ಗುರುವಾರ , ಜೂಲೈ 9, 2020
28 °C

ಮುಗಿಲು ಮುಟ್ಟಿದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಗಿಲು ಮುಟ್ಟಿದ ಸಂಭ್ರಮ

ಬೆಂಗಳೂರು: ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ಗೆಲುವು ಪಡೆಯುತ್ತಿದ್ದಂತೆ ಕ್ರೀಡಾಭಿಮಾನಿಗಳು  ನಗರದೆಲ್ಲೆಡೆ ಬುಧವಾರ ರಾತ್ರಿ ವಿಜಯೋತ್ಸವ ಆಚರಿಸಿದರು.ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರಬಾ ರಸ್ತೆ, ಜೆ.ಸಿ.ರಸ್ತೆ, ಕೆ.ಜಿ.ರಸ್ತೆ, ಮೆಜೆಸ್ಟಿಕ್ ಸೇರಿದಂತೆ ಎಲ್ಲೆಡೆ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕಾರು, ಬೈಕ್‌ಗಳಲ್ಲಿ ರಸ್ತೆಗಿಳಿದ ಯುವಕ ಯುವತಿಯರ ದಂಡು ತ್ರಿವರ್ಣ ಧ್ವಜ ಪ್ರದರ್ಶಿಸುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.

ಯುವಕರು ಕಾರುಗಳ ಮೇಲೆ ಕುಳಿತು ‘ಭಾರತ್ ಮಾತಾಕಿ ಜೈ’ ಎಂದು ಕೂಗುತ್ತಾ ಭಾರತದ ಆಟಗಾರರ ಪರ ಮೆಚ್ಚುಗೆ ವ್ಯಕ್ತಪಡಿಸಿದರು. ಎಂ.ಜಿ.ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್, ಬ್ರಿಗೇಡ್ ರಸ್ತೆ, ಅನಿಲ್ ಕುಂಬ್ಳೆ ವೃತ್ತದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ನೆರೆದಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ  ಜನರು   ಸ್ನೇಹಿತರ ಜತೆ ವಿಜಯೋತ್ಸವ ಆಚರಿಸಿದರು.ಚಿತ್ರಣವೇ ಬದಲು: ಮಧ್ಯಾಹ್ನದಿಂದ ರಾತ್ರಿ 10 ಗಂಟೆವರೆಗೂ ಹೆಚ್ಚಿನ ವಾಹನ ಸಂಚಾರ ಮತ್ತು ಜನಸಂದಣಿ ಇಲ್ಲದೆ ಭಣಗುಡುತ್ತಿದ್ದ ಬಹುತೇಕ ರಸ್ತೆಗಳ ಚಿತ್ರಣ ರಾತ್ರಿ 10.30ರ ನಂತರ ಸಂಪೂರ್ಣ ಬದಲಾಯಿತು. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳೊಂದಿಗೆ ರಸ್ತೆಗಿಳಿದ ಪರಿಣಾಮ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪರದಾಡುವಂತಾಯಿತು.ಲಾಠಿ ರುಚಿ: ರಾತ್ರಿ 12 ಗಂಟೆಯಾದರೂ ಕಾವೇರಿ ಎಂಪೋರಿಯಂ ಜಂಕ್ಷನ್ ಮತ್ತು ಎಂ.ಜಿ.ರಸ್ತೆಯಲ್ಲಿ ನೆರೆದಿದ್ದವರಿಗೆ ಪೊಲೀಸರು ಮನೆಗೆ ತೆರಳುವಂತೆ ಸೂಚಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಆದರೂ ಕೆಲ ಯುವಕ ಯುವತಿಯರ ಗುಂಪು ಪೊಲೀಸರ ಲಾಠಿ ಏಟು ಲೆಕ್ಕಿಸದೆ ವಿಜಯೋತ್ಸವ ಆಚರಿಸಿದ್ದು ಹೊಸ ವರ್ಷಾಚರಣೆ ಸಂದರ್ಭದ ಸಂಭ್ರಮವನ್ನು ನೆನಪಿಸಿತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.