ಮಂಗಳವಾರ, ಮೇ 24, 2022
24 °C

ಮರಳಿ ಮರಳಿ ಮಲದ ಗುಂಡಿಯೊಳಗೆ...

ಟಿ.ಕೆ. ದಯಾನಂದ Updated:

ಅಕ್ಷರ ಗಾತ್ರ : | |

ಕರ್ನಾಟಕ ರಾಜ್ಯ ಕಳೆದ ಒಂದೂವರೆ ವರ್ಷದಿಂದ ಒಂದು ವಿಷಯದ ಕುರಿತಂತೆ ಇಡೀ ರಾಷ್ಟ್ರದೆದುರು ಪದೇಪದೇ ತಲೆತಗ್ಗಿಸಿ ನಿಲ್ಲುತ್ತಿದೆ. ರಾಜ್ಯದಾದ್ಯಂತ ಮಲ ಹೊರುವ ಪದ್ಧತಿಗೆ ಬದುಕನ್ನರ್ಪಿಸಿಕೊಂಡ ದಲಿತರು, ಅಲೆಮಾರಿಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಅಸ್ತಿತ್ವವನ್ನು ಪ್ರಬಲವಾಗಿಯೇ ಆಗಾಗ್ಗೆ ದಾಖಲಿಸುತ್ತಿದ್ದಾರೆ.ಒಂದರ ಹಿಂದೊಂದರಂತೆ ಬಯಲಿಗೆ ಬಂದ ಮಲಹೊರುವ ಪ್ರಕರಣಗಳು ಹಾಗೂ ಮಲ ಹೊರುವ ಬಡವರ ಮಲದ ಗುಂಡಿಯೊಳಗಿನ ಸಾವುಗಳು ಕರ್ನಾಟಕದ ಮಾನವನ್ನು ಮೂರಾಬಟ್ಟೆಯನ್ನಾಗಿಸಿವೆ. ತೀರಾ ಇತ್ತೀಚೆಗೆ 2011ರ ಜನಗಣತಿ ಬಯಲಿಗೆಳೆದ ರಾಷ್ಟ್ರವ್ಯಾಪಿ ಮಲ ಹೊರುವವರ ಬಗೆಗಿನ ಅಂಕಿಸಂಖ್ಯೆಗಳು ಮತ್ತು ಇಡೀ ರಾಷ್ಟ್ರದಾದ್ಯಂತ ಮಲಹೊರುವ ಪದ್ಧತಿಯಲ್ಲಿ ತೊಡಗಿಕೊಂಡಿರುವವರ ಹೊಸ ಜನಗಣತಿಗೆ ಆದೇಶಿಸಿದ ಕೇಂದ್ರ ಬಡತನ ನಿರ್ಮೂಲನಾ ಇಲಾಖೆ, ಈ ಎಲ್ಲವೂ ನಮ್ಮ ರಾಜ್ಯದ ಮಲಹೊರುವ ಪದ್ಧತಿಗೆ ತಲೆಕೊಟ್ಟ ರಾಜ್ಯದ ಬಡವರು ಬಯಲಿಗೆಳೆದ ಅವರದ್ದೇ ಸತ್ಯಗಳ ಪಾರ್ಶ್ವ ಪರಿಣಾಮಗಳೂ ಹೌದು.ಸ್ವಾತಂತ್ರಾನಂತರದ 65 ವರ್ಷಗಳಾದರೂ ಕಕ್ಕಸು ಗುಂಡಿಯೊಳಗೆ ಇಳಿದು ಬೆತ್ತಲೆ ಕೈಗಳಿಂದ ಮಲದಗುಂಡಿ ಸ್ವಚ್ಛಗೊಳಿಸುವವರು ದಾಖಲೆಗಳ ಪ್ರಕಾರವೇ ಲಕ್ಷಗಟ್ಟಲೆ ಇರುವುದು ಸ್ವಾಯತ್ತ ದೇಶವೊಂದಕ್ಕೆ ಅಪಮಾನಕಾರಿ. ಇಂತಹ ಬರ್ಬರ ಪದ್ಧತಿಯ ನಿಯಂತ್ರಣಕ್ಕೆ ಮತ್ತು ಇಲ್ಲವಾಗಿಸುವಿಕೆಗೆ ಇಷ್ಟರವರೆಗೆ ಯಾವ ಆಳುವವರೂ ಕಾನೂನು ನಿರೂಪಕರೂ ಯತ್ನಿಸಿಯೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರವಾಗಿ 1973ರ್ಲ್ಲಲೇ ಆಚರಣೆಗೆ ಬಂದ ಅಧಿಕೃತ ಕಾಯ್ದೆಯೊಂದಿದೆ.`ಮಲ ಹೊರುವ ಪದ್ಧತಿ ಮತ್ತು ಒಣ ಶೌಚಾಲಯಗಳ ನಿರ್ಮೂಲನಾ ಕಾಯ್ದೆ~ ಪ್ರಕಾರ ಮಲ ಹೊರುವ ಪದ್ಧತಿ ನಿರ್ಬಂಧಿಸುವುದು ಹಾಗೂ ಇದಕ್ಕೆ ಪ್ರೋತ್ಸಾಹಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಕಾಯ್ದೆಯ ಉದ್ದೇಶ.ಬೂಸಾ ಸಾಹಿತ್ಯದ ಬೀಸು ಹೇಳಿಕೆಯಿಂದ 70ರ ದಶಕದಲ್ಲಿ ದಲಿತ ಚಳವಳಿ ಮತ್ತು ದಲಿತ ಸಾಹಿತ್ಯವು ಊರ್ಧ್ವಮುಖಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಸವಲಿಂಗಪ್ಪನವರು, ತಾವು ಪೌರಾಡಳಿತ ಸಚಿವರಾಗಿದ್ದ ಕಾಲದಲ್ಲಿ ಈ ಕಾಯ್ದೆಯನ್ನು ಇಡೀ ದೇಶದಲ್ಲಿ ಮೊಟ್ಟ ಮೊದಲಿಗೆ ಜಾರಿಗೆ ತಂದರು. ಉಡುಪಿಯ ನಗರಸಭೆಯ ಅಧ್ಯಕ್ಷರಾಗಿದ್ದ ವಿ.ಎಸ್. ಆಚಾರ್ಯ ಮತ್ತು ಮಂಗಳೂರು ನಗರಸಭೆಯ ಅಧ್ಯಕ್ಷರಾಗಿದ್ದ ಬ್ಲೇಸಿಸ್ ಡಿಸೋಜಾ ಅವರು ಬಸವಲಿಂಗಪ್ಪನವರ ಕಾಳಜಿಯ ಉದ್ದೇಶದೊಂದಿಗೆ ಕೈ ಜೋಡಿಸಿ ತಮ್ಮ ವ್ಯಾಪ್ತಿಗಳೊಳಗೆ ಮಲಹೊರುವ ಪದ್ಧತಿ ಆಚರಣೆ ವಿರುದ್ಧ ಕಾರ್ಯನಿರ್ವಹಿಸಿದ್ದರು.ಸಂವಿಧಾನದ 47ನೇ ಪರಿಚ್ಛೇದ ಹೇಳುವ- `ರಾಜ್ಯವೊಂದು ಪ್ರಜೆಗಳ ಗೌರವಯುತ ಬದುಕುವಿಕೆ ಮತ್ತವರ ಆರೋಗ್ಯ ರಕ್ಷಣೆಯ ಆದ್ಯತೆಯತ್ತ ವಿಶೇಷ ನಿಗಾ ವಹಿಸಬೇಕು~ ಎಂಬ ಅಂಶವನ್ನು ಆಧರಿಸಿ ರೂಪಿಸಲಾಗಿದ್ದ ಈ ಕಾಯ್ದೆಯ ಅನುಷ್ಠಾನಕ್ಕಾಗಿ ಬಸವಲಿಂಗಪ್ಪನವರ ಶ್ರಮ ಪ್ರಾತಃಸ್ಮರಣೀಯ.

ಆವರೆಗೂ ದೇಶದಲ್ಲಿ ಈ ಬರ್ಬರ ಪದ್ಧತಿಯನ್ನು ನಿಯಂತ್ರಿಸಲು ಯಾವ ರಾಜ್ಯವೂ ಒಂದು ಕಾಯ್ದೆಯನ್ನೂ ತರದಿದ್ದ ಸಂದರ್ಭದಲ್ಲಿ ಈ ಕಾಯ್ದೆಯು ಬಸವಲಿಂಗಪ್ಪನವರ ಇಚ್ಛಾಶಕ್ತಿ ಮತ್ತು ದಲಿತ ಕಳಕಳಿಯೊಂದಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತ್ತು.ಕರ್ನಾಟಕದಲ್ಲಿಯೂ ಮಲಹೊರುವ ಮಂದಿಯಿದ್ದಾರೆ ಎಂದು ಮೊದಲಬಾರಿಗೆ ಹೊರಜಗತ್ತಿನ ಕಿವಿಗೆ ಬೀಳುವಂತೆ ಮಾಡಿದ್ದೇ ಬಸವಲಿಂಗಪ್ಪನವರು. ಹೀಗಾಗಿ ಮಲಹೊರುವ ಪದ್ಧತಿಯ ವಿರುದ್ಧ ರಾಜ್ಯದಲ್ಲಿ ಎದ್ದ ಮೊದಲ ಕೂಗು ಅವರ ಹೆಸರಿನಲ್ಲೇ ದಾಖಲೆಯಾಗಿ ಉಳಿಯಿತು.ಬೆಳಗಾವಿ ನಗರದ ಮಲಹೊರುವ ದಲಿತರು 1972-73ರ ದಿನಗಳಲ್ಲಿ ಬೆಳಗಾವಿ ಸೆಷನ್ಸ್ ಕೋರ್ಟ್‌ನಲ್ಲಿ, ನಾವು ಬಹಳಷ್ಟು ವರ್ಷಗಳಿಂದಲೂ ಮಲಹೊರುವ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಮಾಣಪತ್ರ ಸಲ್ಲಿಸಿದ ಪ್ರಸಂಗದ ಹಿಂದೆ ಬಸವಲಿಂಗಪ್ಪನವರು ಸ್ಫೂರ್ತಿಯಾಗಿದ್ದರು. ಬಸವಲಿಂಗಪ್ಪನವರು ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಗೊಳಿಸಿದಾಗ ಬಹಳಷ್ಟು ಜನ `ಹೇಲೆತ್ತುವ ಜನ ಆ ಕೆಲಸ ಮಾಡದೆಇಂಜಿನಿಯರ‌್ರುಗಳು ಆ ಕೆಲಸ ಮಾಡಲಿಕ್ಕೆ ಆಗ್ತದೆಯೇ?~ ಎಂಬರ್ಥ ಬರುವಂತೆ ಲೇವಡಿ ಮಾಡಿದ್ದೂ ಉಂಟು. 1973ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಬಳಿ `ಮಲಹೊರುವ ಪದ್ದತಿ ನಿರ್ಮೂಲನಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿರುವುದಾಗಿ, ಅದನ್ನು ಇಡೀ ದೇಶಕ್ಕೆ ವಿಸ್ತರಿಸಬೇಕಾದ ಅಗತ್ಯವಿದೆ~ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಇಂದಿರಾ- `ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಬೇಕಾದ ಹಣವೆಲ್ಲಿಂದ ತರುವುದು?~ ಎಂದಿದ್ದರು.ಇದಕ್ಕೆ, `ಜಗತ್ತಿನ ಅತಿ ನಿಕೃಷ್ಟ ವೃತ್ತಿಯಾಗಿರುವ ಈ ಪದ್ಧತಿ ತೊಲಗಿಸಲು ಇಚ್ಛಾಶಕ್ತಿಯ ಅವಶ್ಯಕತೆಯಿದೆ. ಹಣದ ಲಭ್ಯತೆಯಿಲ್ಲದೆಯೇ ಕರ್ನಾಟಕದಲ್ಲಿ ಮಲಹೊರುವ ಪದ್ಧತಿ ನಿಷೇಧಿಸಿದ್ದೇನೆ~ ಎಂದು ಬಸವಲಿಂಗಪ್ಪನವರು ಉತ್ತರಿಸಿದ್ದರು.ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ ಬೆಂಗಳೂರಿನ ಮೇಯರ್ ಆಗಿದ್ದ ಎ.ಕೆ. ಅನಂತಕೃಷ್ಣರವರು ನೆನಪಿಸಿಕೊಳ್ಳುವಂತೆ- `1973ರಲ್ಲಿ ಬಸವಲಿಂಗಪ್ಪನವರು ಪೌರಕಾರ್ಮಿಕರೂ ಸೇರಿದಂತೆ ಇನ್ನಿತರೆ ಮಲಹೊರುವ ಪದ್ಧತಿಗೆ ತಲೆಕೊಟ್ಟ ಬಡ ಜನರ ಕುರಿತ ಕಾಳಜಿ ನಿಸ್ಸಂದೇಹ.ಅವರ ನಂತರದ ಕಾಲಘಟ್ಟಗಳಲ್ಲಿ ಮಂತ್ರಿ ಸ್ಥಾನಗಳಲ್ಲಿ ಕುಳಿತ ಯಾವ ದಲಿತ ಸಚಿವರೂ ಮಲಹೊರುವ ನಿರ್ಮೂಲನಾ ಕಾಯ್ದೆಯನ್ನು ಬಲಪಡಿಸುವ ಮಾತಿರಲಿ, ಆ ಕಾಯ್ದೆಯನ್ನು ಆಚರಣೆಗೆ ತರುವಲ್ಲಿಯೂ ನಿರಾಸಕ್ತಿ ವಹಿಸಿದ ಪರಿಣಾಮ ಬಸವಲಿಂಗಪ್ಪನವರ ಮಹತ್ವಾಕಾಂಕ್ಷೆಯ ಕಾಯ್ದೆಯು ಬುಟ್ಟಿ ಸೇರುವಂತಾಯಿತು~.ಬಸವಲಿಂಗಪ್ಪನವರ ನಂತರ 1992ರ ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಈ ಕಾಯ್ದೆ ಚರ್ಚೆಗೆ ಬರುವವರೆಗೂ ಈ ರೀತಿಯದ್ದೊಂದು ಕಾಯ್ದೆಯಿದೆ ಎಂಬುದು ಅಧಿಕಾರಿಗಳಿಗೂ, ಪೊಲೀಸು ವ್ಯವಸ್ಥೆಗೂ ಸಾರ್ವಜನಿಕರಿಗೂ ಮರೆತೇ ಹೋಗಿತ್ತು. ಪಿ.ವಿ. ನರಸಿಂಹರಾವ್ ನೇತೃತ್ವದ ಕೇಂದ್ರ ಸರ್ಕಾರವು ಅಂಬೇಡ್ಕರ್ ಶತಮಾನೋತ್ಸವದ ಅಂಗವಾಗಿ ರೂಪಿಸಿ ವಿವಿಧ ರಾಜ್ಯಗಳಲ್ಲಿ ಜಾರಿಗೊಳಿಸಲು ಸಿದ್ಧಗೊಂಡಿದ್ದ `ಮಲಹೊರುವ ಪದ್ಧತಿ ಕಸುಬು ಮತ್ತು ಒಣ ಶೌಚಾಲಯಗಳ ನಿರ್ಮೂಲನ ಕಾಯ್ದೆ~(Employment of Manual Scavengers and Construction of Dry Latrines (Prohibition) Act, 1993)  ಅನ್ನು 1992ರ ರಾಜ್ಯ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಮಂಡಿಸಿದ್ದರು.ಆಗ ಬಸವಲಿಂಗಪ್ಪನವರು ಅಸ್ತಿತ್ವಕ್ಕೆ ತಂದಿದ್ದ `ಮಲಹೊರುವ ಪದ್ಧತಿ ನಿಷೇಧ ಕಾಯ್ದೆ~ಯನ್ನು ಈ ಹೊಸ ಕಾಯ್ದೆಯು ಸ್ಥಳಪಲ್ಲಟಗೊಳಿಸಿತು. ಆಗ ವಿರೋಧಪಕ್ಷದ ನಾಯಕರಾಗಿದ್ದ ಡಿ.ಬಿ. ಚಂದ್ರೇಗೌಡ, ಸ್ವತಂತ್ರ ಭಾರತದ್ಲ್ಲಲೂ ಇಂತಹ ನಿರ್ಣಯಗಳನ್ನು ಸದನದೊಳಗೆ ಮಾಡಬೇಕಾದ ಬಗ್ಗೆ ಸಂಕಟ ವ್ಯಕ್ತಪಡಿಸಿದ್ದರು.

 

ಆಗ ಧಾರವಾಡ ಗ್ರಾಮೀಣ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸುತ್ತಿದ್ದ ರೈತನಾಯಕ ಎಂ.ಡಿ. ನಂಜುಂಡಸ್ವಾಮಿ ಅವರು, `ಸಾವಿರಾರು ವರ್ಷಗಳ ನಮ್ಮ ತಪ್ಪನ್ನು ತಿದ್ದಿಕೊಳ್ಳಲು ತಡವಾಗಿಯಾದರೂ ಮಾಡುತ್ತಿರುವ ಒಂದು ಪ್ರಯತ್ನವಿದು~ ಎಂದು ಕಾಯ್ದೆಯ ಆಚರಣೆಯನ್ನು ಸ್ವಾಗತಿಸಿದ್ದರು.ಇದೇ ಸಂದರ್ಭದಲ್ಲಿ ಆಗ ತಂತ್ರಜ್ಞಾನ ಮತ್ತು ಪರಿಸರ ಖಾತೆ ಸಚಿವರಾಗಿದ್ದ ಬಸವಲಿಂಗಪ್ಪನವರು ಹೊಸ ಕಾಯ್ದೆಯ ಬಗ್ಗೆ ಮಾತನಾಡುತ್ತ ಭಾವುಕರಾಗಿದ್ದರು. ಹೊಸ ಕಾಯ್ದೆಯನ್ನು ಆಚರಣೆಗೆ ತರುವ ಬಗ್ಗೆ ಯಾವ ಚರ್ಚೆಯೂ ಇಲ್ಲದೆ ಎಲ್ಲ ಸದನ ಸದಸ್ಯರ ಅನುಮತಿಯ ಒಕ್ಕೊರಲಿನಿಂದ ಕರ್ನಾಟಕ ವಿಧಾನಸಭೆಯು ಒಪ್ಪಿಕೊಂಡಿತ್ತು.ಬಸವಲಿಂಗಪ್ಪನವರು ರೂಪಿಸಿದ್ದ ಕಾಯ್ದೆಯಲ್ಲಿನ ಬಹಳಷ್ಟು ಅಂಶಗಳನ್ನು ಪಿ.ವಿ. ನರಸಿಂಹರಾವ್ ಸರ್ಕಾರ ರೂಪಿಸಿದ ಹೊಸ ಕಾಯ್ದೆಯೂ ಒಳಗೊಂಡಿತ್ತು. ಮೊದಲನೆಯದಾಗಿ ಯಾವುದೇ ಸಂದರ್ಭದಲ್ಲೂ ಮನುಷ್ಯರನ್ನು ಮಲ ಹೊರುವ ಕೆಲಸಕ್ಕೆ ನೇಮಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು.ಕಕ್ಕಸುಗುಂಡಿ ಸ್ವಚ್ಛ ಗೊಳಿಸುವ ಆಧುನಿಕ ಸ್ವರೂಪದ ಮಲಹೊರುವ ಪದ್ಧತಿಯಲ್ಲಿ ತೊಡಗಿಕೊಂಡವರಿಗೆಂದು ಜನಗಣತಿ ನಡೆಸಿ ಅವರಿಗೆಂದು ಯೋಜನೆಗಳನ್ನು ರೂಪಿಸಲು ಮತ್ತು ಈ ಪದ್ಧತಿಯೊಳಗೆ ಸಿಕ್ಕಿಬಿದ್ದಿರುವವರ ಪುನರ್ವಸತಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಿ ಹೇಳುವ 1993ರ ಕಾಯ್ದೆಯು, ಮಲಹೊರುವ ಪದ್ಧತಿಗೆ ಪೂರಕವಾಗಿರುವ ಅಸಾಂಪ್ರದಾಯಿಕ ಒಣಶೌಚಾಲಯಗಳನ್ನು ಧ್ವಂಸಗೊಳಿಸಿ ಆ ಜಾಗಗಳಲ್ಲಿ ಆಧುನಿಕ ರೀತಿಯ ಶೌಚಾಲಯಗಳನ್ನು ನಿರ್ಮಿಸಲು ಸ್ಥಳೀಯ ಸಂಸ್ಥೆಗಳಿಗೆ ಹಣಕಾಸಿನ ನೆರವನ್ನು ಒದಗಿಸಬೇಕೆಂದು ಹೇಳುತ್ತದೆ.

 

ಮಲಹೊರುವ ಕೆಲಸವನ್ನು ಮಾಡಿಸುವವರಿಗೆ ಒಂದು ವರ್ಷದ ಜೈಲು ಮತ್ತು ದಂಡ ವಿಧಿಸಬೇಕೆಂದಿದೆ. ಮಲಹೊರುವ ಕಸುಬಿನಲ್ಲಿ ಇರುವವರ ಪುನರ್ವಸತಿ ಮತ್ತು ಆಧುನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಯೋಜನೆಗಳ ಉಸ್ತುವಾರಿಗೆಂದು ಜಿಲ್ಲಾ ಮಟ್ಟದಲ್ಲಿ ಸಮಿತಿ ರೂಪಿಸಲು ಕಾಯ್ದೆ ನಿರ್ದೇಶಿಸುತ್ತದೆ. ಬಸವಲಿಂಗಪ್ಪನವರ ಕಾಯ್ದೆಯನ್ನು ಕಡತಗಳೊಳಗೆ ಮಾತ್ರ ಜೋಪಾನವಾಗಿರಿಸಿಕೊಂಡಿದ್ದ ಅಧಿಕಾರಶಾಹಿಯು ಪಿವಿಎನ್ ಸರ್ಕಾರದ ಹೊಸ ಕಾಯ್ದೆಗೂ ಅದೇ ಗತಿಯನ್ನು ತೋರಿಸಿತು. 1973ರಿಂದ 2011ರವರೆಗೂ ಈ ಕಾಯ್ದೆ ಅಡಿಯಲ್ಲಿ ಮಲ ಹೊರುವ ಪದ್ಧತಿಗೆ ಕುಮ್ಮಕ್ಕು ಕೊಟ್ಟ ಯಾರೊಬ್ಬರನ್ನೂ ಶಿಕ್ಷಿಸಿದ ಉದಾಹರಣೆ ಇಲ್ಲ.ಕಳೆದ ವರ್ಷದಿಂದಷ್ಟೇ ಪಿಯುಸಿಎಲ್, ರಾಷ್ಟ್ರೀಯ ಕಾನೂನು ಶಾಲೆ, ಪರ್ಯಾಯ ಕಾನೂನು ವೇದಿಕೆ, ಮಾನವ ಹಕ್ಕು ಪ್ರತಿಪಾದಕರು ಹಾಗೂ ಯುವ ಸಾಮಾಜಿಕ ಕಾರ್ಯಕರ್ತರ ಶ್ರಮದಿಂದ ಕೆಜಿಎಫ್, ತಿಪಟೂರು, ಸಕಲೇಶಪುರ, ವೆಂಕಮ್ಮನ ಹೊಸಕೋಟೆ, ಕಿನ್ನಿಗೋಳಿ, ಚಳ್ಳಕೆರೆ ಮತ್ತು ಧಾರವಾಡಗಳ ಮಲದ ಗುಂಡಿಗಳಲ್ಲಿ ಮೃತಪಟ್ಟವರ ಪ್ರಕರಣಗಳಲ್ಲಿ ಅವರನ್ನು ಕೆಲಸಕ್ಕೆ ನೇಮಿಸಿದ ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಪೊಲೀಸ್ ದೂರುಗಳು, ಎಫ್‌ಐಆರ್‌ಗಳು ದಾಖಲಾಗಿವೆ.

 

ದೇಶದಲ್ಲಿ ಎಲ್ಲಿಯೂ ಈ ಕಾಯ್ದೆಯಡಿ ಖಾಸಗಿ ವ್ಯಕ್ತಿ ಆಗಲೀ, ಸರ್ಕಾರಿ ಅಧಿಕಾರಿಯಾಗಲೀ ಬಂಧನಕ್ಕೊಳಗಾದ ಬಗ್ಗೆ ಒಂದು ಉದಾಹರಣೆಯೂ ಇಲ್ಲ. ನಮ್ಮ ರಾಜ್ಯದಲ್ಲೇ ಕಾಯ್ದೆ ಜಾರಿಗೆ ಬಂದ 38 ವರ್ಷಗಳ ನಂತರ ಇದೀಗ ಚಾಟಿ ಬೀಸಲು ಆರಂಭಿಸಿದ್ದು, ಈಗ ಸಾಲುಸಾಲು ಮಂದಿ ಕಾನೂನು ಉಲ್ಲಂಘನೆ ಆರೋಪದಡಿ ಜೈಲಿಗೆ ಬೀಳುತ್ತಿದ್ದಾರೆ.ಈ ದಿಸೆಯಲ್ಲಿ ಕರ್ನಾಟಕದ್ದು ದಾಖಲೆಯೇ. ಇಷ್ಟಿದ್ದರೂ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿರುವ 1993ರ ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯ ಜಾರಿಯಲ್ಲೇ ಹಲವು ದೋಷಗಳು ಎದ್ದು ಕಾಣಿಸುತ್ತಿವೆ. ಈ ಕಾಯ್ದೆಯ ಕಲಂ 5(2)ರ ಪ್ರಕಾರ ಉಪ ವಿಭಾಗಾಧಿಕಾರಿ (ಸಹಾಯಕ ಆಯುಕ್ತ) ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಲು ವಿಫಲರಾಗಿರುವ ರಾಜ್ಯದ ವಿಭಾಗಾಧಿಕಾರಿಗಳ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು 1989ರ ಅಟ್ರಾಸಿಟಿ ಕಾಯ್ದೆಯ ಕಲಂ 4ರ ಪ್ರಕಾರ ಅಪರಾಧ.

 

ಕಲಂ 6(1)ರ ಪ್ರಕಾರ ಸರ್ಕಾರ ಸಫಾಯಿ ಕರ್ಮಚಾರಿಗಳಿಗೆ gainful employment (ಉದ್ಯೋಗ ಮತ್ತು ಸ್ವ-ಉದ್ಯೋಗ) ಕಲ್ಪಿಸಿ ಕೊಡಬೇಕೆಂಬ ಆದೇಶವಿದ್ದರೂ ಕೇವಲ ಸ್ವ-ಉದ್ಯೋಗಕ್ಕೆ ಮಾತ್ರ ಕೇಂದ್ರ ಎಸ್‌ಆರ್‌ಎಂಎಸ್ (ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ) ಯೋಜನೆ ಮಾತ್ರ ಹಮ್ಮಿಕೊಂಡು ಉದ್ಯೋಗ ನೀಡುವ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲದಿರುವುದು, ಸಫಾಯಿ ಕರ್ಮಚಾರಿಗಳಿಗೆ ಕಾನೂನು ಪ್ರಕಾರ ದೊರೆಯಬೇಕಾದ ಹಕ್ಕುಗಳನ್ನು ನಿರಾಕರಿಸಿರುವುದು ಕೂಡ 1989ರ ಅಟ್ರಾಸಿಟಿ ಕಾಯ್ದೆಯ ಕಲಂ 4ರ ಪ್ರಕಾರ ಶಿಕ್ಷಾರ್ಹ ಅಪರಾಧ.ಕಾಯ್ದೆಯ ಕಲಂ 8ರ ಪ್ರಕಾರ ಮಲಹೊರುವ ಪದ್ಧತಿ ನಿಷೇಧವನ್ನು ಜಾರಿಗೆ ತರಲು ನಿರೀಕ್ಷಕರನ್ನು ನೇಮಕ ಮಾಡಬೇಕೆಂದಿದ್ದರೂ 2011ರವರೆಗೆ ಪಿಯುಸಿಎಲ್‌ನ ವೈ.ಜೆ. ರಾಜೇಂದ್ರ ಅವರು ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯು (WP  30221.09 (GM-Res)  ಈ ವಿಷಯವನ್ನು ರಾಜ್ಯ ಹೈಕೋರ್ಟ್ ಗಮನಕ್ಕೆ ತಂದ ನಂತರ ಎಚ್ಚೆತ್ತ ಕೆಲವು ನಗರಾಡಳಿತ ಸಂಸ್ಥೆಗಳು, ನಿರೀಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿ ಕೈ ತೊಳೆದುಕೊಂಡಿವೆ.ಕಾಯ್ದೆ ಕಲಂ 10(1)ರ ಅನ್ವಯ ಮನೆ ಮಾಲೀಕರು ಮಲದ ಗುಂಡಿಗಳನ್ನು ಮುಚ್ಚಲು ಆದೇಶ ನೀಡಿ ಒಂದು ವೇಳೆ ಆದೇಶ ಅನುಸರಿಸದೇ ಇದ್ದಲ್ಲಿ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕೆಂದಿದ್ದರೂ ಇದುವರೆಗೂ ಯಾರ ಮೇಲೂ ಕ್ರಮ ಕೈಗೊಂಡ ಒಂದೂ ಉದಾಹರಣೆ ಇಲ್ಲ.ಕಲಂ 19ರ ಅನ್ವಯ ಕಾಯ್ದೆ ಅನುಷ್ಠಾನ ಕುರಿತ ಖರ್ಚುಮಾಡಿದ ಹಣ, ಅಂಕಿಅಂಶಗಳನ್ನೊಳಗೊಂಡ ಪ್ರಗತಿ ವರದಿಯನ್ನು ಸಿದ್ಧಗೊಳಿಸಿ ಸರ್ಕಾರದ ಅನುಮೋದನೆಗೆ ಕಳಿಸಬೇಕೆಂದಿದ್ದರೂ ಇದುವರೆಗೆ ಈ ರೀತಿಯ ಯಾವುದೇ ವರದಿಗಳು ಇಲ್ಲದಿರುವುದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಹಾಕಿದ ಅರ್ಜಿಯಿಂದ ತಿಳಿದುಬಂದಿದೆ.ಕೇಂದ್ರ ಸಫಾಯಿ ಕರ್ಮಚಾರಿ ಕಾಯ್ದೆಗೆ ರಾಜ್ಯ ಸರ್ಕಾರ 1997ರಲ್ಲಿ ನಿಯಮಾವಳಿ ಹೊರಡಿಸಿದ್ದು, ಅದರ ಪ್ರಕಾರ ಕಾಯ್ದೆ ಅನುಷ್ಠಾನದ ನೋಡಲ್ ಕೆಲಸವನ್ನು ಕೆಯುಐಡಿಎಫ್‌ಸಿ ಎಂಬ ಕಾರ್ಪೊರೇಟ್ ನಿಗಮಕ್ಕೆ ವಹಿಸಲಾಗಿದೆ. ಸರ್ಕಾರದ ಐಎಎಸ್ ಮಂದಿ ಕಟ್ಟಿಕೊಂಡ ಸಂಸ್ಥೆ ಇದಾಗಿದ್ದು, ಇದಕ್ಕೆ ಜನಪ್ರಾತಿನಿಧಿಕ ಜವಾಬ್ದಾರಿಗಳು ಇಲ್ಲ. ಇದರ ನಿರ್ದೇಶಕ ಮಂಡಳಿ ಹುದ್ದೆಗಳಲ್ಲಿ ಐಎಎಸ್ ಅಧಿಕಾರಿಗಳೇ ತುಂಬಿಕೊಂಡಿದ್ದಾರೆ.ಈ ಕಂಪೆನಿಯು ವಿದೇಶಿ ಹಣಕಾಸು ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ನೆರವು ನೀಡುವ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ಕೆಲಸ ಮಾಡುತ್ತದೆ. ಸರ್ಕಾರದಿಂದ ಕೋಟಿಗಟ್ಟಲೆ ಹಣವನ್ನು ಸಂಭಾವನೆ ಹೆಸರಿನಲ್ಲಿ ಜೇಬಿಗಿಳಿಸುತ್ತದೆ. ದಮನಿತ ಸಮುದಾಯಗಳ ಏಳಿಗೆಗಾಗಿ ಇರುವ, ಉತ್ತರದಾಯಿತ್ವ ಹೊಂದಿರುವ  ಜನಪ್ರಾತಿನಿಧಿಕ ಸಂಸ್ಥೆಯ ಕೈಗೆ ಸಫಾಯಿ ಕರ್ಮಚಾರಿಗಳ ಬದುಕನ್ನು ಹಸ್ತಾಂತರಿಸಬೇಕಾದ ತುರ್ತು ಅಗತ್ಯವಿದೆ.ಈ ಸಲದ ಮಳೆಗಾಲದ ಅಧಿವೇಶನದಲ್ಲಿ ಮಲಹೊರುವ ಪದ್ಧತಿ ನಿಷೇಧ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರ ಮನಸ್ಸು ಮಾಡಿದೆ. ಈ ತಿದ್ದುಪಡಿಗಳಾದರೂ ದೇಶದ ಮತ್ತು ನಮ್ಮ ರಾಜ್ಯದ ಮಲ ಹೊರುವ ಬಡವರ ಬವಣೆಗಳನ್ನು ದೂರ ಅಟ್ಟಲು ಪ್ರಯತ್ನಿಸುತ್ತವೆಯೇ ಎಂಬುದು ಜನಪರ ಮನಸ್ಸುಗಳ ನಿರೀಕ್ಷೆ.

ಲೇಖಕರು `ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ~ಯ ಸಾಮಾಜಿಕ ಪ್ರತ್ಯೇಕತೆಯ ಮತ್ತು ಒಳಗೊಳ್ಳುವಿಕೆಯ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.