ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ರೋಗ: ಕಳಂಕ ಭಾವನೆ ಸಲ್ಲ

Last Updated 14 ಫೆಬ್ರವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾನಸಿಕ ರೋಗಗಳ ಕುರಿತು ಸಮಾಜದಲ್ಲಿ ಆಳವಾಗಿ ಬೇರೂರಿರುವ ಕಳಂಕ ಭಾವನೆಯನ್ನು ತೊಡೆದು ಹಾಕಲು ಪ್ರಜ್ಞಾವಂತರು ಶ್ರಮಿಸಬೇಕಿದೆ’ ಎಂದು ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಕರೆ ನೀಡಿದರು.

ನಿಮ್ಹಾನ್ಸ್ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸಂಸ್ಥಾ ದಿನ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಅವಜ್ಞೆಯಿಂದ ಕಾಣುತ್ತಿರುವ ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ನಂತರ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ. ಮಾನಸಿಕ ರೋಗಿಗಳ ಕುಟುಂಬ ವರ್ಗಕ್ಕೆ ರೋಗಿಗಳ ಪರಿಸ್ಥಿತಿ ಮತ್ತು ಅವರ ಜತೆ ವರ್ತಿಸುವ ಬಗೆಯನ್ನು ಆಸ್ಪತ್ರೆಗಳೇ ಕಲಿಸಬೇಕಿದೆ’ ಎಂದು ತಿಳಿಸಿದರು.

‘ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದ್ರೋಗವಿದ್ದಂತೆ ಮಾನಸಿಕ ಅಸ್ವಸ್ಥತೆ ಕೂಡ ಒಂದು ಸಾಮಾನ್ಯ ರೋಗ ಎಂಬ ಅರಿವನ್ನು ಮೂಡಿಸಬೇಕಿದೆ. ಮಾನಸಿಕ ರೋಗವನ್ನು ಕೂಡ ಗುಣಪಡಿಸಲು ಸಾಧ್ಯ ಎಂಬ ಭಾವನೆಯನ್ನು ಜನರಲ್ಲಿ ಬಿತ್ತಬೇಕಿದೆ’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ರೋಗಿಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಮನೋವಿಜ್ಞಾನ ಕುರಿತು ಆಸಕ್ತಿ ತಾಳಬಲ್ಲ ಯುವಪಡೆ ಸೃಷ್ಟಿಯಾಗಬೇಕಿದೆ’ ಎಂದು ಹೇಳಿದರು.

‘ಆಧುನಿಕ ಕಾಲದ ಮಾನಸಿಕ ಒತ್ತಡಗಳ ಕುರಿತು ಪರಿಣಾಮಕಾರಿ ಚಿಕಿತ್ಸೆ ನೀಡುವಂತೆ ಹಾಗೂ ಹೊಸ ರೋಗಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಗುಣಪಡಿಸಲು ಸಾಧ್ಯವಾಗುವಂತೆ ಮಾನಸಿಕ ಆರೋಗ್ಯ ಕ್ಷೇತ್ರ ರೂಪುಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ನಿಮ್ಹಾನ್ಸ್ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಭಾರತೀಯ ಮಾನಸಿಕ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ’ ಎಂದರು.

ಕುಲಪತಿ ಪ್ರೊ. ಪಿ. ಸತೀಶ್ ಚಂದ್ರ ಮಾತನಾಡಿ ‘ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಸೇವೆ ನೀಡಲು ಸಂಸ್ಥೆ ಸದಾ ಸಿದ್ಧವಿದೆ. ಕಾರ್ಪೊರೇಟ್ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಸಂಸ್ಥೆಯ ಜತೆ ಕೈ ಜೋಡಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.

‘ಸರ್ ಮಿರ್ಜಾ ಇಸ್ಮಾಯಿಲ್ ಕಟ್ಟಿದ ಸಂಸ್ಥೆಯಲ್ಲಿ ಹಿಂದಿನ ಪರಂಪರೆ ಉಳಿಯಬೇಕೆಂಬ ಆಶಯವಿದೆ. ಆವರಣದಲ್ಲಿರುವ ಉದ್ಯಾನ ಹಾಗೂ ಕಟ್ಟಡಗಳನ್ನು ಸಂರಕ್ಷಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.

ವೈದ್ಯಕೀಯೋತ್ತರ ಮತ್ತು ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಪ್ರಾಧ್ಯಾಪಕರಾದ ಪ್ರೊ. ವಿ. ರವಿ, ಪ್ರೊ. ಜಿ.ಎಸ್. ಉಮೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT