ಶನಿವಾರ, ಮೇ 28, 2022
27 °C

ಮುಖ್ಯ ಚುನಾವಣಾ ಆಯುಕ್ತರ ನೇಮಕ ಸಮಿತಿ; ಪ್ರತಿಪಕ್ಷ ನಾಯಕರ ಸೇರ್ಪಡೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಖ್ಯ ಜಾಗೃತ ಆಯುಕ್ತರು ಮತ್ತು ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಅನುಸರಿಸುವಂತೆಯೇ ಚುನಾವಣಾ ಆಯುಕ್ತರನ್ನು ಕೂಡಾ ಲೋಕಸಭೆಯ ಪ್ರತಿಪಕ್ಷ ನಾಯಕರನ್ನು ಒಳಗೊಂಡ ಸಮಿತಿಯ ಶಿಫಾರಸ್ಸಿನ ಅನ್ವಯ ನೇಮಕ ಮಾಡಬೇಕೆಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಭಾನುವಾರ ಇಲ್ಲಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.1998ರ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿರುವ ಅವರು, ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮ ಹಾಗೂ ನ್ಯಾಯಮೂರ್ತಿಗಳಾದ ಎಸ್.ಪಿ. ಭರೂಚ ಮತ್ತು ಎಸ್.ಸಿ.ಸೇನ್ ಅವರನ್ನೊಳಗೊಂಡ ನ್ಯಾಯಪೀಠವು, ಮುಖ್ಯ ಜಾಗೃತ ಆಯುಕ್ತ(ಸಿವಿಸಿ) ನೇಮಕಾತಿ ಸಮಿತಿಯಲ್ಲಿ ಪ್ರಧಾನಿ, ಗೃಹ ಸಚಿವರು ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕರು ಸೇರಿರಬೇಕೆಂದು ಆದೇಶಿಸಿರುವುದನ್ನು ಸ್ಮರಿಸಿದ್ದಾರೆ.ನಂತರ ಇದೇ ಆದೇಶವನ್ನು 2005ರ ಮಾಹಿತಿ ಹಕ್ಕು ಕಾಯ್ದೆಯಡಿ ಮುಖ್ಯ ಮಾಹಿತಿ ಆಯುಕ್ತರ ನೇಮಕಾತಿಯಲ್ಲೂ ಬಳಸಲಾಗಿದ್ದು ಆದರೆ ಇಲ್ಲಿ ಗೃಹ ಸಚಿವರ ಸ್ಥಾನದಲ್ಲಿ ಕಾನೂನು ಸಚಿವರನ್ನು ಸೇರಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.ಇದೇ ಮಾನದಂಡವನ್ನು ಚುನಾವಣಾ ಆಯುಕ್ತರು (ಇಸಿ) ಮತ್ತು ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ನೇಮಕಾತಿಯಲ್ಲೂ ಪಾಲಿಸಲು ಸಂವಿಧಾನದ 324ನೇ ವಿಧಿಗೆ ತಿದ್ದುಪಡಿ ತರಬೇಕೆಂದು ಸಹ ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷರೂ ಆದ ಅಡ್ವಾಣಿ ಸಲಹೆ ನೀಡಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.ಸಂವಿಧಾನದ 324(2) ವಿಧಿಯ ಪ್ರಕಾರ, ಇದಕ್ಕೆ ಸಂವಿಧಾನ ತಿದ್ದುಪಡಿಯ ಅಗತ್ಯವೂ ಬೇಕಿಲ್ಲ. ಬದಲಾಗಿ ಸಾಮಾನ್ಯ ಕಾಯ್ದೆಯ ಮೂಲಕವೇ ಹೊಸ ವ್ಯವಸ್ಥೆ ಜಾರಿಗೊಳಿಸಬಹುದು. ಈ ವ್ಯವಸ್ಥೆ ಅಳವಡಿಸುವುದರಿಂದ ಪ್ರಜಾಪ್ರಭುತ್ವವನ್ನು ಬಲಪಡಿಸಿದಂತೆಯೂ ಆಗುವುದು ಎಂದು ಅವರು ತಿಳಿಸಿದ್ದಾರೆ.ವಿದೇಶಗಳಲ್ಲಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿರುವುದನ್ನೂ ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಸ್ವಾಗತಿಸಿದ್ದಾರೆ. ಸರ್ಕಾರವು ರೂ 76 ಸಾವಿರ ಕೋಟಿ ತೆರಿಗೆ ವಂಚಿಸಿದ ಪುಣೆ ಮೂಲದ ವಾಣಿಜ್ಯೋದ್ಯಮಿ ಹಸನ್ ಅಲಿಯಿಂದ ಹಣ ವಸೂಲಿಗೆ ಏನು ಕ್ರಮ ಕೈಗೊಂಡಿದೆ ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.