ಬುಧವಾರ, ಜೂನ್ 16, 2021
23 °C

ಮಾಧ್ಯಮ ಪ್ರತಿನಿಧಿ, ಪೊಲೀಸರ ಮೇಲೆ ವಕೀಲರ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಧ್ಯಮ ಪ್ರತಿನಿಧಿ, ಪೊಲೀಸರ ಮೇಲೆ ವಕೀಲರ ದಾಳಿ

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ವಕೀಲರು ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಐಪಿಎಸ್ ಅಧಿಕಾರಿ ಡಾ.ಜಿ.ರಮೇಶ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಪೊಲೀಸ್ ಪೇದೆ ಒಬ್ಬರು ದಾಳಿಯಿಂದ ತೀವ್ರವಾಗಿ ಗಾಯಗೊಂಡು ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂಬ ವದಂತಿ ಹರಡಿದೆ. ಆದರೆ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸದಾನಂದಗೌಡ ಅವರು ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.  ದುಷ್ಕರ್ಮಿಗಳು ನ್ಯಾಯಾಲಯದ ಮೂರನೇ ಮಹಡಿಯಿಂದ ಹೊರಕ್ಕೆಸೆದ ಬೆಂಚ್ ತಗುಲಿ ಪೊಲೀಸ್್ ಪೇದೆ ತೀವ್ರವಾಗಿ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಆಶ್ರುವಾಯು ಪ್ರಯೋಗಿಸಿದ್ದು, ಇನ್ನೂ ಗಲಭೆ ನಿಂತಿಲ್ಲ. ಕೆಲವು ದ್ವಿಚಕ್ರವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ವಕೀಲರು ಮಹಿಳಾ ಪತ್ರಕರ್ತರೂ ಸೇರಿದಂತೆ ಪತ್ರಕರ್ತ ಸಮೂಹದ ಮೇಲೆ ದಾಳಿ ನಡೆಸಿದ್ದಾರೆ.

ಬೆಳಿಗ್ಗೆ 10.45ರ ವೇಳೆಗೆ ರೆಡ್ಡಿ ಅವರನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯಿಂದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕರೆತಂದಾಗ ಆ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾದ ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಮತ್ತು ಕ್ಯಾಮೆರಾ ಮೆನ್‌ಗಳ ಮೇಲೆ ಹಲ್ಲೆ ನಡೆಸಿದರು. ರೆಡ್ಡಿ ಮತ್ತು ಅವರ ಸಹಚರ ಅಲಿಖಾನ್ ಅವರನ್ನು ನ್ಯಾಯಾಲಯ 10 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿತು. ನಂತರ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ಕರೆದುಕೊಂಡು ಹೋದ ಬಳಿಕ ಮತ್ತೆ ವಕೀಲರು ಮಾಧ್ಯಮದವರ ಮೇಲೆ ದಾಳಿ ನಡೆಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಮಾಧ್ಯಮದವರ ಮೇಲೆ ಕಲ್ಲು, ಹೆಲ್ಮೆಟ್, ಚಪ್ಪಲಿ ಮತ್ತಿತರ ವಸ್ತುಗಳನ್ನು ಎಸೆದರು.

ಟೆಲಿವಿಷನ್ ವಾಹಿನಿಗಳ ಪ್ರತಿನಿಧಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಡಿಸಿಪಿ ರಮೇಶ್ ಅವರ ಮೇಲೆ ವಕೀಲರು ಕಲ್ಲು ತೂರಿದ್ದಾರೆ. ಗಾಯಗೊಂಡಿರುವ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನ್ಯಾಯಾಲಯದ ಮೂರನೇ ಮಹಡಿಯಲ್ಲಿದ್ದ ಪೊಲೀಸ್ ಕಾನ್ಸ್‌ಟೆಬಲ್‌ಗಳ ಮೇಲೂ ವಕೀಲರು ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೂ ತೀವ್ರವಾಗಿ ಗಾಯಗೊಂಡಿದ್ದಾರೆ.

ಸಮೀಪದ ಸರ್ಕಾರಿ ಕಾಲೇಜು ಕೂಡ ವಕೀಲರ ಗುರಿಯಾಯಿತು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಕಾಲೇಜಿನತ್ತ ಯರ್ರಾಬಿರ್ರಿ ಕಲ್ಲು ತೂರಿದ ವಕೀಲರು ನಂತರ ಕೋರ್ಟ್ ನತ್ತಲೆ ಕಲ್ಲೆಸೆಯಲಾರಂಭಿಸಿದರು.ಈ ಮಧ್ಯೆ ಗೃಹ ಸಚಿವ ಆರ್. ಅಶೋಕ್ ಅವರು ಘಟನೆ  ಬಗ್ಗೆ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸದ್ಯ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಘರ್ಷಣೆಯ ವಾತಾವರಣ ಇದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.