ಗುರುವಾರ , ಮೇ 13, 2021
16 °C

ಮಹಾಲಯದ ಮಹಿಮೆ

ಗುರುರಾಜ ಪೋಶೆಟ್ಟಿಹಳ್ಳಿ Updated:

ಅಕ್ಷರ ಗಾತ್ರ : | |

ಭಾದ್ರಪದ ಮಾಸದ ಕೃಷ್ಣ ಪಕ್ಷವೇ ಮಹಾಲಯ ಪಕ್ಷ, ಅಪರ ಪಕ್ಷ ಅಥವ ಪಿತೃ ಪಕ್ಷ. ಹುಣ್ಣಿಮೆ ನಂತರದ ಪ್ರತಿಪದೆಯಿಂದ ಅಮಾವಾಸ್ಯೆ ವರೆಗೂ ಸರ್ವ ಪಿತೃಗಳಿಗೆ ಮಾಡುವ ಶ್ರಾದ್ಧವೇ ಮಹಾಲಯ.ಶಾಸ್ತ್ರಗಳ ಪ್ರಕಾರ ಗೃಹಸ್ಥನಾದವನಿಗೆ ಪಿತೃ, ದೇವ, ಋಷಿ, ಭೂತ ಮತ್ತು ಮನುಷ್ಯ ಎಂಬ ಐದು ಬಗೆಯ ಋಣವನ್ನು ತೀರಿಸುವ ಹೊಣೆಗಾರಿಕೆ ಇದೆ. ಆ ಮೂಲಕ ಹಿರಿಯರನ್ನು ಋಣಮುಕ್ತರನ್ನಾಗಿ ಮಾಡುವ ಮಹತ್ತರ ಕರ್ತವ್ಯ ನಿಭಾಯಿಸಬೇಕಾಗುತ್ತದೆ.ತಂದೆ ತಾಯಿಗೆ ಸಮನಾದ ಇನ್ನೊಂದು ದೇವರಿಲ್ಲ. ಶರೀರ, ವಿದ್ಯೆ, ಬುದ್ಧಿ, ಸಂಸ್ಕಾರ, ಸಂಪತ್ತುಗಳಿಗೆ ಅವರೇ ಕಾರಣ. ಗತಿಸಿದ ಮಾತಾ ಪಿತರಿಗೆ ಶ್ರದ್ಧೆಯಿಂದ ಅಗ್ನಿಯ ಮೂಲಕ ಹೋಮ, ಪಿಂಡ ಪ್ರದಾನವೇ ಶ್ರಾದ್ಧವೆನಿಸುತ್ತದೆ.ಮಹಾಲಯದ ಹದಿನಾರು ದಿನಗಳಲ್ಲಿ ಸೂರ್ಯನು ಕನ್ಯಾ ರಾಶಿ ಪ್ರವೇಶ ಮಾಡುತ್ತಾನೆ. ಇದು ಸಕಲ ಪಿತೃಗಳಿಗೂ  ಪರ್ವಕಾಲ. ಈ ಕಾಲದಲ್ಲಿ ಪ್ರೇತಪುರದಲ್ಲಿ ಜೀವಿಗಳಿರುವುದಿಲ್ಲವೆಂದೂ, ಭೂಲೋಕದಲ್ಲಿ ವಾಯು ರೂಪದೊಂದಿಗೆ ಆತ್ಮೀಯರ ಬಳಿ ಅನ್ನ ನೀರಿನ ಆಕಾಂಕ್ಷಿಗಳಾಗಿ ಇರುತ್ತಾರೆ ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ಈ ಕಾಲದಲ್ಲಿ ಪ್ರತಿನಿತ್ಯ ಶ್ರಾದ್ಧದ ಆಚರಣೆಯಾಗಿ ತಿಲತರ್ಪಣ ಕೊಡುತ್ತಾರೆ. ತರ್ಪಣ ಎಂದರೆ ತೃಪ್ತಿಪಡಿಸುವುದು ಎಂದರ್ಥ.ಜನನ-ಮರಣಗಳಿಗೆ ಹೇಗೆ ಜಾತಿ ಭೇದವಿಲ್ಲವೋ ಹಾಗೆಯೇ ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು; ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಪ್ರಾಚೀನ ಸಂಸ್ಕೃತಿಯ ಉತ್ತಮ ಕುರುಹು ಪಿತೃಪಕ್ಷ ಶ್ರಾದ್ಧ.

ಶಾಸ್ತ್ರಗಳ ಪ್ರಕಾರ ಮುತ್ತೈದೆಯರಾಗಿ ಮೃತರಾದವರಿಗೆ ನವಮಿಯಂದು, ಯತಿಗಳಿಗೆ ದ್ವಾದಶಿಯಂದು, ದುರಂತ ಸಾವನ್ನಪ್ಪಿದವರಿಗೆ ಚತುರ್ದಶಿಯಂದು ಶ್ರಾದ್ಧ ಮಾಡಬೇಕು.ಜನಪದ ಸಂಸ್ಕೃತಿಯಲ್ಲಿ

ಸತ್ತವರ ನೆನಪಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಪದ್ಧತಿಯನ್ನು ಶಿಷ್ಟ ಪರಂಪರೆಯಲ್ಲಿ ಪಿತೃಪಕ್ಷ, ಶ್ರಾದ್ಧ ಎಂದು ಕರೆದರೆ ಜನಪದ ಪರಂಪರೆಯಲ್ಲಿ ಹಿರಿಯರ ಹಬ್ಬ, ಮಾಳ ಪಕ್ಷ ಎಂದು ಹೇಳುವುದಿದೆ. ಮಹಾಲಯ ಅಮಾವಾಸ್ಯೆ ಎಂಬ ಪದವೇ ಮಾಳ ಪಕ್ಷ ಎಂತಲೂ ಆಗಿರಬಹುದು.ಈ ಪರ್ವ ಬೆಳೆ ಕೊಯ್ಲಿಗೆ ಸ್ವಲ್ಪ ಮುನ್ನ ಬರುತ್ತದೆ. ಮಣ್ಣು ಮತ್ತು ನೀರಿನ ಆರಾಧನೆಯ ಹಿನ್ನೆಲೆಯಲ್ಲಿ ಗೌರಿ-ಗಣೇಶ, ಬೆಳೆಯ ಸಮದ್ಧಿಯ ನಡುವೆ ದೀಪಾವಳಿ ಸಾರ್ವಜನಿಕ ಹಬ್ಬಗಳಾದರೆ ವ್ಯಕ್ತಿ ಮತ್ತು ಕುಟುಂಬದ ಕಾರಣಕ್ಕಾಗಿ ಬರುವ ಹಬ್ಬ ಹಿರಿಯರ ನೆನಪಿನ ಹಬ್ಬ.ನಮ್ಮ ರಾಜ್ಯದಲ್ಲಿ ಈ ಆಚರಣೆಯಲ್ಲಿ ವೈವಿಧ್ಯವಿದೆ. ಉತ್ತರ ಕರ್ನಾಟಕದಲ್ಲಿ ಮಾಸ್ತಿಗಲ್ಲು, ವೀರಗಲ್ಲುಗಳಿಗೆ ಪೂಜೆ ನಡೆದರೆ, ದಕ್ಷಿಣ ಭಾಗದಲ್ಲಿ ಅದರ ಆಚರಣೆಯ ಸ್ವರೂಪವೇ ಬೇರೆ ರೀತಿಯಾಗಿರುತ್ತದೆ.ಹಿರಿಯರು ಬದುಕಿದ್ದ ಕಾಲದಲ್ಲಿ ಅವರಿಗೆ ಸಹಕಾರ ನೀಡಿದ ಪ್ರಕೃತಿಯನ್ನು ನೆನೆಯುವ ಆಚರಣೆ ಇದರಲ್ಲಿ ಇರುವುದನ್ನು ಗಮನಿಸಬಹುದು. ಹೀಗಾಗಿ ಅವರು ಇಷ್ಟಪಡುತ್ತಿದ್ದ ವಸ್ತುಗಳನ್ನೇ ಅರ್ಪಿಸುತ್ತಾರೆ. ಉದಾಹರಣೆಗೆ ಮೃತ ಹಿರಿಯರು ಮದ್ಯಪಾನಿಗಳಾಗಿದ್ದರೆ, ಬೀಡಿ ಸೇದುತ್ತಿದ್ದರೆ, ಮಾಂಸಾಹಾರಿಗಳಾಗಿದ್ದರೆ, ಸಸ್ಯಾಹಾರಿಗಳಾಗಿದ್ದರೆ, ಅದನ್ನೇ ಆ ಹೊತ್ತಿನ ನೈವೇದ್ಯಕ್ಕಾಗಿ ಇರಿಸುವುದುಂಟು.ನೈವೇದ್ಯದ ಕೆಲಭಾಗವನ್ನು ಪೂಜೆ ಮಾಡಿಕೊಡಲು ಬಂದ ಪೂಜಾರಿ ಸೇವಿಸಲೇಬೇಕು. ಆಗಲೇ ಅದು ಸತ್ತು ಸ್ವರ್ಗದಲ್ಲಿರುವ ಹಿರಿಯರಿಗೆ ಸಂದಾಯವಾಗುತ್ತದೆ ಎಂಬುದು ಸಾರ್ವತ್ರಿಕ ನಂಬಿಕೆ.ಇವತ್ತಿನ ನಮ್ಮ ಸಮಾಜದಲ್ಲಿ ಅನೇಕರಿಗೆ ಇದರ ಇರುವಿಕೆಯೇ ಗೊತ್ತಿಲ್ಲದೇ ಹೋಗಿದೆ. ಮುಂದಿನ ಪೀಳಿಗೆ ಅಂತಹ ಒಂದು ಉತ್ತಮ ಉದಾತ್ತ ಧ್ಯೇಯ, ಕರ್ಮವನ್ನು ಮರೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.