ಭಾನುವಾರ, ಮೇ 9, 2021
26 °C

ಮಿಂಚಿದ ತಿಲಕರತ್ನೆ ದಿಲ್ಶಾನ್, ಡಿವಿಲಿಯರ್ಸ್; ರಾಯಲ್ಸ್‌ಗೆ ಆಘಾತ ನೀಡಿದ ಅಪ್ಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ: ತಿಲಕರತ್ನೆ ದಿಲ್ಶಾನ್ ಮತ್ತು ಎಬಿ ಡಿವಿಲಿಯರ್ಸ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಪೇರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 46 ರನ್‌ಗಳಿಂದ ಗೆಲುವು ಸಾಧಿಸಿತು.ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಡೇನಿಯಲ್ ವೆಟೋರಿ ಬಳಗ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 189 ರನ್ ಗಳಿಸಿತು.

ಕ್ರಿಸ್ ಗೇಲ್ (4) ವಿಫಲರಾದರೂ ತನಗೆ ಬೃಹತ್ ಮೊತ್ತ ಪೇರಿಸಲು  ಬರುತ್ತದೆ ಎಂಬುದನ್ನು ಆರ್‌ಸಿಬಿ ತೋರಿಸಿಕೊಟ್ಟಿತು. ದಿಲ್ಶಾನ್ (76, 58 ಎಸೆತ, 10 ಬೌಂ, 1 ಸಿ ) ಮತ್ತು ವಿಲಿಯರ್ಸ್  (59, 23 ಎಸೆತ, 3 ಬೌಂ, 5 ಸಿ) ಮುರಿಯದ ನಾಲ್ಕನೇ ವಿಕೆಟ್‌ಗೆ ಕೇವಲ 50 ಎಸೆತಗಳಲ್ಲಿ 122 ರನ್ ಕಲೆಹಾಕಿದರು. ಆರ್‌ಸಿಬಿ ಕೊನೆಯ ಐದು ಓವರ್‌ಗಳಲ್ಲಿ 82 ರನ್ ಸೇರಿಸಿತು.ಗೆಲ್ಲಲು 190 ರನ್ ಗಳಿಸುವ ಗುರಿ ಪಡೆದ ರಾಜಸ್ತಾನ ರಾಯಲ್ಸ್ ತನ್ನ ಪಾಲಿನ ಇಪ್ಪತ್ತು ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗಳಿಸಿದ್ದು 143 ರನ್ ಮಾತ್ರ.ರಾಯಲ್ಸ್‌ಗೆ ನಾಯಕ ರಾಹುಲ್ ದ್ರಾವಿಡ್ (58; 42 ಎಸೆತ, 8 ಬೌಂ) ಬಲ ನೀಡಲು ಯತ್ನಿಸಿದರೂ, ಕೆ.ಪಿ. ಅಪ್ಪಣ್ಣ ಸ್ಪಿನ್ ಮೋಡಿ ಈ ತಂಡದ ಜಯದ ಕನಸು ನುಚ್ಚುನೂರಾಗುವಂತೆ ಮಾಡಿತು. ಯುವ ಬೌಲರ್ ಕೇವಲ 19 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದು ಗಮನ ಸೆಳೆದ ಅಂಶ.ವೆಟೋರಿ ಬಳಗ ಈ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವೊಂದು ಬದಲಾವಣೆ ಮಾಡಿತು. ಕ್ರಿಸ್ ಗೇಲ್ ಆರಂಭಿಕ ಆಟಗಾರನಾಗಿ ಕಣಕ್ಕಿಯಲಿಲ್ಲ. ವಿರಾಟ್ ಕೊಹ್ಲಿ ಮತ್ತು ತಿಲಕರತ್ನೆ ದಿಲ್ಶಾನ್ ತಂಡದ ಇನಿಂಗ್ಸ್‌ಗೆ ಚಾಲನೆ ನೀಡಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಲಭಿಸಿದರೂ ಕೊಹ್ಲಿ ಅದರ ಪ್ರಯೋಜನ ಪಡೆಯಲು ವಿಫಲರಾದರು.16 ರನ್ ಗಳಿಸಿದ ಅವರು ಪಂಕಜ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಬಂದದ್ದು 23 ರನ್ ಮಾತ್ರ.ದಿಲ್ಶಾನ್ ಮತ್ತು ಮಾಯಂಕ್ ಅಗರ್‌ವಾಲ್ ಎರಡನೇ ವಿಕೆಟ್‌ಗೆ 37 ರನ್ ಸೇರಿಸಿದರು.ಆದರೆ ಮಾಯಂಕ್ (15) ಹಾಗೂ ಬಳಿಕ ಬಂದ ಗೇಲ್ ಅಲ್ಪ ಅಂತರದಲ್ಲಿ ಔಟಾದಾಗ ಆರ್‌ಸಿಬಿ ಒತ್ತಡ ಅನುಭವಿಸಿತು. ಬ್ರಾಡ್ ಹಾಗ್ ಇವರಿಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿದರು.ಈ ಹಂತದಲ್ಲಿ ಜೊತೆಯಾದ ಡಿವಿಲಿಯರ್ಸ್ ಮತ್ತು ದಿಲ್ಶಾನ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ದಿಲ್ಶಾನ್ ಬಳಿಕ ಆಕರ್ಷಕ ಹೊಡೆತಗಳ ಮೂಲಕ ಮಿಂಚಿದರು.

 

ಕಳೆದ ಕೆಲ ಪಂದ್ಯಗಳಲ್ಲಿ ಶ್ರೀಲಂಕಾದ ಈ ಬ್ಯಾಟ್ಸ್ ಮನ್ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಡಿವಿಲಿಯರ್ಸ್‌ಗೆ ತಡೆಯೊಡ್ಡಲು ಎದುರಾಳಿ ತಂಡದ ಯಾವುದೇ ಬೌಲರ್‌ಗೂ ಆಗಲಿಲ್ಲ. ಐದು ಭರ್ಜರಿ ಸಿಕ್ಸರ್‌ಗಳು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿ.39 ರನ್‌ಗಳಿಗೆ ಎರಡು ವಿಕೆಟ್ ಪಡೆದ ಹಾಗ್ ಆತಿಥೇಯ ತಂಡದ ಪರ ಯಶಸ್ವಿ ಬೌಲರ್ ಎನಿಸಿದರು. ಪಂಕಜ್ ಸಿಂಗ್ ಒಂದು ವಿಕೆಟ್ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.