ಭಾನುವಾರ, ಜನವರಿ 26, 2020
23 °C

ಮಾಜಿ ಸಚಿವ ಕುಶಾವ ಸೇರ್ಪಡೆ: ಬಿಜೆಪಿ ಮುಖಂಡರಲ್ಲಿ ಭಿನ್ನಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಉತ್ತರ ಪ್ರದೇಶದ ಕಳಂಕಿತ ಮಾಜಿ ಸಚಿವ ಬಾಬು ಸಿಂಗ್ ಕುಶಾವ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದಕ್ಕೆ ಪಕ್ಷದ ಹಿರಿಯ ನಾಯಕಿಯರಾದ ಮೇನಕಾ ಗಾಂಧಿ ಹಾಗೂ ಉಮಾ ಭಾರತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, ತನ್ನ ಕ್ರಮವನ್ನು ಪಕ್ಷ ಶುಕ್ರವಾರ ಸಮರ್ಥಿಸಿಕೊಂಡಿದೆ.ಮುಖಂಡರ ಕೊರತೆ ಅನುಭವಿಸುತ್ತಿದ್ದ ಹಿಂದುಳಿದ ಸಮುದಾಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸ್ಪಷ್ಟನೆ ನೀಡಿದೆ.ಈ ನಡುವೆ, ಬಿಎಸ್‌ಪಿ ಅಥವಾ ಇನ್ಯಾವುದೇ ಪಕ್ಷದಿಂದ ಉಚ್ಚಾಟಿತರಾದ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಬಿಜೆಪಿ ಮುಂದುವರಿಸಿದ್ದೇ ಆದರೆ ಪಕ್ಷದಿಂದ ಹೊರಬರುವುದಾಗಿ ಸಂಸದ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ. ಅಂತಹ ವ್ಯಕ್ತಿಗಳನ್ನು ಬರಮಾಡಿಕೊಳ್ಳುವ ವಿಷಯದಲ್ಲಿ ಆಂತರಿಕವಾಗಿ ಪಕ್ಷದಲ್ಲಿ ಒಮ್ಮತಾಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.ಎನ್‌ಆರ್‌ಎಚ್‌ಎಂ ಬಹುಕೋಟಿ ಹಗರಣದಲ್ಲಿ ಕುಶಾವ ಅವರ ಹೆಸರು ಕೇಳಿಬಂದ ನಂತರ ಮುಖ್ಯಮಂತ್ರಿ ಮಾಯಾವತಿ ಸಂಪುಟ ಮತ್ತು ಬಿಎಸ್‌ಪಿಯಿಂದ ಅವರನ್ನು ಉಚ್ಚಾಟನೆ ಮಾಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಕುಶಾವ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.`ನಾವು ಯಾವುದೇ ಕಾರಣಕ್ಕೂ ಕಳಂಕಿತ ಕುಶಾವ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ~ ಎಂದು ಮೇನಕಾ ಗಾಂಧಿ ಮೊದಲು ವರದಿಗಾರರಿಗೆ ತಿಳಿಸಿದ್ದರು. `ಪಕ್ಷದ ರಾಜ್ಯ ಘಟಕವನ್ನು ಸಂಪರ್ಕಿಸದೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದ್ದು, ಈ ತೀರ್ಮಾನ ತೀವ್ರ ನಿರಾಸೆ ಮೂಡಿಸಿದೆ~ ಎಂದು ಉತ್ತರ ಪ್ರದೇಶದ ಒನಲಾ ಕ್ಷೇತ್ರದ ಸಂಸದೆಯಾಗಿರುವ ಮೇನಕಾ ಬಳಿಕ ಹೇಳಿದ್ದರು.ಇದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿರುವ ಮತ್ತೊಬ್ಬ ಹಿರಿಯ ನಾಯಕಿ ಉಮಾ ಭಾರತಿ, ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ, ಉತ್ತರ ಪ್ರದೇಶದಲ್ಲಿ ಪ್ರಚಾರ ಅಭಿಯಾನ ಕೈಗೊಂಡಿದ್ದ ಅವರು, ಪಕ್ಷದ ಈ ತೀರ್ಮಾನ ಪ್ರತಿಭಟಿಸಿ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂದು ಹೇಳಲಾಗಿದೆ.ಹಿಂದುಳಿದ ಸಮುದಾಯದ ಮುಖಂಡರನ್ನು ಇತರ ಪಕ್ಷಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆಯೇ ಹೊರತು ಕಳಂಕಿತರನ್ನು ರಕ್ಷಿಸುವ ಅಥವಾ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಲ್ಲ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಬಿಜೆಪಿಯ ಈ ಕ್ರಮವನ್ನು ಅದರ ಮಿತ್ರ ಪಕ್ಷ ಜೆಡಿಯು ಸಹ ಟೀಕಿಸಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಿಜೆಪಿಯ ಬದ್ಧತೆಯನ್ನು ಈ ಪ್ರಕರಣ ಬಯಲುಮಾಡಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

 

ಪ್ರತಿಕ್ರಿಯಿಸಿ (+)