ಭಾನುವಾರ, ಮೇ 22, 2022
21 °C

ಮಾರಿಯಮ್ಮ ಟ್ರಸ್ಟ್‌ನ ಮಾದರಿ ಕಾಯಕ

ಶಶಿಧರ ಗರ್ಗೇಶ್ವರಿ Updated:

ಅಕ್ಷರ ಗಾತ್ರ : | |

ಕಾಡಂಚಿನ ಗ್ರಾಮಸ್ಥರ ಕಷ್ಟ ಒಂದೆರಡಲ್ಲ. ಬೆಳೆಗಳಿಗೆ ಆನೆ, ಹಂದಿಗಳ ಕಾಟ. ಸಾಕಿದ ಜಾನುವಾರುಗಳನ್ನು ಹುಲಿ, ಚಿರತೆ, ಕಾಡು ನಾಯಿಗಳು ತಿನ್ನುತ್ತವೆ. ಮಳೆಯನ್ನೇ ಆಶ್ರಯಿಸಿ ಬದುಕುವ ರೈತರಿಗೆ ಲಾಭದಾಯಕ ಕೃಷಿ ಮರೀಚಿಕೆ. ಹಾಗಾಗಿ ಹೈನುಗಾರಿಕೆ ಅವರ ಉಪ ಕಸುಬಾದರೂ ವಾಸ್ತವದಲ್ಲಿ ಜೀವನ ನಿರ್ವಹಣೆಗೆ ಇದೇ ಪ್ರಮುಖ ಆಧಾರ.ಕಾಡಂಚಿನಲ್ಲಿ ಮೇಯುವ ಜಾನುವಾರುಗಳಿಗೆ ನಾಡು- ಕಾಡು ಎಂಬ ಗಡಿ ಗೋಜಿನ ಪರಿವೆ ಇರುವುದಿಲ್ಲ. ಹಸಿರನ್ನು ಅರಸಿಕೊಂಡು ಅರಣ್ಯದೊಳಗೂ ಹೋಗುತ್ತವೆ; ಹುಲಿ, ಚಿರತೆಗಳಿಗೆ ಆಹಾರವಾಗುತ್ತವೆ. ಪರಿಹಾರಕ್ಕಾಗಿ ಅರಣ್ಯ ಇಲಾಖೆ ಕಚೇರಿಗೆ ರೈತರು ಹತ್ತಾರು ಸಲ ಅಲೆಯಬೇಕು. ವನ್ಯಜೀವಿಗಳ ದಾಳಿಗೆ ತುತ್ತಾದ ಸಾಕು ಪ್ರಾಣಿ ಅರಣ್ಯ ವ್ಯಾಪ್ತಿಯ ಹೊರಗಿರಬೇಕು ಎಂಬ ನಿಯಮದಿಂದಾಗಿ ಅನೇಕ ಸಾರಿ ಪರಿಹಾರವೂ ಸಿಗುವುದಿಲ್ಲ. ಇತ್ತ ರಾಸೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎನ್ನುವಂತಹ ಪರಿಸ್ಥಿತಿ ಈ ಅಸಹಾಯಕ ರೈತರದ್ದು.

ಇಂತಹ ಪ್ರಕರಣಗಳು ಹೆಚ್ಚಿದರೆ ಸಹಜವಾಗಿ ರೈತರ ರಕ್ತ ಕುದಿಯುತ್ತದೆ. ಕಾಡು ಪ್ರಾಣಿಗಳನ್ನು ಬಲಿ ಹಾಕಲು ಮನಸ್ಸು ತುಡಿಯುತ್ತದೆ. ಹೀಗೆ ಉಂಟಾಗುವ ಸಂಘರ್ಷವನ್ನು ಕಡಿಮೆ ಮಾಡಲು ಶ್ರಮಿಸುತ್ತಿರುವ ಸಂಸ್ಥೆಗಳಲ್ಲಿ `ಮಾರಿಯಮ್ಮ ಚಾರಿಟೆಬಲ್ ಟ್ರಸ್ಟ್~ ಕೂಡ ಒಂದು. ಇದನ್ನು ನಡೆಸುತ್ತಿರುವವರು ವನ್ಯಜೀವಿ ಚಿತ್ರಕಲಾವಿದೆ ಸುನೀತಾ. ಹುಲಿ ಯೋಜನೆ ಮಾನ್ಯತೆ ಪಡೆದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿ ಈ ಟ್ರಸ್ಟ್‌ನ ಕೈಂಕರ್ಯ ಪ್ರದೇಶ. ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಮಂಗಲ ಗ್ರಾಮ ಇದರ ಕರ್ಮ ಭೂಮಿ.2008ರಲ್ಲಿ ಆರಂಭವಾದ `ಮಾರಿಯಮ್ಮ ಚಾರಿಟೆಬಲ್ ಟ್ರಸ್ಟ್~ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಹಳ್ಳಿಗಳಲ್ಲಿ ವನ್ಯಜೀವಿಗಳ ದಾಳಿಯಿಂದ ಅಸುನೀಗಿದ ಹಸು- ಎಮ್ಮೆಗಳ ಮಾಲೀಕರಿಗೆ 3000 ರೂಪಾಯಿ ವರೆಗೆ ಪರಿಹಾರ ನೀಡುತ್ತಿದೆ. ಇದುವರೆಗೂ 235 ಪ್ರಕರಣಗಳಲ್ಲಿ ಟ್ರಸ್ಟ್ ನೆರವು ನೀಡಿದೆ. ಇಷ್ಟು ಮಾತ್ರವಲ್ಲದೆ ಸ್ಥಳೀಯರಿಗೆ ಉಚಿತ ಆರೋಗ್ಯ ತಪಾಸಣೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ರೋಗಿಗಳಿಗೆ ಆರ್ಥಿಕ ನೆರವು, ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಈ ಟ್ರಸ್ಟ್‌ನ ಇನ್ನಿತರ ಗುಣಾತ್ಮಕ ಕಾರ್ಯಗಳು.ಕಾಡಂಚಿನ ಗ್ರಾಮಗಳಲ್ಲಿ ನಾಯಿಗಳ ಹಾವಳಿ ವಿಪರೀತ. ಇವು ಜಿಂಕೆ ಮತ್ತಿತರ ಪ್ರಾಣಿಗಳನ್ನು ಕಚ್ಚುತ್ತವೆ. ನಾಯಿಗಳ ಸಂತತಿ ಕಡಿಮೆ ಮಾಡಲು ಸಂತಾನ ಶಕ್ತಿ ಹರಣ ಮಾಡುವುದು ಮತ್ತು ರೇಬಿಸ್ ರೋಗ ತಡೆಗಾಗಿ ಲಸಿಕೆಯನ್ನು ಟ್ರಸ್ಟ್ ಹಾಕಿಸಿದೆ. ಇದಕ್ಕಾಗಿ ಪ್ರತಿ ನಾಯಿಗೆ ರೂ 465 ಖರ್ಚು ಬಿದ್ದಿದೆ. ಜೇನು ಕುರುಬರಿಗೆ ಜೇನು ಸಾಗಣೆ ಪೆಟ್ಟಿಗೆಗಳನ್ನೂ ಟ್ರಸ್ಟ್ ವತಿಯಿಂದ ನೀಡಲಾಗಿದೆ.ಇದಕ್ಕೆಲ್ಲಾ ಹಣದ ಅವಶ್ಯಕತೆ ಇರುವುದರಿಂದ ಟ್ರಸ್ಟ್ `ಟೆಂಪಲ್ ಟ್ರೀ ಡಿಸೈನ್ಸ್~ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದೆ. ಇಲ್ಲಿ ಬುಡಕಟ್ಟು ಮತ್ತು ಗ್ರಾಮೀಣ ಕರಕುಶಲ ವಸ್ತುಗಳು, ಚಿತ್ರಕಲಾವಿದರು ಬಿಡಿಸಿದ ಚಿತ್ರಗಳನ್ನು ಮಾರಾಟ ಮಾಡುತ್ತದೆ. ಇದರಿಂದ ಬರುವ ಹಣವನ್ನು ಸ್ಥಳೀಯರಿಗೆ ನೆರವು ನೀಡುವ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ.`ಮಾರಿಯಮ್ಮ ಟ್ರಸ್ಟ್~ನ ಸಂಸ್ಥಾಪಕಿ ಸುನೀತಾ, ಗುಂಡ್ಲುಪೇಟೆಯ `ಬಾಬ ಆರ್ಟ್ಸ್~ನ ಕಲಾವಿದ ಶಕ್ತಿ ಪ್ರಸಾದ್ ಅವರೊಂದಿಗೆ ವನ್ಯಜೀವಿ ಚಿತ್ರಗಳನ್ನು ವಿನ್ಯಾಸ ಮಾಡಿ ಅದನ್ನು ಟೀ-ಶರ್ಟ್, ಜಾಕೆಟ್ ಕೀ ಚೈನ್, ಕಾಫಿ ಮಗ್, ಟೋಪಿ ಮುಂತಾದ ವಸ್ತುಗಳ ಮೇಲೆ ಪಡಿಯಚ್ಚು ಬಿಡಿಸಿ ಮಾರಾಟ ಮಾಡುತ್ತಾರೆ. ಈ ಉತ್ಪನ್ನ ಸಿದ್ಧಪಡಿಸುವ ಹೊಣೆಯನ್ನು ಹೊರಗುತ್ತಿಗೆ ನೀಡಲಾಗಿದೆ. ಬಂಡೀಪುರದಲ್ಲಿ ಅರಣ್ಯ ಇಲಾಖೆ ಮಳಿಗೆ ತೆರೆಯಲು ಅನುವು ಮಾಡಿಕೊಟ್ಟ ಮೇಲೆ  2010ರಲ್ಲಿ ಸ್ಮರಣಿಕೆಗಳ ಅಂಗಡಿ ತೆರೆಯಲಾಗಿದೆ.

`ಮೋಸಕ್ಕೆ ಅವಕಾಶವಿಲ್ಲ~

`ಪರಿಹಾರ ಹಣ ಸಿಗುತ್ತದೆ ಎಂದು ಮೋಸ ಮಾಡಲು ಯತ್ನಿಸಿದ ಪ್ರಕರಣಗಳೂ ಇವೆ. ಸ್ಥಳ ಪರಿಶೀಲನೆಗೆ ಹೋದಾಗ ಅದು ಬಯಲಾಗುತ್ತದೆ. ಕಾಡು ಪ್ರಾಣಿ ಬೇಟೆಯಾಡಿದ್ದರೆ ಕತ್ತಿನ ಬಳಿ ಹಲ್ಲಿನ ಗುರುತು, ಸ್ಥಳದಲ್ಲಿ ಹೆಜ್ಜೆ ಗುರುತು ಇರುತ್ತದೆ. ತನ್ನ ಬೇಟೆಯ ಹಿಂಬದಿಯ ಸ್ವಲ್ಪ ಭಾಗವನ್ನು  ತಿಂದಿರುತ್ತದೆ. ಆದರೆ, ಮೋಸದಿಂದ ಪರಿಹಾರ ಪಡೆಯುವ ಪ್ರಯತ್ನದಲ್ಲಿ ಸತ್ತ ಹಸು ಅಥವಾ ಎಮ್ಮೆಗಳನ್ನು ಗಾಡಿಯಲ್ಲಿ ತಂದು ಅರಣ್ಯದ ಭಾಗದಲ್ಲಿ ಹಾಕಿ ಕೃತಕವಾಗಿ ಬೇಟೆ ಪ್ರಕರಣ ಸೃಷ್ಟಿಸಲಾಗಿರುತ್ತದೆ~ ಎಂದು ವಿವರಿಸುತ್ತಾರೆ `ಮಾರಿಯಮ್ಮ ಚಾರಿಟಬಲ್ ಟ್ರಸ್ಟ್~ನ ಟ್ರಸ್ಟಿ ಇಂದ್ರ ಕುಮಾರ್.`ಟ್ರಸ್ಟ್‌ನ ಪ್ರತಿನಿಧಿ ನಾಗರಾಜು ರಾಸು ಬೇಟೆಗೆ ಬಲಿಯಾದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಜಿಪಿಎಸ್ ಮೂಲಕ ಸ್ಥಳವನ್ನು ನಿಖರವಾಗಿ ಪತ್ತೆ ಹಚ್ಚಿ, ವಿವರಗಳನ್ನು ದಾಖಲಿಸಿಕೊಂಡು, ಫೋಟೊ ತೆಗೆಯುತ್ತಾರೆ. ನಂತರ ಇವೆಲ್ಲವನ್ನು ಪರಿಶೀಲಿಸಿ ಪರಿಹಾರವನ್ನು ಬೇಗನೇ ನೀಡುತ್ತೇವೆ.ಅರಣ್ಯದೊಳಗೆ ಮತ್ತು ಹೊರಗೆ ಘಟಿಸಿದ ಎರಡೂ ಪ್ರಕರಣಗಳಿಗೂ ಪರಿಹಾರ ನೀಡುತ್ತೇವೆ. ಇಂತಹ ಪ್ರಕರಣಗಳ ಪರಿಶೀಲನೆಗೆ ಹೋದಾಗ ಅರಣ್ಯ ಇಲಾಖೆಯವರು ಉತ್ತಮ ಸಹಕಾರ ನೀಡುತ್ತಿದ್ದಾರೆ~ ಎಂದು ಸ್ಮರಿಸಿಕೊಳ್ಳುತ್ತಾರೆ ಇಂದ್ರ ಕುಮಾರ್.4 ಲಕ್ಷ ನೆರವು

ಮಾರಿಯಮ್ಮ ಚಾರಿಟೆಬಲ್ ಟ್ರಸ್ಟ್ 2007ರಿಂದ ಈವರೆಗೆ ವನ್ಯಜೀವಿ ದಾಳಿಗೆ ಬಲಿಯಾದ ದನ ಮತ್ತು ಎಮ್ಮೆಗಳಿಗೆ ಪರಿಹಾರಕ್ಕೆಂದು ಸುಮಾರು ನಾಲ್ಕು ಲಕ್ಷ ರೂಪಾಯಿ ವ್ಯಯಿಸಿದೆ. `ಟಿ.ಟಿ. ಡಿಸೈನ್ಸ್~ನಿಂದ ಬರುವ ಆದಾಯವನ್ನೇ ಇದಕ್ಕೆ ಬಳಸಲಾಗಿದೆ.ಬಂಡೀಪುರದಲ್ಲಿರುವ ಸ್ಮರಣಿಕೆ ಮಾರಾಟ ಮಳಿಗೆ ಜೊತೆಗೆ ರಾಜ್ಯ ಮತ್ತು ದೇಶದ ಇತರ ಕಡೆಗಳಿಗೆ `ಟಿ.ಟಿ. ಡಿಸೈನ್ಸ್~ ತನ್ನ ಸಿದ್ಧ ಉಡುಪುಗಳನ್ನು ಕಳುಹಿಸಿಕೊಡುತ್ತದೆ.ಟ್ರಸ್ಟ್‌ಗೆ ನಿಧಿ...


ಬೆಂಗಳೂರಿನಲ್ಲಿ ಹುಟ್ಟಿದ ಸುನೀತಾ, ಹಿಮಾಚಲ ಪ್ರದೇಶದ ಶಿಮ್ಲಾ ಮತ್ತು ದೆಹಲಿಯಲ್ಲಿ ಓದಿದವರು. ವನ್ಯಜೀವಿ ಚಿತ್ರಕಲೆ ಇವರ ಆಸಕ್ತಿಯ ಕ್ಷೇತ್ರ. 1984ರ ಹೊತ್ತಿಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳಿದರು. ತಾಯ್ನಾಡಿನ ವಾಂಛಲ್ಯ ಇವರನ್ನು 1995ರ ಹೊತ್ತಿಗೆ ಮತ್ತೆ ಭಾರತಕ್ಕೆ ಕರೆತಂದಿತು. ಆಗ ಇವರು ನೆಲೆ ನಿಂತ ಸ್ಥಳವೇ ಮಂಗಲ ಗ್ರಾಮ.`ಇಲ್ಲಿ ಹತ್ತು ಎಕರೆ ಜಮೀನು ಖರೀದಿಸಿ ಅರಣ್ಯೀಕರಣ ಮಾಡಿದೆ. ಹಳ್ಳಿಯ ಜನರಿಗೆ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದ ಅಮ್ಮೆಂಬಳ ಕ್ಲಿನಕ್‌ನ ಡಾ. ಎ.ಆರ್. ಪೈ ಮತ್ತು ಸುರೇಶ್ವರಿದೇವಿ ಅವರೊಂದಿಗೆ ಒಡನಾಟ ಬೆಳೆಯಿತು. ಕಾಡು ಪ್ರಾಣಿಗಳ ದಾಳಿಗೆ ತುತ್ತಾದ ರಾಸುಗಳಿಗೆ ಪರಿಹಾರ ಪಡೆಯಲು ರೈತರು ಒದ್ದಾಡುತ್ತಿದ್ದರು.ಸತ್ತ ದನಕರುಗಳ ಫೋಟೊ ತೆಗೆಯಿಸಲು ಅಲೆದಾಡುತ್ತಿದ್ದರು. ಕ್ಯಾಮೆರಾ ಇದ್ದ ನನ್ನ ಬಳಿ ಬಂದು ಸಹಾಯ ಕೇಳುತ್ತಿದ್ದರು. ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾದರೆ ಅವುಗಳ ಮೇಲೆ ಪ್ರತೀಕಾರಕ್ಕೆ ಇಳಿಯುತ್ತಿದ್ದರು. ವನ್ಯಜೀವಿಗಳನ್ನು ರಕ್ಷಿಸಬೇಕು, ಜನರ ಕಷ್ಟಗಳಿಗೂ ನೆರವಾಗಬೇಕು ಎಂಬ ತುಡಿತದಿಂದ ಜಮೀನಿನ ಪಕ್ಕದಲ್ಲೇ ಇದ್ದ ಮಾರಿಯಮ್ಮ ದೇವಿಯ ಹೆಸರಿನಲ್ಲೇ ಮಾರಿಯಮ್ಮ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದೆ~. `ಬಂಡೀಪುರದಲ್ಲಿ ಉಪ ಸಂರಕ್ಷಣಾಧಿಕಾರಿಯಾಗಿದ್ದ ಯತೀಶ್ ಕುಮಾರ್ ಮತ್ತು ಪರಿಸರ ಪ್ರೇಮಿಗಳಾದ ಕೃಪಾಕರ- ಸೇನಾನಿ ಅವರು ಸ್ಥಾಪಿಸಿರುವ ನಮ್ಮ ಸಂಘದ ಒಡನಾಟ ನನಗೆ ವನ್ಯಜೀವಿಗಳ ಬಗ್ಗೆ ಇದ್ದ ಕಾಳಜಿಯನ್ನು ಮತ್ತಷ್ಟು ಹೆಚ್ಚಿಸಿತು. ಕಲಾವಿದ ಶಕ್ತಿ ಪ್ರಸಾದ್ ಮತ್ತು ನಾನು ಚಿತ್ರಿಸಿರುವ ಕಲಾಕೃತಿಗಳನ್ನು ವಿದೇಶಗಳಲ್ಲಿ ಪ್ರದರ್ಶಿಸಿ ಬರುವ ಆದಾಯದಿಂದ ನಿಧಿ ಸ್ಥಾಪಿಸಿ ಆ ಹಣ ಟ್ರಸ್ಟ್‌ನ ಕಾರ್ಯಗಳಿಗೆ ಆಕರವಾಗಬೇಕು~ ಎಂದು ಸುನೀತಾ ಹಂಬಲ ಮುಂದಿಡುತ್ತಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.