ಬುಧವಾರ, ಮಾರ್ಚ್ 3, 2021
23 °C

ಮರಾಠಿಗರ ಭದ್ರತೆ: ಲೋಕಸಭೆಯಲ್ಲಿ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಾಠಿಗರ ಭದ್ರತೆ: ಲೋಕಸಭೆಯಲ್ಲಿ ವಾಗ್ವಾದ

ನವದೆಹಲಿ: ‘ಕರ್ನಾಟಕದ ಗಡಿಯಲ್ಲಿ ನೆಲೆಸಿರುವ ಮರಾಠಿ ಭಾಷಿಕರಿಗೆ ಭದ್ರತೆ ಇಲ್ಲ’ ಎಂಬ ಮಹಾರಾಷ್ಟ್ರದ ಸಂಸದರೊಬ್ಬರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆಸಿದ ಕರ್ನಾಟಕದ ಸಂಸದರು, ‘ಕರ್ನಾಟಕದಲ್ಲಿ ಮರಾಠಿಗರು ಅತ್ಯಂತ ಸುರಕ್ಷಿತವಾಗಿದ್ದಾರೆ’ ಎಂದು ಪ್ರತಿಪಾದಿಸಿದರು.ಲೋಕಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಮಾತನಾಡಿದ ಮಹಾರಾಷ್ಟ್ರದ ಸಿಂಧದುರ್ಗ ಸಂಸದ ವಿನಾಯಕ ರಾವತ್‌, ‘ಕರ್ನಾಟಕದ ಕಾರವಾರ, ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿ ನೆಲೆಸಿರುವ ಮರಾಠಿ ಭಾಷಿಕರಿಗೆ ಭದ್ರತೆ ಇಲ್ಲ’ ಎಂದು ಆರೋಪಿಸಿದರು.1956ರಲ್ಲಿ ರಾಜ್ಯಗಳ ವಿಭಜನೆ ಆದ ಸಂದರ್ಭ ಮರಾಠಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗಗಳು ಮಹಾರಾಷ್ಟ್ರಕ್ಕೆ ಸೇರ್ಪಡೆ ಆಗದೆ ಕರ್ನಾಟಕದಲ್ಲಿ ಉಳಿದಿವೆ.ಅಂದಿನಿಂದಲೇ ಮರಾಠಿ ಭಾಷಿಕರು ಈ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಲೇ ಇದ್ದಾರೆ ಎಂದರು.ಭಾಷಾ ಸಾಮರಸ್ಯದ ಕೊರತೆ ಇರುವ ಆ ಭಾಗದಲ್ಲಿ ಗಡಿ ವಿವಾದ ಇದೆ. ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಆದರೂ, ಕಡ್ಡಾಯವಾಗಿ ಕನ್ನಡ ಕಲಿಯುವಂತೆ, ಮಾತನಾಡುವಂತೆ ಕರ್ನಾಟಕ ಸರ್ಕಾರ ಹಾಗೂ ಪೊಲಿಸರು ಮರಾಠಿಗರನ್ನು ತೀವ್ರವಾಗಿ ಶೋಷಿಸುತ್ತಿದ್ದಾರೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಗಮನಿಸುವ ಮೂಲಕ ಮರಾಠಿ ಭಾಷಿಕರಿಗೆ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.ಈ ಹೇಳಿಕೆಯನ್ನು ವಿರೋಧಿಸಿದ ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ಶಿವಕುಮಾರ್‌ ಉದಾಸಿ, ಕರ್ನಾಟಕವು ಸಾಮರಸ್ಯಕ್ಕೆ ಹೆಸರಾಗಿದ್ದು, ಈ ರೀತಿಯ ಆರೋಪಗಳಲ್ಲಿ ಹುರುಳಿಲ್ಲ. ಗಡಿಯಲ್ಲಿರುವ ಮರಾಠಿಗರ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಆತಂಕ ಎದುರಿಸುತ್ತಿಲ್ಲ ಎಂದು ಹೇಳಿದರು.ಮಾನ್‌ ಅವರನ್ನು ಮದ್ಯ ವರ್ಜನೆ ಕೇಂದ್ರಕ್ಕೆ ಕಳುಹಿಸಿ: ಸಂಸದರ ಆಗ್ರಹ

ನವದೆಹಲಿ:
ಸಂಸತ್ತಿನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ವಿಡಿಯೊ ಚಿತ್ರೀಕರಿಸಿ ವಿವಾದಕ್ಕೆ ಕಾರಣವಾಗಿದ್ದ ಎಎಪಿ ಸಂಸದ ಭಗವಂತ ಮಾನ್‌ ಅವರನ್ನು ಮಾದಕ ವಸ್ತು ಮತ್ತು ಮದ್ಯ ಚಟ ಮುಕ್ತಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಲೋಕಸಭೆಯ ಮೂವರು ಸದಸ್ಯರು ಮಂಗಳವಾರ ಆಗ್ರಹಿಸಿದ್ದಾರೆ.

‘ಲೋಕಸಭೆಯು ಮಾನ್‌ ಅವರನ್ನು ತನ್ನದೇ ಖರ್ಚಿನಲ್ಲಿ ಮದ್ಯ ಹಾಗೂ ಮಾದಕವಸ್ತು ಚಟ ಮುಕ್ತಿ ಕೇಂದ್ರಕ್ಕೆ ಕಳುಹಿಸಬೇಕು. ಆ ಬಳಿಕವೇ ಅವರಿಗೆ ಸದನದ ಕಲಾಪದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು’ ಎಂದು ಬಿಜೆಪಿ ಸಂಸದ ಮಹೇಶ್‌ ಗಿರಿ, ಅಕಾಲಿ ದಳ ಸದಸ್ಯ ಪ್ರೇಮ್‌ ಸಿಂಗ್‌ ಮತ್ತು ಎಎಪಿ ಸದಸ್ಯ ಹರೀಂದರ್‌ ಸಿಂಗ್‌ ಅವರು ಒತ್ತಾಯಿಸಿದ್ದಾರೆ.ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಮಾನ್‌ ಪ್ರಕರಣದ ತನಿಖೆಗೆ ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಸಮಿತಿಗೆ ಬರೆದ ಪತ್ರದಲ್ಲಿ ಸಂಸದರು ಈ ರೀತಿ ಆಗ್ರಹಿಸಿದ್ದಾರೆ. ಬಿಜೆಪಿ ಸದಸ್ಯ ಕಿರೀಟ್‌ ಸೋಮಯ್ಯ ನೇತೃತ್ವದ ಸಮಿತಿಯು ಮಾನ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.