ಸೋಮವಾರ, ಏಪ್ರಿಲ್ 12, 2021
25 °C

ಮಳೆ ನೀರಿಗೆ ತಡೆ ಕೃಷಿ ವಿವಿ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ ಸೀಮೆಯಲ್ಲಿ ಈ ಬಾರಿ ಸಕಾಲಕ್ಕೆ ಮಳೆ ಆಗದೇ ಮುಂಗಾರು ಬಿತ್ತನೆ 15 ದಿನಗಳಷ್ಟು ತಡವಾಗಿತ್ತು. ಈಗಲೂ ಮಳೆ ಸರಿಯಿಲ್ಲ. ಇದರಿಂದ ರೈತರು ಆಗಸ ನೋಡುತ್ತಾ ಕಾಲ ನೂಕುವಂತಾಗಿದೆ.ಇಂಥದೇ ಸಮಸ್ಯೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವನ್ನೂ ಕಾಡುತ್ತಿದೆ. ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಅದು ಇದೇ ಮೊದಲ ಬಾರಿಗೆ ಮಳೆ ನೀರು ಸಂಗ್ರಹ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ವಿವಿಯ ಸುಮಾರು 1600 ಎಕರೆ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸಲು ಕೃಷಿ ಹೊಂಡಗಳ ನಿರ್ಮಾಣಕ್ಕೆ ಚಾಲನೆ ಕೊಟ್ಟಿದೆ.ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕೇಂದ್ರೀಯ ಅಂತರ್ಜಲ ಮಂಡಳಿಯು `ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಕೃತಕ ಮರುಭರ್ತಿ~ ಯೋಜನೆಗಾಗಿ ಕಳೆದ ಸಾಲಿನಲ್ಲಿ ಒಟ್ಟು 82.65 ಲಕ್ಷ ರೂಪಾಯಿಗಳನ್ನು ನೀಡಿತ್ತು.

 

ಕುಲಪತಿ ಡಾ.ಆರ್.ಆರ್.ಹಂಚಿನಾಳ ಅವರ ಮಾರ್ಗದರ್ಶನ ಮತ್ತು ವಿಭಾಗ ಮುಖ್ಯಸ್ಥ ಡಾ.ಎಂ.ವಿ.ಮಂಜುನಾಥ ಮೇಲ್ವಿಚಾರಣೆಯಲ್ಲಿ ಕೃಷಿ ಎಂಜಿನಿಯರಿಂಗ್ ವಿಭಾಗ ಈ ಹಣದಲ್ಲಿ ಯೋಜನೆ ಕೈಗೆತ್ತಿಕೊಂಡು ಈಗಾಗಲೇ ಶೇ 90ರಷ್ಟು ಕಾಮಗಾರಿ ಮುಗಿಸಿದೆ.ಆಡಳಿತ ಕಚೇರಿ, ಕೃಷಿ ವಿಜ್ಞಾನಿಗಳ ನಿವಾಸಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು, ಸಾವಯವ ಕಟ್ಟಡ, ಮಾರುಕಟ್ಟೆ ವಿಭಾಗದ ಕಟ್ಟಡ ಹೀಗೆ ಹಲವು ಕಟ್ಟಡಗಳ ಮೇಲಿಂದ ಹರಿವ ನೀರನ್ನು ಸಂಗ್ರಹಿಸಿ ಪ್ರಯೋಗಕ್ಕೆ ಬಳಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.ಇಂಥ ಯೋಜನೆ ರಾಜ್ಯದಲ್ಲಿ ಅಷ್ಟೇ ಏಕೆ, ಇಡೀ ರಾಷ್ಟ್ರದಲ್ಲಿಯೇ ಯಾವ ಕೃಷಿ ವಿಶ್ವವಿದ್ಯಾಲಯವೂ ಮಾಡಿಲ್ಲ ಎಂಬುದು ಮಂಜುನಾಥ್ ಅವರ ಅಭಿಪ್ರಾಯ. ಇದೇ ರೀತಿಯ ಯೋಜನೆ ವಿಜಾಪುರ ಬಳಿಯ ಕೃಷಿ ಕಾಲೇಜಿನಲ್ಲೂ ಏಕಕಾಲಕ್ಕೆ ಅನುಷ್ಠಾನಗೊಳ್ಳುತ್ತಿದೆ.ಇಲ್ಲಿ 32 ಮೀಟರ್ ಉದ್ದ, 32 ಮೀಟರ್ ಅಗಲ, 3 ಮೀಟರ್ ಆಳದ ಎರಡು ಕೃಷಿ ಹೊಂಡ, 36 ಮೀಟರ್ ಉದ್ದ, 36 ಮೀಟರ್ ಅಗಲ, 3 ಮೀಟರ್ ಅಗಲದ ಎರಡು ಹಾಗೂ 55 ಮೀಟರ್ ಉದ್ದ, 18 ಮೀಟರ್ ಅಗಲ, ಮೂರು ಮೀಟರ್ ಆಳದ ಒಂದು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇವುಗಳ ಜಲಾನಯನ ಪ್ರದೇಶ ಸರಾಸರಿ 40 ರಿಂದ 50 ಎಕರೆ.ಉಳಿದ ಕಡೆ ಕೇವಲ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಅದರಲ್ಲಿ ನೀರನ್ನು ಸಂಗ್ರಹ ಮಾಡಲಾಗುತ್ತಿದೆ. ಆದರೆ ಕೃಷಿ ವಿವಿ ಯೋಜನೆ ಕೊಂಚ ಭಿನ್ನ. ಕೃಷಿ ಹೊಂಡದ ಪಕ್ಕವೇ 100 ಮೀಟರ್ ಆಳದ ಬೋರ್‌ವೆಲ್ ಕೊರೆಸಲಾಗುತ್ತದೆ.

 

ಒಂದು ಹಂತದವರೆಗೆ ಹೊಂಡದಲ್ಲಿ ಸಂಗ್ರಹವಾಗಿ ಹೆಚ್ಚಾಗುವ ಪೈಪ್ ಮೂಲಕ ಕೊಳವೆ ಬಾವಿ ಸೇರುತ್ತದೆ. ಈ ಬಾವಿಗೆ ಅಲ್ಲಲ್ಲಿ ರಂಧ್ರಗಳನ್ನು ಕೊರೆಯಲಾಗಿದ್ದು, ನೇರವಾಗಿ ಕೆಳಕ್ಕೆ ಇಳಿಯುವ  ಬದಲು ರಂಧ್ರಗಳ ಮೂಲಕ ನೀರು ವಿವಿಧ ದಿಕ್ಕಿಗೆ ಸೇರುತ್ತದೆ. ಇದರಿಂದ ಅಂತರ್ಜಲ ಮಟ್ಟವೂ ಸುಧಾರಿಸುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಲೆಕ್ಕಾಚಾರ.ಮಳೆ ಬಿದ್ದ ತಕ್ಷಣ ಕೃಷಿ ಹೊಂಡದಲ್ಲಿ ಸೇರುವ ನೀರಿನೊಂದಿಗೆ ಹೂಳು ಬರುತ್ತದೆ. ಅದನ್ನು ತಡೆಯಲು ಹೊಸ ವಿಧಾನವೊಂದನ್ನು ಅನುಸರಿಸಲಾಗಿದೆ. ಕೃಷಿ ಹೊಂಡಕ್ಕೆ ಸೇರುವ ನೀರು ಮೊದಲು ಒಂದು ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ಮಣ್ಣು ಸೋಸಿ ತಿಳಿ ನೀರು ಮಾತ್ರ ಹೊಂಡ ಸೇರುತ್ತದೆ.ಇದರಿಂದ ಹೂಳು ಕೃಷಿ ಹೊಂಡದಲ್ಲಿ ಸಂಗ್ರಹವಾಗುವುದು ತಪ್ಪುತ್ತದೆ. ತೊಟ್ಟಿಯ ಹೂಳು ತೆಗೆಯಲು ಒಬ್ಬ ಆಳು ಸಾಕು. ಇಡೀ ಹೊಂಡವೇ ಹೂಳುಮಯವಾದರೆ ಸಾಕಷ್ಟು ಕೆಲಸಗಾರರು ಬೇಕಾಗುತ್ತಾರೆ. ಅಲ್ಲದೇ ನೀರು ಸಂಗ್ರಹ ಸಾಮರ್ಥ್ಯವೂ ಕುಸಿಯುತ್ತದೆ ಎಂಬ ತರ್ಕ ಮುಂದಿಡುತ್ತಾರೆ ಡಾ.ಮಂಜುನಾಥ್.ತಾಕುಗಳಿಗೆ (ಬೆಳೆ ಪ್ರಾತ್ಯಕ್ಷಿಕೆ) ನೀರುಣಿಸಲು ಕೃಷಿ ವಿಜ್ಞಾನಿಗಳು ಅಲ್ಲಲ್ಲಿ ನೀರಿನ ಹರಿಗಳನ್ನು ಮಾಡಿದ್ದಾರೆ. ಅಂಥ ಹರಿಗಳಗುಂಟ ಬರುವ ಹೆಚ್ಚುವರಿ ನೀರು ಕೃಷಿ ಹೊಂಡಕ್ಕೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಸುಮಾರು 66 ಹೆಕ್ಟೇರ್‌ಗೆ ನೀರುಣಿಸಲು ಅನುವಾಗುವಂತೆ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.ಇನ್ನು ಮೇಲ್ಛಾವಣಿಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸುವ ಜನಪ್ರಿಯ ಮಾದರಿಯೊಂದನ್ನು ಇಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಮಾಡಲಾಗಿದೆ. ಉದಾಹರಣೆಗೆ 5,700 ಚದರ ಮೀಟರ್ ವಿಸ್ತಾರದ ಕೃಷಿ ವಿ.ವಿ. ಆಡಳಿತ ಕಟ್ಟಡದ ಎರಡೂ ಬದಿ ಮಳೆ ನೀರು ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ.ಎಡಭಾಗದಲ್ಲಿ ಶೇ 80ರಷ್ಟು ನೀರು ಹರಿಯುವುದರಿಂದ 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಇಲ್ಲಿ ಕೃಷಿ ಹೊಂಡಕ್ಕೆ ಅಳವಡಿಸಿದ ಪದ್ಧತಿಯನ್ನೇ ಅಳವಡಿಸಲಾಗಿದೆ.ನೇರವಾಗಿ ಛಾವಣಿಯಿಂದ ಹರಿಯುವ ನೀರು ಹೊಂಡಕ್ಕೆ ಶೇಖರಣೆಯಾಗುತ್ತದೆ. ಅದರಲ್ಲಿ ಮಣ್ಣು ಸೋಸಿ ಬಳಿಕ ಪಕ್ಕದಲ್ಲಿಯೇ ನಿರ್ಮಿಸಲಾದ ಇನ್ನೊಂದು ಹೊಂಡಕ್ಕೆ ಸೇರುತ್ತದೆ. ಆ ನೀರನ್ನು ಪ್ರಯೋಗಾಲಯಕ್ಕೆ ಬಳಸಲಾಗುತ್ತದೆ.ಹೆಚ್ಚುವರಿ ನೀರನ್ನು ಸಂಪರ್ಕ ಪೈಪ್ ಮೂಲಕ ಐದು ಬೋರ್‌ವೆಲ್‌ಗೆ ಬಿಡಲಾಗುತ್ತದೆ. ರಂಧ್ರಗಳ ಮೂಲಕ ನೀರು ಅಂತರ್ಜಲ ಸೇರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.