಶಂಕರಿ 2ನೇ ಹಂತ- ವಿಸ್ತರಣೆಗಳಲ್ಲಿ ಈ ಸೇವೆ ಲಭ್ಯ ಇದೆ.

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆ ತಿಂಡಿ ಮತ್ತು ರಾತ್ರಿ ಊಟ ಪೂರೈಸುತ್ತಿದ್ದೇವೆ. ಕನಿಷ್ಠ ಮಿತಿ ನಿಗದಿಪಡಿಸಿಲ್ಲ. ಹಳೆ ಮೈಸೂರಿನವರ ಸಂಬಾರ ಅನ್ನ, ಮೊಸರನ್ನ, ದಕ್ಷಿಣದವರ ಚಪಾತಿ, ಬಿಸಿಬೇಳೆ ಭಾತ್, ಉತ್ತರ ಕರ್ನಾಟಕ ಎಣ್ಣೆಗಾಯಿ ಬದನೆಕಾಯಿ, ಸೊಪ್ಪಿನ ಪಲ್ಯ ಪೂರೈಸುತ್ತೇವೆ. ಮಲ್ಲೇಶ್ವರಂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ  ಎರಡು ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗುವುದು.* ಭವಿಷ್ಯದ ಗುರಿಗಳೇನು?

10 ವರ್ಷಗಳಲ್ಲಿ ಪಿಜ್ಜಾ, ಬರ್ಗರ್ ಬದಲಿಗೆ ಯುವ ಪೀಳಿಗೆಯು ಚಕ್ಕುಲಿ, ಕೋಡುಬಳೆ ಮತ್ತಿತರ ಸಾಂಪ್ರದಾಯಿಕ ತಿನಿಸುಗಳನ್ನೂ ಹೆಚ್ಚಾಗಿ ಸೇವಿಸುವಂತಾಗಬೇಕು ಎನ್ನುವುದು ನಮ್ಮ ಹೆಗ್ಗುರಿಯಾಗಿದೆ.ಹೊಸ ತಲೆಮಾರಿನವರು ಬಹುರಾಷ್ಟ್ರೀಯ ಸಂಸ್ಥೆಗಳ ಪಿಜ್ಜಾ, ಮ್ಯಾಕ್‌ಡೋನಾಲ್ಡ್‌ದ ಪ್ರವಾಹದಲ್ಲಿ ಕೊಚ್ಚಿ ಹೋಗುವುದನ್ನು ತಡೆದು, ನಮ್ಮದೇ ಆದ ತಿಂಡಿ ತಿನಿಸುಗಳತ್ತ ಅವರ ಗಮನ ಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.* ರಫ್ತು ವಹಿವಾಟು ಹೇಗಿದೆ?


ರಫ್ತು ವಹಿವಾಟನ್ನೂ ಸದ್ಯಕ್ಕೆ ಆರಂಭಿಸಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ಕಠಿಣ ಮಾರುಕಟ್ಟೆ ಆಗಿರುವ   ಜಪಾನ್‌ನಲ್ಲಿ ಉತ್ಪನ್ನಗಳನ್ನು ಪರಿಚಯಿಸಲಾಗಿದೆ.  ಅಲ್ಲಿ ಉತ್ಪನ್ನಗಳ ಮೇಲೆ  ಕಠಿಣ ನಿಯಂತ್ರಣ ಕ್ರಮಗಳಿವೆ. ಅಲ್ಲಿ ಉತ್ತೀರ್ಣಗೊಂಡರೆ ಬೇರೆ ಕಡೆ ಯಶಸ್ಸು ಕಟ್ಟಿಟ್ಟ ಬುತ್ತಿ.* ಸರಕುಗಳ ತಯಾರಿಕಾ ಘಟಕದ ಆಲೋಚನೆ ಏನಿದೆ?

ಕನಕಪುರ ರಸ್ತೆಯಲ್ಲಿ ಹೊಸ ರೂ. 60 ಕೋಟಿ ವೆಚ್ಚದಲ್ಲಿ ಹೊಸ ತಯಾರಿಕಾ ಘಟಕ ಸ್ಥಾಪನೆ ಮಾಡಲಾಗುವುದು. ಸದ್ಯಕ್ಕೆ ರೂ. 18 ಕೋಟಿಗಳಷ್ಟು ವಹಿವಾಟು ನಡೆಯುತ್ತಿದೆ. ದೇಶಿ ಮತ್ತು ರಫ್ತು ವಹಿವಾಟಿನ ಮೂಲಕ 5 ವರ್ಷಗಳಲ್ಲಿ ವಾರ್ಷಿಕ ರೂ. 700 ರಿಂದ ರೂ. 800 ಕೋಟಿಗಳಷ್ಟು ವಹಿವಾಟು ನಡೆಸುವ ಗುರಿ ಹಾಕಿಕೊಳ್ಳಲಾಗಿದೆ.* ಸಂಸ್ಥೆಯ ಮಹತ್ವಾಕಾಂಕ್ಷೆ ಏನು?

 ಬಹುರಾಷ್ಟ್ರೀಯ ಸಂಸ್ಥೆಗಳ ಮಾದರಿಯಲ್ಲಿ ಸರಣಿ ಮಳಿಗೆ ಪರಿಕಲ್ಪನೆ ವಿಸ್ತರಣೆ ನಮ್ಮ  ಭವಿಷ್ಯದ ಆಲೋಚನೆ ಇದೆ. ಎಲ್ಲೆಡೆಯೂ ಒಂದೇ ಬಗೆಯ ಒಂದೇ ಗುಣಮಟ್ಟದ ಸರಕು ದೊರೆಯಬೇಕು ಎನ್ನುವುದು ನಮ್ಮ ಮುಖ್ಯ ಕಾಳಜಿ. ಅದೇ ಕಾರಣಕ್ಕೆ ನಿಧಾನವಾಗಿ ಹೆಜ್ಜೆ ಇಡುತ್ತಿದ್ದೇವೆ.ಸುದರ್ಶನ ಅವರ ಪಾಲಿಗೆ ತಂದೆ ಸದಾನಂದ ಅವರೇ ದೊಡ್ಡ ವಿಶ್ವವಿದ್ಯಾನಿಲಯ. ವಹಿವಾಟಿನ ಎಲ್ಲ ಗುಟ್ಟುಗಳನ್ನು ತಿಳಿದುಕೊಂಡಿರುವೆ ಎಂದು ಭಾವಿಸಿರುವೆ. ಇನ್ನೂ ಕಲಿಯುವುದೂ ಸಾಕಷ್ಟಿದೆ ಎನ್ನುತ್ತಾರೆ ಅವರು.ಯಾವುದೇ ಉತ್ಪನ್ನದ ಸೇವನೆ  ಒಂದು ಮಿತಿಗಿಂತ ಹೆಚ್ಚಿಗೆ ಇರಬಾರದು. ಪಾಶ್ಚಿಮಾತ್ಯರಿಗೆ ಹೋಲಿಸಿದರೆ ನಮ್ಮವರದು ಎಲ್ಲವೂ ಅತಿ ಎನ್ನುವಂತಹ ವರ್ತನೆ. ಈ ಬಗೆಯ ಆಹಾರ, ಪಾನೀಯಗಳ ಸೇವನೆ ವೈಖರಿ ಬದಲಾಯಿಸಿಕೊಂಡು, ಆರೋಗ್ಯಕರ ತಿಂಡಿ, ತಿನಿಸುಗಳನ್ನು ಸೇವಿಸುವ ಪ್ರವೃತ್ತಿ  ಆರೋಗ್ಯದ ಕಾಳಜಿ ಕಡೆಗೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಲು ಡಾ. ಸದಾನಂದ ಮಯ್ಯಾ ಅವರು ಮರೆಯುವುದಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.