ಮಂಗಳವಾರ, ಏಪ್ರಿಲ್ 20, 2021
31 °C

ಮರ್ಮಾಂಗಕ್ಕೆ ದಾರ ಕಟ್ಟಿ ಯುವಕನಿಗೆ ಹಿಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳವು ಪ್ರಕರಣವೊಂದರ ವಿಚಾರಣೆಗಾಗಿ 16 ವರ್ಷದ ಬಾಲಕನೊಬ್ಬನನ್ನು ಠಾಣೆಗೆ ಕರೆದೊಯ್ದಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಆತನ ಮರ್ಮಾಂಗಕ್ಕೆ ದಾರ ಕಟ್ಟಿ ಅಮಾನವೀಯವಾಗಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿದೆ.ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಅಸ್ವಸ್ಥಗೊಂಡಿರುವ ಬಾಲಕ ನಿತಿನ್‌ಗೆ (ಹೆಸರು ಬದಲಿಸಲಾಗಿದೆ) ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೋಷಕರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ನಿತಿನ್‌ನನ್ನು ಆತನ ಚಿಕ್ಕಪ್ಪ ರಮೇಶ್ ಅವರು ಸಾಕಿಕೊಂಡಿದ್ದಾರೆ.ರಮೇಶ್ ಮತ್ತು ಕುಟುಂಬ ಸದಸ್ಯರು ಕಾಮಾಕ್ಷಿಪಾಳ್ಯ ಬಳಿಯ ಶ್ರೀರಾಂನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಆ ಮನೆಯ ಮಾಲೀಕರಾದ ನಂಜಯ್ಯ ಅವರ ಮನೆಯಲ್ಲಿ ಅ.18ರಂದು ಬೆಳ್ಳಿ ವಸ್ತುಗಳು ಕಳವಾಗಿದ್ದವು. ಈ ಸಂಬಂಧ ದೂರು ನೀಡಿದ್ದ ನಂಜಯ್ಯ, ನಿತಿನ್ ಮೇಲೆ ಸಂಶಯ ವ್ಯಕ್ತಪಡಿಸಿದ್ದರು.ಈ ಕಾರಣಕ್ಕಾಗಿ ಬುಧವಾರ (ನ.7) ಮಧ್ಯಾಹ್ನ ನಿತಿನ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದ ಪೊಲೀಸರು ಆತನ ಮರ್ಮಾಂಗಕ್ಕೆ ದಾರ ಕಟ್ಟಿ, ಅರ್ಧ ಗಂಟೆಗೂ ಹೆಚ್ಚು ಕಾಲ ಮೂತ್ರ ವಿಸರ್ಜನೆಗೂ ಅವಕಾಶ ನೀಡದೆ ಹಿಂಸಿಸಿದ್ದಾರೆ. ಅಲ್ಲದೇ, ವಿಚಾರಣೆ ನಡೆಸುವ ನೆಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಮರ್ಮಾಂಗದಿಂದ ರಕ್ತಸ್ರಾವವಾಗಿ ಬಾಲಕ ಅಸ್ವಸ್ಥಗೊಂಡಿದ್ದರಿಂದ ಗಾಬರಿಬಿದ್ದ ಪೊಲೀಸರು ಆತನನ್ನು ಮನೆಯ ಬಳಿ ಬಿಟ್ಟು ಹೋಗಿದ್ದರು. ಬಳಿಕ, ಆತ ನಡೆದ ಸಂಗತಿಯನ್ನೆಲ್ಲಾ ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ.ವಿಷಯ ತಿಳಿದು ಆಕ್ರೋಶಗೊಂಡ ಕುಟುಂಬ ಸದಸ್ಯರು ಹಾಗೂ ಜನಪರ ಸಂಘಟನೆಗಳ ಸದಸ್ಯರು, ನಿತಿನ್ ಮೇಲೆ ದೌರ್ಜನ್ಯ ನಡೆಸಿದ ಸಿಬ್ಬಂದಿಯನ್ನು ಅಮಾನತುಪಡಿಸುವಂತೆ ಒತ್ತಾಯಿಸಿ ಠಾಣೆಯ ಎದುರು ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು, ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು. ಆ ನಂತರ ಕುಟುಂಬ ಸದಸ್ಯರು ಪ್ರತಿಭಟನೆ ಹಿಂಪಡೆದರು.`ನಿತಿನ್ ತಪ್ಪು ಮಾಡಿರದಿದ್ದರೂ ಪೊಲೀಸರು ಆತನನ್ನು ವಿನಾಕಾರಣ ಠಾಣೆಗೆ ಎಳೆದೊಯ್ದು ದೌರ್ಜನ್ಯ ನಡೆಸಿದ್ದಾರೆ. ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದ ಬಗ್ಗೆಯೂ ಪೊಲೀಸರು ನಮಗೆ ಮಾಹಿತಿ ನೀಡಿರಲಿಲ್ಲ. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ದೂರು ನೀಡುತ್ತೇವೆ~ ಎಂದು ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.ಎಎಸ್‌ಐ ಅಮಾನತು

`ಘಟನೆ ಸಂಬಂಧ ವಿಜಯನಗರ ಉಪ ವಿಭಾಗದ ಎಸಿಪಿ ಅವರು ನೀಡಿದ ವರದಿ ಆಧರಿಸಿ ಕಾಮಾಕ್ಷಿಪಾಳ್ಯ ಠಾಣೆ ಎಎಸ್‌ಐ ತಿಮ್ಮೇಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬಾಲಕನನ್ನು ಕಾನೂನು ಬಾಹಿರವಾಗಿ ಠಾಣೆಗೆ ಕರೆತಂದು ದೌರ್ಜನ್ಯ ನಡೆಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.~

-ಎಸ್.ಎನ್.ಸಿದ್ದರಾಮಪ್ಪ ಡಿಸಿಪಿ, ಪಶ್ಚಿಮ ವಿಭಾಗಸ್ವಯಂಪ್ರೇರಿತ ದೂರು

`ಹದಿನೆಂಟು ವರ್ಷದೊಳಗಿನವರು ಅಪರಾಧ ಕೃತ್ಯ ಎಸಗಿದರೆ ಅವರನ್ನು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಕಳುಹಿಸಬೇಕು. ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿ ದಂಡ ವಿಧಿಸಬಹುದು ಅಥವಾ ಎಚ್ಚರಿಕೆ ನೀಡಿ ಬಿಡುಗಡೆ ಮಾಡಬಹುದು. ಆದರೆ, 16 ವರ್ಷದ ಯುವಕನನ್ನು ಬಂಧಿಸಿ ನ್ಯಾಯ ಮಂಡಳಿಗೆ ಹಾಜರುಪಡಿಸದಿರುವುದು ಸಿಬ್ಬಂದಿಯ ಮೊದಲನೇ ತಪ್ಪು. ಆತನನ್ನು ಠಾಣೆಗೆ ಕರೆದುಕೊಂಡು ಹಿಂಸಿಸಿರುವುದು ಅವರಿಂದಾದ ಮತ್ತೊಂದು ಪ್ರಮಾದ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು~

-ಎಚ್.ಆರ್.ಉಮೇಶಾರಾಧ್ಯ ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.