ಸೋಮವಾರ, ಏಪ್ರಿಲ್ 19, 2021
23 °C

ಮೂರು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ತಿಂಗಳ ಅವಧಿಯಲ್ಲಿ 256 ಪ್ರಕರಣಗಳನ್ನು ಭೇದಿಸಿರುವ ನಗರ ಪಶ್ಚಿಮ ವಿಭಾಗದ ಪೊಲೀಸರು 185 ಆರೋಪಿಗಳನ್ನು ಬಂಧಿಸಿ, ಮೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಈ ವಿಷಯ ತಿಳಿಸಿದರು.ಬಂಧಿತರಿಂದ 6 ಕೆ.ಜಿ ಚಿನ್ನ ಹಾಗೂ 4 ಕೆ.ಜಿ ಬೆಳ್ಳಿಯ ಆಭರಣಗಳು, 102 ಬೈಕ್‌ಗಳು, 5 ಆಟೊಗಳು, 16 ಕಾರುಗಳು 22 ಲ್ಯಾಪ್‌ಟಾಪ್ ಮತ್ತು 1.29 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ತಿಂಗಳ ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗದ ಬಹುತೇಕ ಕಳವು ಪ್ರಕರಣಗಳನ್ನು ಭೇದಿಸಲಾಗಿದೆ~ ಎಂದು ಅವರು ತಿಳಿಸಿದರು.`ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ನಗರದ ಸುರಕ್ಷತೆ ಬಗ್ಗೆ ಪೊಲೀಸರು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.ವಂಚಕಿ ಬಂಧನ: ಮದುವೆಗೆ ಹೋಗಲು ಆಭರಣಗಳ ಅಗತ್ಯವಿದೆ ಎಂದು ಹೇಳಿ ಅಕ್ಕಪಕ್ಕದ ಮನೆಯವರಿಂದ ಚಿನ್ನಾಭರಣಗಳನ್ನು ಪಡೆದು ವಂಚಿಸುತ್ತಿದ್ದ ರೇಷ್ಮಾಭಾನು (32) ಎಂಬಾಕೆಯನ್ನು ಜಗಜೀವನರಾಂನಗರ ಪೊಲೀಸರು ಬಂಧಿಸಿ 30 ಲಕ್ಷ ರೂಪಾಯಿ ಮೌಲ್ಯದ ಒಂದು ಕೆ.ಜಿ. 383 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ತಮಿಳುನಾಡಿನ ಡೆಂಕನಕೋಟೈ ಮೂಲದ ರೇಷ್ಮಾ ವಿಧವೆಯಾಗಿದ್ದು, ಪಾದರಾಯನಪುರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ಮದುವೆಗೆ ಹೋಗಲು ಚಿನ್ನಾಭರಣಗಳ ಅಗತ್ಯವಿದೆ ಎಂದು ಅಕ್ಕಪಕ್ಕದ ಮನೆಯ ಪರಿಚಿತರಿಂದ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದ ಈಕೆ ನಂತರ ಅವುಗಳನ್ನು ಹಿಂತಿರುಗಿಸುತ್ತಿರಲಿಲ್ಲ.ಒಂದು ಕೆ.ಜಿ.ಗೂ ಹೆಚ್ಚು ಚಿನ್ನಾಭರಣಗಳನ್ನು ಮಾರಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಳು. ಇತ್ತೀಚೆಗೆ ನಗರಕ್ಕೆ ಬಂದಿದ್ದ ಆಕೆಯನ್ನು ಬಂಧಿಸಲಾಗಿದೆ. ಈಕೆಯ ವಿರುದ್ಧ ಜಗಜೀವನರಾಂನಗರ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.ದರೋಡೆಕೋರರ ಬಂಧನ: ಚಂದ್ರಾಲೇಔಟ್‌ನ ಕೆನರಾ ಬ್ಯಾಂಕ್ ಕಾಲೊನಿಯಲ್ಲಿ ಇದೇ 10ರಂದು ನಡೆದಿದ್ದ ದರೋಡೆ ಪ್ರಕರಣದ ಸಂಬಂಧ ಅಭಿಷೇಕ್ (20), ಶಶಿಕುಮಾರ್ (21), ರಂಜಿತ್ (20), ಬಲರಾಮ (20) ಮತ್ತು ಗಿರೀಶ (27) ಎಂಬ ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಆ.10ರಂದು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ವಿಜಯೇಂದ್ರಶೆಟ್ಟಿ ಎಂಬುವರನ್ನು ಕೆನರಾ ಬ್ಯಾಂಕ್ ಕಾಲೊನಿಯ ಎರಡನೇ ಅಡ್ಡರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ 60 ಗ್ರಾಂ ಚಿನ್ನಾಭರಣ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ದೋಚಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ ಎರಡು ಸುಲಿಗೆ ಪ್ರಕರಣಗಳು ದಾಖಲಾಗಿವೆ.`ಈಶಾನ್ಯ ಜನರ ಸುರಕ್ಷತೆಗೆ ಬದ್ಧ~

`ಈಶಾನ್ಯ ರಾಜ್ಯಗಳ ಸಾಕಷ್ಟು ಜನರು ಈಗಾಗಲೇ ಬೆಂಗಳೂರು ತೊರೆದಿದ್ದಾರೆ. ನಗರದಲ್ಲಿ ಉಳಿದಿರುವ ಈಶಾನ್ಯ ಭಾಗದ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಶಾನ್ಯ ರಾಜ್ಯಗಳ ಜನರ ಸುರಕ್ಷತೆಗೆ ಪೊಲೀಸ್ ಇಲಾಖೆ ಬದ್ಧವಿದೆ~

 - ಜ್ಯೋತಿಪ್ರಕಾಶ್ ಮಿರ್ಜಿ ನಗರ ಪೊಲೀಸ್ ಕಮಿಷನರ್ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.