ಮಂಗಳವಾರ, ಮೇ 18, 2021
22 °C

ಮೀನುಗಾರರ ಹತ್ಯೆ ಪ್ರಕರಣ : ಕೇರಳ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಕೇರಳದ ಮೀನುಗಾರರ ಹತ್ಯೆಗೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಇಟಲಿ ನೌಕಾಪಡೆಯ ಸಿಬ್ಬಂದಿಯ ಬಿಡುಗಡೆ ಕೋರಿ ಹಡಗಿನ ಮಾಲೀಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೇರಳ ಪೊಲೀಸರು ಹಾಗೂ ರಾಜ್ಯ ಬಂದರು ವಿಭಾಗಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.ಕೇಂದ್ರ ಸರ್ಕಾರ ಹಾಗೂ ಹತ್ಯೆಯಾದ ಮೀನುಗಾರರೊಬ್ಬರ ಪತ್ನಿ ಗೌರಮ್ಮ ಅವರಿಗೂ  ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.ಹಿರಿಯ ನ್ಯಾಯವಾದಿ ಕೆ.ಕೆ. ವೇಣುಗೋಪಾಲ್, `ಇಬ್ಬರು ಇಟಲಿ ನೌಕಾಪಡೆಯ ಸಿಬ್ಬಂದಿ ಪೊಲೀಸ್ ವಶದಲ್ಲಿದ್ದಾಗ ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ~ ಎಂಬ ಮಾಹಿತಿಯನ್ನು ಕೋರ್ಟ್‌ಗೆ ನೀಡಿದ ನಂತರ, ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠ ಈ ನೋಟಿಸ್ ಜಾರಿ ಮಾಡಿದೆ. `ಈ ಪ್ರಕರಣದಲ್ಲಿ ಹಡಗು ಯಾವುದೇ ಅಪರಾಧ ಮಾಡಿಲ್ಲ. ಹಾಗಾಗಿ ಅದನ್ನು ಪ್ರಕರಣದೊಳಗೆ ಸೇರಿಸುವ ಅಗತ್ಯವಿರಲಿಲ್ಲ~ ಎಂದು ವೇಣುಗೋಪಾಲ್ ಕೋರ್ಟ್‌ಗೆ ವಿವರಿಸಿದ್ದಾರೆ.ಪ್ರಕರಣ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಇಟಲಿಯ ಹಡಗನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಾಗೂ ಇಟಲಿ ಸಿಬ್ಬಂದಿ ಬಿಡುಗಡೆಗಾಗಿ ಎಂ.ಟಿ. ಎನ್ರಿಕಾ ಲೆಕ್ಸಿ ಹಡಗಿನ ಮಾಲೀಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕೇರಳದ ಅಲಪ್ಪುಝಾ ಕರಾವಳಿ ಪ್ರದೇಶದಲ್ಲಿ ಫೆಬ್ರುವರಿ 15ರಂದು ಇಬ್ಬರು ಮೀನುಗಾರರು ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ, ಇವರನ್ನು ಕಡಲ್ಗಳ್ಳರೆಂದು ತಪ್ಪಾಗಿ ಭಾವಿಸಿದ ಇಟಲಿ ನೌಕಾಪಡೆ ಸಿಬ್ಬಂದಿ ಗುಂಡು ಹಾರಿಸಿ ಕೊಂದಿದ್ದರು.

 

ಹತ್ಯೆಗೆ `ಬೆರೆಟ್ಟಾ ಬಂದೂಕು~

ಕೊಚ್ಚಿ (ಪಿಟಿಐ): ಕೇರಳದ ಮೀನುಗಾರರನ್ನು ಹತ್ಯೆ ಮಾಡಲು ಇಟಲಿಯ ಇಬ್ಬರು ನೌಕಾಪಡೆ ಸಿಬ್ಬಂದಿ ಬೆರೆಟ್ಟಾ ಬಂದೂಕುಗಳನ್ನು ಬಳಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಪ್ರಯೋಗಾಲಯದ ವರದಿಯನ್ನು ಸ್ವೀಕರಿಸಿದ ಕೊಚ್ಚಿ ಪೊಲೀಸ್ ಆಯುಕ್ತ ಎಂ.ಆರ್. ಅಜಿತ್ ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ, ಕೊಲ್ಲಂ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಿದೆ.ಇಟಲಿ ನೌಕಾಪಡೆ ಸಿಬ್ಬಂದಿಯನ್ನು ಬಂಧಿಸಿದ ವೇಳೆ ಪೊಲೀಸರು ಆರು ಬೆರೆಟ್ಟಾ ಬಂದೂಕು ಮತ್ತು 15 ಶಸ್ತ್ರಾಸ್ತ್ರಗಳು ಹಾಗೂ ಹತ್ತು ಸಾವಿರ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.