ಮಂಗಳವಾರ, ಏಪ್ರಿಲ್ 13, 2021
30 °C

ಮಾಲ್‌ನಲ್ಲಿ ಸೆಟ್‌ಗಳ ಕಮಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲ್‌ನಲ್ಲಿ ಸೆಟ್‌ಗಳ ಕಮಾಲ್

ಗರುಡಾ ಮಾಲ್ ಈಗ ಸಿನಿಮಾ ಕಳೆಯಿಂದ ನಳನಳಿಸುತ್ತಿದೆ. ಮಾಲ್‌ನ ಪ್ರವೇಶದ್ವಾರದಲ್ಲಿ ಮಣ್ಣಿನಲ್ಲಿ ಮೈದಳೆದಿರುವ ಚಿತ್ರರಂಗದ ದಿಗ್ಗಜರಾದ ರಾಜ್‌ಕುಮಾರ್, ಅಂಬರೀಷ್, ರಜನಿಕಾಂತ್, ಅಮಿತಾಬ್ ಬಚ್ಚನ್, ರಾಜ್‌ಕಪೂರ್, ವಿಷ್ಣುವರ್ಧನ್ ಅವರನ್ನು ಕಣ್ತುಂಬಿಕೊಂಡು ಹಾಗೆಯೇ ಮುಂದೆ ನಡೆದರೆ, ಮೂವಿಂಗ್ ಕ್ಯಾಮೆರಾದಲ್ಲಿ ಚಿತ್ರೀಕರಿಸುವ ಭಂಗಿಯಲ್ಲಿ ಕುಳಿತಿರುವ ಕ್ಯಾಮೆರಾಮನ್, ಸಂಭಾಷಣೆ ವಿವರಿಸುತ್ತಿರುವ ಸಹ ನಿರ್ದೇಶಕನ ಪುತ್ಥಳಿಗೆ ಬಂಗಾರದ ಬಣ್ಣದ ಲೇಪವಿದೆ.ಮಾಲ್‌ನ ಬೆನ್ನಿಗೆ ಅಂಟಿಕೊಂಡಿರುವ ಕಾಫಿ ಶಾಪ್ ಪಕ್ಕದಲ್ಲೇ ಗುಬ್ಬಿ ವೀರಣ್ಣ ಚಿತ್ರಮಂದಿರ. ಆ ಟೆಂಟ್ ಒಳಗೆ ನೆಲದ ಮೇಲೆ ಕುಳಿತು 60ರ ದಶಕದ ಚಿತ್ರಗಳನ್ನು ಸವಿಯುತ್ತಿರುವ ಚಿತ್ರರಸಿಕರು. ಬಲ ಮಗ್ಗುಲಲ್ಲಿ ಎದ್ದಿರುವ ದಿವಿನಾದ ಅರಮನೆ ಸೆಟ್...ಅಬ್ಬಾ, ಒಂದೇ ಎರಡೇ! ಗರುಡಾ ಮಾಲ್‌ನಲ್ಲೆಗ ಇಡೀ ಭಾರತೀಯ ಚಿತ್ರರಂಗವೇ ಬೀಡು ಬಿಟ್ಟಿರುವಂತೆ ಕಾಣಿಸುತ್ತದೆ. ಹೊರಗಡೆ ಹಾಕಿರುವ ಸೆಟ್‌ಗಳನ್ನು ನೋಡಿ ಮಾಲ್‌ನೊಳಕ್ಕೆ ಪ್ರವೇಶಿಸಿದರೆ ಅಲ್ಲಿ ಮತ್ತೊಂದು ವಿಸ್ಮಯ ಬಿಚ್ಚಿಕೊಳ್ಳುತ್ತದೆ.ಮಾಲ್‌ನ ಪ್ರತಿ ಕಂಬದಲ್ಲೂ ಒಬ್ಬೊಬ್ಬ ಕಲಾವಿದರ ಮುಖಗಳನ್ನು ಕೆತ್ತಿ ಇರಿಸಲಾಗಿದೆ. ಪ್ರತಿಮೆಯ ಕೆಳಭಾಗದಲ್ಲಿ ಅವರ ಸಾಧನೆ, ಇತಿಹಾಸವನ್ನು ಪುಟ್ಟದಾಗಿ ಬಿಂಬಿಸುವ ಬರಹವಿದೆ. ಮಾಲ್‌ನ ಒಳಾಂಗಣದಲ್ಲಿ ನಿಲ್ಲಿಸಿರುವ ನಟೀಮಣಿಯರ ಕಟೌಟ್‌ಗಳು ಮನಸೆಳೆಯುತ್ತವೆ. ಸಿನಿಮಾದ ಹರವು ವಿಸ್ತಾರವಾದುದು. ಚಲನಚಿತ್ರಗಳು ಈಗ ಕೇವಲ ಜನರನ್ನು ರಂಜಿಸುವುದದಕ್ಕಷ್ಟೇ ಸೀಮಿತವಾಗಿಲ್ಲ. ಸಿನಿಮಾ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಶಿಕ್ಷಣ ಮಾಧ್ಯಮವೂ ಹೌದು. ಭಾರತೀಯ ಚಿತ್ರರಂಗಕ್ಕೆ ಈಗ ಶತಕದ ಸಂಭ್ರಮ. ಈ ಹೊತ್ತಿನಲ್ಲಿ ಗರುಡಾ ಮಾಲ್ ಇಂಥದ್ದೊಂದು ವಿಶಿಷ್ಟ ಪ್ರಯತ್ನವೊಂದಕ್ಕೆ ಕೈಹಾಕಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದೆ. ಗರುಡಾ ಮಾಲ್ 100 ವರ್ಷಗಳ ಭಾರತೀಯ ಸಿನಿಮಾದ ಸಂಭ್ರಮಾಚರಣೆಯೊಂದಿಗೆ, ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್ ಎಂಬ ಧ್ಯೇಯವಾಕ್ಯದೊಂದಿಗೆ ಶಾಪಿಂಗ್ ಮೇಳಕ್ಕೆ ಚಾಲನೆ ನೀಡಿದೆ. ಶಾಪಿಂಗ್ ಜತೆಗೆ ಭರಪೂರ ಮಾಹಿತಿ ಮತ್ತು ಮನರಂಜನೆಯನ್ನು ನೀಡುವ ಈ ಮೇಳ 2013ರ ಜನವರಿ 1ರವರೆಗೆ ನಡೆಯಲಿದೆ. ಶಾಪಿಂಗ್ ಮೇಳ ನಡೆವ ಸಂದರ್ಭದಲ್ಲಿ ಇಡೀ ಮಾಲ್‌ನಲ್ಲಿ 50 ವರ್ಷಗಳ ಹಿಂದಿನ ಸಿನಿಮಾ ಟೆಂಟ್, ಐತಿಹಾಸಿಕ ಚಿತ್ರಗಳ ಸೆಟ್‌ಗಳು, ದರ್ಬಾರ್ ಹಾಲ್, ನಾಯಕರ ಪ್ರತಿಮೆಗಳು ತಲೆಎತ್ತಲಿವೆ.

 

ಮಾಲ್‌ನ ಪ್ರತಿ ಮಹಡಿಯಲ್ಲೂ ಹೆಸರಾಂತ ಕಲಾವಿದರ ಚಿತ್ರಗಳು ಹಾಗೂ ಅವರ ಸಾಧನೆ ಬಗ್ಗೆ ಲೇಖನಗಳನ್ನು ಪ್ರದರ್ಶಿಸಲಾಗುತ್ತದೆ. ನಾಯಕರು, ನಾಯಕಿಯರು, ಖಳನಟರು, ನಿರ್ಮಾಪಕರು, ನಿರ್ದೇಶಕರು, ಹಿನ್ನೆಲೆ ಗಾಯಕರು ಹಾಗೂ ಪ್ರಶಸ್ತಿ ಪಡೆದ ಚಿತ್ರಗಳ ಕಟೌಟ್‌ಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ.ಅಂದಹಾಗೆ, ಗರುಡಾ ಶಾಪಿಂಗ್ ಮೇಳವನ್ನು ನಟಿ ಸುಮಲತಾ ಅಂಬರೀಷ್, ನಟ-ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ಯಶ್ ಗುರುವಾರ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ನಟಿ ಸುಮಲತಾ, `ಗರುಡಾ ಮಾಲ್ ಸದಾ ಒಂದಿಲ್ಲೊಂದು ಹೊಸತನದಿಂದ ಗ್ರಾಹಕರನ್ನು ಸೆಳೆಯುತ್ತಲೇ ಇರುತ್ತದೆ. ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಚಿತ್ರರಂಗ ನಡೆದು ಬಂದ ಹಾದಿಯನ್ನು ಬಿಂಬಿಸುವ ಪ್ರಯತ್ನ ಮಾಡಿರುವುದು ಖುಷಿಯ ಸಂಗತಿ~ ಎಂದರು.ಶಾಪಿಂಗ್ ಮೇಳ ನಡೆಯುವ ಸಮಯದಲ್ಲಿ ಗ್ರಾಹಕರು ಶಾಪಿಂಗ್ ಮಾಡುವ ಮೂಲಕ ಪ್ರತಿ ದಿನ ಒಂದು ಚಿನ್ನದ ನಾಣ್ಯ ಹಾಗೂ ಬಂಪರ್ ಬಹುಮಾನವಾಗಿ ಹ್ಯುಂಡೈ ಎಲಾಂಟ್ರ ಕಾರನ್ನು ಗೆಲ್ಲುವ ಆಕರ್ಷಣೆಯನ್ನು ಒಡ್ಡಿದೆ ಗರುಡಾ ಮಾಲ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.