ಶುಕ್ರವಾರ, ಮೇ 7, 2021
21 °C

ಮುತ್ತು ಕಟ್ಟಿಸಿಕೊಂಡವರ ತುತ್ತು ಬದುಕಿನ ಕಥೆ

ಮಂಜುಶ್ರೀ ಎಂ. ಕಡಕೋಳ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ನಾನು ಎಷ್ಟೇ ಬದಲಾಗಬೇಕೆಂದರೂ ಈ ಸಮಾಜ ನನ್ನನ್ನು `ಆ ದೃಷ್ಟಿ~ಯಿಂದಲೇ ನೋಡುತ್ತೆ. ನಾನು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಹೊರಟರೂ `ದೇವದಾಸಿ~ ಎಂಬ ಪದದಿಂದ ಹೊರತುಪಡಿಸಿ ನನ್ನನ್ನು ನೋಡೋದಿಲ್ಲ. ಹಿಂದುಳಿದ ಜಾತಿ ಮತ್ತು ದೇವದಾಸಿ ಪದ್ಧತಿ ನನ್ನನ್ನು ಶಾಶ್ವತ ಶಾಪಗ್ರಸ್ತೆ ಯನ್ನಾಗಿಸಿದೆ ಮೇಡಂ~..... ಹಾಗಂತ ಆ ಹೆಣ್ಣುಮಗಳು ಮಾತನಾಡುತ್ತಿದ್ದರೆ ಎಂಥವರ ಮನಸ್ಸೂ ಕರಗದಿರದು.ದಾವಣಗೆರೆ ತಾಲ್ಲೂಕು ನೇರ‌್ಲಿಗೆ ಗ್ರಾಮದ ಹುಲಿಗೆಮ್ಮ ತನ್ನ ಬದುಕಿನ ದುರಂತ ಅಧ್ಯಾಯಗಳ ಒಂದೊಂದೇ ಪುಟ ಬಿಚ್ಚುತ್ತಿದ್ದರೆ, ಜಿಲ್ಲೆಯ ಸಮಸ್ತ ದೇವದಾಸಿಯರ ಬದುಕಿನ ಒಂದೊಂದೇ ಪುಟ ತಿರುವಿದಂತಾಗುತ್ತದೆ.

`ಹೇಳಿಕೇಳಿ ನಾವು ಮಾದಿಗರು. ಮನೆಯಲ್ಲಿ ನಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲ ಅಂತ ನನಗೆ 12ವರ್ಷದವಳಿದ್ದಾಗ `ಮುತ್ತು ಕಟ್ಟಿಸಿದರು~. ಮುಂದೆ ಎರಡು ಹೆಣ್ಣುಮಕ್ಕಳಾದವು.ಪಿಯು ತನಕ ಅವರನ್ನು ಓದಿಸಿ, ದುಡಿಯುವ ಹುಡುಗರನ್ನು ಹುಡುಕಿ ಮದುವೆ ಮಾಡಿಕೊಟ್ಟೆ. ಎರಡನೇ ಅಳಿಯ ನನ್ನ ಮಗಳನ್ನು ನೋಡಲು ಸಹ ಬಿಡುತ್ತಿಲ್ಲ. ಐದು ಸಾವಿರ ತಂದುಕೊಟ್ಟು ನಿನ್ನ ಮಗಳನ್ನು ನೋಡು ಎಂದು ಬೆದರಿಕೆ ಹಾಕುತ್ತಾನೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿಲ್ಲ ಎಂದು ಈ ಕಿರುಕುಳ. ನನಗೀಗ 45 ವರ್ಷ. ಈ ವಯಸ್ಸಿನಲ್ಲಿ ಕೂಲಿ ಮಾಡುವ ಅಪ್ಪ-ಅಮ್ಮನ ಮನೆಯಲ್ಲಿದ್ದೇನೆ. ನಾನು ಹಿಂದುಳಿದ ಜಾತಿಯಲ್ಲಿ ಹುಟ್ಟುವ ಬದಲು ಮೇಲ್ವರ್ಗದಲ್ಲಿ ಹುಟ್ಟಿದ್ದರೆ ಇದೆಲ್ಲಾ ತಪ್ಪುತ್ತಿತ್ತು ಅಲ್ವಾ ಮೇಡಂ?~ ಎಂದು ಪ್ರಶ್ನಿಸುವ ಹುಲಿಗೆಮ್ಮನ ಪ್ರಶ್ನೆಗೆ ಉತ್ತರಿಸುವವರಾದರೂ ಯಾರು?.-ಇದು ಒಬ್ಬ ದೇವದಾಸಿ ಹುಲಿಗೆಮ್ಮನ ಕಥೆಯಲ್ಲ. ಜಿಲ್ಲೆಯಲ್ಲಿ `ಮುತ್ತು~ ಕಟ್ಟಿಸಿಕೊಂಡ ಸಾವಿರಾರು ದೇವದಾಸಿಯರ `ತುತ್ತು~ ಬದುಕಿನ ವ್ಯಥೆಯ ಕಥೆ.ಸರ್ಕಾರ ನಡೆಸಿರುವ ಸಮೀಕ್ಷೆಯ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ 2,620 ದೇವದಾಸಿಯರಿದ್ದಾರೆ. ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ನಡೆಸಿರುವ ಸಮೀಕ್ಷೆ ಪ್ರಕಾರ 3,000 ಮೀರಿ ದೇವದಾಸಿಯರಿದ್ದಾರೆ. ಬಾಲ ದೇವದಾಸಿಯರಿಂದ ಹಿಡಿದು ವಯೋವೃದ್ಧರವರೆಗೆ ದೇವದಾಸಿಯರಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಷ್ಟೇ ಮುತ್ತು ಕಟ್ಟಿಸಲಾಗುತ್ತದೆ. ಇವರನ್ನು `ಲೇಸಿ~ ಎಂದೂ ಕರೆಯುತ್ತಾರೆ. `ಜಿಲ್ಲೆಯ ದೇವದಾಸಿಯರಲ್ಲಿ ಶೇ. 75ರಷ್ಟು ಮಂದಿ ಎಸ್‌ಸಿ (ಅಸ್ಪೃಶ್ಯರು), ಉಳಿದ ಶೇ. 25ರಷ್ಟು ಎಸ್‌ಟಿ ಮಹಿಳೆಯರಿದ್ದಾರೆ. ಈ ಎಲ್ಲರೂ ಅನಿವಾರ್ಯ ಕಾರಣ, ಸಂದರ್ಭಗಳಲ್ಲಿ ದೇವದಾಸಿ ಪದ್ಧತಿಗೆ ನೂಕಲ್ಪಟ್ಟವರು. ಎಸ್‌ಸಿ ಜನರನ್ನು ಮುಟ್ಟಲೂ ಹೇಸುವ, ಮನುಷ್ಯರೆಂದು ಕಾಣಲೂ ಯೋಚಿಸುವ ಮೇಲ್ವರ್ಗದ ಪುರುಷರು, ಅದೇ ಎಸ್‌ಸಿ ಮಹಿಳೆ ದೇವದಾಸಿಯಾಗಿದ್ದರೆ ತುಟಿಕ್-ಪಿಟಿಕ್ ಎನ್ನದೇ ಹಾಸಿಗೆಗೆ ಕರೆಯುತ್ತಾರೆ.ಆಗ ಅಪ್ಪಿತಪ್ಪಿಯೂ ಇವರಿಗೆ ಅವಳು ಅಸ್ಪೃಶ್ಯಳು ಎಂಬುದು ಇವರಿಗೆ ನೆನಪಾಗದು~ ಎಂದು ಆಕ್ರೋಶದಿಂದ ನುಡಿಯುತ್ತಾರೆ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಕಾರ್ಯದರ್ಶಿ ಟಿ.ವಿ. ರೇಣುಕಮ್ಮ.`ಯೌವ್ವನ ಇರುವ ದೇವದಾಸಿಯರು ಹೇಗೋ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ವಯಸ್ಸಾದ ದೇವದಾಸಿಯರಿಗೆ ಭಿಕ್ಷಾಟನೆಯೇ ಗತಿ. ಅಲ್ಪಸ್ವಲ್ಪ ಓದಿದ ನಮ್ಮ ಮಕ್ಕಳು ಕೂಡಾ ನಮ್ಮನ್ನು ಗೌರವದಿಂದ ಕಾಣೋದಿಲ್ಲ. ತುಚ್ಛವಾಗಿ ಕಾಣುತ್ತಾರೆ. ಒಮ್ಮೆಮ್ಮ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟು ಕೆಟ್ಟದಾಗಿ ಮಾತನಾಡುತ್ತಾರೆ. ತಾಯಿ ಉಚ್ಚೆಂಗಮ್ಮನ ಹೆಸರಲ್ಲಿ `ಮುತ್ತು~ಕಟ್ಟಿಸಿಕೊಂಡಿರುವ ನಾವು `ತುತ್ತು~ ಊಟಕ್ಕೂ ಪರದಾಡಬೇಕು~ ಎಂದು ನೊಂದು ನುಡಿಯುತ್ತಾರೆ ಹೆಸರು ಹೇಳಲಿಚ್ಛಿಸದ ದೇವದಾಸಿಯೊಬ್ಬರು.`ಜಾತ್ರೆ-ಹಬ್ಬ-ಹರಿದಿನಗಳಲ್ಲಿ ನಿತ್ಯ ಮುತ್ತೈದೆಯರೆಂದು ನಮ್ಮನ್ನು ದೇವರ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಜಾತ್ರೆಗಳಲ್ಲಿ `ಸಿಡಿ~ ಆಡುವುದರಿಂದ ಹಿಡಿದು ಬೇವಿನ ಅರೆಬೆತ್ತಲೆ ಸೇವೆಯ ತನಕ ಪರಿಶಿಷ್ಟ ಜಾತಿ, ಪಂಗಡದ ದೇವದಾಸಿಯರೇ ಮುಂಚೂಣಿ ವಹಿಸಬೇಕು.ಈ `ದೇವದಾಸಿ~ ಎಂಬ ಶಬ್ದ ಹಿಂದುಳಿದ ಜಾತಿಗಳಿಗೆ ಅಂಟಿದ ಶಾಪ. ಅದರಿಂದ ನಾವು ಎಷ್ಟೇ ಮುಕ್ತರಾಗಲು ಯತ್ನಿಸಿದರೂ ದೇವರು, ಸಂಪ್ರದಾಯ ಹೆಸರಲ್ಲಿ ಮತ್ತೆ ಮತ್ತೆ ನಮ್ಮನ್ನು ಮಾನಸಿಕ-ದೈಹಿಕವಾಗಿ ಬಂಧಿಸಿಡಲು ಈ ವ್ಯವಸ್ಥೆ ಬಯಸುತ್ತದೆ. ಸರ್ಕಾರದ ಪುನರ್ವಸತಿ ಯೋಜನೆಗಳು ಸಮರ್ಪಕವಾಗಿಲ್ಲ. ಕನಿಷ್ಠ ಕೌಶಲ ತರಬೇತಿ ನೀಡಿದರೆ ಸಾಕು ದೇವದಾಸಿ ಮಹಿಳೆಯರು ತಮ್ಮ ಒಪ್ಪತ್ತಿನ ತುತ್ತಿಗೂ ಪರದಾಡುವುದು ತಪ್ಪುತ್ತದೆ.ಮಾಸಾಶನ, ನಿವೇಶನದ ಜತೆಗೆ ಈ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ದೇವದಾಸಿಯರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ನೀಡಿದರೆ ಅವರೂ ಇತರರಂತೆ ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಬಹುದು.ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ದೇವದಾಸಿಯರನ್ನು ಜಾತಿಯ ಕಾರಣಕ್ಕಾಗಿಯೇ ತುಚ್ಛವಾಗಿ ಕಾಣುವ ಬದಲು, ಸಾಮಾನ್ಯ ಹೆಣ್ಣಿನಂತೆ ಗೌರವದಿಂದ ಕಾಣುವ ತುರ್ತಿದೆ~ ಎನ್ನುತ್ತಾರೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದ ಟಿ. ಪದ್ಮಾವತಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.