ಶುಕ್ರವಾರ, ಜೂನ್ 18, 2021
24 °C

ಮಾಡು ಮಡಿ ಪಂದ್ಯದಲ್ಲಿ ಕೈ-ಕಮಲ

ಪ್ರಜಾವಾಣಿ ವಾರ್ತೆ / ಎನ್. ಉದಯಕುಮಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೊಂದು ಉಪಚುನಾವಣೆ. ಆದರೆ, `ಮಹಾ ಚುನಾವಣೆ~ ಯ ಕಿಮ್ಮತ್ತು ಪಡೆದಿದೆ. ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರೆಲ್ಲ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಪಕ್ಷಗಳು ತಮ್ಮ ತಾಕತ್ತನ್ನೆಲ್ಲ ಪಣಕ್ಕೆ ಒಡ್ಡಿದಂತೆ ಮತದಾರರ ಮನೆ ಬಾಗಿಲು ತಟ್ಟುತ್ತಿವೆ!

ಉಪಚುನಾವಣೆ ನಿಮಿತ್ತ ಮಾತ್ರ. ಎಲ್ಲ ಪಕ್ಷಗಳ ಕಣ್ಣು ಮುಂಬರುವ ವಿಧಾನಸಭಾ ಚುನಾವಣೆ ಕಡೆಗೇ ನೆಟ್ಟಿದೆ. ನಾಯಕರ ಓಡಾಟ, ಮಾತಿನ ವರಸೆ ಈ ಅಂಶವನ್ನು ಮತ್ತೆ ಮತ್ತೆ ದೃಢಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆ (ಇದೇ 18ಕ್ಕೆ ಮತದಾನ- ಎಣಿಕೆ 21ಕ್ಕೆ) ಒಂದು ರೀತಿ `ಅಭ್ಯಾಸ ಪಂದ್ಯ~ವಾಗಿದೆ.

ತುಳುನಾಡು, ಮಲೆನಾಡು ಹಾಗೂ ಒಂದಷ್ಟು ಬಯಲುಸೀಮೆಯನ್ನೂ ಒಳಗೊಂಡ ಈ ಕ್ಷೇತ್ರದಲ್ಲಿ ಯಾವ ಪಕ್ಷದ ಪರ-ವಿರುದ್ಧದ ಅಲೆ ಇಲ್ಲ. ಮತದಾರರ ಕಿವಿ ನಿಮಿರಿಸುವ, ಅವರ ಒಲವು-ನಿಲುವುಗಳ ದಿಕ್ಕು ಬದಲಿಸಬಲ್ಲ ವಿಷಯಗಳು ಚರ್ಚೆಗೆ ಒಳಪಡುತ್ತಿಲ್ಲ. ಹಗರಣಗಳ ಕುರಿತ ಭಾಷಣಗಳಿಗೆ ಕಿವಿಗೊಡಲು ಮತದಾರರಿಗೆ ಸಮಯ ಮತ್ತು ಮನಸ್ಸು ಇದ್ದಂತಿಲ್ಲ. ಜಾತಿ ಮತ್ತು ರಾಜಕಾರಣದ ಹೊಸ ಸಮೀಕರಣಗಳು, `ಒಳಗುದ್ದು~ಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಗಳಿವೆ.

`ಬುದ್ಧಿವಂತರ ಜಿಲ್ಲೆ~ಯ ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ; ಕಾಫಿ ಬೀಡಿನ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಜರುಗಿದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ. ಸದಾನಂದ ಗೌಡ 27,018 ಮತಗಳ ಅಂತರದಿಂದ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಮಣಿಸಿದ್ದರು.

ಆಗ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ, ಸಿಪಿಐನ ರಾಧಾ ಸುಂದರೇಶ್ ಅವರನ್ನು ಬೆಂಬಲಿಸಿತ್ತು. ರಾಧಾ ಅವರು 24,991 ಮತಗಳನ್ನು ಪಡೆದಿದ್ದರು.

ಈ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಬಹುಶಃ ಯಾರೂ ನಿರೀಕ್ಷಿಸಿರಲಾರರು. ಆದರೆ, ಅಕ್ರಮ ಗಣಿಗಾರಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತು. ಬಿ.ಎಸ್.ಯಡಿಯೂರಪ್ಪ ಪದಚ್ಯುತಿಗೆ ಕಾರಣವಾಯಿತು. ಅವರ ಉತ್ತರಾಧಿಕಾರಿಯಾಗಿ ಸದಾನಂದ ಗೌಡ ಆಯ್ಕೆಯಾದರು. ಅವರಿಂದ ತೆರವಾದ ಸ್ಥಾನಕ್ಕೆ ವಿ.ಸುನಿಲ್‌ಕುಮಾರ್‌ರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಕಾಂಗ್ರೆಸ್, ಹೆಗ್ಡೆ ಅವರಿಗೇ  ಮತ್ತೊಂದು ಅವಕಾಶ ನೀಡಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಎಲ್. ಬೋಜೇಗೌಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಯುನಿಂದ ಕೆ.ಭರತೇಶ್ ಸ್ಪರ್ಧಿಸಿದ್ದಾರೆ. ಇವರೂ ಒಳಗೊಂಡಂತೆ ಒಟ್ಟು 14 ಮಂದಿ ಕಣದಲ್ಲಿದ್ದಾರೆ.

ಬ್ರಹ್ಮಾವರ ವಿಧಾನಸಭಾ ಕ್ಷೇತ್ರವನ್ನು (ಪುನರ್ ವಿಂಗಡಣೆಯಲ್ಲಿ ಬೇರೆ ಕ್ಷೇತ್ರಗಳಿಗೆ ಹಂಚಿಹೋಗಿದೆ) ಮೂರು ಬಾರಿ ಪ್ರತಿನಿಧಿಸಿದ್ದ ಹೆಗ್ಡೆ ಅವರು ಬಂದರು ಮತ್ತು ಮೀನುಗಾರಿಕೆ ಸಚಿವರಾಗಿ ಪರಿಚಿತರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರದಿಂದ ಸ್ಪರ್ಧಿಸಿ ಸೋತಿದ್ದರು. ಕಾರ್ಕಳವನ್ನು ಪ್ರತಿನಿಧಿಸಿದ್ದ ಸುನಿಲ್ ಅವರಿಗೆ ಪುನರಾಯ್ಕೆ ಸಾಧ್ಯವಾಗಲಿಲ್ಲ. ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದ ಬೋಜೇಗೌಡ ಅವರೂ ಪರಾಜಿತರಾಗಿದ್ದರು. ಮೂವರೂ ಹೀಗೆ ಸೋಲಿನ ಕಹಿ ಉಂಡವರೇ. ಹೀಗಾಗಿ ಸಹಾನುಭೂತಿಗೆ ಮೂವರೂ ಅರ್ಹರು.

ಪ್ರಬಲರಿಗೆ ಮಣೆ: ಬಂಟರು ಮತ್ತು ಬಿಲ್ಲವರು ಉಡುಪಿ ಭಾಗದ ಎರಡು ಪ್ರಬಲ ಸಮುದಾಯಗಳು. ಸಂಖ್ಯೆಯಲ್ಲಿ ುಸು ಹೆಚ್ಚೂ ಕಡಿಮೆ ಸಮಬಲ. ಈ ಸಮುದಾಯದವರಿಗೆ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅವಕಾಶ ನೀಡಿವೆ. ಚಿಕ್ಕಮಗಳೂರು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಸಂಖ್ಯಾ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಜೆಡಿಎಸ್ ಮಣೆ ಹಾಕಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಸಿಪಿಐ ಈ ಸಲ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದೆ.

ಈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ವಿಧಾನಸಭೆಯ ಎಂಟು ಕ್ಷೇತ್ರಗಳಿದ್ದು, ಅದರಲ್ಲಿ ಏಳರಲ್ಲಿ ಬಿಜೆಪಿ ಶಾಸಕರಿದ್ದಾರೆ (ಕಾರ್ಕಳವನ್ನು ಕಾಂಗ್ರೆಸ್ ಸದಸ್ಯ ಪ್ರತಿನಿಧಿಸುತ್ತಿದ್ದಾರೆ). ಸ್ಥಳೀಯ ಸಂಸ್ಥೆಗಳು ಕೂಡ ಬಹುಮಟ್ಟಿಗೆ ಬಿಜೆಪಿ ಹಿಡಿತದಲ್ಲಿವೆ. ಇದು ಸಹಜವಾಗಿಯೇ ಬಿಜೆಪಿಗೆ ನೆರವಾಗಲಿದೆ. ಆದರೆ, ಪಕ್ಷದೊಳಗಿನ ಕಚ್ಚಾಟ, ಹಗರಣಗಳು, ಬ್ಲೂ ಫಿಲಂ ಪ್ರಕರಣ, ರೇವು ಪಾರ್ಟಿ ಇತ್ಯಾದಿಗಳು ಪಕ್ಷದ ನಿಷ್ಠರಲ್ಲಿಯೇ ರೇಜಿಗೆ ಹುಟ್ಟಿಸಿವೆ. ಅಸಮಾಧಾನದೊಂದಿಗೆ ಸಿಟ್ಟು ಕೂಡ ಇದೆ. ಸಿಟ್ಟು ಗೊಣಗಾಟಕ್ಕೇ ಸೀಮಿತವಾದರೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹೆಚ್ಚು ತೊಡಕಾಗಲಾರದು; ಕೆರಳಿ ಕೆಂಡವಾದರೆ ಸೆರಗು ಸುಡದೇ ಇರದು. ಆದರೆ, ಕೆಂಡವನ್ನು ಸುಡುಬೆಂಕಿಯಾಗಿಸುವ ಬಿರುಗಾಳಿ ಕಣ್ಣಿಗೆ ಕಾಣಿಸುತ್ತಿಲ್ಲ.

ಸಂಘಟನೆ ಬಿಜೆಪಿಯ ಬಹುದೊಡ್ಡ ಬಲ. ಈ ವಿಚಾರದಲ್ಲಿ ಇತರ ಪಕ್ಷಗಳಿಗಿಂತ ಅದು ಮುಂದಿದೆ. ಜನರನ್ನು ಮತಗಟ್ಟೆಗೆ ಕರೆದೊಯ್ಯುವ ಕಟಿಬದ್ಧ ಕಾರ್ಯಕರ್ತರ ಪಡೆಯನ್ನು ಪಕ್ಷ ಹೊಂದಿದೆ. ಆಡಳಿತ ವಿರೋಧಿ ಭಾವನೆಯನ್ನು ಶಮನಗೊಳಿಸಲು ಸಂಘಟನೆಯ ಬಲವನ್ನು ಪಕ್ಷ ಹೇಗೆ ಬಳಸಿಕೊಳ್ಳುತ್ತದೆ ಎಂಬುದು ನಷ್ಟದ ಪ್ರಮಾಣವನ್ನು ನಿರ್ಧರಿಸಲಿದೆ. ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರ. ಪಕ್ಷದ ಕೈಜಾರಿದರೆ ರಾಜ್ಯ ರಾಜಕೀಯದಲ್ಲಿ ಪಲ್ಲಟಗಳಿಗೆ ದಾರಿ ತೆಗೆಯಬಹುದು ಎಂಬ ಭಾವನೆ ಬಿಜೆಪಿಗೆ ಸ್ವಲ್ಪಮಟ್ಟಿಗೆ ನೆರವಾಗಲಿದೆ. ಇದೇ ಕಾರಣದಿಂದ ಒಕ್ಕಲಿಗ ಸಮುದಾಯದ ಕೆಲವರು ಬಿಜೆಪಿ ಕಡೆ ವಾಲಿದರೂ ಆಶ್ಚರ್ಯ ಇಲ್ಲ.

ಬಿಎಸ್‌ವೈ ಗೈರುಹಾಜರಿ ಪರಿಣಾಮ: ಯಡಿಯೂರಪ್ಪ ಪ್ರಚಾರದಿಂದ ದೂರ ಉಳಿದಿದ್ದಾರೆ. ಇದರ ಸಾಧಕ-ಬಾಧಕ ಮೂರೂ ಪಕ್ಷಗಳ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇದರಿಂದ ಲಿಂಗಾಯತ ಪ್ರಾಬಲ್ಯದ ತರೀಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ ತುಸು ಹೊಡೆತ ಬೀಳಬಹುದು. ಚಿಕ್ಕಮಗಳೂರು ಭಾಗದಲ್ಲಿಯೂ ಸ್ವಲ್ಪಮಟ್ಟಿಗೆ ನಷ್ಟ ಸಂಭವಿಸಬಹುದು ಎಂಬ ಲೆಕ್ಕಾಚಾರಗಳಿವೆ. `ನಮ್ಮ ನಾಯಕನಿಗೆ ಅನ್ಯಾಯ ಆಗಿದೆ~ ಎಂದು ಒಂದು ವೇಳೆ ಲಿಂಗಾಯತ ಮತದಾರರು ಮುನಿಸಿಕೊಂಡು ತಟಸ್ಥರಾದರೂ ಕಷ್ಟ. ಅದನ್ನೂ ಮೀರಿ ಬೇರೊಂದು ಪಕ್ಷದ ಕಡೆ ವಾಲಿದರೂ ನಷ್ಟ. ತಕ್ಕಡಿಯಂತೂ ಏರುಪೇರಾಗಲಿದೆ. ಆದರೆ ಉಡುಪಿ ಭಾಗದಲ್ಲಿ ಇದರ `ಬಿಸಿ~ ಇಲ್ಲ.

ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಈ ಸಲ ಮೈಕೊಡವಿ ಮೇಲೆದ್ದಿದ್ದಾರೆ. ಆರಾಮ ಕುರ್ಚಿಯ ರಾಜಕಾರಣದಿಂದ ಯಶಸ್ಸು ಗಳಿಸುವುದು ಸಾಧ್ಯವಿಲ್ಲ ಎಂದು ಅರಿತವರಂತೆ ನಾಯಕರ ದೊಡ್ಡ ದಂಡು ಕಣಕ್ಕೆ ಇಳಿದಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಒಳಗೊಂಡಂತೆ ಬೇರೆ ಬೇರೆ ಸ್ತರದ ನಾಯಕರೆಲ್ಲ ಪ್ರಚಾರದಲ್ಲಿ ತೊಡಗಿದ್ದಾರೆ. ನಾಯಕರ ಓಡಾಟದಿಂದ ಮತ ಪರಿವರ್ತನೆ ದೊಡ್ಡ ಮಟ್ಟದಲ್ಲಿ ಆಗುವ ಕಾಲ ಮುಗಿದಿದೆ. ಆದರೆ, ಕಾರ್ಯಕರ್ತರಲ್ಲಿ ವಿಶ್ವಾಸ ವೃದ್ಧಿಗೆ ಅದು ನೆರವಾಗಿದೆ. ಹಾಗಂತ ಪಕ್ಷದ ಮುಖಂಡರೇ ಹೇಳುತ್ತಾರೆ.

ಸೋಲಿನ ಕೊಂಡಿ ಕಳಚಿಕೊಂಡು, ಗೆಲುವಿನ ಗುಂಗೇರಿ ವಿಧಾನಸಭೆಯ ಮುಂದಿನ ಚುನಾವಣೆ ಎದುರಿಸುವ ಯೋಚನೆ ಕಾಂಗ್ರೆಸ್‌ಗೆ ಇದ್ದಂತಿದೆ. ಅದಕ್ಕೇ ತನ್ನೆಲ್ಲ ಶಕ್ತಿ ವಿನಿಯೋಗಿಸುತ್ತಿದೆ. `ಟಿಕೆಟ್ ಕೈತಪ್ಪಿದ್ದೂ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಕೆಲವು ಮುಖಂಡರು ಮುನಿಸಿಕೊಂಡಿದ್ದರು. ಚುನಾವಣಾ ಕೆಲಸಕ್ಕೆ ಶುರುವಿನಲ್ಲಿ ನಿರಾಸಕ್ತಿ ತೋರಿದ್ದರು. ಆದರೆ ಎಲ್ಲವನ್ನೂ ಸರಿಪಡಿಸಿದ್ದೇವೆ~ ಎನ್ನುತ್ತಾರೆ ಪಕ್ಷದ ನಾಯಕರು. ಇದರಲ್ಲಿ ತೋರುಗಾಣಿಕೆಯ ಪ್ರಮಾಣ ಎಷ್ಟು, ಬದ್ಧತೆ ಎಷ್ಟು ಎಂಬುದು ತಿಳಿಯಬೇಕಾದರೆ ಫಲಿತಾಂಶ ಹೊರಬೀಳುವವರೆಗೂ ಕಾಯಬೇಕು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಪ್ತಕೂಟದ ಸದಸ್ಯರಾದ ಆಸ್ಕರ್ ಫರ್ನಾಂಡಿಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಜೆಡಿಎಸ್ ಮುಖಂಡರು ತುರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಚಿಕ್ಕಮಗಳೂರು ಮತ್ತು ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಬಲ ವೃದ್ಧಿ ಆಗಿದೆ. ಶೃಂಗೇರಿ ಭಾಗದಲ್ಲಿ ನಿರ್ಣಾಯಕ ಎನಿಸಿರುವ ಬ್ರಾಹ್ಮಣ ಸಮುದಾಯದ ಮತದಾರರನ್ನು ಓಲೈಸುವ ಕೆಲಸಕ್ಕೆ ಪಕ್ಷ ಕೈಹಾಕಿದೆ. ಮುಖಂಡ ವೈ.ಎಸ್.ವಿ.ದತ್ತ ಅಲ್ಲೇ ಬೀಡುಬಿಟ್ಟಿದ್ದು ಈ ಮತಗಳನ್ನು ಸೆಳೆಯುವ ಕೆಲಸದಲ್ಲಿ ತೊಡಗಿದ್ದಾರೆ. ತರೀಕೆರೆ ಕ್ಷೇತ್ರದಲ್ಲೂ ಪಕ್ಷ ತಕ್ಕಮಟ್ಟಿಗೆ ಮತ ಸೆಳೆಯಲಿದೆ.

ಉಡುಪಿಯಲ್ಲಿ ನೆಲೆ ಇಲ್ಲ: ಆದರೆ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರ ಕೊರತೆ ಎದ್ದುಕಾಣುತ್ತದೆ. ಕೆಲವೊಂದು ಭಾಗಗಳಲ್ಲಿ ಶೂನ್ಯದಿಂದ ಸಂಘಟನೆ ಶುರು ಮಾಡಬೇಕಾದ ಸ್ಥಿತಿ ಇದೆ. ಪ್ರಚಾರದ ಜತೆಜತೆಗೇ ಮತಗಟ್ಟೆಗಳಿಗೆ ಏಜೆಂಟರನ್ನು ಹೊಂದಿಸುವ ಕೆಲಸ ಕೂಡ ನಡೆದಿದೆ. ಮಾಜಿ ಶಾಸಕ ಯು.ಆರ್. ಸಭಾಪತಿ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದ್ದಾರೆ. ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದ ಅವರಿಂದ ಜೆಡಿಎಸ್‌ಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇಲ್ಲ. ಪಕ್ಷದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಭಾವ, ಬೆಳಪು ಪ್ರದೇಶಕ್ಕೇ ಸೀಮಿತ. ಮಧು ಬಂಗಾರಪ್ಪ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಪರಿಣಾಮವನ್ನು ಕಾದು ನೋಡಬೇಕಿದೆ. ಕೊನೆ ಕ್ಷಣದ ಕಸರತ್ತುಗಳು ನಡೆದಿವೆಯಾದರೂ ಈ ಭಾಗದಲ್ಲಿ ಅಭ್ಯರ್ಥಿಗೆ ಮುನ್ನಡೆ ತಂದುಕೊಡಬಲ್ಲ ಯಾವುದೇ ಸಮೀಕರಣ ಪಕ್ಷದಲ್ಲಿ ಇಲ್ಲದಿರುವುದು ದೊಡ್ಡ ಕೊರತೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸಾಧಿಸಿದ ಗೆಲುವು ಜೆಡಿಎಸ್‌ನಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಪಕ್ಷದ ಮುಖಂಡರಾದ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತೃತೀಯ ರಂಗದ ಜಪ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಸಮರ್ಥ ಪರ್ಯಾಯ ಎಂದು ಬಿಂಬಿಸುವುದು ಮತ್ತು ಅಂತಹದೊಂದು ಸಂದೇಶ ಮತದಾರರಿಗೆ ರವಾನಿಸುವುದು ಪಕ್ಷದ ಗುರಿ ಎಂದು ಮುಖಂಡರೊಬ್ಬರು ಹೇಳಿದರು.

ಅಲ್ಪಸಂಖ್ಯಾತರ ಮತ ಸೆಳೆಯುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ಜರುಗಿದೆ. ಶಾಸಕ ಜಮೀರ್ ಅಹಮದ್ ಖಾನ್ ಈ ನಿಟ್ಟಿನಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪರ್ಧೆಯನ್ನು ಜೆಡಿಎಸ್ ತ್ರಿಕೋನಗೊಳಿಸಿದೆ. ಒಂದು ಹಂತ ಮೀರಿ ಅದು ಪಡೆಯುವ ಮತಗಳಿಂದ ಕಾಂಗ್ರೆಸ್‌ಗೆ ನಷ್ಟ ಆಗಲಿದೆ ಎಂಬ ಲೆಕ್ಕಾಚಾರ ಇದೆ.

ಇದರ ಮಧ್ಯೆ ಬಿಲ್ಲವರ ಹೆಚ್ಚಿನ ಮತಗಳು ಬಿಜೆಪಿ ಕಡೆಗೆ ವಾಲಬಹುದು ಎಂಬ ಶಂಕೆ ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ. ಲೋಕಸಭೆಯಲ್ಲಿ ಸಮುದಾಯವನ್ನು ಪ್ರತಿನಿಧಿಸುವ ನಾಯಕರೇ ಇಲ್ಲ ಎಂಬ ಕೊರಗು ಇಂತಹದೊಂದು ಧ್ರುವೀಕರಣದ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಅದು ನಿಜವೇ ಆದಲ್ಲಿ ಆ ಸೋರಿಕೆಯನ್ನು ತಡೆಯಬಲ್ಲ ಸಮರ್ಥ ನಾಯಕರು ಕಾಂಗ್ರೆಸ್‌ನಲ್ಲಿ ಇಲ್ಲ. ಬಂಟರ ಮತಗಳು ಕಾಂಗ್ರೆಸ್ ಪರವಾಗಿ ಧ್ರುವೀಕರಣಗೊಳ್ಳುವ ಸಾಧ್ಯತೆಗಳು ಇವೆಯಾದರೂ ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಂತಹ ಒಂದಿಬ್ಬರು ಅದಕ್ಕೆ ತಡೆ ಒಡ್ಡಬಲ್ಲರು ಎಂಬ ಮಾತು ಕೇಳಿಬರುತ್ತಿದೆ.  

ಜಯಪ್ರಕಾಶ್ ಹೆಗ್ಡೆ ಅವರು ಎರಡು ಸೋಲುಗಳನ್ನು ಕಂಡರೂ ಕ್ಷೇತ್ರದ ಜನರ ಜತೆ ಸಂಪರ್ಕ ಬಿಟ್ಟಿಲ್ಲ. ಎರಡೂ ಜಿಲ್ಲೆಯ ಜನರಲ್ಲಿ ಅವರ ಬಗ್ಗೆ ಸದ್ಭಾವನೆ ಇದೆ. ಸಂಸತ್ತಿಗೆ ಹೋದರೆ ಕೆಲಸ ಮಾಡಬಲ್ಲರು ಎಂಬ ವಿಶ್ವಾಸ ಜನರಲ್ಲಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇರುವುದರಿಂದ ಕೆಲವರಾದರೂ ಈ ನಿಟ್ಟಿನಲ್ಲಿ ಯೋಚಿಸಬಹುದು. ಮೇಲಾಗಿ ಅವರ ವ್ಯಕ್ತಿತ್ವ ಪಕ್ಷಾತೀತವಾಗಿ ಒಂದಷ್ಟು ಮತ ತಂದುಕೊಡಬಲ್ಲದು.`ಹಿಂದುತ್ವ, ಜನಪರ ಆಡಳಿತ ಮತ್ತು ಯುವ ನಾಯಕತ್ವ~ ಘೋಷಣೆಯಡಿ ಸುನಿಲ್‌ಕುಮಾರ್ ಮತ ಯಾಚಿಸುತ್ತಿದ್ದಾರೆ. ಬಜರಂಗದಳದ ಸಕ್ರಿಯ ಕಾರ್ಯಕರ್ತನಾಗಿ ಹಿಂದೂ ಪರ ಹೋರಾಟದಿಂದಲೇ ಮುಂಚೂಣಿಗೆ ಬಂದಿರುವ ಅವರ ಗೆಲುವಿಗೆ ಪಕ್ಷ ಟೊಂಕ ಕಟ್ಟಿದೆ. ಉಡುಪಿ ಭಾಗದ ಮತದಾರರಿಗೆ ಬೋಜೇಗೌಡರ ಪರಿಚಯ ಅಷ್ಟಾಗಿ ಇಲ್ಲ. ಪಕ್ಷದಿಂದಲೇ ಅವರನ್ನು ಗುರ್ತಿಸಬೇಕಾಗಿದೆ. ಈ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವ ಶಕ್ತಿ ಕಡೆಯ ಎರಡು ದಿನಗಳ ಕರಾಮತ್ತುಗಳಿಗೆ ಇದೆ. ಹಣ ನೀರಿನಂತೆ ಹರಿಯುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.