ಸೋಮವಾರ, ಮೇ 23, 2022
22 °C

ಮುಕ್ತ ಚುನಾವಣಾ ಪ್ರಕ್ರಿಯೆಗೆ ಪ್ರಾಶಸ್ತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಒಲಿಂಪಿಕ್ ಸಮಿತಿ, ವಿವಿಧ ಕ್ರೀಡೆಗಳ ರಾಷ್ಟ್ರೀಯ ಫೆಡರೇಷನ್‌ಗಳು, ಅಥ್ಲೀಟ್ಸ್ ಆಯೋಗ ಮುಂತಾದ ಕ್ರೀಡಾ ಘಟಕಗಳಿಗೆ ಮುಕ್ತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆ ನಡೆಸಲು ಭಾರತ ಕ್ರೀಡಾ ಚುನಾವಣಾ ಆಯೋಗದ ಸ್ಥಾಪನೆಗೆ ರಾಷ್ಟ್ರೀಯ ಕ್ರೀಡಾಭಿವೃದ್ಧಿ ಮಸೂದೆ 2013 ಕರಡುನಲ್ಲಿ ಶಿಫಾರಸು ಮಾಡಲಾಗಿದೆ.ಈ ಚುನಾವಣಾ ಆಯೋಗದಲ್ಲಿ ಕ್ರೀಡಾ ಚುನಾವಣಾ ಆಯುಕ್ತ ಮತ್ತು ಇತರ ಇಬ್ಬರು ಸದಸ್ಯರು ಇರುತ್ತಾರೆ. ಈ ಮೂವರ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯು ಸಿದ್ಧ ಪಡಿಸಿದ ಕೆಲವು ಹೆಸರುಗಳ ಬಗ್ಗೆ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರು, ಕೇಂದ್ರ ಕ್ರೀಡಾ ಸಚಿವರು ಮತ್ತು ಅಥ್ಲೀಟ್ಸ್ ಆಯೋಗದ ಅಧ್ಯಕ್ಷರು ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವರು.ಈ ಚುನಾವಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯು ನಾಲ್ಕು ವರ್ಷಗಳು. ಇವರನ್ನು ಒಂದು ಸಲ ನೇಮಕ ಮಾಡಿದ ಮೇಲೆ ಭಾರತದ ಮುಖ್ಯ ಚುನಾವಣಾ ಆಯುಕ್ತರ ಒಪ್ಪಿಗೆ ಇಲ್ಲದೆ ಆ ಸ್ಥಾನದಿಂದ ತೆಗೆಯಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಯಾವುದೇ ನಿರ್ಧಾರದ ಬಗ್ಗೆ ಅಸಮಾಧಾನಗೊಂಡವರು ಕ್ರೀಡಾ ಮೇಲ್ಮನವಿ ಟ್ರಿಬ್ಯುನಲ್‌ಗೆ ಮನವಿ ಸಲ್ಲಿಸಬಹುದು.ಅಥ್ಲೀಟ್ಸ್ ಆಯೋಗ

ರಾಷ್ಟ್ರೀಯ ಒಲಿಂಪಿಕ್ ಸಮಿತಿ, ಯಾವುದೇ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್‌ಗಳು ಅಥ್ಲೀಟ್ಸ್ ಆಯೋಗವನ್ನು ಹೊಂದಿರಲೇ ಬೇಕು.

ಈ ಅಥ್ಲೀಟ್ಸ್ ಆಯೋಗದಲ್ಲಿ ಚುನಾಯಿತ ಸದಸ್ಯರೇ ಇರಬೇಕು. ಸಂಬಂಧಪಟ್ಟ ಆಯೋಗದಲ್ಲಿ ಏಳು ಸದಸ್ಯರು ಇರಬೇಕು. ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಥ್ಲೀಟ್ಸ್ ಆಯೋಗಕ್ಕೆ ಸದಸ್ಯರಾಗುವವರು ಆ ವರ್ಷಕ್ಕೆ ಹಿಂದಿನ ನಾಲ್ಕು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಯಾವುದಾದರೂ ಒಂದರಲ್ಲಾದರೂ ಸ್ಪರ್ಧಿಸಿದವರಾಗಿರಬೇಕು.ಪ್ಯಾರಾಲಿಂಪಿಕ್ಸ್ ಮತ್ತು ಚಳಿಗಾಲದ ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ್ದವರೂ ಅರ್ಹತೆ ಪಡೆಯುತ್ತಾರೆ. ಒಂದು ವೇಳೆ ಅಂತಹ ಅರ್ಹತೆಯವರು ಇಲ್ಲದಿದ್ದರೆ ಆ ವರ್ಷಕ್ಕೆ ಹಿಂದಿನ ನಾಲ್ಕು ಏಷ್ಯನ್ ಕ್ರೀಡಾ ಕೂಟಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ಪರ್ಧಿಸಿರುವವರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ಆ ಎರಡೂ ಮಟ್ಟದ ಅರ್ಹತೆ ಹೊಂದಿಲ್ಲದವರು ಇರದಿದ್ದರೆ, ಆ ವರ್ಷಕ್ಕೆ ಹಿಂದಿನ ನಾಲ್ಕು ಮುಕ್ತ/ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿ ಹತ್ತರೊಳಗಿನ ಸ್ಥಾನವನ್ನು ಪಡೆದುಕೊಂಡವರು ಭಾಗವಹಿಸಬಹುದಾಗಿದೆ.ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿರುವಂತೆ ಅಥ್ಲೀಟ್ಸ್ ಆಯೋಗದಲ್ಲಿ ಮಹಿಳಾ ಮೀಸಲಾತಿಗೂ ಮಾನ್ಯತೆ ಇರಬೇಕು.

ರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಥವಾ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್‌ಗಳ ಕಾರ್ಯಕಾರಿ ಸಮಿತಿ ಅಥವಾ ಮಂಡಳಿಗೆ ಚುನಾವಣೆ ನಡೆಯುವಾಗಲೇ ಅಥ್ಲೀಟ್ಸ್ ಆಯೋಗಕ್ಕೂ ಚುನಾವಣೆ ನಡೆಯಬೇಕು.ಚುನಾವಣೆ ನಡೆಯುವ ವರ್ಷದಂದು ಸಂಬಂಧಪಟ್ಟ ಕ್ರೀಡೆಯ ಮುಕ್ತ/ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟು ಮತದಾನದ ಹಕ್ಕು ಪಡೆಯುತ್ತಾನೆ. ಸಂಬಂಧಪಟ್ಟ ಕ್ರೀಡೆಯಲ್ಲಿ ಆ ವರ್ಷ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆದಿಲ್ಲವಾದರೆ, ಸಂಬಂಧಪಟ್ಟ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಿರುವವರೂ ಮತ ಚಲಾಯಿಸುವ ಹಕ್ಕು ಗಳಿಸುತ್ತಾರೆ. ಒಬ್ಬರು ಒಂದು ಮತ ಚಲಾಯಿಸಬಹುದಷ್ಟೆ.ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್‌ನ ಅಥ್ಲೀಟ್ಸ್ ಆಯೋಗದ ಅಧ್ಯಕ್ಷರುಗಳು ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಥ್ಲೀಟ್ಸ್ ಆಯೋಗದ ಸದಸ್ಯರನ್ನು ಆಯ್ಕೆ ಮಾಡಬೇಕು. ನಂತರ ಇವರ ನಡುವೆಯೇ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಬೇಕು. ಅಥ್ಲೀಟ್ಸ್ ಆಯೋಗದ ಚುನಾವಣೆಯನ್ನು ಚುನಾವಣಾ ಆಯೋಗವೇ ನಡೆಸಬೇಕು.ಅಥ್ಲೀಟ್ಸ್ ಆಯೋಗದ ಅಧ್ಯಕ್ಷರು ಸಹಜವಾಗಿಯೇ ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್, ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾಗುವರು.ವಿವಿಧ ಕ್ರೀಡೆಗಳ ಆಯ್ಕೆ ಸಮಿತಿಗೆ ಅಥ್ಲೀಟ್ಸ್ ಆಯೋಗದಿಂದ ನೇಮಕಗೊಳ್ಳುವವರು ಆ ವರ್ಷಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಸಂಬಂಧಪಟ್ಟ ಕ್ರೀಡೆಯ ಯಾವುದೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸಿರಬಾರದು. ಅಥ್ಲೀಟ್ಸ್ ಆಯೋಗವು ಸಂಬಂಧ ಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್ ಮತ್ತು ರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ವಿವಿಧ ಸಂದರ್ಭಗಳಲ್ಲಿ ತನ್ನ ಸಲಹೆ ನೀಡಬಹುದು.ಕ್ರೀಡಾಭಿವೃದ್ಧಿ ಕಾರ್ಯಕ್ರಮ, ತರಬೇತಿ ಮತ್ತು ಸ್ಪರ್ಧೆಯ ವೇಳಾಪಟ್ಟಿ ತಯಾರಿಸುವುದು, ಕ್ರೀಡಾಪಟುಗಳ ಸಮಸ್ಯೆಗಳು, ಆಯ್ಕೆ ಪ್ರಕ್ರಿಯೆ ಮತ್ತು ತಾಂತ್ರಿಕ ವಿಷಯ, ಆಡಳಿತಾತ್ಮಕ ವಿಷಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಥ್ಲೀಟ್ಸ್ ಆಯೋಗ ತನ್ನ ಸಲಹೆಗಳನ್ನು ನೀಡಬಹುದು.ರಚನಾತ್ಮಕ ಬೆಳವಣಿಗೆ

ರಾಷ್ಟ್ರೀಯ ಕ್ರೀಡಾಭಿವೃದ್ಧಿ ಮಸೂದೆ-2013ರ ಕರಡುನಲ್ಲಿರುವ ಕೆಲವು ಶಿಫಾರಸುಗಳನ್ನು ಗಮನಿಸಿದ್ದೇನೆ. ಬಹಳಷ್ಟು ಉತ್ತಮ ಅಂಶಗಳಿವೆ. ಕ್ರೀಡಾಪಟುಗಳಿಗೆ ಮತದಾನದ ಹಕ್ಕು ಇರುವುದಂತೂ ಸ್ವಾಗತಾರ್ಹ. ಆದರೆ ಫೆಡರೇಷನ್‌ಗಳು ನಡೆಸುವ ಚುನಾವಣಾ ಪ್ರಕ್ರಿಯೆ ಮತ್ತು ಆಯ್ಕೆ ಸಮಿತಿಯ ಸಭೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಥ್ಲೀಟ್‌ಗಳು ಅಥವಾ ಅಥ್ಲೀಟ್ಸ್ ಆಯೋಗದ ಸದಸ್ಯರು ಇಲ್ಲವೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ, ಸಭೆ ನಡೆಯುವ ಸ್ಥಳಗಳಿಗೆ ಹೋಗಿ ಬರುವ ಪ್ರಯಾಣ ವೆಚ್ಚ ಭರಿಸುವಂತಹ ವ್ಯವಸ್ಥೆಯೂ ಇದ್ದರೆ ಒಳ್ಳೆಯದು.ಇಂತಹ ಸಣ್ಣಪುಟ್ಟ ಅಂಶಗಳೂ ಹೆಚ್ಚು ಪಾರದರ್ಶಕವಾಗಿರಬೇಕು. ಅದೇನೇ ಇದ್ದರೂ, ರಾಷ್ಟ್ರೀಯ ಕ್ರೀಡಾರಂಗದಲ್ಲಿ ಇಂತಹದ್ದೊಂದು ರಚನಾತ್ಮಕ ಬೆಳವಣಿಗೆ ನಡೆಯುತ್ತಿರುವುದನ್ನು ಕಂಡಾಗ ಮುಂದಿನ ದಿನಗಳಲ್ಲಿ ಭಾರತದ ಕ್ರೀಡಾ ಭವಿಷ್ಯ ಉಜ್ವಲವಾಗಿರಬಹುದು ಎಂದೆನಿಸುತ್ತಿದೆ.

-ಬಿ.ಸಿ.ರಮೇಶ್, ಭಾರತ ಕಬಡ್ಡಿ ತಂಡದ ಮಾಜಿ ನಾಯಕ.* ಮುಂದುವರಿಯುವುದು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.