ಶನಿವಾರ, ಏಪ್ರಿಲ್ 17, 2021
33 °C

ಮಲ್ಲಮ್ಮ ಸ್ಮಾರಕ ಭವನ ನಿರ್ಮಾಣಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲಮ್ಮನ ಬೆಳವಡಿ (ಬೈಲಹೊಂಗಲ): ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಮಹಿಳಾ ಸೈನ್ಯ ಸಂಘಟನೆ ಮಾಡಿದ ಖ್ಯಾತಿಯ ವೀರರಾಣಿ ಮಲ್ಲಮ್ಮ ಸ್ಮಾರಕ ಭವನವನ್ನು ರೂ. 30 ಲಕ್ಷದಲ್ಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಜಗದೀಶ ಮೆಟಗುಡ್ಡ ಭರವಸೆ ನೀಡಿದರು. ಮಲ್ಲಮ್ಮ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ಬೆಳವಡಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಮಲ್ಲಮ್ಮನ ಶೂರತನ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡುವುದರ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸಬೇಕು. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ನಾಗರಿಕರು ಮುಂದಾಗಬೇಕು. ತಜ್ಞರು ವೀರ ಮಹನೀಯರ ಕುರಿತು ಹೆಚ್ಚಿನ ಸಂಶೋಧನೆಯನ್ನು ನಡೆಸುವುದು ಅಗತ್ಯವಾಗಿದೆ ಎಂದ ಅವರು, ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಶ್ರಮಿಸಿದ ಸಮಿತಿ ಹಾಗೂ ಗ್ರಾಮಸ್ಥರ ಅಭಿಮಾನ ಶ್ಲಾಘನೀಯ. ನಾಡಿಗಾಗಿ ತ್ಯಾಗ ಮಾಡಿದ ಐತಿಹಾಸಿಕ ವೀರರು ರಾಷ್ಟ್ರೀಯ ವ್ಯಕ್ತಿಗಳಾಗಿದ್ದು, ಅವರನ್ನು ಒಂದೇ ಜಾತಿಗೆ ಸಿಮೀತ ಮಾಡಬಾರದು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಬೆಳವಡಿ ಸಂಸ್ಥಾನ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಣಿ ಮಲ್ಲಮ್ಮನ ಚರಿತ್ರೆಯನ್ನು ಎಲ್ಲ ಕಡೆಗೆ ಪ್ರಸಾರ ಮಾಡುವ ಅಗತ್ಯವಿದ್ದು, ಇತಿಹಾಸ ಕುರಿತು ವಿಚಾರ ಸಂಕಿರಣ, ಚಿಂತನೆ ಅವಶ್ಯಕವಾಗಿದೆ. ಮುಂದಿನ ವರ್ಷ ಸರ್ಕಾರ ಬೆಳವಡಿ ಉತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು.ಕನ್ನಡ ವಿಶ್ವವಿದ್ಯಾಲಯ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಕೊಟ್ರೇಶ ಅತಿಥಿ ಉಪನ್ಯಾಸದಲ್ಲಿ ಮಲ್ಲಮ್ಮನ ಸಂಪೂರ್ಣ ಚರಿತ್ರೆಯನ್ನು ವಿವರಿಸಿದರು. ವೀರ ಮಹನೀಯರ ಸ್ಮರಣೆ ಕುರಿತು ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ಧೋರಣೆ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದರು.ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ವಿ.ಬಿ. ದಾಮಣ್ಣವರ, ತಹಸೀಲ್ದಾರ ಪಿ.ಎನ್. ಲೋಕೇಶ, ತಾ.ಪಂ. ಅಧ್ಯಕ್ಷೆ ಬಸಮ್ಮ ಗುರ್ಲಕಟ್ಟಿ, ಸದಸ್ಯೆ ಗಂಗವ್ವ ತುರಾಯಿ, ಜಿ.ಪಂ. ಸದಸ್ಯೆ ಶೈಲಜಾ ಗಾಬಿ, ಗ್ರಾ.ಪಂ. ಅಧ್ಯಕ್ಷ ಈರಣ್ಣ ತುರಾಯಿ, ಕುಮಾರಸ್ವಾಮೀಜಿ ವಿರಕ್ತಮಠ ಆಗಮಿಸಿದ್ದರು. ಡಾ.ಆರ್.ಬಿ. ಪಾಟೀಲ, ವಿ.ಎಸ್. ಬಳಿಗಾರ, ತಾ.ಪಂ. ಮಾಜಿ ಅಧ್ಯಕ್ಷ ರುದ್ರಯ್ಯ ರೊಟ್ಟಯ್ಯನವರ, ಎನ್.ಎಂ. ಕರೀಕಟ್ಟಿ, ವಿ.ವಿ. ಕಾರಿಮನಿ, ಮ.ಮ. ಕಾಡೇಶನವರ, ಬಿಇಓ ಶ್ರೀಶೈಲ ಕರೀಕಟ್ಟಿ ವೇದಿಕೆಯಲ್ಲಿದ್ದರು.ಸಮಿತಿಯ ಮುಖಂಡ ಆರ್.ವಿ. ಕರೀಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಶಿವಸ್ವಾಮಿ ಹಾಗೂ ವಾಣಿಶ್ರೀ ಹಿರೇಮಠ ವೇದಘೋಷ ಪಠಣ ಮಾಡಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ಎಂ.ವಿ. ಉಪ್ಪಿನ ಸ್ವಾಗತಿಸಿದರು. ಎಸ್.ಸಿ. ಗುಗ್ಗರಿ ವಂದಿಸಿದರು.ಜನಪದ ಹಬ್ಬವಾದ ಬೆಳವಡಿ ಉತ್ಸವ

ಗಜರಾಜನ ಗಂಭೀರ ನಡಿಗೆ, ಝಾಂಜ್ ಹಾಗೂ ಭಜನಾ ಮೇಳ ಎಲ್ಲಿ ನೋಡಿದಲ್ಲಿ ಜನಜಾತ್ರೆ ಇದು ಬೆಳವಡಿ ಉತ್ಸವದಲ್ಲಿ ಕಂಡು ಬಂದ ದೃಶ್ಯ.ಭಜನಾ ಮೇಳ, ಮರಗಾಲು ತಂಡ, ಜಗ್ಗಲಗಿ ಮಜಲು, ಶೋಬಾನ ಪದಗಳ ಹಾಡುವ ಮಹಿಳೆಯರ ತಂಡ ಹೀಗೆ ಸಂಸ್ಕೃತಿಯ ಮೂಲವಾಗಿರುವ ಜನಪದ ಕಲೆಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.ಯುವಕ ಸಂಘಗಳ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಕುದುರೆ ಮೇಲೆ ರಾಣಿ ಮಲ್ಲಮ್ಮ, ದೊರೆ ಈಶಪ್ರಭು, ಮಲ್ಲಮ್ಮನ ಬಾಲ್ಯ ಜೀವನ, ಈಶಪ್ರಭು ಹುಲಿ ಬೇಟೆಯಾಡಿದ ದೃಶ್ಯ, ಮಲ್ಲಮ್ಮನ ಸ್ವಯಂವರ, ಸಕ್ಕೂಜಿ-ಮಲ್ಲಮ್ಮ ಯುದ್ಧ ಸನ್ನಿವೇಶ, ನಾಗಭೂಷಣ ಪಟ್ಟಾಭಿಷೇಕ, ಸ್ತ್ರೀ ಸೈನ್ಯದೊಂದಿಗೆ ಮಲ್ಲಮ್ಮ ಮುಂತಾದ ರೂಪಕಗಳು ಬೆಳವಡಿ ಚರಿತ್ರೆಯನ್ನು ಸಾರ್ವಜನಿಕರಿಗೆ ನೆನಪು ಮಾಡಿಕೊಡುವ ಪ್ರಯತ್ನ ಮಾಡಿದವು.ಬೃಹದಾಕಾರದ ಕಟೌಟ್‌ಗಳು, ಮನೆ ಮನೆಯ ಮುಂದೆ ‘ಬೆಳವಡಿ ಉತ್ಸವ’ಕ್ಕೆ ಸ್ವಾಗತ ಎನ್ನುವ ರಂಗೋಲಿ ಎಲ್ಲರಿಗೂ ಸ್ವಾಗತ ಕೋರಿದವು.ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಉತ್ಸವ ಸಮಿತಿಯ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಸದಸ್ಯರು, ಶಿಕ್ಷಕ ಬಳಗದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಕೂಲಿ, ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಿ, ಸ್ವಯಂ ಪ್ರೇರಣೆಯಿಂದ ‘ವಾರ’ ಬಿಟ್ಟು ಸಾರ್ವಜನಿಕ ಹಬ್ಬವಾಗಿ ಬೆಳವಡಿ ಉತ್ಸವ ಜರುಗಿದ್ದು ವಿಶೇಷವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.