ಗುರುವಾರ , ಅಕ್ಟೋಬರ್ 1, 2020
28 °C

ಮಾನಿನಿಯರ ಮ್ಯಾಚಿಂಗ್ ಸ್ಟಾಲ್

ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಮಾನಿನಿಯರ ಮ್ಯಾಚಿಂಗ್ ಸ್ಟಾಲ್

`ಬೆಂಗಳೂರಿಗೆ ನಾನು ಬಂದು ಐದಾರು ವರ್ಷವೇ ಆಗಿದೆ. ಯಾವುದಾದರೂ ಸಮಾರಂಭ ಬಂತೆಂದರೆ ಗೆಳತಿಯರೆಲ್ಲ ಸೇರಿ ಇಲ್ಲಿಗೆ ಬರುತ್ತಿದ್ದೆವು. ನಮ್ಮ ಡ್ರೆಸ್‌ಗೆ ಪಕ್ಕಾ ಮ್ಯಾಚ್ ಆಗುವ ಬಳೆ, ಬಿಂದಿ, ಕ್ಲಿಪ್, ಸರ ಎಲ್ಲವನ್ನೂ ಕೊಂಡೊಯ್ಯುತ್ತಿದ್ದೆವು.ನಾವು ತೊಟ್ಟ ಆಭರಣ ನೋಡಿ ಎಷ್ಟೋ ಜನ ಇಷ್ಟಪಟ್ಟಿದ್ದಾರೆ. ಜೊತೆಗೆ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿ ತಾವೂ ಇದೇ ಅಂಗಡಿಗೆ ಬರುವವರ ಸಂಖ್ಯೆಯೂ ಸಾಕಷ್ಟಿದೆ. ನನಗಷ್ಟೇ ಅಲ್ಲ ನನ್ನ ಗೆಳತಿಯರೂ ಈ ಅಂಗಡಿಗೆ ಬಂದು ಖುಷಿ ಪಟ್ಟಿದ್ದಾರೆ~ ಎಂದು ಭವಾನಿ ಕಂಗನ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದರು ಶ್ರೀನಿಧಿ.`ಬೆಂಗಳೂರಿನವರೇ ಅದ ನಾವು ಹಲವು ವರ್ಷಗಳಿಂದ ಇದೇ ಅಂಗಡಿಗೆ ಬರುತ್ತೇವೆ. ಮನೆಯಲ್ಲಿ ಅಥವಾ ನೆಂಟರ ಮನೆಯಲ್ಲಿ ಏನಾದರೂ ಫಂಕ್ಷನ್ ಇದೆ ಎಂದರೆ ನಾವು ಮೊದಲು ಇಲ್ಲಿಗೆ ಬಂದು ಬೇಕಾದ ಎಲ್ಲಾ ಮ್ಯಾಚಿಂಗ್ ವಸ್ತುಗಳನ್ನು ಕೊಂಡೊಯ್ಯುತ್ತೇವೆ. ಅಜ್ಜಿ ಅಮ್ಮಂದಿರೂ ಮೊದಲಿನಿಂದಲೂ ಇದೇ ಅಂಗಡಿಗೆ ಬರುತ್ತಿದ್ದರು~ ಎನ್ನುತ್ತಾ ಭವಾನಿ ಕಂಗನ್ಸ್‌ಗೂ ತಮಗೂ ಇದ್ದ ವರುಷಗಳ ಬಾಂಧವ್ಯ ಬಣ್ಣಿಸುತ್ತಾರೆ ಸಂಧ್ಯಾ.ಮದುವೆ, ಉಪನಯನ, ಆರತಕ್ಷತೆ, ಪಾರ್ಟಿಯಂತಹ ಯಾವುದೇ ಸಮಾರಂಭವಿರಲಿ ಮಹಿಳೆಯರಿಗೆ ಥಟ್ಟನೆ ನೆನಪಾಗುವುದು ಇದೇ ಭವಾನಿ  ಕಂಗನ್ಸ್. ಯಾವುದೇ ಬಣ್ಣದ ಸೀರೆ ಅಥವಾ ಯಾವುದೇ ಬಗೆಯ ಉಡುಗೆಯೇ ಆಗಲಿ ಅದಕ್ಕೊಪ್ಪುವ ಬಳೆ, ವಿವಿಧ ಬಗೆಯ ನೆಕ್ಲೇಸ್, ಸರಗಳು, ಕ್ಲಿಪ್, ಹೇರ್‌ಬ್ಯಾಂಡ್, ಬಿಂದಿ ಎಲ್ಲವೂ ಒಂದೇ ಕಡೆ ಸಿಗುತ್ತದೆ ಎಂಬ ಕಾರಣಕ್ಕೆ ನೀರೆಯರ ಮೊದಲ ಆಯ್ಕೆ ಭವಾನಿ ಕಂಗನ್ಸ್.ಸುಮಾರು 20 ರೂಪಾಯಿಯಿಂದ 3000 ರೂಪಾಯಿವರೆಗಿನ ಆಭರಣಗಳು ಇಲ್ಲಿ ದೊರೆಯುತ್ತವೆ. ಅದನ್ನು ತೊಟ್ಟು ಸಂಭ್ರಮಿಸಿದಾಗ ದುಡ್ಡು ಖಾಲಿಯಾದ ಬೇಸರವೇ ಮಾಯವಾಗುತ್ತದೆ. ನಮ್ಮ ಮನಸ್ಸಿಗೆ ಬೇಕಾದಂಥ ಆಯ್ಕೆಯ ಆಭರಣಗಳು ದೊರೆಯುವುದೇ ದೊಡ್ಡ ಖುಷಿ ಎಂಬುದು ಇಲ್ಲಿಗೆ ಆಗಾಗ ಬರುವ ಬಹುತೇಕರ ಮಾತು.ಮ್ಯಾಚಿಂಗ್ ಬಯಸುವ ಕಾಲೇಜು ಹುಡುಗಿಯರು, ಮದುವೆ ಸಂಭ್ರಮದಲ್ಲಿರುವ ಮಾನಿನಿಯರಷ್ಟೇ ಅಲ್ಲ, ಸಿನಿಮಾ ಹಾಗೂ ಧಾರಾವಾಹಿ ನಟಿಯರಿಗೂ ಇದು ಮೆಚ್ಚಿನ ಶಾಪಿಂಗ್ ತಾಣ. ತಾರಾ, ಪ್ರಿಯಾಂಕಾ ಉಪೇಂದ್ರ, ಧಾರಾವಾಹಿಯಲ್ಲಿ ಅಭಿನಯಿಸುವ ಅನೇಕ ನಟಿಯರು ಇಲ್ಲಿಗೆ ಬರುತ್ತಾರೆ.

 

ಎಂದೂ ಜಾಹೀರಾತಿನ ಮೊರೆಹೋಗದ ನಮಗೆ ಜನರ ಮೆಚ್ಚಿನ ಮಾತುಗಳೇ ಪ್ರೋತ್ಸಾಹ ನೀಡುತ್ತಿವೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಇದೇ ಕಾರಣ ಎನ್ನುವಾಗ ಭವಾನಿ ಕಂಗನ್ಸ್ ಮಾಲೀಕರಲ್ಲಿ ಹೆಮ್ಮೆಯ ಭಾವ.ಹೈದರಾಬಾದ್, ಮುಂಬೈ, ರಾಜಸ್ತಾನ ಮುಂತಾದ ಪ್ರದೇಶಗಳಿಂದ ಬರುವ ಈ ವಿಧವಿಧವಾದ ಬಳೆಗಳನ್ನು ಕೊಂಡುಕೊಳ್ಳಲು ಮೈಸೂರು, ಹುಬ್ಬಳ್ಳಿ, ದಾವಣಗೆರೆಗಳಿಂದಲೂ ಜನರು ಬರುತ್ತಾರಂತೆ. ಅಲ್ಲದೆ ವಿದೇಶದಲ್ಲಿ ನೆಲೆಸಿರುವ ಹಲವರು ಊರಿಗೆ ಬಂದಾಗ ಭವಾನಿ ಕಂಗನ್ಸ್‌ಗೆ ಭೇಟಿ ನೀಡಿ ಮೆಚ್ಚಿನ ವಸ್ತುಗಳನ್ನು ಖರೀದಿಸುತ್ತಾರೆ. ಇಲ್ಲಿಗೆ ಭೇಟಿ ನೀಡಿ ಬಳೆ ಖರೀದಿಸುವ ವಿದೇಶೀಯರ ಸಂಖ್ಯೆಯೂ ಕಡಿಮೆ ಇಲ್ಲ.ಕೇವಲ ಮ್ಯಾಚಿಂಗ್ ಸಿಗುವುದಷ್ಟೇ ಅಲ್ಲ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಗ್ರಾಹಕರಲ್ಲಿ ಕಾಡದಿರುವಂತೆ ವ್ಯವಸ್ಥೆ ಮಾಡಿರುವುದು ಇಲ್ಲಿನವರ ಗ್ರಾಹಕ ಪ್ರೀತಿಯನ್ನು ಸಾರುತ್ತದೆ.ಭವಾನಿ ಕಂಗನ್ಸ್‌ನ ಮೊದಲನೇ ಮಹಡಿ ಪ್ರವೇಶಿಸಿ ನಿಮ್ಮ ಸೀರೆಯನ್ನೋ ಅಥವಾ ಮ್ಯಾಚಿಂಗ್ ಬೇಕಾಗುವ ಡ್ರೆಸ್ಸನ್ನೋ ನೀಡಿದರೆ ಸಾಕು. ಉಳಿದಂತೆ ಅಲ್ಲಿರುವ ಆಭರಣಗಳ ಚೆಂದವನ್ನು ಸವಿಯುತ್ತ ನಿಲ್ಲಬಹುದು. ನಿಮ್ಮ ಉಡುಗೆಗೆ ಮ್ಯಾಚ್ ಆಗುವ ಬಳೆಯನ್ನು ಹುಡುಕಿ ತಂದು ಕೊಡುತ್ತಾರೆ ಅಲ್ಲಿನ ಸಿಬ್ಬಂದಿ.

 

ಒಂದೊಮ್ಮೆ ಅವರು ತಂದು ತೋರಿಸಿದ ಮ್ಯಾಚಿಂಗ್ ನಿಮಗಿಷ್ಟವಾಗಲಿಲ್ಲ ಎಂದರೆ ಎರಡೇ ನಿಮಿಷದಲ್ಲಿ ಇನ್ನೊಂದು ಆಯ್ಕೆ ನಿಮ್ಮೆದುರು ಬರುತ್ತದೆ. ಮನಸ್ಸಿಗೆ ತೃಪ್ತಿ ಎನ್ನಿಸುವಂಥ ಮ್ಯಾಚಿಂಗ್ ಬಳೆಯೋ, ಸರವೋ, ಕ್ಲಿಪ್ಪೂ ಸಿಕ್ಕೇ ಸಿಗುತ್ತದೆ. ಹೀಗಾಗಿಯೇ ಮಾನಿನಿಯರ ಮೆಚ್ಚಿನ ತಾಣ ಇದು.ಇಲ್ಲಿ ಸದಾ ಜನಜಂಗುಳಿ. ಮ್ಯಾಚಿಂಗ್ ಬಯಸಿ ಬರುವ ಮಹಿಳೆಯರಿಗೆ ಮ್ಯಾಚಿಂಗ್ ಹುಡುಕಿ ಕೊಡುವ ಕೆಲಸ ಹುಡುಗರ್ದ್ದದು ಎಂಬುದು ಇಲ್ಲಿನ ವೈಶಿಷ್ಟ್ಯ. ಬಳೆ ಬೇಕಾದರೆ ಮೊದಲಿಗೆ ನಿಮ್ಮ ಕೈ ಅಳತೆ ನೀಡಿದರೆ ಸಾಕು. ರ‌್ಯಾಕ್‌ನಲ್ಲಿ ಇಡಲಾಗಿರುವ ಮ್ಯಾಚಿಂಗ್ ವಸ್ತುಗಳನ್ನು ಒಂದೊಂದಾಗಿ ಎತ್ತಿ ತಂದು ಮಧ್ಯೆ ಮಧ್ಯೆ ಸೇರಿಸಿ ನಿಮ್ಮ ಮುಂದಿಡುತ್ತಾರೆ. ಮ್ಯಾಚಿಂಗ್ ವಿಷಯದಲ್ಲಿ `ಹುಡುಗರು ಇಷ್ಟು ಪಕ್ಕಾನಾ...~ ಎಂದು ಮಹಿಳೆಯರೇ ಹುಬ್ಬೇರಿಸಿದ ಸಂದರ್ಭಗಳು ಸಾಕಷ್ಟಿವೆ. ಅಷ್ಟು ವೇಗ ಹಾಗೂ ಪಕ್ಕಾ ಈ ಹುಡುಗರ ಆಯ್ಕೆಗಳು.`ಸುಮಾರು 25ಕ್ಕೂ ಹೆಚ್ಚು ಹುಡುಗರು ಇಲ್ಲಿ ಕೆಲಸಕ್ಕಿದ್ದಾರೆ. ಹುಡುಗಿಯರಿಗಿಂತ ಹುಡುಗರಿಗೆ ತಾಳ್ಮೆ ಹೆಚ್ಚು. ಅಲ್ಲದೆ ಹುಡುಗಿಯರಿಗೆ ಬೇಕಾಗುವ ಮ್ಯಾಚಿಂಗ್ ಆಯ್ಕೆಯಲ್ಲಿ ಹುಡುಗರೇ ಒಂದು ಕೈ ಮುಂದು. ಅದಕ್ಕಾಗಿ ಕೆಲಸಕ್ಕೆ ಹುಡುಗರನ್ನೇ ಆಯ್ದುಕೊಂಡಿದ್ದೇವೆ.

 

ಉತ್ತರ ಕನ್ನಡ, ದಕ್ಷಿಣ ಕನ್ನಡದ ಹುಡುಗರೇ ನಮ್ಮಲ್ಲಿ ಕೆಲಸಕ್ಕಿದ್ದಾರೆ. ಅವರಿಗೆ ತರಬೇತಿಯನ್ನೂ ನೀಡಿದ್ದೇವೆ. ಊಟ ವಸತಿಯನ್ನೂ ಕಲ್ಪಿಸಿಕೊಟ್ಟಿದ್ದೇವೆ. ಎಲ್ಲರೂ ಮನೆಯ ಮಕ್ಕಳಂತೆ ಆಗಿದ್ದಾರೆ ಎಂದು ಮಾಲೀಕರಲ್ಲೊಬ್ಬರಾದ ರಾಜಶೇಖರ್ ತಮ್ಮ ಹುಡುಗರ ಬಗ್ಗೆ ತುಂಬು ಹೆಮ್ಮೆಯಿಂದ ಮಾತಿಗಿಳಿಯುತ್ತಾರೆ.`ನಮ್ಮದು ಮೂಲತಃ ಬಳೆ ಮಾರುವ ವೃತ್ತಿ. ಜೋಗಿಗಳು ಎಂದೂ ನಮ್ಮನ್ನು ಕರೆಯುತ್ತಿದ್ದರು. 57 ವರ್ಷಗಳ ಹಿಂದೆ ಕುಂದಾಪುರದ ಕಂಡ್ಲೂರಿನಿಂದ ಬೆಂಗಳೂರಿಗೆ ಬಂದ ಅಪ್ಪ ಗಾಂಧಿಬಜಾರ್‌ನಲ್ಲಿ ಬಳೆ ವ್ಯಾಪಾರ ಶುರು ಮಾಡಿದರು. ಆಗ ಕೇವಲ ಗಾಜು, ರಬ್ಬರ್ ಹಾಗೂ ಪ್ಲಾಸ್ಟಿಕ್ ಬಳೆಗಳಿದ್ದವು. ಅಲ್ಲದೆ ಯಾರೂ ಮ್ಯಾಚಿಂಗ್ ಬೇಕು ಎಂದು ಕೇಳುತ್ತಿರಲಿಲ್ಲ. ಆದರೆ ಈಗ ಟ್ರೆಂಡ್ ಪೂರ್ಣ ಬದಲಾಗಿದೆ.ಬಳೆ, ಕ್ಲಿಪ್, ಬಿಂದಿ, ಸರ, ಕಾಲ್ಗೆಜ್ಜೆ ಪ್ರತಿಯೊಂದೂ ಮ್ಯಾಚ್ ಆಗಬೇಕು ಎಂದು ಮಹಿಳೆಯರು ಬಯಸುತ್ತಾರೆ. ಹಾಗಾಗಿ ಮಹಿಳೆಯರ ಬೇಡಿಕೆಗೆ ತಕ್ಕಂತೆ ನಮ್ಮ ಶಾಪ್‌ನಲ್ಲೂ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಗಾಜು ಹಾಗೂ ಮೆಟಲ್ ಬಳೆಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಬೇಕಾಗುವ ಮ್ಯಾಚಿಂಗ್ ವಸ್ತುಗಳು ಒಂದೇ ಕಡೆ ಸಿಗುತ್ತವೆ.

 

ಎಲ್ಲಾ ಕಾಸ್ಮೆಟಿಕ್‌ಗಳೂ ಇಲ್ಲಿ ದೊರೆಯುತ್ತವೆ ಎಂಬ ಖುಷಿಯಲ್ಲಿ ಮಹಿಳೆಯರು ನಮ್ಮ ಅಂಗಡಿಗೆ ಬರುತ್ತಾರೆ. ಅಂದಹಾಗೆ ಜಯನಗರದ ಮೂರನೇ ಬ್ಲಾಕ್‌ನಲ್ಲೂ ಭವಾನಿ ಕಂಗನ್ಸ್ ಮಳಿಗೆ ಇದೆ. ಅಲ್ಲೂ ಮ್ಯಾಚಿಂಗ್ ಟ್ರೆಂಡ್ ಜೋರಾಗಿ ನಡೆಯುತ್ತಿದೆ~ ಎಂಬುದು ಮಾಲೀಕ ಚಂದ್ರಶೇಖರ್ ಅವರ ಅಭಿಮಾನದ ನುಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.