ಶುಕ್ರವಾರ, ಫೆಬ್ರವರಿ 26, 2021
29 °C

ಮಳೆಗೆ ರೈತರ ಹರ್ಷ: ಬಿತ್ತನೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗೆ ರೈತರ ಹರ್ಷ: ಬಿತ್ತನೆಗೆ ಸಿದ್ಧತೆ

ಮುಂಡಗೋಡ: ವರ್ಷದ ಕೂಳಿಗಾಗಿ ನೇಗಿಲಯೋಗಿ ತನ್ನ ಕಾಯಕದಲ್ಲಿ ನಿರತ­ನಾಗಿದ್ದು ಕೆಲದಿನಗಳಿಂದ ಸುರಿಯು­ತ್ತಿರುವ ಮಳೆಯಿಂದಾಗಿ ರೈತ ಹರ್ಷ­ದಿಂದ ಬಿತ್ತನೆ, ಹೊಲಗದ್ದೆ ಹಸನು  ಕಾರ್ಯದಲ್ಲಿ ತೊಡಗಿದ್ದಾನೆ.ತಾಲ್ಲೂಕಿನಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಪ್ರಸಕ್ತ ವರ್ಷ ಮೇ ತಿಂಗಳ ಮೊದಲ ವಾರದಲ್ಲೇ ಭರ್ಜರಿ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳು ವಾಡಿಕೆಗಿಂತ ಮೊದಲೇ ಆರಂಭಗೊಂಡಿವೆ. ಮುಂಗಾರು ಮಳೆ ಆರಂಭಕ್ಕೂ ಕೆಲ ದಿನಗಳ ಮುಂಚೆ ಹೊಲಗದ್ದೆಗಳನ್ನು ಹಸನು ಮಾಡಿ ಬಿತ್ತನೆಗಾಗಿ ಆಗಸದತ್ತ ಮುಖ ಮಾಡುತ್ತಿದ್ದ ರೈತ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾನೆ.ಪ್ರತಿ ವರ್ಷ ಕೆಲ ರೈತರು ಒಣಬಿತ್ತನೆ ಮಾಡಿ ನಂತರ ಮಳೆರಾಯನ ಆಗಮನಕ್ಕೆ ಎದುರು ನೋಡುತ್ತಿದ್ದರು. ಆದರೆ ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣ ನೋಡಿದರೆ ಭೂಮಿ ಇನ್ನೂ ಹಸಿಯಾಗಿದ್ದು ಬಿತ್ತನೆಗೆ ಪೂರಕವಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಅಕಾಲಿಕ ಮಳೆ ನಿರಂತರವಾಗಿ ಸುರಿದ ಪರಿಣಾಮ ಕೃಷಿ ಚಟುವಟಿಕೆಗಳು ಗರಿಗೆದರುತ್ತಲೇ ಬಿತ್ತನೆ ಬೀಜ, ಗೊಬ್ಬರಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿ ಬಿತ್ತನೆ ಬೀಜಗಳ ಖರೀದಿ ಪ್ರಕ್ರಿಯೆ ಜೋರಾಗಿ ನಡೆದಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿಯ­ವರೆಗೆ 189.5ಮಿ.ಮೀ. ಮಳೆ ದಾಖ­ಲಾಗಿದೆ. ಕಳೆದ ವರ್ಷ ಇಂದಿನವರೆಗೆ 88.5 ಮಿ.ಮೀ. ಮಳೆ ದಾಖಲಾಗಿತ್ತು. ತಾಲ್ಲೂಕಿನಲ್ಲಿ 13600ಹೆಕ್ಟೇರ್‌ ಬಿತ್ತನೆ ಕ್ಷೇತ್ರವಿದ್ದು ಇದರಲ್ಲಿ  11ಸಾವಿರ ಹೆಕ್ಟೇರ್‌ ಕ್ಷೇತ್ರದಲ್ಲಿ ಭತ್ತ ಬಿತ್ತನೆ ನಡೆಯುತ್ತದೆ. ಮಳೆಯ ಪ್ರಮಾಣ ಕಳೆದ 2–3 ವರ್ಷಗಳಿಂದ ರೈತರಿಗೆ ಪೂರಕವಾಗಿದ್ದರಿಂದ ಮತ್ತೇ ಭತ್ತಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.‘ಈ ಸಲ ಮಳೆ ಸ್ವಲ್ಪ ಮೊದಲೇ ಬಂದಿದ್ದರಿಂದ ಹೊಲದಲ್ಲಿನ ಕೆಲಸಗಳು ಚುರುಕುಗೊಂಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೇ 15–20ದಿನಗಳ ಮೊದಲೇ ಹೊಲವನ್ನು ಸ್ವಚ್ಛ ಮಾಡಿ ಬಿತ್ತನೆಗೆ ಸಿದ್ಧವಾಗಿವೆ. ಇನ್ನೊಂದು ವಾರದಲ್ಲಿ ಹೆಚ್ಚಾನು ಹೆಚ್ಚು ರೈತರು ಬಿತ್ತನೆ ಕಾರ್ಯವನ್ನು ಮುಗಿಸಲಿದ್ದಾರೆ’ ಎಂದು ರೈತ ಬಾಬಣ್ಣ ವಾಲ್ಮೀಕಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.