ಮಂಗಳವಾರ, ಮಾರ್ಚ್ 9, 2021
18 °C

ಮಳೆ: ಬಸ್‌ ನಿಲ್ದಾಣ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ: ಬಸ್‌ ನಿಲ್ದಾಣ ಜಲಾವೃತ

ಕೃಷ್ಣರಾಜಪೇಟೆ :  ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ನಿಲ್ದಾಣ ಜಲಾವೃತವಾದವು. ಅಲ್ಲದೇ, ಖಾಸಗಿ ಬಸ್‌ ನಿಲ್ದಾಣಗಳಲ್ಲದೆ ಹಲವಾರು ಮನೆ, ಅಂಗಡಿ ಮಳಿಗೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ನಷ್ಟವುಂಟಾಗಿದೆ.

ರಾತ್ರಿ ಸುರಿದ ಭಾರಿ ಮಳೆಯಿಂದ  ಪಟ್ಟಣದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು.

ಸುರಿದ ಮಳೆ ನೀರು ಹೊರ ಹೋಗಲು ಸಮರ್ಪಕ ವ್ಯವಸ್ಥೆ ಮಾಡದ ಕಾರಣ ಇಡೀ ಬಸ್‌ ನಿಲ್ದಾಣದಲ್ಲಿ ನೀರು ತುಂಬಿಕೊಂಡು ಸಣ್ಣ ಕೆರೆಯಂತೆ ಕಾಣುತ್ತಿತ್ತು.ಈ ಹಿಂದೆ ಇಲ್ಲಿ ಚನ್ನಪ್ಪನ ಕಟ್ಟೆಯೆಂಬ ಕೆರೆಯಿತ್ತು. ಅದನ್ನು ಬಸ್‌ ನಿಲ್ದಾಣ ವಾಗಿ ಮಾರ್ಪಡಿಸಲಾಗಿತ್ತು. ನಿಲ್ದಾಣ ಮಳೆ ನೀರಿನಿಂದ ಕೆರೆಯಾದ ಕಾರಣ ಯಾವ ಬಸ್‌ಗಳೂ ನಿಲ್ದಾಣದ ಒಳಕ್ಕೆ ಹೋಗಲಾಗದೆ, ನಡು ದಾರಿಯಲ್ಲಿಯೇ ತಮ್ಮ ಪ್ರಯಾಣಿಕರನ್ನು ಹತ್ತಿಸಿ, ಇಳಿಸುತ್ತಿದ್ದ ದೃಶ್ಯ ಕಂಡುಬಂತು. ಇದರಿಂದ ಪ್ರಯಾಣಿಕರು ಚಾಲಕ ಹಾಗೂ ನಿರ್ವಾಹಕನ ಜತೆ ಗಲಾಟೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಖಾಸಗಿ ಬಸ್‌ ನಿಲ್ದಾಣದ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಇಲ್ಲಿನ ಸುಮಾರು 20ಕ್ಕೂ ಹೆಚ್ಚು ಅಂಗಡಿ ಮಳಿಗೆಗೆ  ನೀರು ನುಗ್ಗಿದ್ದ ಪರಿಣಾಮ, ಅದರಲ್ಲಿದ್ದ ವಸ್ತುಗಳು ಜಲಾವೃತ ವಾಗಿದ್ದವು. ಇದಲ್ಲದೆ, ಬಸ್‌ ನಿಲ್ದಾಣಗಳ ಅಕ್ಕಪಕ್ಕದ ಬಡಾವಣೆಗಳ ಮನೆಗಳಿಗೆ ಮಳೆ ನೀರು ಚರಂಡಿ ನೀರಿನ ಜತೆ ಸೇರಿ  ಹರಿದ ಕಾರಣ, ರಾತ್ರಿ ಇಡೀ,  ನೀರನ್ನು ಹೊರ ಹಾಕುವ ದೃಶ್ಯ ಸಾಮಾನ್ಯ ವಾಗಿತ್ತು.ಮದ್ದೂರು ವರದಿ: ಬಿರುಗಾಳಿ ಮಳೆಗೆ ತಾಲ್ಲೂಕಿನ ಕೆರೆಮೇಗಲದೊಡ್ಡಿ ಗ್ರಾಮ ದಲ್ಲಿ ಶನಿವಾರ ರಾತ್ರಿ ಹಲವಾರು ತೆಂಗಿನ ಮರಗಳು ನೆಲಕ್ಕೆ ಉರಳಿ  ಬಿದ್ದು ಲಕ್ಷಾಂತರ ರೂಪಾಯಿ ಬೆಳೆ ಹಾನಿ ಉಂಟಾಗಿದೆ.ಗ್ರಾಮದ ರೈತ ಲಕ್ಷ್ಮಣ್ ಅವರಿಗೆ ಸೇರಿದ್ದ ಗದ್ದೆಯಲ್ಲಿ ಬಿರುಗಾಳಿಗೆ  ಇಪ್ಪತಕ್ಕೂ ಹೆಚ್ಚು ಫಸಲು ಕೊಡುವ ತೆಂಗಿನ ಮರಗಳು ನೆಲಕ್ಕೆ ಬಿದ್ದ ಕಾರಣ ಗದ್ದೆಯಲ್ಲಿ ಬೆಳೆದಿದ್ದ ಕಬ್ಬು, ರೇಷ್ಮೆ ಬೆಳೆಯೂ ಹಾಳಾಗಿದೆ.‘ಕೆಲವೇ ದಿನಗಳಲ್ಲಿ ಕೈಗೆ ಬರಬೇಕಿದ್ದ ಫಸಲು ಹಾಳಾಗಿದೆ. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.