ಭಾನುವಾರ, ಏಪ್ರಿಲ್ 18, 2021
33 °C

ಮಾರ್ಕೆಟ್ : ತಂತ್ರಜ್ಞಾನದೆಡೆಗೆ ಅಂಚೆ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊದಲು ಗ್ರಾಹಕರು ಸೇವಾ ಪೂರೈಕೆ ಸಂಸ್ಥೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಈಗ ಸೇವಾ ಪೂರೈಕೆ ಕಂಪೆನಿಗಳೇ ಗ್ರಾಹಕರನ್ನು ಹುಡುಕಿಕೊಂಡು ಬರುತ್ತಿವೆ. ಹೌದು. ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವೂ. ಅಂಚೆ ಇಲಾಖೆಯ ‘ಇ-ಪೋಸ್ಟ್ ಆಫೀಸ್ ತಾಣ’ದ ಉದ್ಘಾಟನೆ ಸಂದರ್ಭದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಹೇಳಿದ ಈ ಮಾತು ಸತ್ಯಕ್ಕೆ ತುಂಬಾ ಹತ್ತಿರವಾದದ್ದು. ಭಾರತೀಯ ಅಂಚೆ ಸೇವೆ ಪ್ರಾರಂಭಗೊಂಡದ್ದು 1764ರಲ್ಲಿ. ಅಂದರೆ ಸುಮಾರು  247 ವರ್ಷಗಳ ಹಿಂದೆ. ಈ ಸುಧೀರ್ಘಯಾನದಲ್ಲಿ ಅಂಚೆ ಇಲಾಖೆ ಹಲವು ಸುಧಾರಣೆಗಳನ್ನು ಕಂಡಿದೆ. ಇಂದಿಗೂ ಗ್ರಾಮೀಣ ಜನತೆಯ ಹೃದಯ ಸಿಂಹಾಸನದಲ್ಲಿ ಬಹು ದೊಡ್ಡ ಸ್ಥಾನ ಹೊಂದಿರುವ ಅಂಚೆ ಇಲಾಖೆ ಇದೀಗ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಕಳೆದ ವಾರ ಭಾರತೀಯ ಅಂಚೆ ಇಲಾಖೆಯ ಆನ್‌ಲೈನ್ ತಾಣ ‘ಇ-ಅಂಚೆ’ ಜಾರಿಗೊಂಡಿದೆ. ‘ಇ-ಪೋಸ್ಟ್ ಆಫೀಸ್’ (http://indiapost.nic.in)  ತಾಣದ ಮೂಲಕ ಗ್ರಾಹಕರು  ಮನೆಯಲ್ಲಿ ಕುಳಿತೇ ಅಂಚೆ ಸೇವೆ ಪಡೆಯಬಹುದು.ಅಂದರೆ ತಾಣದಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಮನಿಯಾರ್ಡ್‌ರ್‌ಗಳನ್ನು ಕಳುಹಿಸಬಹುದು. ಎಲೆಕ್ಟ್ರಾನಿಕ್ ಮನಿಯಾರ್ಡರ್ (ಇಎಂಒ) ಮತ್ತು ಇನ್‌ಸ್ಟಂಟ್ ಮನಿಯಾರ್ಡರ್ (ಐಎಂಒ) ಮೂಲಕ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ಕ್ಷಣಾರ್ಥದಲ್ಲಿ ಹಣ ರವಾನಿಸಬಹುದು.ಮುದ್ರಿತ, ಕೈಬರಹದ ಪತ್ರಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಬಹುದು. ವಿಳಾಸ ತಿಳಿಯದಿದ್ದರೆ  ‘ಪಿನ್ ಕೋಡ್’ ನಮೂದಿಸಿ ಅಂಚೆ ವಿಳಾಸ ಹುಡುಕುವ ಸೌಲಭ್ಯವೂ ಇದರಲ್ಲಿದೆ. ಅಂಚೆಚೀಟಿಗಳ ಬಗ್ಗೆ ಮಾಹಿತಿ ಪಡೆಯಬಹುದು.

 ಅಂತರ್‌ದೇಶೀಯ, ಮತ್ತು ಅಂತರ್‌ರಾಷ್ಟ್ರೀಯ ಪತ್ರಗಳ ಮೇಲೆ ನಿಗಾ ವಹಿಸಬಹುದು. ‘ಪ್ರತಿಕ್ರಿಯೆ, ದೂರುಗಳನ್ನು ಆನ್‌ಲೈನ್‌ನಲ್ಲಿಯೇ ದಾಖಲಿಸಬಹುದು.‘ಇ-ಪೋಸ್ಟ್’ ತಾಣದಲ್ಲಿ ಕರಕುಶಲ ವಸ್ತು, ಸಣ್ಣ ಕೈಗಾರಿಕೆಗಳ ಉತ್ಪನ್ನಗಳ ಮಾರಾಟ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಪ್ರಾರಂಭದಲ್ಲಿ 5 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೆ ಬರಲಿದೆ. ನಂತರ ದೇಶದಾದ್ಯಂತ ವಿಸ್ತರಿಸಲಾಗುವುದು. ‘ಈಗ ನಾವು ಅಂತರ್ಜಾಲದ ಮೂಲಕ ಅಂಚೆ ಇಲಾಖೆಯನ್ನು ಈ ದೇಶದ ಪ್ರತಿಯೊಬ್ಬ ನಾಗರಿಕನ  ಮುಂದೆ ತರುತ್ತಿದ್ದೇವೆ’ ಎನ್ನುತ್ತಾರೆ ಭಾರತೀಯ ಅಂಚೆ ಇಲಾಖೆಯ ಕಾರ್ಯದರ್ಶಿ ರಾಧಿಕಾ ದೊರೈಸ್ವಾಮಿ.‘ಈ ತಾಣವು ಅಂಚೆ ಇಲಾಖೆಯ ವಾಣಿಜ್ಯ ತಾಣವಾಗಿಯೂ ಕಾರ್ಯನಿರ್ವಹಿಸಲಿದೆ. ಸದ್ಯ ಇಂಗ್ಲಿಷ್ ಭಾಷೆಯಲ್ಲಿರುವ ತಾಣವನ್ನು ಮುಂಬರುವ ದಿನಗಳಲ್ಲಿ ಇತರೆ ಪ್ರಾದೇಶಿಕ ಭಾಷಾ ಆವೃತ್ತಿಗಳಲ್ಲೂ ಒದಗಿಸಲಾಗುವುದು.ಬಂಗಾಳಿ ಮತ್ತು ಕನ್ನಡ ಭಾಷಾ  ಆವೃತ್ತಿಗಳು ಶೀಘ್ರದಲ್ಲಿ ಜಾರಿಗೆ ಬರಲಿವೆ. ‘ಪ್ರತಿಯೊಂದು ಕಂಪ್ಯೂಟರ್‌ಗಳನ್ನೂ ಒಂದೊಂದು ‘ಅಂಚೆ ಕಚೇರಿ’ಗಳಾಗಿ  ಪರಿವರ್ತಿಸುವುದು ನಮ್ಮ ಮುಂದಿರುವ ಯೋಜನೆ ಎನ್ನುತ್ತಾರೆ ಸಿಬಲ್.

ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ಅಂಚೆ ಇಲಾಖೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಬ್ಯಾಂಕಿಂಗ್ ಸೇವೆಗಳು ತಲುಪದ ಹಳ್ಳಿಗಳಲ್ಲೂ ಸೇವೆ ನೀಡುತ್ತಿದೆ. ತಂತ್ರಜ್ಞಾನ ಬದಲಾದರೂ ಅದೇ ವಿಶ್ವಾಸ ಮತ್ತು ಪ್ರೀತಿ ಉಳಿಸಿಕೊಂಡಿದೆ. ಬೇಕಾದರೆ ಗಮನಿಸಿ ನೋಡಿ. ಮನೆಯ ಬಾಗಿಲಿಗೆ ಬಂದ ಓರ್ವ ಕೋರಿಯರ್ ಹುಡುಗನನ್ನು ಜನರು ನೋಡುವ ರೀತಿಗೂ, ಅಂಚೆಯಾತನನ್ನು ಮಾತನಾಡಿಸುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ.ಅಂಚೆ ಇಲಾಖೆ ದೇಶದ ಗ್ರಾಮೀಣ ಜನರ ಜೀವನಾಡಿಯಾಗಿ ಎನ್ನುವುದದರಲ್ಲಿ ಎರಡು ಮಾತಿಲ್ಲ.

ಅಂಚೆಪಟ್ಟಿಗೆ, ಅಂಚೆಚೀಟಿ, ಅಂಚೆಯಾಳು, ಮನಿಯಾರ್ಡ್‌ರ್, ಇನ್‌ಲ್ಯಾಂಡ್ ಲೆಟರ್ ಇವೆಲ್ಲಾ ಜನರ ನಾಲಗೆಯ ತುದಿಯಲ್ಲಿರುವ ಚಿರಪರಿಚಿತ ಪದಗಳು. ಇಂದಿಗೂ ಸುಮಾರು 16 ಕೋಟಿ ಜನರು ತಮ್ಮ ಸಣ್ಣ ಉಳಿತಾಯಗಳಿಗಾಗಿ ಅಂಚೆ ಕಚೇರಿಗಳನ್ನು ಅವಲಂಬಿಸಿದ್ದಾರೆ.4 ವರ್ಷದ ಹಿಂದಿನ ಅಂಕಿ ಅಂಶದಂತೆ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಜನತೆ ಉಳಿಸಿದ ಮೊತ್ತ  ಈ ಉಳಿತಾಯ  ಮೊತ್ತ 3,23,781 ಕೋಟಿ.   ಅಂಚೆ ಸೇವೆಯನ್ನು ದೇಶದಲ್ಲಿ 22 ಅಂಚೆ ವೃತ್ತಗಳಲ್ಲಿ  ವಿಭಾಗಿಸಲಾಗಿದ್ದು,   ಇದರ ಹೊರತಾಗಿ ಭಾರತೀಯ ಸೇನೆಯ ಅಂಚೆ ವ್ಯವಹಾರ ನೋಡಿಕೊಳ್ಳಲು ಪತ್ಯೇಕ ವೃತ್ತವಿದೆ.  ಸೇನೆಯ ಸಹಾಯಕ ಡೈರೆಕ್ಟರ್ ಜನರಲ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇ-ಪಾವತಿ: ಅಂಚೆ ಇಲಾಖೆ ಜಾರಿಗೊಳಿಸಿರುವ ‘ಇ-ಪಾವತಿ’ ವ್ಯವಸ್ಥೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಒಂದೇ ಸೂರಿನಡಿ ಬಹುಸೇವೆ ಪಡೆಯಬಹುದಾದ ಈ ಸೌಲಭ್ಯದಡಿ ಗ್ರಾಹಕರು ತಮ್ಮ ವಿದ್ಯುತ್, ದೂರವಾಣಿ ಶುಲ್ಕಗಳನ್ನು ಪಾವತಿಸಬಹುದಾಗಿದೆ.ಐಎಂಒ: ಇನ್‌ಸ್ಟಂಟ್ ಮನಿಯಾರ್ಡ್‌ರ್ ಸೇವೆ ಸದ್ಯ ದೇಶದಾದ್ಯಂತ 717 ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಈ ಸೇವೆಯಡಿ ಗ್ರಾಹಕರು ದೇಶದ ಯಾವುದೇ ಮೂಲಗೆ ಬೇಕಾದರೂ ತಕ್ಷಣವೇ 50,000ದ ವರೆಗೆ ಹಣವನ್ನು ಕಳುಹಿಸಬಹುದು.ಐಎಂಟಿ: ವೆಸ್ಟ್ರನ್ ಯೂನಿಯನ್ ಹಣಕಾಸು ಸೇವೆಗಳ ಸಹಭಾಗಿತ್ವದಲ್ಲಿ ಅಂಚೆ ಇಲಾಖೆ ಜಾರಿಗೊಳಿಸಿರುವ ‘ಇಂಟರ್‌ನ್ಯಾಷನಲ್ ಮನಿ ಟ್ರಾನ್ಸ್‌ಫರ್’ (ಐಎಂಟಿ)  ಸೇವೆ ಮೂಲಕ 180 ದೇಶಗಳಿಗೆ ಹಣ ಕಳುಹಿಸಬಹುದಾಗಿದೆ. ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಹಣ ಕಳುಹಿಸಿಕೊಡಲು ಈ ಸೌಲಭ್ಯ ಅನುಕೂಲ ಕಲ್ಪಿಸಿದೆ.  ಅಲ್ಲದೆ ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು, ಇಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಿದೆ.ಈಗ ಪತ್ರ ಬರುವುದು ಅಪರೂಪ. ಬರೆಯುವ ಮನಸ್ಸು ಕೂಡ ಯಾರಿಗೂ ಇಲ್ಲ. ಹಾಗಾಗಿ ಅಂಚೆಯಣ್ಣನ ದಾರಿ ಕಾಯುವವರಿಲ್ಲ. ವೇಗದ ಬದುಕಿನೊಂದಿಗೆ ನಮ್ಮ ಜೀವನ ಕ್ರಮ ಕೂಡ ಬದಲಾಗಿದೆ.ಭಾವನೆಗಳು ಔಪಚಾರಿಕ ಎನ್ನುವಷ್ಟರ ಮಟ್ಟಿಗೆ ಸಂಕುಚಿತಗೊಂಡಿದೆ. ‘ಪತ್ರ ಬರಲಿ, ಬರದೇ ಇರಲಿ, ಅಂಚೆಯಣ್ಣ ಮಾತ್ರ ದಿನವೂ ಮನೆಗೆ ಬಂದು ಹೋಗುತ್ತಿರಲಿ’ ಅಂಚೆ ಇಲಾಖೆಯೊಂದರಲ್ಲಿ ಬರೆದಿರುವ  ಕವಿ ಚನ್ನವೀರ ಕಣವಿ ಅವರ ಈ ಸಾಲಿನಲ್ಲಿ ಎಷ್ಟೊಂದು ಆತ್ಮೀಯತೆ ಇದೆ. ಮೊದಲ ಅಂಚೆ ಚೀಟಿ ಬಳಕೆಗೆ ಬಂದದ್ದು 1854 ಅಕ್ಟೋಬರ್‌ನಲ್ಲಿ  ಸದ್ಯ 155,333 ಅಂಚೆ ಕಚೇರಿಗಳನ್ನು ಭಾರತೀಯ ಅಂಚೆ ಇಲಾಖೆ ಹೊಂದಿದೆ.   520161 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಪ್ರಪಂಚದಲ್ಲಿಯೇ ಅತಿ ದೊಡ್ಡ ಸಂಪರ್ಕಜಾಲ ಹೊಂದಿರುವ ಅಂಚೆ ಸೇವೆ ನಮ್ಮದು. ಅಕ್ಟೋಬರ್ 10 ರಂದು ವಿಶ್ವ ಅಂಚೆ ದಿನ ಆಚರಿಸಲಾಗುತ್ತದೆ.ಏನಿದು ‘ಪಿನ್’ ಕೋಡ್?  

ಪೋಸ್ಟಲ್ ಇಂಡೆಕ್ಸ್ ನಂಬರ್ ಅಥವಾ ‘ಪಿನ್‌ಕೋಡ್’ ಎಂದು ಕರೆಯಲಾಗುವ ಆರು ಸಂಖ್ಯೆಗಳು ಅಂಚೆ ಸೇವೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ. ಮೊದಲ ಅಂಕಿ ತಲುಪಬೇಕಾದ ಅಂಚೆ ವೃತ್ತವನ್ನು ಸೂಚಿಸುತ್ತದೆ. ನಂತರದ ಎರಡು ಅಂಕಿಗಳು ‘ಪ್ರದೇಶ’ವನ್ನೂ ಕೊನೆಯ 3 ಸಂಖ್ಯೆಗಳು ನಿರ್ದಿಷ್ಟ ಅಂಚೆ ಇಲಾಖೆಯನ್ನೂ ಸೂಚಿಸುತ್ತದೆ.  ಒಮ್ಮೊಮ್ಮೆ ವಿಳಾಸ ತಪ್ಪಾಗಿ ಬರೆದಿದ್ದರೂ, ‘ಪಿನ್’ ಸಂಖ್ಯೆ ಸರಿಯಾಗಿದ್ದರೆ ಪತ್ರ ಸರಿಯಾಗಿ ವಿತರಣೆಯಾಗುವುದು ಈ ಸಂಖ್ಯೆಗಳ ಮುಖಾಂತರವೇ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.