ಸೋಮವಾರ, ಮೇ 23, 2022
21 °C

ಮುಕ್ತ ವಾತಾವರಣ ಕಲ್ಪಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ಹಗರಣಗಳಿಂದ ಹೈರಾಣಾಗಿರುವ ರಾಜ್ಯದ ಬಿಜೆಪಿ ಸರ್ಕಾರ ಇನ್ನಷ್ಟು ಪ್ರಕರಣಗಳ ಬಿಸಿಯನ್ನು ಎದುರಿಸಬೇಕಾಗಿದೆ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ದೇಶವ್ಯಾಪಿ `ಜನಚೇತನ ಯಾತ್ರೆ~ ಕೈಗೊಂಡಿರುವ ವರಿಷ್ಠ ನಾಯಕ ಲಾಲಕೃಷ್ಣ ಅಡ್ವಾಣಿ ರಾಜ್ಯದ ಬಿಜೆಪಿ ಸಂಪುಟದಲ್ಲಿ `ಡಕಾಯಿತರು ಕಿಸೆಗಳ್ಳರು~ ಇದ್ದಾರೆಂದು ವಿಷಾದದಿಂದ ಹೇಳಿದ್ದ ಮಾತಿಗೆ ಹೊಸ ಪುರಾವೆಗಳು ಹಗರಣಗಳ ರೂಪದಲ್ಲಿ ಹೊರಬೀಳುತ್ತಿವೆ.

 

ರಾಜ್ಯ ಸಂಪುಟದಲ್ಲಿ ಗೃಹ ಮತ್ತು ಸಾರಿಗೆ ಖಾತೆಯನ್ನು ನಿರ್ವಹಿಸುತ್ತಿರುವ ಆರ್. ಅಶೋಕ ಅವರೇ ಅಕ್ರಮವಾಗಿ ಭೂಮಿ ಖರೀದಿಸಿ ಅದನ್ನು ಡಿನೋಟಿಫೈ ಮಾಡಿಸಿ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಲೋಕಾಯುಕ್ತ ಪೊಲೀಸರು ಗೃಹಸಚಿವರ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದಾರೆ.

 

ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಹೇಳಿಕೆ ಜವಾಬ್ದಾರಿಯಿಂದ ಕೂಡಿದ್ದಲ್ಲ. ಗೃಹ ಸಚಿವರ ವಿರುದ್ಧವೇ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಅಪರೂಪದ ಪ್ರಕರಣ.ಇದನ್ನು ಮುಖ್ಯಮಂತ್ರಿಗಳು ಮತ್ತು ತಮ್ಮದು ಶಿಸ್ತಿನ ಪಕ್ಷ ಎಂದುಕೊಳ್ಳುವವರು ಲಘುವಾಗಿ ಪರಿಗಣಿಸಬಾರದು. ಗೃಹಸಚಿವರ ವಿರುದ್ಧ ವಿಶ್ವಾಸದ್ರೋಹ, ವಂಚನೆ, ಭ್ರಷ್ಟಾಚಾರಕ್ಕಾಗಿ ಅಧಿಕಾರ ದುರ್ಬಳಕೆ ಮತ್ತು ಆಸ್ತಿ ಪರಭಾರೆ ನಿಯಂತ್ರಣ ಕಾಯ್ದೆಗಳ ಉಲ್ಲಂಘನೆಯ ಆರೋಪಗಳನ್ನು ದಾಖಲಿಸಿರುವುದರಿಂದ ಇವುಗಳ ತನಿಖೆ ಸ್ವತಂತ್ರ ಮತ್ತು ಮುಕ್ತ ವಾತಾವರಣದಲ್ಲಿ ನಡೆಯುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಡಬೇಕು.ಗೃಹ ಸಚಿವರೇ ಆರೋಪಿಯಾಗಿರುವುದರಿಂದ ಪೊಲೀಸರು ತಮ್ಮ ಇಲಾಖೆಯ ಸಚಿವರ ವಿರುದ್ಧವೇ ತನಿಖೆಯನ್ನು ನಡೆಸುವ ಅಪಾಯಕಾರಿ ಸವಾಲಿಗೆ ಒಡ್ಡಿಕೊಳ್ಳಬೇಕಾಗುತ್ತದೆ.ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳುವುದಕ್ಕೆ ಮುಖ್ಯಮಂತ್ರಿ ಅವರಿಂದ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿಸಿಕೊಳ್ಳುವಷ್ಟು ಪ್ರಭಾವಿಯಾಗಿರುವ ಗೃಹಸಚಿವರು, ತಮ್ಮದೇ ಇಲಾಖೆಯ ಪೊಲೀಸರು ಧೈರ್ಯದಿಂದ ವಿಚಾರಣೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರುವುದಕ್ಕೆ ಸಹಕರಿಸುತ್ತಾರೆಂದು ನಿರೀಕ್ಷಿಸಲಾಗದು.

 

`ಇದು ಕಾನೂನು ಸಮರ, ಇದನ್ನು ಕಾನೂನು ಮೂಲಕವೇ ಎದುರಿಸುತ್ತೇನೆ~ ಎಂದು ಹೇಳುವ ಮೂಲಕ ಗೃಹಸಚಿವರು ಕಾನೂನು ಪಾಲನೆ ಕುರಿತ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.ತನಿಖಾಧಿಕಾರಿಗಳು ನಿರ್ಭೀತಿಯಿಂದ ಸಾಕ್ಷ್ಯ ಸಂಗ್ರಹಿಸುವ ವಾತಾವರಣ ನಿರ್ಮಾಣವಾಗಬೇಕಿದ್ದರೆ ಆರೋಪಿಗಳಾಗಿರುವ ಸಚಿವರು ತಕ್ಷಣವೇ ತಮ್ಮ ಅಧಿಕಾರ ತ್ಯಜಿಸಿ ಸಾಮಾನ್ಯರಂತೆ ತನಿಖೆಯನ್ನು ಎದುರಿಸಬೇಕು. ಆಗ ಮಾತ್ರವೇ ಸತ್ಯಾಂಶ ಹೊರಬರುವುದು ಸಾಧ್ಯ.ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾದ ತಕ್ಷಣ ಸಚಿವಸ್ಥಾನ ತ್ಯಜಿಸಿ ತನಿಖೆಗೆ ಸಹಕರಿಸುವ ಪರಂಪರೆಯನ್ನು ಬಿಜೆಪಿ ಸರ್ಕಾರದ ಕೆಲವು ಸಚಿವರು ಹಾಕಿಕೊಟ್ಟಿದ್ದಾರೆ.ಯುವ ನಾಯಕರಾದ ಅಶೋಕ ಅವರೂ ಅದೇ ಪರಂಪರೆಯನ್ನು ಅನುಸರಿಸಿ ನ್ಯಾಯವಾದ, ನಿಷ್ಪಕ್ಷಪಾತ ತನಿಖೆಗೆ ಅವಶ್ಯಕವಾದ ಮುಕ್ತ ವಾತಾವರಣ ನಿರ್ಮಿಸಬೇಕು.ತಮ್ಮ ವರ್ಚಸ್ಸಿಗೆ ಬಂದ ಕಳಂಕ ನ್ಯಾಯಾಲಯದಲ್ಲಿ ನಿವಾರಣೆ ಆಗುವವರೆಗೆ ಅಧಿಕಾರದಿಂದ ಹೊರಗುಳಿದು ತನಿಖಾಧಿಕಾರಿಗಳಿಗೆ ಸಹಕರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.