ಶುಕ್ರವಾರ, ಫೆಬ್ರವರಿ 26, 2021
19 °C

ಮಿನಿ ಕಥೆ : ಫೋಬಿಯಾ

ವಸುಮತಿ ಉಡುಪ Updated:

ಅಕ್ಷರ ಗಾತ್ರ : | |

ಮಿನಿ ಕಥೆ : ಫೋಬಿಯಾ

ರಾತ್ರಿ ಉಂಡು ಮಲಗಿದವರು ಬೆಳಿಗ್ಗೆ ನೋಡಿದ್ರೆ ಹರ ಹರಾ. ಪುಣ್ಯಾತ್ಮ, ಸುಖಮರಣ ಎಂದು ನೇರಾನೇರ ಹೇಳುವುದನ್ನು, ರಾತ್ರಿ ಯಾವುದೋ ಹೊತ್ತಲ್ಲಿ ಪ್ರಾಣಪಕ್ಷಿ ಗೂಡು ಬಿಟ್ಟು ಹಾರಿ ಹೋಗಿತ್ತು ಎನ್ನುವುದನ್ನು, ಮರು ಬೆಳಗನ್ನು ಕಣ್ತುಂಬಿಕೊಳ್ಳಲಾಗದಂತೆ ಸದಾಕಾಲಕ್ಕೂ ಅವರು ಇನ್ನಿಲ್ಲವಾಗಿದ್ದರು ಎಂದು ಗ್ರಾಂಥಿಕ ಭಾಷೆಯಲ್ಲಿ ಉಗ್ಗಡಿಸುವುದನ್ನು ಯಾರ್ಯಾರದೋ ವಿಷಯದಲ್ಲಿ ಕೇಳಿದ್ದ ಆ ಪ್ರಸಿದ್ಧ ನಟನಿಗೆ ಇತ್ತೀಚೆಗೆ ಅದೇನೋ ಭಯ ಅಮರಿಕೊಂಡಿದೆ.ಅರವತ್ತರ ಮೇಲೆ ಮತ್ತೆರಡು ಮಳೆಗಾಲ ಕಳೆದರೂ ಮೊಮ್ಮಗಳ ವಯಸ್ಸಿನ ನವ ನಾಯಕಿಗೆ ಜೋಡಿಯಾಗಿ ಯುಗಳಗೀತೆ ಹಾಡುತ್ತಾ, ಪ್ರೇಕ್ಷಕ ವೃಂದದ ಕಣ್ಮಣಿಯಾಗಿ ಚಿರಯುವಕನಂತೆ ಇದ್ದವನು, ಅಂತದ್ದೇ ನಡೆನುಡಿಗಳನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಂಡಿದ್ದವನು, ಮುದಿತನವನ್ನು ಮೈಲಿ ದೂರ ಇಟ್ಟಿದ್ದೇನೆಂದು ಬೀಗುತ್ತಿದ್ದವನು, ಒಳಗಿಂದೊಳಗೇ ಕುಸಿದು ಹೋಗುತ್ತಿರುವ ಭಾವದಿಂದ ಕಂಗೆಟ್ಟಿರುವುದಕ್ಕೆ ಇಂತದ್ದೇ ನಿರ್ದಿಷ್ಟ ಕಾರಣ ಅನ್ನುವಂತಾದ್ದೇನೂ ಇರಲಿಲ್ಲ. ಆದರೂ ಅವನ ಸಹಪಾಠಿ ಸ್ನೇಹಿತನೊಬ್ಬನ ಮರಣಕ್ಕೆ ಸಾಕ್ಷಿಯಾಗಿದ್ದು, ಇವನ ಅಂತರಂಗದಲ್ಲಿ ಸುರುಳಿ ಸುತ್ತುತ್ತಿರುವ ಭೀತಿಗೆ ಪರೋಕ್ಷ ಕಾರಣವಾಗಿದ್ದರೆ ಅದು ತೀರಾ ಊಹೆ ಎಂದು ತಳ್ಳಿಹಾಕುವಂತಿಲ್ಲ. ಓದುವ ಹವ್ಯಾಸ ಕಾಪಿಟ್ಟುಕೊಂಡವನಿಗೆ ಮಂಕುತಿಮ್ಮನ ಕಗ್ಗದ ಪದ್ಯವೊಂದು ಮನದಲ್ಲಿ ಸದಾ ರಿಂಗಣಿಸತೊಡಗಿದೆ.ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು,

ತಿಂದು ನಿನ್ನನ್ನ ಋಣ ತೀರುತಲೆ ಪಯಣ

ಹಿಂದಾಗದೊಂದು ಚಣ, ಮುಂದಕುಂ ಕಾದಿರದು

ಸಂದ ಲೆಕ್ಕವದೆಲ್ಲ- ಮಂಕುತಿಮ್ಮಗೆಳೆಯ ಸತ್ತಿದ್ದು ಅನ್ನುವುದು ಎಲ್ಲೂ ಸದ್ದು ಮಾಡಲಿಲ್ಲ, ಸುದ್ದಿಯಾಗಲಿಲ್ಲ.  ಈ ಇಂತಾ ಸುಪ್ರಸಿದ್ಧ ನಟನ ಗೆಳೆಯ ಅನ್ನುವಂತಾ ಒಂದು ವಾಕ್ಯ ಕೂಡಾ ಪೇಪರಿನಲ್ಲಿ ಬರಲಿಲ್ಲ. ಹಣ್ಣೆಲೆ ತೊಟ್ಟು ಕಳಚಿ ಮರದಿಂದ ಉದುರಿ ಬಿದ್ದಷ್ಟು ಸಹಜವಾಗಿ, ಸಲೀಸಾಗಿ, ನಿಶ್ಶಬ್ದವಾಗಿ ಗೆಳೆಯ ಲೋಕದ ಆಟ ಮುಗಿಸಿ ಹೊರಟು ಹೋಗಿದ್ದ. ತನ್ನ ವಿಷಯದಲ್ಲಿ ಹಾಗಾಗದು ಎನ್ನುವುದನ್ನು ನಟ ಬಲ್ಲ. ಚಾನಲ್‌ನ ಜನ ವಿಡಿಯೊ ಕ್ಯಾಮೆರಾದೊಂದಿಗೆ ಮುಗಿ ಬೀಳುತ್ತಾರೆ. ನಾನಾ ಕೋನಗಳಿಂದ ಮುಖದ ಪ್ರತಿ ಸುಕ್ಕುಗಳನ್ನೂ ಎಣಿಸುವಷ್ಟು ಸ್ಪಷ್ಟವಾಗಿ ಚಿತ್ರೀಕರಿಸುತ್ತಾ, ಎಲ್ಲ ಚಾನಲ್‌ಗಳ ಬ್ರೇಕಿಂಗ್ ನ್ಯೂಸ್‌ನಲ್ಲೂ ಇದೇ ಸುದ್ದಿ, ಇದೇ ವರದಿ. ಜನಸಾಗರ ಹರಿದು ಬರುತ್ತದೆ. ಕೈಲಿ ಹಾರ ಹಿಡಿದು ಅಂತಿಮ ದರ್ಶನಕ್ಕೆ ತಂಡೋಪತಂಡವಾಗಿ ಹಾಜರಿ ಹಾಕುವ ಪ್ರತಿಷ್ಠಿತರ ಮುಖ ದುಃಖದ ಭಾರದಿಂದೆಂಬಂತೆ ಬಾಡಿ ಬತ್ತಿರುತ್ತದೆ.ಮಂತ್ರಿಮಹೋದಯರ, ಖ್ಯಾತನಾಮರ ಮುಖದ ಎದುರು ಕ್ಯಾಮೆರಾ ಹಿಡಿದು ಶ್ರದ್ಧಾಂಜಲಿಯ ಮಾತುಗಳನ್ನು ದಾಖಲಿಸಿ ಪ್ರಸಾರ ಮಾಡಲಾಗುತ್ತದೆ. ಮಾತಾಡುವವರೆಲ್ಲರ ಕಂಠ ಗದ್ಗದ. ಕಂಗಳಲ್ಲಿ ಸುತ್ತಿ ಸುಳಿವ ನೀರು. `ತುಂಬಲಾಗದ ನಷ್ಟ' ಎನ್ನುವುದು ಎಲ್ಲರ ಬಾಯಿಂದಲೂ ಉದುರಿ ಬೀಳುತ್ತದೆ. ಎಲ್ಲ ಹೇಗೆ ನಡೆಯಬೇಕೋ ಹಾಗೇ ಯಥಾಸಾಂಗವಾಗಿ ನಡೆಯುವುದನ್ನು ನಟ ಊಹಿಸಿಕೊಳ್ಳಬಲ್ಲ. ಘನತೆಯ ಸಾವಿನ ನೆನವರಿಕೆಯಿಂದ ಮೈಮೇಲೆ ಚಳಿಗುಳ್ಳೆ. ಸಾವಿನಲ್ಲೂ ಖಾಸಗಿತನಕ್ಕೆ ಎಡೆಯಿಲ್ಲ. ಮನೆಯವರು ಎಷ್ಟು ಅತ್ತರು, ಹೇಗೆ ಅತ್ತರು, ಯಾರು ಜಾಸ್ತಿ, ಯಾರು ಕಮ್ಮಿ, ಎಲ್ಲವೂ ಲೋಕಾಂತ. ಅದಲ್ಲ, ಅದಲ್ಲ, ಅವನ ತಳ್ಳಂಕಕ್ಕೆ ಕಾರಣ ಮತ್ತೊಂದೇ ಇದೆ. ಅವನ ನಿಜರೂಪ ದರ್ಶನವನ್ನು ಕನ್ನಡಿಯನ್ನುಳಿದು ಮನೆಯ ಮತ್ತೊಬ್ಬರು ಕಂಡಿಲ್ಲ. ಅಷ್ಟು ಗುಟ್ಟು. ಅಷ್ಟೊಂದು ಎಚ್ಚರಿಕೆ.ಮುಚ್ಚಿದ ರೂಮಿನ ಸುಸಜ್ಜಿತ ನೆಲೆಯಲ್ಲಿ, ಏಕಾಂತದಲ್ಲಿ ಶಯನ. ನಟಿಸುವಾಗ ದಟ್ಟ ಪ್ರಸಾಧನಗಳ ನೆರವಿನಲ್ಲಿ ಮರೆಯಾಗುವ ಮುದಿತನದ ಛಾಯೆಯನ್ನು ನಿಜ ಜೀವನದಲ್ಲೂ ಹಿಡಿದಿಟ್ಟುಕೊಳ್ಳಬೇಕೆಂಬ ಧ್ಯಾನ. ಹೊಂಚಿ ಕಾಯುವ ಜವರಾಯನ ಕುರಿತಾದ ದಿಗಿಲು ಹತ್ತಿದವನು ಮಲಗುವ ಹೊತ್ತಲ್ಲೂ ತಲೆಯ ವಿಗ್ಗನ್ನು ತೆಗೆದಿಡಲು, ಹಲ್ಲಿನ ಸೆಟ್ಟನ್ನು ಕಳಚಿಡಲು, ಅಂಜುತ್ತಿದ್ದಾನೆ. ಯಾವ ಕಿಂಡಿಯಿಂದ ಯಾವ ಕ್ಯಾಮೆರಾ ಇಣುಕುತ್ತದೋ? ಹಾಗಿಲ್ಲದಿದ್ದರೂ ಅವನ ಕಳೇಬರವನ್ನು ಸಿಂಗರಿಸಿ ಪ್ರದರ್ಶಕ್ಕೆ ಇಡುವವರ ಎದುರು ಅವನ ನಿಜರೂಪ ಬಯಲಾಗಿಯೇ ಆಗುತ್ತದಲ್ಲ? ಹೆಂಡತಿ ಮಕ್ಕಳಿಗೂ ಈ ಮುದುಕ ಇನ್ಯಾರೋ ಬೇರೆಯವನು ಎನ್ನುವ ಅಪರಿಚಿತ ಭಾವ ಮೂಡಿದರೆ ಆಶ್ಚರ್ಯವಿಲ್ಲ.ಇಂತವೆಲ್ಲ ಸಂಭವಗಳನ್ನು ನೆನೆಸಿಕೊಂಡರೆ ಅವನಿಗೆ ವಿಪರೀತ ಭಯವಾಗುತ್ತದೆ. ಖ್ಯಾತಿ ಕುತ್ತಿಗೆಯ ಮೇಲೆ ಮಣಭಾರವಾಗಿ ಕೂತಂತೆನಿಸುತ್ತದೆ. ಯಯಾತಿಯ ಕನವರಿಕೆ ಮಾನವ ಮಾತ್ರರೆಲ್ಲರ ಬಯಕೆಯಾದರೂ ಕಾಲರಾಯನಿಗೆ ಕರುಣೆಯೆಲ್ಲಿ? ಸುಂಕ ವಸೂಲಿ ಮಾಡಿಯೇ ಹೋಗುವ ನಿಷ್ಠುರಿ. ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗುವ ಲೆಕ್ಕಾಚಾರಸ್ಥ. ಯಾರ ಕಣ್ಣಲ್ಲಿ ಹೇಗೆ ಕಂಡರೆ, ಯಾರು ಏನೆಂದುಕೊಂಡರೆ ಸತ್ತವರಿಗೆ ಅದು ಸಂಬಂಧವಿಲ್ಲದ್ದು. ಆದರೂ... ಸಾವಿನ ಭಯಕ್ಕಿಂತ ನಂತರದ ವಿದ್ಯಮಾನಗಳು ಬೆಚ್ಚಿ ಬೀಳಿಸುವ ಸೋಜಿಗ. ನುಗ್ಗಿ ನುಗ್ಗಿ ಬರುವ ಜನ ಕನಸಲ್ಲೂ ಅವನಿಗೆ ಕಂಪನ ಹುಟ್ಟಿಸುತ್ತಾರೆ ಅನ್ನುವುದು ವಿಚಿತ್ರವಾದರೂ ಸತ್ಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.