ಸೋಮವಾರ, ಮೇ 23, 2022
30 °C

ಮಾರಿಷಸ್ ಮೂಲಕ ಕಪ್ಪು ಹಣ: ಆರ್‌ಬಿಐ ಹದ್ದಿನ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯರು ವಿದೇಶದ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣವು ಮಾರಿಷಸ್ ಮೂಲಕ ಮತ್ತೆ ಭಾರತಕ್ಕೆ ಹರಿದು ಬರುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಭಾರತದ ಹಣಕಾಸು ವ್ಯವಹಾರ ನಿಯಂತ್ರಣ ಸಂಸ್ಥೆಗಳಾದ ಸೆಬಿ ಮತ್ತು ಆರ್‌ಬಿಐ, ಈ ಬಗ್ಗೆ ಹದ್ದಿನಕಣ್ಣು ಇರಿಸಿದೆ.

ದೂರ ಸಂಪರ್ಕ, ರಿಯಲ್ ಎಸ್ಟೇಟ್ ಮುಂತಾದ ಕ್ಷೇತ್ರಗಳಿಗೆ ಮಾರಿಷಸ್‌ನಿಂದ ಅಧಿಕ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಹಣ ಹರಿದು ಬರುತ್ತಿದ್ದು, ಇದರ ಬಗ್ಗೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.

ಸದ್ಯ 154 ಸಾಹಸಿ ವಿದೇಶಿ ಬಂಡವಾಳ ಹೂಡಿಕೆದಾರರು ಸೆಬಿಯಲ್ಲಿ ನೋಂದಣಿಯಾಗಿದ್ದು, ಇವರಲ್ಲಿ 149 ಹೂಡಿಕೆದಾರರು ಮಾರಿಷಸ್ ಮೂಲದವರು. ಹಾಗಾಗಿ ಮಾರಿಷಸ್‌ನಿಂದ ಹರಿದು ಬರುತ್ತಿರುವ ಹಣದ ಬಗ್ಗೆ ನಿಗಾ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾರಿಷಸ್‌ನಿಂದ ಹರಿದು ಬರುತ್ತಿರುವ ಬೃಹತ್ ಪ್ರಮಾಣ ಬಂಡವಾಳವು ಭಾರತ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದ್ವಿಗುಣವಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಈ ಕ್ಷೇತ್ರದಲ್ಲಿ ರೂ 3 ಸಾವಿರ ಕೋಟಿಗಳಿಗೂ ಹೆಚ್ಚಿನ ವ್ಯವಹಾರ ನಡೆದಿದೆ. ಇದೇ ಹೊತ್ತಿಗೆ ದೂರ ಸಂಪರ್ಕ ಕ್ಷೇತ್ರದಲ್ಲೂ ಬಂಡವಾಳ ಹೂಡಿಕೆ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಿದೆ. ರೂ. 7,500 ಕೋಟಿಗಳ ಬಂಡಾವವನ್ನು ಈ ಕ್ಷೇತ್ರದಲ್ಲಿ ಹೂಡಲಾಗಿದೆ.

ಮಾರಿಷಸ್ ಬಂಡವಾಳ ಹೂಡಿಕೆದಾರರಿಗೆ ತೆರಿಗೆ ಸ್ನೇಹಿ ರಾಷ್ಟ್ರವಾಗಿರುವುದರಿಂದ ಅಲ್ಲಿನ ಹೂಡಿಕೆದಾರರು ಭಾರತದಲ್ಲಿ ತಮ್ಮ ಹಣವನ್ನು ಹೂಡಲು ಬಯಸುತ್ತಾರೆ. ಇದು ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರಿಗೆ ತಮ್ಮ ಹಣವನ್ನು ವಾಪಸು ಸ್ವದೇಶಕ್ಕೆ ತರಲು ಸುಲಭ ಮಾರ್ಗವಾಗಿದೆ.

ಭಾರತಕ್ಕೆ ಹರಿದು ಬರುತ್ತಿರುವ ಹಣದ ಬಗ್ಗೆ ಮಾರಿಷಸ್ ಕಳೆದ ಮೂರು ವರ್ಷಗಳಿಂದ ಮಾಹಿತಿಯನ್ನು ಸಮಪರ್ಕವಾಗಿ ಭಾರತದೊಂದಿಗೆ ಹಂಚಿಕೊಳ್ಳುತ್ತಿಲ್ಲ.

ಮಾರಿಷಸ್ ಮೂಲಕ ಕಪ್ಪು ಹಣ ಭಾರತಕ್ಕೆ ಹರಿದು ಬರುತ್ತಿದೆ ಎಂಬುದನ್ನು ಅಲ್ಲಗಳೆದಿರುವ ಮಾರಿಷಸ್ ಸರ್ಕಾರ, ‘ಭಾರತಕ್ಕೆ ಕಪ್ಪು ಹಣ ಹರಿಯದಂತೆ  ನಿಗಾ ಇರಿಸಲಾಗಿದೆ ಮತ್ತು ಇದಕ್ಕಾಗಿ ಭಾರತದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆೆ’ ಎಂದು ಮಾರಿಷಸ್‌ನ ಉಪ ಪ್ರಧಾನಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.