ಶುಕ್ರವಾರ, ಮೇ 14, 2021
30 °C

ಮೀನು ಕಟ್ ..ಹೊಸ ಟ್ರಿಕ್!

-ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

`ಹಲೋ ಭಯ್ಯಾಜಿ... ಬೆಹನ್‌ಜಿ... ಸರ್... ಮೇಡಂ... ಬನ್ನಿ ಬನ್ನಿ... ಇಲ್ಲಿಗಿಂತ ಚೆನ್ನಾಗಿ ಮೀನು ಎಲ್ಲೂ ಸಿಗುವುದಿಲ್ಲ. ತಾಜಾ ತಾಜಾ ಮೀನು... ಈಗ ತಾನೇ ಸಮುದ್ರದಿಂದ ಹಿಡಿದು ತಂದದ್ದು...'ಮೀನಿನ ಮಾರುಕಟ್ಟೆ ಬಳಿ ಹೋದರೆ ಇಂಥ ಮಾತು ಕೇಳೋದು ಸಹಜವೇ. ಇದರಲ್ಲೇನೂ ವಿಶೇಷ ಇಲ್ಲ. ಆದರೆ ಶಿವಾಜಿನಗರದ ರಸೆಲ್ ಮೀನು ಮಾರುಕಟ್ಟೆ ಬಳಿ ಸುಳಿದರೆ, ಅದರಲ್ಲೂ ಭಾನುವಾರ ಅತ್ತ ಹೋದರೆ ಈ ಮಾಮೂಲು ಮಾತಿನ ಜೊತೆ ಇನ್ನೂ ಒಂದು ಮಾತು ಸೇರ್ಪಡೆ. `ಏಕ್ ಕಿಲೋ ಪಂದ್ರಹ್ ರೂಪ್ಯಾ ಆವೋ... ಆವೋ... ಓನ್ಲಿ 15 ರುಪೀಸ್, ಕೆ.ಜಿ.ಗೆ ಬರೇ ಹದಿನೈದು ರೂಪಾಯಿ...'!ಅರೇ ಇದೇನಿದು? ತರಕಾರಿಯಂತೆ ಮೀನಿನ ದರವೂ ಗಗನ ಮುಟ್ಟಿರುವಾಗ 15 ರೂಪಾಯಿಗೆ ಅದೆಂಥ ಮೀನಪ್ಪಾ ಎಂದು ನೀವೇನಾದರೂ ಖುಷಿಯಿಂದ ಮುಖ ಅರಳಿಸಿ ಅತ್ತ ನೋಡಿದರೆ, ಅಷ್ಟೇ ಬೇಗ ಮುಖ ಸಪ್ಪಗೆ. ಕಾರಣ ಇಷ್ಟೇ. ಅದು ಮೀನಿನ ದರ ಅಲ್ಲ. ಬದಲಿಗೆ ಖರೀದಿ ಮಾಡಿದ ಮೀನು ಕತ್ತರಿಸಿ ಕೊಡಲು ನಿಗದಿ ಮಾಡಿದ ಕನಿಷ್ಠ ದರ!ಮೀನು ಖರೀದಿ ಮಾಡಿದ ಮೇಲೆ ಹೆಚ್ಚಿನ ಕಡೆಗಳಲ್ಲಿ ಮೀನು ಮಾರಾಟಗಾರರೇ ಅದನ್ನು ಶುಚಿ ಮಾಡಿಕೊಡುತ್ತಾರೆ. ರಸೆಲ್ ಮಾರುಕಟ್ಟೆಯಲ್ಲೂ ಇಲ್ಲಿಯವರೆಗೆ ಹಾಗೆಯೇ ಇತ್ತು. ಮೀನಿನ ರೆಕ್ಕೆ ಕತ್ತರಿಸಿಕೊಡಲು ಹೆಚ್ಚುವರಿ ದರವನ್ನೇನೂ ಅವರು ಕೇಳುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಮೀನು ಕತ್ತರಿಸಿ ಒಯ್ಯಬೇಕೆಂದರೆ ಜೇಬಿಗೆ ಇನ್ನಷ್ಟು ಕತ್ತರಿ ಗ್ಯಾರಂಟಿ!ಮೀನು ಕತ್ತರಿಸುವವರ ಸಂಘಟನೆಯೂ ಅಲ್ಲಿದೆ! ಅದರಿಂದ ಮೀನು ಮಾರಾಟಗಾರು ಅದನ್ನು ಶುಚಿ ಮಾಡಿಕೊಡುವ ಹಾಗಿಲ್ಲ. ಮಾಡಿಕೊಟ್ಟರೆ ಇವರು ಅವರನ್ನು ಬಿಡುವುದಿಲ್ಲ. ಮೀನು ಶುಚಿ ಮಾಡಿಕೊಡಲು ಕನಿಷ್ಠ 15 ರೂಪಾಯಿಗಳಿಗೆ ದರ ನಿಗದಿ. ಅದೂ ಕೆ.ಜಿ. ಒಂದಕ್ಕೆ! ದೊಡ್ಡ ದೊಡ್ಡ ಮೀನುಗಳಾಗಿದ್ದರೆ ಸಲೀಸಾಗಿ ಶುಚಿಗೊಳಿಸಬಹುದು.

ಆದರೆ  ಚಿಕ್ಕಚಿಕ್ಕ ಮೀನುಗಳು, ಮುಳ್ಳು ಹೆಚ್ಚಿಗೆ ಇರುವ ಮೀನುಗಳು, ಸಿಗಡಿ (ಪ್ರಾನ್ಸ್), ಏಡಿ (ಕ್ರ್ಯಾಬ್) ಇವುಗಳಿಗೆ ಪ್ರತಿ ಕೆ.ಜಿ.ಗೆ 20-30 ರೂಪಾಯಿ. ಸಮುದ್ರದಲ್ಲಿ ಮೀನುಗಳು ಮರಿ ಹಾಕುವ ವೇಳೆ ಇದು. ಅದಕ್ಕಾಗಿ ಕರಾವಳಿ ಪ್ರದೇಶಗಳಲ್ಲಿ ಮೀನು ಹಿಡಿಯುವಂತಿಲ್ಲ. ಇದರಿಂದಾಗಿ ಬಂಗುಡೆ, ಬೂತಾಯಿ, ಕಾಣೆಯಂತಹ ಮೀನುಗಳು ಸಿಗುವುದಿಲ್ಲ. ಇರುವ ಮೀನುಗಳಿಗೆ ಭಾರಿ ಡಿಮಾಂಡ್, ಮೂರು ಪಟ್ಟು ಹಣ. ಮೀನಿನ ರೇಟ್ ಹೆಚ್ಚಿದಂತೆ ಅದನ್ನು ಶುಚಿಗೊಳಿಸುವ ರೇಟ್ ನಿಗದಿಯಾಗುತ್ತದೆ.ಸಾವಿರ ಸಾವಿರ ಆದಾಯ

ಮೀನು ಕತ್ತರಿಸುವವರು ಇಲ್ಲಿ ಹಲವಾರು ಮಂದಿ. ಇವರಲ್ಲಿ ಪ್ರತಿಯೊಬ್ಬರ ದಿನದ ಆದಾಯ ಎಷ್ಟು ಊಹಿಸಬಲ್ಲಿರಾ? ಒಂದೂವರೆಯಿಂದ ಎರಡು ಸಾವಿರ ರೂಪಾಯಿ!`ಇದು ನಮ್ಮ ಪ್ರತಿ ಭಾನುವಾರದ ಆದಾಯ. ಹಾಗಂತ ಉಳಿದ ದಿನಗಳಲ್ಲೂ 400-500 ರೂಪಾಯಿಗಂತೂ ಮೋಸ ಇಲ್ಲ. ಸೋಮವಾರ ಮೀನಿನ ಅಂಗಡಿ ಬಂದ್. ಆದ್ದರಿಂದ ಅಂದು ಕಾಸು ಗಿಟ್ಟುವುದಿಲ್ಲ. ಮೀನಿನ ರೇಟ್ ಕಮ್ಮಿ ಆದರೆ ನಮ್ಮ ಆದಾಯವೂ ಕಮ್ಮಿ' ಎನ್ನುತ್ತಾರೆ ಲಕ್ಷ್ಮಮ್ಮ.ಮೀನು ವ್ಯಾಪಾರಿ ಮೊಹಮ್ಮದ್ ಉನ್ನೀಸ್ ಅವರು, `ಈ ಹಿಂದೆಯೂ ಮೀನು ಕಟ್ ಮಾಡಿಕೊಡುವವರು ಇಲ್ಲೇ ಇದ್ದರು. ಆದರೆ ಈಗಿನಷ್ಟು ಸ್ಟ್ರಿಕ್ಟ್ ಇರಲಿಲ್ಲ. ಪರಿಚಯಸ್ಥರಾಗಿದ್ದರೆ ನಾವೇ ಮೀನು ಕಟ್ ಮಾಡಿ ಕೊಡುತ್ತಿದ್ದೆವು. ಈಗ ಹಾಗೇನಾದರೂ ಮಾಡಿದರೆ `ಫಿಶ್ ಕಟ್ಟಿಂಗ್ ಸಂಘ'ದವರು ಬಂದು ಗಲಾಟೆ ಮಾಡುತ್ತಾರೆ. ಅದಕ್ಕೆ ಅವರ ವಿಷಯದಲ್ಲಿ ನಾವು ತಲೆ ಹಾಕೋದಿಲ್ಲ. `ರೆಡಿ ಟು ಯೂಸ್ ಮೀನು' ಬೇಕೆಂದರೆ ಹಣ ಕೊಡಲೇಬೇಕು' ಎನ್ನುತ್ತಾರೆ.

`ರೇಟ್ ಸ್ವಲ್ಪ ಕಡಿಮೆ ಮಾಡಿಕೊಳ್ಳಿ' ಎಂಬ ಚೌಕಾಸಿ ಮಾತೇ ಇಲ್ಲಿ ಇಲ್ಲ. `ಅದೆಲ್ಲ ಸಾಧ್ಯ ಇಲ್ಲ. ನಾವು ಹೇಳಿದಷ್ಟು ಕೊಡೋದಾದ್ರೆ ಕ್ಲೀನ್ ಮಾಡ್ಕೊಡ್ತೀವಿ. ಇಲ್ಲಾಂದ್ರೆ ಹೋಗಿ. 2-3 ಪಟ್ಟು ಹಣ ಕೊಟ್ಟು ಮೀನು ಕೊಳ್ತೀರಾ, 10-20 ರೂಪಾಯಿ ಕೊಡಲು ಆಗಲ್ವೇ' ಎಂಬ ಕಡ್ಡಿ ತುಂಡು ಮಾಡಿದಂಥ ಮಾತು ಹೇಳುತ್ತಾರೆ ಮೀನು ಕಟ್ಟಿಂಗ್ ಮಾಡುವವರು. ಅವರಿಗೂ ಗೊತ್ತು. ದುಬಾರಿ ಅಂತ ಅನಿಸಿದರೂ, ಶುಚಿಗೊಳಿಸಿ ಕೊಡಲು ಹೇಳಿದವರು ಮೀನನ್ನಂತೂ ಹಾಗೇ ಒಯ್ಯುವುದಿಲ್ಲ. ಅವರಿಗೂ ಬೇರೆ ವಿಧಿ ಇಲ್ಲ ಎಂದು.

ರಕ್ಷಣೆಗಾಗಿ ಸಂಘಟನೆ

ಹೆಚ್ಚಿನ ಮೀನು ವ್ಯಾಪಾರಿಗಳಿಗೆ ಮೀನು, ಅದರಲ್ಲೂ ಚಿಕ್ಕಚಿಕ್ಕ ಮೀನು ಕತ್ತರಿಸಲು ಬರುವುದಿಲ್ಲ. ಭಾನುವಾರ ಹಾಗೂ ಮುಸ್ಲಿಮರ ಹಬ್ಬಗಳಂದು ಜನದಟ್ಟಣೆ ಹೆಚ್ಚಿರುತ್ತದೆ. ಅಂತಹ ಸಂದರ್ಭಗಳಲ್ಲಿ ವ್ಯಾಪಾರಸ್ಥರೇ ಮೀನು ಕತ್ತರಿಸುತ್ತ ಕುಳಿತುಕೊಳ್ಳಲು ಆಗುವುದಿಲ್ಲ. ತರಾತುರಿಯಲ್ಲಿ ಕತ್ತರಿಸಿಕೊಟ್ಟರೆ ಅದು ಶುಚಿಯಾಗಿರುವುದಿಲ್ಲ ಎನ್ನುವುದು ಹಲವು ಗ್ರಾಹಕರ ದೂರು.

ಇವೆಲ್ಲ ತೊಂದರೆಯೇ ಬೇಡವೆಂದು ಶುಚಿಗೊಳಿಸುವುದಕ್ಕಾಗಿಯೇ ಪ್ರತ್ಯೇಕ ಜನರ ವ್ಯವಸ್ಥೆ ಮಾಡಲಾಯಿತು. ಆದರೂ ಕೆಲವು ವ್ಯಾಪಾರಸ್ಥರು ತಾವೇ ಶುಚಿಮಾಡಿಕೊಡುವುದನ್ನು ಬಿಡಲಿಲ್ಲ. ಆಗ ಮೀನು ಶುಚಿಗೊಳಿಸುವ ಕೆಲಸಕ್ಕೆ ನಿಯೋಜನೆಗೊಂಡವರು ಒಂಟಿಯಾಗಿ ದನಿ ಎತ್ತುವುದು ಕಷ್ಟವಾಯಿತು. ಸಂಘಟನೆಯೆನ್ನುವುದು ಇಲ್ಲದಿದ್ದರೆ ಕೆಲಸಗಾರರನ್ನು ತುಳಿಯುವವರೇ ಹೆಚ್ಚು ಎಂಬುದು ಅರಿವಾಗಿ ಸಂಘಟನೆಯನ್ನು ಹುಟ್ಟುಹಾಕಲಾಯಿತು. ಸುಮಾರು 50 ಮಂದಿ ಈ ಸಂಘದಲ್ಲಿ ಇದ್ದಾರೆ.

- ಆಸಿಫ್ ಖಾನ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ.

ಹಣ ತೆರುವುದು ಅನಿವಾರ್ಯ

ಮೀನು ಕತ್ತರಿಸುವವರ ಸಂಘ ಸುಮಾರು 10 ವರ್ಷಗಳಿಂದಲೂ ಅಸ್ತಿತ್ವದಲ್ಲಿ ಇದೆ. ಈಗ ಬಲಿಷ್ಠವಾಗಿದೆ ಅಷ್ಟೇ. ಇವರಲ್ಲಿ ಹೆಚ್ಚಿನವರು ತಮಿಳುನಾಡಿನಿಂದ ಬಂದವರು. ಅವರಿಗೆ ಮೀನು ಕತ್ತರಿಸುವುದನ್ನು ಬಿಟ್ಟು ಬೇರೇನೂ ಉದ್ಯೋಗ ತಿಳಿದಿಲ್ಲ. ಅವರಿಗೂ ಒಂದಿಷ್ಟು ಹಣವಾಗಲಿ ಎಂಬ ಉದ್ದೇಶದಿಂದ ನಾವು ಅವರಿಗೇ ಕತ್ತರಿಸುವ ಕೆಲಸ ವಹಿಸಿಕೊಟ್ಟಿದ್ದೇವೆ.

ನಮಗೆ ಕೆಲಸ ಕಮ್ಮಿಯಾಗುತ್ತೆ, ಒಂದಿಷ್ಟು ಜನರ ಜೀವನಕ್ಕೂ ದಾರಿಯಾಗುತ್ತದೆ. ಮೀನಿಗೆ ಹಣ ಕೊಡುವುದಲ್ಲದೇ ಅದನ್ನು ಕತ್ತರಿಸುವವರಿಗೂ ಹೆಚ್ಚುವರಿ ಹಣ ಕೊಡಬೇಕೆಂದು ದಿನನಿತ್ಯ ಗ್ರಾಹಕರು ಜಗಳ ಮಾಡುತ್ತಲೇ ಇರುತ್ತಾರೆ. ಆದರೆ ಏನೂ ಮಾಡಲು ಆಗುವುದಿಲ್ಲ. ಕ್ಲೀನ್ ಆಗಿರುವ ಮೀನು ಬೇಕೆಂದರೆ ಹಣ ಕೊಡಲೇಬೇಕು.

- ಸಿರಾಜ್ ಉಲ್ಲಾ ಖಾನ್, ಮೀನು ವ್ಯಾಪಾರಿ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.