ಗುರುವಾರ , ಏಪ್ರಿಲ್ 15, 2021
20 °C

ಮಲ್ಲಿ ಸಂತೋಷದ ರೂಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲಿ ಸಂತೋಷದ ರೂಪಕ

ನಮ್ಮ ದೇಶದಲ್ಲಿ ಮಕ್ಕಳ ಸಿನಿಮಾ ಚಳವಳಿಯು ಆರಂಭವಾಗಿ ಅನೇಕ ದಶಕಗಳಾಗಿವೆ. ಮಕ್ಕಳಿಗಾಗಿ ವಿಶೇಷ ಸಿನಿಮಾ ತಯಾರಿಸಲೆಂದೇ ಕೇಂದ್ರ ಸರ್ಕಾರವು ವಿಶೇಷ ಸಂಸ್ಥೆಯನ್ನೂ ಆರಂಭಿಸಿದೆ.ಅದೂ ಚಿಲ್ಡ್ರನ್ಸ್ ಫಿಲಂ ಸೊಸೈಟಿ ಎಂದು ಆರಂಭವಾಗಿ ಈಗ ಯುವಕರು ಮತ್ತು ಮಕ್ಕಳಿಗಾಗಿ ಸಿನಿಮಾ ಎಂದು ಹೆಸರನ್ನು ಬದಲಿಸಿಕೊಂಡು ಸ್ವತಃ ಮಕ್ಕಳಿಗಾಗಿ ಸಿನಿಮಾ ತಯಾರಿಸುತ್ತಿದೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಹ ಮಕ್ಕಳ ಸಿನಿಮಾಗಳಿಗೆ ಪ್ರತ್ಯೇಕ ಪ್ರಶಸ್ತಿ ಸಹಾಯಧನ ನೀಡುತ್ತಾ ಇವೆ. ಎರಡು ವರ್ಷಕ್ಕೊಮ್ಮೆ ಮಕ್ಕಳ ಚಲನಚಿತ್ರಗಳ ಉತ್ಸವ ಸಹ ನಡೆಯುತ್ತಾ ಇದೆ. ನಮ್ಮ ರಾಜ್ಯ ಸರ್ಕಾರವಂತೂ ಪ್ರತೀ ವರ್ಷ ಎರಡು ಮಕ್ಕಳ ಸಿನಿಮಾಗಳಿಗೆ ವಿಶೇಷ ಸಹಾಯಧನ ನೀಡುತ್ತಾ ಇದೆ.

 

(ಇದನ್ನು ನಾಲ್ಕು ಚಿತ್ರಗಳಿಗೆ ವಿಸ್ತರಿಸುವ ಆಶ್ವಾಸನೆಯೂ ಸಿಕ್ಕಿದೆ. ಆದೇಶ ಆಗಿಲ್ಲ.) ಇಷ್ಟೆಲ್ಲಾ ಆದರೂ ನಮ್ಮಲ್ಲಿ ತಯಾರಾಗುತ್ತಾ ಇರುವ ಸಿನಿಮಾಗಳು ಮಕ್ಕಳಿಗಾಗಿ ಎಂದು ತಯಾರಾಗುತ್ತಿರುವುದು ಕಡಿಮೆ. ಮಕ್ಕಳ ಸಿನಿಮಾ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡೇ ತಯಾರಾಗುವ ಬಹುತೇಕ ಸಿನಿಮಾಗಳು ಸಹ ಸಂದೇಶ ಹೇಳುವುದಕ್ಕೆ ಅಥವಾ ಮಕ್ಕಳ ಮೂಲಕ ದೊಡ್ಡವರಿಗೆ ಕತೆ ಹೇಳುವುದಕ್ಕೆ ಪ್ರಯತ್ನಿಸುತ್ತಾ ಇರುತ್ತವೆ.ಇಂತಹ ಸಿನಿಮಾಗಳಿಗೆ ಸವಲತ್ತುಗಳು ಸಿಗುತ್ತವಾದರೂ ಮಕ್ಕಳಿಗೆ ಈ ಸಿನಿಮಾಗಳಿಂದ ಲಾಭ ಆಗಿದ್ದು ಕಡಿಮೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದಲ್ಲಿ ತಯಾರಾಗಿರುವ ಸಿನಿಮಾಗಳಲ್ಲಿ ನಿಜವಾದ ಅರ್ಥದಲ್ಲಿ ಮಕ್ಕಳ ಸಿನಿಮಾ ಆಗಿರುವ ಒಂದಾದರೂ ಸಿನಿಮಾ ಹುಡುಕಬೇಕೆಂದು (ಕಳೆದ ಎರಡು ದಶಕದ ಅವಧಿಯೊಳಗಿನ) ಸಿನಿಮಾಗಳನ್ನು ಹುಡುಕಿದೆವು.ಅವುಗಳಲ್ಲಿ ಮಕ್ಕಳ ಸಿನಿಮಾ ಎಂದು ಧೈರ್ಯವಾಗಿ ಕರೆಯಬಹುದಾದ ಹಲವು ಸಿನಿಮಾಗಳು ಸಿಕ್ಕವಾದರೂ ವಿಶೇಷವಾಗಿ ಗಮನ ಸೆಳೆದದ್ದು ಸಂತೋಷ್ ಶಿವನ್ ಅವರ ನಿರ್ದೇಶನದ “ಮಲ್ಲಿ”.“ಮಲ್ಲಿ” ಒಂದು ತಮಿಳು ಸಿನಿಮಾ. ಮಕ್ಕಳಿಗಾಗಿ ಸಿನಿಮಾ ತಯಾರಿಸುವ ಕೇಂದ್ರ ಸರ್ಕಾರದ ಸಂಸ್ಥೆಯದೇ ನಿರ್ಮಾಣ. ಆದರೆ ಈ ಸಿನಿಮಾದ ವಿಶೇಷ ಇಲ್ಲಿನ ಕಥನ ಕ್ರಮ ಮತ್ತು ದೃಶ್ಯ ಕಟ್ಟುವ ರೀತಿ. ಸಂತೋಷ್ ಶಿವನ್ ಸ್ವತಃ ಛಾಯಾಗ್ರಾಹಕರೂ ಆಗಿರುವುದರಿಂದ ಕ್ಯಾಮೆರಾದ ಮೂಲಕವೇ ಕತೆ ಹೇಳುವ ಅನೇಕ ಪ್ರಯೋಗ ಮಾಡುತ್ತಲೇ ಮಕ್ಕಳ ಮನಸ್ಸನ್ನು ಅನಾವರಣಗೊಳಿಸುವುದು ಈ ಸಿನಿಮಾದ ವಿಶೇಷ.1998ರಲ್ಲಿ ತಯಾರಾದ ಈ ಚಿತ್ರ ಜಗತ್ತಿನಾದ್ಯಂತ ಅನೇಕ ಚಿತ್ರೋತ್ಸವಗಳಲ್ಲಿ ತೆರೆ ಕಂಡಿದೆ ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರವು ಈ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದಲ್ಲದೆ, ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನು ನೀಡಿದೆ. ಚಿಕಾಗೋ ಚಿತ್ರೋತ್ಸವ ಮತ್ತು ಟೊರಾಂಟೋ ಚಿತ್ರೋತ್ಸವದಲ್ಲಿಯೂ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಿಕ್ಕಿದೆ.

 

ಇದೆಲ್ಲವೂ ಈ ಸಿನಿಮಾದ ಶಕ್ತಿಯನ್ನು ಸಾರುವಂತಹ ಪ್ರಶಸ್ತಿಗಳು ಬಎಂಬುದೊಂದೆಡೆಯಾದರೆ ಈ ಚಿತ್ರವನ್ನು ವಿಶ್ಲೇಷಿಸುವ ಮೂಲಕ ನಮ್ಮಲ್ಲಿ ಮಕ್ಕಳ ಚಿತ್ರ ತಯಾರಿಸಲು ಹೊರಟಿರುವವರಿಗೆ ಹೊಸದೊಂದು ಚೇತನ ಕೊಡಬೇಕೆಂಬುದೇ ಈ ಲೇಖನದ ಪ್ರಯತ್ನ.ಮಲ್ಲಿ ಒಬ್ಬ ಗಿರಿಜನರ ಹುಡುಗಿ. ಕಾಡಿನಲ್ಲಿಯೇ ಬದುಕುವವರ ನಡುವೆ ತನ್ನೊಡನೆ ತಾನೇ ಮಾತಾಡಿಕೊಳ್ಳುವ ಈ ಪುಟ್ಟ ಬಾಲೆಗೆ ಇಡಿಯ ಕಾಡೇ ಗೆಳೆಯರ ಲೋಕ. ಅಲ್ಲಿರುವ ಪ್ರತೀ ಪ್ರಾಣಿಯ ಜೊತೆಗೂ ಅವಳು ಮಾತಾಡುತ್ತಾಳೆ. ಇಂತಹ ಬಾಲೆಗೆ ಅದೇ ಕಾಡನ್ನು ನೋಡಿಕೊಳ್ಳುವ ಅರಣ್ಯಾಧಿಕಾರಿಯ ಮಗಳು ಗೆಳತಿಯಾಗುತ್ತಾಳೆ.ಆಕೆಯ ಹೆಸರು ಕುಕೂ. ಆದರೆ ಅವಳಿಗೆ ಕಿವಿ ಕೇಳದು, ಮಾತು ಬಾರದು. ಆದರೂ ಇವರಿಬ್ಬರೂ ಮಹಾ ಗೆಳತಿಯರಂತೆ ಕಾಡು ತಿರುಗುತ್ತಾರೆ. ಕಾಡಿನ ಪ್ರತಿ ವಿವರ ನೋಡಿ ಸಂಭ್ರಮಿಸುತ್ತಾರೆ. ಬೇಟೆಯಾಡುವ ಅಥವಾ ಮರ ಕಡಿಯುವ ಜನರನ್ನು ಕಂಡು ಸಿಟ್ಟಾಗುತ್ತಾರೆ. ಇವುಗಳ ನಡುವೆಯೇ ಮಲ್ಲಿಗೆ ಆ ಕಾಡಿನಲ್ಲಿಯೇ ಇರುವ ಒಬ್ಬ ಮುದುಕಿ ಸಿಗುತ್ತಾಳೆ.ಅವಳ ಮಾತಿನಂತೆ ನವಿಲು ದೇವರನ್ನು ಪೂಜಿಸಿ ನೀಲಮಣಿ ಪಡೆದರೆ ಗೆಳತಿಗೆ ಮಾತು ಬರುತ್ತದೆ ಎಂಬುದನ್ನರಿವ ಮಲ್ಲಿ, ಅದಕ್ಕಾಗಿ ಪ್ರಯತ್ನ ಮಾಡುತ್ತಾ ಹೋಗುತ್ತಾಳೆ. ಈ ಹಾದಿಯಲ್ಲಿ ಅವಳ ಬಾಲಲೀಲೆಗಳು, ಮಲ್ಲಿಗೂ ಕಾಡಿನ ನಡುವೆ ಓಡಾಡುವ ಪೋಸ್ಟ್‌ಮ್ಯಾನ್‌ಗೂ ಬೆಳೆವ ಗೆಳೆತನ, ಅವರ ಹಾಡಿಯ ಬಳಿಯಲ್ಲೇ ಇರುವ ಪ್ರಾಣಿ ವೈದ್ಯರ ನಂಟು... ಇತ್ಯಾದಿಗಳು ಅನಾವರಣಗೊಳ್ಳುತ್ತಾ ಕುಕೂ ಕಾಡು ಬಿಟ್ಟು ಮರಳಿ ತನ್ನ ಊರಿಗೆ ಹೋಗುವದರೊಂದಿಗೆ ಕತೆ ಮುಗಿಯುತ್ತದೆ.ಹಾಗೆ ನೋಡಿದರೆ ಈ ಸಿನಿಮಾದಲ್ಲಿ ಕತೆಯೆಂಬುದು ನಗಣ್ಯ. ಇಲ್ಲಿ ಮಗುವಿನ ಮನಸ್ಸಿನಿಂದ ಕಾಡನ್ನು ನೋಡುವ ಪ್ರಯತ್ನವೇ ಹಿರಿದು. ಮಲ್ಲಿ ತನಗೆ ತಾನೇ ಕತೆ ಹೇಳಿಕೊಳ್ಳುತ್ತಾ, ಆ ಕತೆಯೊಳಗಿನ ರಾಣಿಯ ಪಾತ್ರವೂ ತಾನೇ ಆಗುತ್ತಾ, ಮತ್ತೆ ತನ್ನ ಮೂಲ ಪಾತ್ರಕ್ಕೆ ಹೊರಳಿ ಬರುತ್ತಾ ಏಕಕಾಲದಲ್ಲಿ ಕಲ್ಪನಾ ಲೋಕದಲ್ಲೂ ಹಾಗೂ ವಾಸ್ತವ ಲೋಕದಲ್ಲೂ ವಿಹರಿಸುತ್ತಾಳೆ. ಹಾಗಾಗಿ ಇಡಿಯ ಸಿನಿಮಾ ನೋಡುಗನನ್ನು ಮಗುವಾಗಿಸುವ ಪ್ರಯತ್ನ ಮಾಡುತ್ತಾ ಬೆಳೆಯುತ್ತದೆ. ಇದು ಈ ಸಿನಿಮಾದ ವಿಶೇಷ.ಆರಂಭದ ದೃಶ್ಯದಲ್ಲಿಯೇ ತನ್ನೊಂದಿಗೆ ತಾನು ಎಂಬಂತೆ ನೋಡುಗನ ಜೊತೆಗೆ ಮಾತು ಬೆಳೆಸುವ ಮಲ್ಲಿಯು ನೋಡುಗನೊಡನೆ ಒಂದು ವಿಶಿಷ್ಟ ಅನುಸಂಧಾನವನ್ನು ಸಾಧಿಸುತ್ತಾಳೆ. ಅದರೊಡನೆಯೇ ಬರುವ ಅವಳ ಕಲ್ಪನಾ ಶಕ್ತಿಯ ವಿವರವೂ ದೃಶ್ಯವಾಗಿ ತೆರೆದುಕೊಳ್ಳುತ್ತದೆ.ಕನಸಿನ ಕಾಲ ಮತ್ತು ಕಥನದ ಕಾಲಗಳು ಒಂದೇ ಮೈವಳಿಕೆಯಲ್ಲಿ ಸೇರಿಕೊಂಡಂತೆ ಅನಾವರಣವಾಗುವಾಗ ನೋಡುಗನಿಗೆ ಅನಿರ್ವಚನೀಯವೆನಿಸುವ ಆನಂದದ ಜೊತೆಗೆ ಸ್ವತಃ ತಾನೂ ಮಗುವಾದ ಸುಖ ಸಿಗುತ್ತದೆ. ಸಾಮಾನ್ಯವಾಗಿ ಸಿನಿಮಾ ಒಂದರ ಪಾತ್ರದ ಮೂಲಕ ಆ ಪಾತ್ರದ ಜಗತ್ತನ್ನು ಪ್ರವೇಶಿಸಲು ಪ್ರಯತ್ನಿಸುವ ನೋಡುಗನಿಗೆ ಅನೇಕ ಗೊಂದಲಗಳೇಳುವುದು ಸಹಜ.ಆದರೆ “ಮಲ್ಲಿ”ಯಲ್ಲಿ ಹಾಗಾಗದು. ಸಿನಿಮಾದ ಮೊದಲ ಕೆಲವು ನಿಮಿಷಗಳ ಒಳಗೆಯೇ ನೋಡುಗ ತಾನೇ ಮಲ್ಲಿಯಾಗಿ ಸಿನಿಮಾದ ಲೋಕದ ಒಳಗೆ ಪ್ರವೇಶ ಪಡೆಯುತ್ತಾನೆ. ಹೀಗಾಗಿ ನಂತರ ಈ ಕಥನವು ಪಡೆದುಕೊಳ್ಳುವ ಅನೇಕ ತಿರುವುಗಳು ಸಿನಿಮಾ ನೋಡಿದ ನಂತರ ಅಸಹಜ ಎನಿಸಿದರೂ ಸಿನಿಮಾ ನೋಡುವ ಅವಧಿಯಲ್ಲಿ ಮಗುವಾದವನಿಗೆ ದಕ್ಕಬೇಕಾದ ಆನಂದಕ್ಕೆ ಯಾವುದೇ ಕೊರತೆ ಇರುವುದಿಲ್ಲ.

 

ಮಲ್ಲಿ ತನ್ನ ಎದುರಿಗೆ ಸಿಕ್ಕ ಜಿಂಕೆಯ ಮರಿಯನ್ನು ಮಾತಾಡಿಸುವ, ಮರ ಗಿಡಗಳನ್ನು ಮಾತಾಡಿಸುವ ವಿವರಗಳೆಲ್ಲವೂ ನೋಡುಗನ ಮುಖದ ಮೇಲೆ ಆನಂದದ ನಗುವನ್ನು ಉಳಿಸಿಯೇ ಮುಂದೆ ಸಾಗುತ್ತವೆ. ಹೀಗಾಗಿ ಇಡೀ ಸಿನಿಮಾ ಒಂದು ಚೇತೋಹಾರಿ ಪ್ರಯಾಣವಾಗುತ್ತದೆ.ಕಾಡಿನಲ್ಲಿ ಸಿಕ್ಕ ಮುದುಕಿಯ ಮಾತಿನಂತೆ ಇಡೀ ರಾತ್ರಿ ನವಿಲು ದೇವರ ಮರದ ಬಳಿ ಕುಕೂ ಜೊತೆಗೆ ಕಾಯುವ ಮಲ್ಲಿಗೆ ಸಿಗುವ ನವಿಲ ದೇವರು ಸ್ಥಳೀಯ ಜನಪದ ದೇವರ ವೇಷದಲ್ಲಿ ಎದುರಿಗೆ ಬಂದೂ ಬಿಡುತ್ತದೆ. ಮಲ್ಲಿ ಭಾರೀ ಖುಷಿಯಿಂದ ಕೇಳುವ ಪ್ರಶ್ನೆಗಳಿಗೆ ಆ ದೇವರು ಉತ್ತರಿಸದೆ ಕೇವಲ ನಗುವುದು ಮಲ್ಲಿಗೆ ತರಿಸುವ ಸಿಟ್ಟನ್ನೇ ನೋಡುಗನಿಗೂ ತರಿಸುತ್ತದೆ.ನಂತರ ಅದು ಮಲ್ಲಿಯ ಕನಸು ಎಂಬಂತೆ ದೃಶ್ಯ ಅಂತ್ಯವಾಗುವ ಹೊತ್ತಿಗೆ ಕುಕೂ ಕಾಣುವುದಿಲ್ಲ. ಆದರೆ ಆ ದೇವರ ನೆರಳಾದ ಮರವನ್ನು ಕಡಿಯುವವರು ಬಂದಿದ್ದಾರೆ. ಕುಕೂ ಅವರನ್ನು ತಪ್ಪಿಸಲೆಂಬಂತೆ ಮರ ಏರಿ ಕುಳಿತಿದ್ದಾಳೆ. ಮಲ್ಲಿ ಗೆಳತಿಯನ್ನು ರಕ್ಷಿಸಲು ಅಲ್ಲಿಗೆ ಕುಕೂ ಅಪ್ಪನನ್ನು ಕರೆದುಕೊಂಡು ಬರುವುದು, ಮರ ಕಡಿಯುವುದು ತಪ್ಪುವುದು, ಇತ್ಯಾದಿಗಳ ಕಥನವೂ ಮಕ್ಕಳ ಮನಸ್ಸಿನಂತೆಯೇ ಅನಾವರಣಗೊಳ್ಳುತ್ತದೆ.ಇಲ್ಲಿ ಮರ ಕಡಿಯುವ ಜನರಿಗಿಂತ ಅವರ ಕ್ರಿಯೆ ಮಗುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನರಿತಂತೆ ನಿರ್ದೇಶಕರು ಮರ ಕಡಿಯುವವರ ಮುಖಗಳನ್ನು ದಾಖಲಿಸುವುದಕ್ಕಿಂತ ಅವರ ಆಯುಧಗಳನ್ನೇ ತೋರಿಸುತ್ತಾ ಸಮಸ್ಯೆಯನ್ನು ತೆರೆದಿಡುತ್ತಾರೆ.ಈ ದೃಶ್ಯಾಂತ್ಯದಲ್ಲಿ ಮಲ್ಲಿಯಿಂದಲೇ ಇದೆಲ್ಲಾ ಸಮಸ್ಯೆಯಾಗಿದೆ ಎಂದುಕೊಳ್ಳುವ ಹಿರಿಯರು ಅವಳನ್ನು ದೂರ ಇಟ್ಟು ಬಿಡುತ್ತಾರೆ. ಆದರೆ ಮಲ್ಲಿಗೆ ಮಾತ್ರ ತನ್ನ ಗೆಳತಿಗೆ ಮಾತು ಬರುವಂತಾಗಬೇಕು ಎಂಬುದೇ ಗುರಿ.

 

ಅದಕ್ಕಾಗಿ ಅವಳು ಅಜ್ಜಿಯ ಮಾತಿನಂತೆ ಮಂಜಿನ ಹನಿಯನ್ನೆಲ್ಲಾ ಸಂಗ್ರಹಿಸಿ ಕಾಡಿನ ನಡುವಿನ ಕೆರೆಗೆ ಸುರಿಯುತ್ತಾಳೆ. ಈ ದೃಶ್ಯಕ್ಕಾಗಿ ಮಗುವೇ ಹಾಡಿರುವ ಒಂದು ಹಾಡನ್ನು ಸಹ ಬಳಸಿಕೊಂಡು ಅಪರೂಪದ ಚಿತ್ರಿಕೆಗಳನ್ನುಳ್ಳ ದೃಶ್ಯವೊಂದನ್ನು ಸಂತೋಷ್ ಶಿವನ್ ಚಿತ್ರಿಸುತ್ತಾರೆ. ಕಾಡಿನ ಎಲ್ಲಾ ಗಿಡಗಳಿಂದ ಪುಟ್ಟ ಹುಡುಗಿ ಮಂಜಿನ ಹನಿಯನ್ನು ಸಂಗ್ರಹಿಸುವ ವಿವರವೇ ಅದ್ಭುತವಾಗಿದೆ. ಅಲ್ಲಿನ ಪ್ರತಿ ಚಿತ್ರಿಕೆಯು ನೋಡುಗನನ್ನು ಮತ್ತೆ ಮಗುವಾಗಿಸುತ್ತದೆ.ಹೀಗೆ ಬೆಳೆಯುವ ಕಥನದಲ್ಲಿ ಪಶುವೈದ್ಯನ ಪಾತ್ರದ ಸುತ್ತ ಬರುವ ಕೆಲವು ವಿವರಗಳು, ಆತನ ಸಂದರ್ಶನ ಇತ್ಯಾದಿಗಳು ಅನಗತ್ಯವಾದವು. ಆದರೆ ಈ ವಿವರಗಳನ್ನೂ ಸಹ ಮಲ್ಲಿಯ ಮೂಲಕವೇ ಬಿಚ್ಚಿಡುವ ನಿರ್ದೇಶಕರು ಆ ವಿವರಗಳನ್ನು ಸಹ್ಯವಾಗಿಸುತ್ತಾರೆ. ಮಲ್ಲೆಗೆ ಅಲ್ಲಿನ ಪೋಸ್ಟ್‌ಮ್ಯಾನ್ ಮತ್ತೊಬ್ಬ ಗೆಳೆಯ. ಆತನಿಗೆ ಆ ಕಾಡಿನಿಂದ ದೂರಕ್ಕೆ ಹೋದರೆ ಸಾಕು ಎಂಬ ಭಾವ ಇದೆ.ಆದರೂ ಅವರಿಬ್ಬರೂ ಭೇಟಿಯಾದಾಗೆಲ್ಲಾ ಮಕ್ಕಳಂತೆ ಮಾತಾಡಿಕೊಳ್ತಾರೆ. ಮಲ್ಲಿಯ ಕಷ್ಟಗಳ ಜೊತೆಗೆ ಅವಳು ಹೇಳುವ ಕತೆಗಳನ್ನೂ ಕೇಳುವ ಲೆಟರ್ ಮಾಮನ ಪಾತ್ರವು ಮಲ್ಲಿಗೆ ಸಂತೈಕೆಗಳನ್ನೂ ನೀಡುತ್ತಾ ಚಿತ್ರದುದ್ದಕ್ಕೂ ಒಂದು ಉಪಮೆಯಾಗಿಯೇ ಬಳಕೆಯಾಗುತ್ತದೆ.ಮಲ್ಲಿಗೆ ಈ ಲೆಟರ್‌ಮಾಮನಿಂದ ಅವಳ ಬಯಕೆಯಾದ ಲಂಗ ಜಂಪರ್ ಕೂಡ ಪೋಸ್ಟ್ ಮೂಲಕವೇ ತಲುಪಿದ ಸಂಭ್ರಮದಲ್ಲಿ ಇರುವಾಗಲೇ ಅವಳ ಕಣ್ಣೆದುರಿಗೆ ಜಿಂಕೆಯೊಂದಕ್ಕೆ ಗುಂಡೇಟು ಬಿದ್ದು, ಮಲ್ಲಿಯು ಆ ಜಿಂಕೆಯನ್ನು ಕಾಪಾಡಲು ಮಾಡುವ ಕೆಲಸಗಳು ಬಿಚ್ಚಿಕೊಳ್ಳುತ್ತವೆ. ಈ ಹಾದಿಯಲ್ಲಿ ಮಲ್ಲಿಯು ಬಹುಕಾಲದಿಂದ ಕಾಯುತ್ತಿದ್ದ ನೀಲಮಣಿಯೂ ಸಿಕ್ಕಿಬಿಡುತ್ತದೆ.ಅದಕ್ಕಾಗಿ ಮಲ್ಲಿ ಪಡುವ ಸಂಭ್ರಮವೂ ಸಹ ನೋಡುಗನನ್ನು ಅದೇ ಭಾವನಾತ್ಮಕ ಆನಂದದಲ್ಲಿ ಇರಿಸುವಂತೆ ಚಿತ್ರಿಸುವ ಶಿವನ್, ಅಂತಿಮವಾಗಿ ನೀಲಮಣಿಯನ್ನುಳ್ಳ ಸರವನ್ನು ಕುಕೂಗೆ ತಲುಪಿಸಲು ಮಲ್ಲಿಯೂ ಕಾಡಿನ ಗುಂಟ ಓಡುವ ಉತ್ಕರ್ಷ ಸಾಧಿಸಿ ಅಂತಿಮವಾಗಿ ಕುಕೂಗೆ ಆ ನೀಲಮಣಿಯನ್ನುಳ್ಳ ಸರವನ್ನು ತಲುಪಿಸುತ್ತಾಳೆ.ಆದರೆ ಅದನ್ನು ಪಡೆದ ಕುಕೂಗೆ ಮಾತು ಬರುವ ಬದಲು ಅವರಿಬ್ಬರ ನಡುವೆ ಮುರಿದಿದ್ದ ಸ್ನೇಹ ಮತ್ತೆ ಆರಂಭವಾಗುತ್ತದೆ. ಅರಣ್ಯಾಧಿಕಾರಿಯ ಮಗಳು ಅವಳ ಜೊತೆಗೆ ಉಳಿಯದೆ ತನ್ನೂರಿಗೆ ಹೊರಟಾಗ ಮಲ್ಲಿಯು ದುಃಖಿಸುತ್ತಾಳೆ.

 

ಆದರೆ ಅಷ್ಟೇ ಬೇಗ ಆ ದುಃಖ ಮರೆಯುವಂತೆ ಕಣ್ಣು ಮುಚ್ಚಿ ಹೊಸ ಕನಸನ್ನು ಕಾಣಲು ಆರಂಭಿಸುತ್ತಾಳೆ ಎಂದು ಸಿನಿಮಾ ಮುಗಿಯುತ್ತದೆ. ಮುಗ್ಧ ಮನಸ್ಸಿನ ಮಲ್ಲಿಯ ಪ್ರತಿ ಹೆಜ್ಜೆಯು ನಮ್ಮನ್ನು ಮಕ್ಕಳ ಮೂಲಕವೇ ಲೋಕವನ್ನು ನೋಡಲು ಅವಕಾಶ ಒದಗಿಸುತ್ತದೆ.ಹೀಗೆ ಮಗುವಿನ ಮೂಲಕವೇ ಅವಳ ಜಗತ್ತನ್ನು ಅನಾವರಣಗೊಳಿಸಲು ಸಂತೋಷ್ ಶಿವನ್ ಚಿತ್ರೀಕರಣ ಮಾಡಿದ್ದು ಕೇವಲ ಹದಿಮೂರು ದಿನಗಳು ಮಾತ್ರ. ಇಲ್ಲಿನ ವಾತಾವರಣ ನಿರ್ಮಾಣಕ್ಕೆ ಸಂತೋಷ್ ಅವರು ಬಹುತೇಕ ದೀಪ ವ್ಯವಸ್ಥೆಯನ್ನು ಬಳಸಿಯೇ ಇಲ್ಲವೇನೋ ಎಂಬಂತಿದೆ.ಇಂತಹ ಅಪರೂಪದ ಚಿತ್ರವೊಂದನ್ನು ತಯಾರಿಸುವುದಕ್ಕೆ ಬೇಕಾದದ್ದು ಮಗುವಿನ ಮನಸ್ಸು ಮಾತ್ರ. ಪ್ರಾಯಶಃ ನಮ್ಮಲ್ಲಿ ಮಕ್ಕಳ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಾ ಇರುವ ಅನೇಕರಿಗೆ “ಮಲ್ಲಿ” ಮಕ್ಕಳ ಸಿನಿಮಾ ಹೇಗಿರಬೇಕು ಎಂಬುದಕ್ಕೆ ಪಾಠವಾಗಬಲ್ಲದು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.