ಮಾಯಾವತಿ ಅಕ್ರಮ ಆಸ್ತಿ ಪ್ರಕರಣ: ಸುಪ್ರೀಂ ಆದೇಶ ಪ್ರಶ್ನಿಸದಿರಲು ಸಿಬಿಐ ನಿರ್ಧಾರ
ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ವಿರುದ್ಧ ದಾಖಲಾಗಿದ್ದ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣ ವಜಾಗೊಳಿಸಿ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶ ಪ್ರಶ್ನಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದಿರಲು ಸಿಬಿಐ ನಿರ್ಧರಿಸಿದೆ.
ಸಿಬಿಐ ಕಾನೂನು ಸಲಹಾ ನಿರ್ದೇಶನಾಲಯದ ಜೊತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
`ನ್ಯಾಯಾಲಯದಿಂದ ಯಾವುದೇ ನಿರ್ದಿಷ್ಟ ಆದೇಶ ಇಲ್ಲದಿದ್ದರೂ ಮಾಯಾವತಿ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಸಿಬಿಐ ತನ್ನ ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿದೆ~ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಉತ್ತರ ಪ್ರದೇಶ ಸರ್ಕಾರ ವಿವಾದಿತ ತಾಜ್ ಕಾರಿಡಾರ್ ಯೋಜನೆಗೆ ಮಂಜೂರಾತಿ ಇಲ್ಲದೆ ನೇರವಾಗಿ 17 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ಹೊರಡಿಸಿದ್ದ ತನ್ನ ಆದೇಶವನ್ನು ಸಿಬಿಐ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಹೀಗಾಗಿ ಸಿಬಿಐ ಮಾಯಾವತಿ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದು ಪಿ. ಸದಾಶಿವಂ ಮತ್ತು ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ `ಯಾವುದೇ ತನಿಖೆ ಕಾನೂನುಬಾಹಿರವಾಗಿದ್ದು ವಜಾಗೊಳಿಸಲು ಅರ್ಹವಾಗಿದೆ~ ಎಂದು ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.