ಶನಿವಾರ, ಫೆಬ್ರವರಿ 27, 2021
31 °C

ಮೂಡಿದ ಭರವಸೆ ರೈತಪರ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿದ ಭರವಸೆ ರೈತಪರ ಹೆಜ್ಜೆ

ಈಗ ಅಸ್ತಿತ್ವದಲ್ಲಿ ಇರುವ ಬೆಳೆ ವಿಮೆ ಯೋಜನೆಯ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಬೇಕು ಎಂಬ ರೈತರ ಮತ್ತು ಕೃಷಿ ತಜ್ಞರ ಬಹುಕಾಲದ ಬೇಡಿಕೆಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸ್ಪಂದಿಸಿದೆ. ಹೊಸದಾಗಿ ಪ್ರಕಟಿಸಿರುವ ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ,  ರೈತಸಮುದಾಯಕ್ಕೆ ಹೊಸ ಭರವಸೆಯಾಗಿದೆ. ಪ್ರತೀ ಕ್ಷಣವೂ ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ, ಕಳಪೆ ಬಿತ್ತನೆ ಬೀಜದ ಹಾವಳಿ ಮುಂತಾದ ಅಪಾಯವನ್ನು ನಮ್ಮ ರೈತರು ಎದುರಿಸುತ್ತಿದ್ದಾರೆ. ಹೀಗಾಗಿ ವ್ಯವಸಾಯ ಎಂಬುದು ಅದೃಷ್ಟವನ್ನು ಅವಲಂಬಿಸಿದ ಜೂಜಿನಂತಾಗಿದೆ. ಇಂಥ ಸ್ಥಿತಿಯಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸಿ, ಸಾಲದ ಶೂಲದಿಂದ ಹೊರಬರಲು ನೆರವಾಗುವ ಬೆಳೆ ವಿಮೆಯ ಅಗತ್ಯ ಅತ್ಯಂತ ಹೆಚ್ಚು. ಈ ಕಾರಣಕ್ಕಾಗಿಯೇ ವಿಮಾ ಯೋಜನೆಯನ್ನು  ಹಿಂದೆ ಜಾರಿಗೆ ತರಲಾಗಿತ್ತು. ಆದರೆ ಅದರ ನಿಯಮಗಳು ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿರಲಿಲ್ಲ.ನಮ್ಮ ದೇಶದಲ್ಲಂತೂ ಹವಾಮಾನ, ಬೆಳೆ ಪರಿಸ್ಥಿತಿ ಪ್ರತೀ ಹತ್ತಾರು ಕಿಲೋಮೀಟರ್ ಅಂತರದಲ್ಲಿ ಬದಲಾಗುತ್ತಲೇ ಹೋಗುತ್ತದೆ. ಆದರೆ ಅದಕ್ಕೆ ತಕ್ಕನಾದ ರೀತಿಯಲ್ಲಿ ಬೆಳೆ ವಿಮೆ ಇರಲಿಲ್ಲ. ವಿಮಾ ಕಂತು ಕೂಡ ದುಬಾರಿಯಾಗಿತ್ತು. ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೆ ಮಾತ್ರ ವಿಮೆ ಅವಕಾಶ ಇತ್ತು. ಸ್ವಂತ ಶ್ರಮ, ಬಂಡವಾಳ ವಿನಿಯೋಗಿಸಿ ಕೃಷಿ ಮಾಡುವವರು, ಬೇರೆಯವರ ಭೂಮಿಯನ್ನು ಗೇಣಿ ಅಥವಾ ಭೋಗ್ಯಕ್ಕೆ ಪಡೆದ ರೈತರು ವಿಮೆ ಸೌಲಭ್ಯದಿಂದ ವಂಚಿತರಾಗಿದ್ದರು.ವಿಮೆ ಕಂತು ಕಟ್ಟಿದವರಿಗೂ ಪೂರ್ಣ ಪರಿಹಾರ ಸಿಗುವ ಖಾತರಿ ಇರಲಿಲ್ಲ. ಬೆಳೆ ಹಾನಿ ಪ್ರಮಾಣ ನಿಗದಿ ಪಡಿಸಲು ಗ್ರಾಮವನ್ನು ಘಟಕವಾಗಿ ಪರಿಗಣಿಸುವ ಬೇಡಿಕೆಯನ್ನು ಸರ್ಕಾರ ಕಿವಿ ಮೇಲೇ ಹಾಕಿಕೊಂಡಿರಲಿಲ್ಲ. ಎಷ್ಟೋ ರೈತರಿಗೆ ಇಂಥ ಯೋಜನೆಯೊಂದರ ಬಗ್ಗೆ ಅರಿವೂ ಇರಲಿಲ್ಲ. ಜತೆಗೆ ಸರ್ಕಾರಿ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ, ಅಧಿಕಾರಶಾಹಿಯ ಅಡ್ಡಗಾಲು ಕೂಡ ರೈತರಿಗೆ ಅವರ ಅರ್ಹತೆಗೆ ತಕ್ಕಷ್ಟು ಪರಿಹಾರ ಪಡೆಯಲು ಅಡ್ಡಿಯಾಗಿತ್ತು.ಆದರೆ ಈಗ ಮೋದಿ ಅವರು ಘೋಷಿಸಿರುವ ಬೆಳೆ ವಿಮಾ ಯೋಜನೆ ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದೆ. ನಾನಾ ಬಗೆಯ ಬೆಳೆ ವಿಮಾ ಯೋಜನೆಗಳನ್ನು  ವಿಲೀನಗೊಳಿಸ ಲಾಗಿದೆ. ಇಳುವರಿ ಮತ್ತು ಉತ್ಪಾದನೆಯಲ್ಲಿನ ಏರಿಳಿತ, ಅಪಾಯಗಳಿಂದ ರೈತರಿಗೆ ರಕ್ಷಣೆ ಒದಗಿಸುತ್ತದೆ. ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರೆ ರೈತರ ಬದುಕಿನಲ್ಲಿನ ಬಹುಪಾಲು ಅಸ್ಥಿರತೆ ನಿವಾರಣೆಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಈ ಹಿಂದಿನ ಯೋಜನೆಗಿಂತ ಹೆಚ್ಚು ಸರಳ, ಅಗ್ಗ. ರೈತರು ಪಾವತಿಸಬೇಕಾದ ವಿಮೆಯ ಕಂತು ಮುಂಗಾರು ಬೆಳೆಗಾದರೆ ವಿಮಾ ಮೊತ್ತದ ಶೇ 2 ಮತ್ತು ಹಿಂಗಾರು ಬೆಳೆಗಾದರೆ ಶೇ 1.5 ನ್ನು ಮೀರುವಂತಿಲ್ಲ. ಪ್ರತಿ ಋತುಮಾನದ ಎಲ್ಲ ಧಾನ್ಯಗಳು, ಎಣ್ಣೆ ಮತ್ತು ಬೇಳೆಕಾಳುಗಳು ವಿಮೆ ವ್ಯಾಪ್ತಿಗೆ ಒಳಪಡುತ್ತವೆ.ಜಲಪ್ರವಾಹ, ಚಂಡಮಾರುತದಿಂದ ಅತಿವೃಷ್ಟಿಯಾಗಿ ಸಂಭವಿಸುವ ಹಾನಿಗೂ ವಿಮೆ ದೊರೆಯಲಿದೆ. ನಿಗದಿತ ವಿಮೆ ಮೊತ್ತಕ್ಕೆ ಪರಿಹಾರ ನೀಡುವ ಪ್ರಸಂಗ ಬಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ಹೊರೆ ಹಂಚಿಕೊಳ್ಳಬೇಕಾಗುತ್ತದೆ. ಆಯಾ ಪ್ರದೇಶಗಳಿಗೆ ಸೀಮಿತವಾದ ಪ್ರತಿಕೂಲ ಪರಿಸ್ಥಿತಿಗಳನ್ನು, ಕೊಯ್ಲಿನ ನಂತರದ ನಷ್ಟಗಳನ್ನು ತುಂಬಿಕೊಡುವ ವ್ಯವಸ್ಥೆಯೂ ಇದರಲ್ಲಿದೆ. ನಷ್ಟದ ಅಂದಾಜಿಗೆ ಡ್ರೋನ್ ಸೇರಿದಂತೆ ದೂರಸಂವೇದಿ ಉಪಕರಣಗಳು, ಮೊಬೈಲ್‌ಗಳು, ಉಪಗ್ರಹಗಳೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಲಾಗುತ್ತದೆ.ಹೀಗಾಗಿ ಪರಿಹಾರದ ಅಂದಾಜು ನಿಖರವಾಗಿರುತ್ತದೆ. ಪ್ರತಿಯೊಬ್ಬ ರೈತನ ಹಾನಿಯನ್ನೂ ಪ್ರತ್ಯೇಕವಾಗಿ ಅಂದಾಜು ಮಾಡಲಾಗುತ್ತದೆ. ಸಂತ್ರಸ್ತ ರೈತರು ತ್ವರಿತವಾಗಿ ಪರಿಹಾರ ಪಡೆಯಬಹುದು. ಇದು ಅತ್ಯಂತ ಅವಶ್ಯವೂ ಹೌದು. ಏಕೆಂದರೆ ಒಂದು ಬೆಳೆ ಹಾನಿಗೊಳಗಾದರೆ ಮುಂದಿನ ಬೆಳೆಗೆ ಬಂಡವಾಳ ಹೂಡಲು ಬಹಳಷ್ಟು ರೈತರಿಗೆ ಕಷ್ಟ. ಆ ದೃಷ್ಟಿಯಿಂದ ಹೊಸ ವಿಮೆ ಸ್ವಾಗತಾರ್ಹ ಮತ್ತು ರೈತಪರ.ಆರಂಭದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರನ್ನಷ್ಟೇ ಈ ಯೋಜನೆ ವ್ಯಾಪ್ತಿಯಲ್ಲಿ ತರಲಾಗುತ್ತದೆ. ಕ್ರಮೇಣ ಇನ್ನಿತರ ರೈತರಿಗೂ ವಿಸ್ತರಿಸಲಾಗುತ್ತದೆ. ದೇಶದಲ್ಲಿನ 26 ಕೋಟಿ ರೈತರ ಪೈಕಿ ಶೇ 20ರಷ್ಟು ರೈತರು ಮಾತ್ರ ಈಗ ಬೆಳೆ ವಿಮೆ ಹೊಂದಿದ್ದಾರೆ. ಎಲ್ಲರಲ್ಲೂ ಜಾಗೃತಿ ಮೂಡಿಸಿ ಹೊಸ ವಿಮಾ ಯೋಜನೆಯ ಅಡಿಯಲ್ಲಿ ತರುವುದು ದೊಡ್ಡ ಸವಾಲು. ನಿಯಮಗಳ ಸರಳೀಕರಣ, ವ್ಯಾಪಕ ಪ್ರಚಾರ ಹಾಗೂ ರೈತರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಈ ಸವಾಲನ್ನು ಸಮರ್ಥವಾಗಿ ಎದುರಿಸಬಹುದು. ರೈತರು ಅನುಭವಿಸುವ ನಷ್ಟಗಳನ್ನು ಕಡಿಮೆ ಮಾಡುವ ಒಂದೊಂದು ಪ್ರಯತ್ನವೂ ಗ್ರಾಮೀಣ ಭಾರತದ ಪ್ರಗತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆ ದೃಷ್ಟಿಯಿಂದಲೂ ಈ ವಿಮೆ ಹೆಚ್ಚು ಉತ್ತೇಜನಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.