ಶುಕ್ರವಾರ, ಮೇ 27, 2022
27 °C

ಮೀಟರ್: ಮತ್ತೆ ಗಡುವು ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ನಗರದಲ್ಲಿನ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಣೆಯಾಗಿದೆ. ಆಟೋ ಮಾಲೀಕರು ಮತ್ತು ಚಾಲಕರ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ ಜುಲೈ 5ರವರೆಗೆ ಮೀಟರ್ ಅಳವಡಿಸಲು ಕಾಲಾವಕಾಶ ನೀಡಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಆಟೋ ಚಾಲಕರು ಇದುವರೆಗೆ ಆದೇಶ ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯದಾಗಿ ಜುಲೈ 5ರವರೆಗೆ ಕಾಲಾವಕಾಶ ನೀಡಿದ್ದು, ಅದರ ನಂತರವೂ ಮೀಟರ್ ಅಳವಡಿಸಿ ಕಾನೂನು ಮತ್ತು ಮಾಪನ ಇಲಾಖೆ ವತಿಯಿಂದ `ಸೀಲ್~ ಹಾಕಿಸಿಕೊಳ್ಳದ ಆಟೋರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅಂತಿಮ ಗಡುವು ನೀಡಿದರು.ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ಮಾಡಿ ಮೀಟರ್ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಆಟೋರಿಕ್ಷಾ ಚಾಲಕರು  ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

 

ನ್ಯಾಯಾಲಯವೇ ಮೀಟರ್ ಅಳವಡಿಕೆ ಬಗ್ಗೆ ಆದೇಶ ನೀಡಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದರೂ ಮತ್ತೊಮ್ಮೆ ಕಾಲಾವಕಾಶ ನೀಡಲಾಗುತ್ತಿದೆ. ಜುಲೈ 6ರಿಂದ ಮೀಟರ್ ಇಲ್ಲದ ಆಟೋಗಳನ್ನು ಕಟ್ಟುನಿಟ್ಟಾಗಿ ವಶಪಡಿಸಿಕೊಳ್ಳಲಾಗುವುದು. ಇದಕ್ಕಾಗಿ 5 ಸ್ಥಳಗಳಲ್ಲಿ ತಪಾಸಣಾ ಠಾಣೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಪ್ರಸ್ತುತ ಕನಿಷ್ಠ ಆಟೋ ದರವನ್ನು ್ಙ 18 ನಿಗದಿ ಮಾಡಿದ್ದರೂ ಚಾಲಕರು ್ಙ 20-25 ವಸೂಲಿ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್ ಮಾತನಾಡಿ, ಮೇ 9ರಂದು ಸಭೆ ನಡೆಸಿ ಕನಿಷ್ಠ ದರ ನಿಗದಿ ಮಾಡಲಾಯಿತು. ಈ ದರ ಜೂನ್ 1ರಿಂದ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿತ್ತು.

 

ಅಲ್ಲದೇ, ಈ ಅವಧಿಯೊಳಗಾಗಿ ಎಲ್ಲ ಆಟೋರಿಕ್ಷಾಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೆ, ಒಟ್ಟು 2,500 ಆಟೋರಿಕ್ಷಾಗಳಲ್ಲಿ ಇದುವರೆಗೆ ಕೇವಲ 379 ಆಟೋರಿಕ್ಷಾಗಳಿಗೆ ಮಾತ್ರ ಮೀಟರ್ ಅಳವಡಿಸಲಾಗಿದ್ದು, ಇವುಗಳಲ್ಲಿ ಕೇವಲ 116ಕ್ಕೆ ಮಾತ್ರ ಕಾನೂನು ಮತ್ತು ಮಾಪನ ಇಲಾಖೆಯಿಂದ `ಸೀಲ್~ ಹಾಕಲಾಗಿದೆ ಎಂದು ವಿವರಿಸಿದರು.ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ಈ ಹಿಂದೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಆಟೋರಿಕ್ಷಾ ಚಾಲಕರು, ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ನ್ಯಾಯಾಲಯದ ಆದೇಶವಿದ್ದು ಎಲ್ಲರೂ ಅದನ್ನು ಪಾಲಿಸಬೇಕು. ಆಟೋಗಳಿಗೆ ಮೀಟರ್ ಅಳವಡಿಸುವ ಇಚ್ಛೆ ಇಲ್ಲದಿದ್ದಲ್ಲಿ ಅಂತಹ ಆಟೋಗಳ ಸೇವೆ ನಮಗೆ ಅಗತ್ಯವಿಲ್ಲ. ಮಾಲೀಕರು ತಮ್ಮ ವಾಹನಗಳನ್ನು ಮನೆಗಳಲ್ಲಿ ನಿಲ್ಲಿಸಿಕೊಳ್ಳಬಹುದು. ಜನರ ಸಂಚಾರಕ್ಕೆ ನಗರ ಸಾರಿಗೆ ಆರಂಭಿಸಲಾಗುವುದು ಎಂದರು.ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಮೀಟರ್ ಅಳವಡಿಕೆಯಲ್ಲಿನ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನೂ ಒಂದು ವಾರ ಕಾಲಾವಕಾಶ ನೀಡಬೇಕು. ಈ ಅವಧಿ ಒಳಗೆ ಎಲ್ಲ ಆಟೋಗಳಿಗೂ ಮೀಟರ್ ಅಳವಡಿಸಲಾಗುವುದು ಎಂದು ಕೋರಿದರು.

ಇದನ್ನು ಮನ್ನಿಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಜುಲೈ 5ರವರೆಗೆ ಅಂತಿಮ ಗಡುವು ನೀಡಿದ್ದು, ಮರುದಿನದಿಂದಲೇ ಮೀಟರ್ ಇಲ್ಲದ ಆಟೋಗಳನ್ನು ವಶಪಡಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಜುಲೈ 5ರ ನಂತರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಒಳಗೊಂಡಂತೆ `ವಿಚಕ್ಷಣ ದಳ~ ರಚಿಸಿ ಮೀಟರ್ ಇಲ್ಲದ ಆಟೋರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.6 ಮಕ್ಕಳಿಗೆ ಮಾತ್ರ ಅವಕಾಶ:
ಆಟೋಗಳಲ್ಲಿ ಶಾಲಾ ಮಕ್ಕಳನ್ನು ಮಿತಿಮೀರಿ ತುಂಬಿಕೊಂಡು ಹೋಗಲಾಗುತ್ತಿದೆ. 6 ಮಕ್ಕಳನ್ನು ಮಾತ್ರ ಆಟೋದಲ್ಲಿ ಕರೆದೊಯ್ಯಬೇಕು. ಚಾಲಕರು ಸಮವಸ್ತ್ರದಲ್ಲಿ ಆಟೋರಿಕ್ಷಾ ಚಲಾಯಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಾಗರಾಜ್ ಎಚ್ಚರಿಕೆ ನೀಡಿದರು.ಕಾನೂನು ಮತ್ತು ಮಾಪನ ಇಲಾಖೆಯ ಅಧಿಕಾರಿ ಕುಮಾರ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಮಾಲೀಕರು, ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.