ಶನಿವಾರ, ಜನವರಿ 25, 2020
27 °C

ಮಾತೇ ಮುತ್ತು, ಬಂಡವಾಳ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು~ ಎಂಬ ಗಾದೆಯೇ ಇಲ್ಲವೇ, ಖುಷಿ ಹಂಚಿಕೊಳ್ಳುವಷ್ಟೇ ಮಂದಿ ನೋವಿನ ಕತೆ ಹೇಳುವವರೂ ಇರುತ್ತಾರೆ. ಅವರ ಮನಸ್ಸಿಗೂ ನೋವಾಗದಂತೆ, ವೀಕ್ಷಕನಿಗೂ ಬೋರಾಗದಂತೆ ಕಾರ್ಯಕ್ರಮ ನಿರ್ವಹಿಸುವುದು ಸವಾಲಿನ ಕೆಲಸವೇ. ಆ ಕ್ಷಣದಲ್ಲಿ ಮೂಡುವ `ಸ್ಪಾಂಟೇನಿಯಸ್~ ಜೋಕ್‌ಗಳಷ್ಟೇ `ಕ್ಲಿಕ್~ ಆಗುತ್ತವೆ. ಅದಕ್ಕಾಗಿ ಪುಸ್ತಕ ಓದುವುದು, ಹಾಸ್ಯೋತ್ಸವ ಕಾರ್ಯಕ್ರಮ ವೀಕ್ಷಿಸುವುದರಲ್ಲಿ ಅರ್ಥವಿಲ್ಲ.

ಈ ಕ್ಷೇತ್ರಕ್ಕೂ ಇಂದು ಹೊಸಬರ ಆಗಮನವಾಗುತ್ತಿದೆ. ಅದರಂತೆ ಸ್ಪರ್ಧೆಯೂ ಹೆಚ್ಚುತ್ತಿದೆ. ಎಂದಿಗೂ ನಾನು ಚಾನೆಲ್‌ನ ಪ್ರೈಮ್ ಟೈಮ್ ನೀಡಿ ಎಂದು ಕೇಳಿದವಳಲ್ಲ. ನಿರ್ವಹಿಸಲು ನನ್ನಿಂದ ಸಾಧ್ಯ ಎಂದು ರುಜುವಾತಾದ ಬಳಿಕವಷ್ಟೇ 9ರಿಂದ 10ರ ಮುಖ್ಯ ಸಮಯವನ್ನು ನೀಡಿದ್ದಾರೆ. ಅದಕ್ಕೆ ನ್ಯಾಯ ಒದಗಿಸುತ್ತಿದ್ದೇನೆ ಎಂಬ ನಂಬಿಕೆ ನನ್ನದು.

ಪ್ರಥಮ ಪಿಯು ಓದುತ್ತಿದ್ದಾಗ ಸ್ಥಳೀಯ `ಸಿಟಿ ಕೇಬಲ್~ನಲ್ಲಿ ಆ್ಯಂಕರಿಂಗ್‌ಗೆ ಮೊದಲ ಅವಕಾಶ ಸಿಕ್ಕಿತು. ಶಾಲೆ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಇಲ್ಲಿನ ಮಾತಿಗೆ ಪೂರಕವಾಯಿತು. ದ್ವಿತೀಯ ಪಿಯುಗೆ ಯು2 ಚಾನೆಲ್ ಆರಂಭವಾಗುವ ವೇಳೆ ಆಡಿಷನ್‌ನಲ್ಲಿ ಪಾಲ್ಗೊಂಡು ಮೊದಲ ಬಾರಿಗೆ ಅವಕಾಶ ಪಡೆದುಕೊಂಡೆ. ಅಂದಿನಿಂದ ಸತತ ಆರು ವರ್ಷ ಕಾರ್ಯಕ್ರಮ ನಿರ್ವಹಿಸುತ್ತಿದ್ದೇನೆ. ಇದರೊಂದಿಗೆ ಉದಯ ಚಾನೆಲ್‌ನ ಹಲವಾರು ಕಾರ್ಯಕ್ರಮಗಳಿಗೂ ನಿರೂಪಕಿಯಾಗಿದ್ದಿದೆ. ಇದೀಗ ಎಂಬಿಎ ಮುಗಿಸಿದ್ದು ಉದ್ಯೋಗದ ಬೇಟೆ ನಡೆಯುತ್ತಿದೆ. ಕಿರುತೆರೆಯಲ್ಲಿ ಅವಕಾಶಗಳು ದೊರೆತಿದ್ದರೂ ಕಾಲೇಜು ಹಾಗೂ ಚಾನೆಲ್ ಕೆಲಸಗಳ ಮಧ್ಯೆ ಸಮಯ ಹೊಂದಿಸಲಾಗಲಿಲ್ಲ.

ಶಾಲಾದಿನಗಳಲ್ಲಿ ಟೀವಿ ಚಾನೆಲ್‌ಗಳಲ್ಲಿ ಪಟಪಟನೆ ಮಾತನಾಡುವವರನ್ನು ನೋಡಿ ಆಸೆ ಪಡುತ್ತಿದ್ದೆ. ಸನ್ ಮ್ಯೂಸಿಕ್ ನೋಡಿ ಅವರಂತೆ ನಾನು ಆಗಬೇಕೆಂದು ಕನಸು ಕಂಡಿದ್ದೆ. ಮೊದಲೇ ಹೆಚ್ಚು ಮಾತುಗಾತಿ ಎಂದು ಹಣೆಪಟ್ಟಿ ಗಿಟ್ಟಿಸಿಕೊಂಡಿದ್ದೆ. ಇಂಡಸ್ಟ್ರಿಗೆ ಬಂದ ನಂತರ ಮಾತು ಇನ್ನೂ ಹೆಚ್ಚಿತು. ಇಂಡಸ್ಟ್ರಿಯೇ ನನಗೆ ಮಾತು ಕಲಿಸಿತು ಎನ್ನುವುದು ಇನ್ನೂ ಹೆಚ್ಚು ಸೂಕ್ತ. ಇನ್ನು ಲೈವ್ ಕಾರ್ಯಕ್ರಮಗಳಲ್ಲಿ ಪ್ರತಿ ಕರೆಗಳಲ್ಲಿ ಸಂಭಾಷಣೆ ನಡೆಸಲು ನಿರ್ದೇಶಕರು ನೀಡುವ ಗರಿಷ್ಠ ಸಮಯ 50 ಸೆಕೆಂಡ್. ಅಷ್ಟರೊಳಗೆ ಅವರ, ಹೆಸರು, ಊರು, ಯಾವ ಚಿತ್ರದ ಗೀತೆ, ಶುಭಾಶಯ ವಿನಿಮಯ ಇವೆಲ್ಲದರಲ್ಲಿ ಮುಗಿಯುತ್ತದೆ. ಹೀಗಾಗಿ ಪೂರ್ವತಯಾರಿಯ ಅಗತ್ಯ ಇರುವುದಿಲ್ಲ. `ರೆಕಾರ್ಡೆಡ್ ಪ್ರೋಗಾಂ~ಗಳಿಗೆ ಒಂದಷ್ಟು ನೋಟ್ಸ್ ಬೇಕಾಗುತ್ತದಷ್ಟೆ.

ಗಣೇಶ್ ಚಿತ್ರರಂಗ ಪ್ರವೇಶಿಸುವ ಮುನ್ನ ಯು2ನಲ್ಲಿ ಆ್ಯಂಕರ್ ಮಾಡುತ್ತಿದ್ದಾಗ ನಾನೂ ಅವರ ಜೊತೆಗಿದ್ದೆ. `ಚೆಲ್ಲಾಟ~ ಚಿತ್ರದ ಬಳಿಕ `ಮುಂಗಾರುಮಳೆ~ 25 ದಿನ ಪೂರೈಸುತ್ತಲೇ ಕಾಮಿಡಿ ಟೈಂಗೆ ಗುಡ್ ಬೈ ಹೇಳಿದ್ದರು. ಹಿಂದಿನಷ್ಟು ಆತ್ಮೀಯತೆ ಈಗ ನಮ್ಮ ಮಧ್ಯೆ ಇಲ್ಲ. ಇಂದಿನ ನಟಿಯರಲ್ಲಿ ಜೆನಿಲಿಯಾ ಬಹಳ ಇಷ್ಟ. ಆಕೆಯ ಚಿತ್ರಗಳನ್ನು ಪದೇಪದೇ ನೋಡಿ ಖುಷಿ ಪಟ್ಟಿದ್ದೇನೆ. ಕನ್ನಡದ ಎಲ್ಲಾ ಆ್ಯಂಕರ್‌ಗಳು ಇಷ್ಟವಾಗುತ್ತಾರೆ, ಹಾಗೆಂದು ಯಾರನ್ನೂ ಅನುಕರಿಸಲು ಇಷ್ಟವಿಲ್ಲ. ಮಾತಿನ ಶೈಲಿಯಲ್ಲಿ ಸ್ವಂತಿಕೆ ಎದ್ದು ಕಾಣಬೇಕು. ಇಲ್ಲವಾದರೆ ಅದಾರದೋ ನಕಲಾಗುತ್ತದಷ್ಟೆ.

ಚಿತ್ರನಟರಂತೆ ನಮಗೂ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಲಾಲ್‌ಬಾಗ್‌ನಿಂದ ಪ್ರತಿನಿತ್ಯ ಕರೆಮಾಡಿ `ಪಾಪು~ ಎಂಬ ಹೆಸರಿನಿಂದ ಕರೆಯುತ್ತಾ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರು ಆಕ್ಸಿಡೆಂಟ್‌ನಲ್ಲಿ ತೀರಿಕೊಂಡ ವಿಷಯ ಕೇಳಿ ಕಣ್ಣೀರಿಟ್ಟಿದ್ದೆ. ಪ್ರತಿನಿತ್ಯ ಅದೆಷ್ಟೋ ಮಂದಿ ಕಾಲ್ ಮಾಡಿ `ನೀವು ಚೆನ್ನಾಗಿ ಮಾತಾಡ್ತೀರಿ, ನಗ್ತೀರಿ~ ಅಂತಾರೆ. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೇನಿದೆ ಅಲ್ವಾ? ಈ ಕಾರ್ಯಕ್ರಮ ಬಿಟ್ಟರೆ ಹಳ್ಳಿ ವಾತಾವರಣ ನಂಗೆ ತುಂಬಾ ಇಷ್ಟ. ರಜಾ ದಿನಗಳನ್ನು ಅಲ್ಲಿನ ಪರಿಸರದಲ್ಲಿ ಕಳೆಯುವುದೆಂದರೆ ತುಂಬಾ ಖುಷಿ. 

ಪ್ರತಿಕ್ರಿಯಿಸಿ (+)