ಸೋಮವಾರ, ಜೂನ್ 21, 2021
21 °C

ಮೂರು ಜಿಲ್ಲೆಗೆ ಹರಡಿದ ‘ಗ್ರಾಮಾಂತರ’

ಎಸ್‌. ಸಂಪತ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದೇಶಕ್ಕೆ ಮತ್ತು ರಾಜ್ಯಕ್ಕೆ ಘಟಾನುಘಟಿ ನಾಯಕರನ್ನೇ ಪರಿಚಯಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವು ಭೌಗೋಳಿಕವಾಗಿ ಮೆಟ್ರೋಪಾಲಿಟನ್‌ ಮತ್ತು ಗ್ರಾಮೀಣ ಪ್ರದೇಶದ ಮಿಶ್ರ ಸಂಸ್ಕೃತಿಯನ್ನು ಹುದುಗಿ­ಸಿ­ಕೊಂಡಿದೆ. ಇದರ ಒಡಲಲ್ಲಿ ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಹೀಗೆ ಮೂರು ಜಿಲ್ಲೆಗಳ ಮತದಾರರಿದ್ದಾರೆ.ಇದಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಂಬ ಹೆಸರಿದ್ದರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾವ ವಿಧಾನಸಭಾ ಕ್ಷೇತ್ರವಾಗಲೀ ಅಥವಾ ತಾಲ್ಲೂಕಾಗಲೀ ಇದರ ವ್ಯಾಪ್ತಿಗೆ ಬರುವುದಿಲ್ಲ!ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಬೆಂಗಳೂರು ನಗರ ಜಿಲ್ಲೆಯ  ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್‌, ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್‌ ವಿಧಾನಸಭಾ ಕ್ಷೇತ್ರಗಳಿವೆ.ರಾಜರಾಜೇಶ್ವರಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿನ 11 ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ) ವಾರ್ಡ್‌ಗಳೂ ಈ ಲೋಕಸಭಾ ಕ್ಷೇತ್ರದ ಅಳತೆಯಲ್ಲಿವೆ.ವಿವಿಧ ಹೆಸರುಗಳು: ಈ ಕ್ಷೇತ್ರವು 1951ರಿಂದಲೂ ವಿವಿಧ ಹೆಸರುಗಳಿಂದ ಕರೆಸಿಕೊಂಡು ಬಂದಿದೆ. 1951ರಲ್ಲಿ ಇಲ್ಲಿನ ಕೆಲವು ಭಾಗಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದವು. 1957ರಿಂದ 1967ರವರೆಗೆ ಇದು ಬೆಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 1967ರಿಂದ 2009ರವರೆಗೆ ಕನಕಪುರ ಲೋಕಸಭಾ ಕ್ಷೇತ್ರ ಎಂಬ ಹೆಸರು ಹೊಂದಿತ್ತು.  ಕ್ಷೇತ್ರ ಪುನರ್‌ ವಿಂಗಡಣೆ ನಂತರ 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ.2009ಕ್ಕೂ ಮುನ್ನ ಕನಕಪುರ ಲೋಕಸಭಾ ಕ್ಷೇತ್ರವು ಉತ್ತರಹಳ್ಳಿ, ಆನೇಕಲ್‌, ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಸಾತನೂರು, ಮಳವಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ದೇಶದಲ್ಲಿಯೇ ದೊಡ್ಡ ವಿಧಾನಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿದ್ದ ಉತ್ತರಹಳ್ಳಿಯಲ್ಲಿಯೇ 12 ಲಕ್ಷ ಮತದಾರರಿದ್ದರೆ, ಉಳಿದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 12 ಲಕ್ಷ ಮತದಾರರಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ನಂತರ ಉತ್ತರಹಳ್ಳಿಯು ಹಲವು ವಿಧಾನಸಭಾ ಕ್ಷೇತ್ರವಾಗಿ ವಿಭಜನೆಯಾಯಿತು. ಆ ಸಮಯದಲ್ಲಿ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿದವು.ಸಾತನೂರು ಕ್ಷೇತ್ರವು ಕನಕಪುರದಲ್ಲಿ ಲೀನವಾದರೆ, ಮಳವಳ್ಳಿ ಮಂಡ್ಯ ಲೋಕಸಭಾ ಕ್ಷೇತ್ರದ ಪಾಲಾಯಿತು.

ಕಾಂಗ್ರೆಸ್‌ ಭದ್ರಕೋಟೆ: ಕ್ಷೇತ್ರದಲ್ಲಿ ಎರಡು ಉಪ ಚುನಾವಣೆ ಸೇರಿ ಒಟ್ಟು 17 ಚುನಾವಣೆ ನಡೆದಿವೆ. ಅದರಲ್ಲಿ ಕಾಂಗ್ರೆಸ್‌ 13 ಬಾರಿ, ಜೆಡಿಎಸ್‌ ಮೂರು ಬಾರಿ, ಬಿಜೆಪಿ ಒಮ್ಮೆ ಗೆಲುವು ದಾಖಲಿಸಿವೆ. 2009ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್‌ ಕಳಪೆ ಸಾಧನೆ ತೋರಿತ್ತು. ಆಗ ಅದು ಮೂರನೇ ಸ್ಥಾನಕ್ಕೆ ತೃಪ್ತಿ­ಪಟ್ಟಿತ್ತು. ಉಳಿದಂತೆ ಕ್ಷೇತ್ರವು ಇಂದಿಗೂ ಕಾಂಗ್ರೆಸ್‌ನ ಭದ್ರ­ಕೋಟೆಯಾಗಿಯೇ ಉಳಿದಿದೆ.ಗೌಡರ ಕುಟುಂಬದ ಪ್ರಭಾವ: ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾ­ಯ­ದವರೇ ಹೆಚ್ಚು. ಅದರಲ್ಲೂ ಎಚ್‌.ಡಿ.ದೇವೇಗೌಡರ ಕುಟುಂಬ ತನ್ನದೇ ಆದ ಪ್ರಭಾವ ಹೊಂದಿದೆ. ಗೌಡರ ಕುಟುಂಬ­ದವರು ಈತನಕ ಇಲ್ಲಿನ ಏಳು ಲೋಕಸಭಾ ಚುನಾವಣೆಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಮೂರು ಬಾರಿ ಮಾತ್ರ ಗೆದ್ದಿದ್ದಾರೆ.ಎಚ್‌.ಡಿ.ಕುಮಾರಸ್ವಾಮಿ ಎರಡು ಬಾರಿ ಗೆಲುವು ಇನ್ನೆರಡು ಬಾರಿ ಸೋಲುಂಡಿದ್ದಾರೆ, ಎಚ್‌.ಡಿ.ದೇವೇಗೌಡರು ಒಮ್ಮೆ ಗೆದ್ದು, ಇನ್ನೊಮ್ಮೆ ಸೋತಿ­ದ್ದಾರೆ. ಅನಿತಾ ಕುಮಾರಸ್ವಾಮಿ ಒಮ್ಮೆ ನಿಂತು ಸೋತಿದ್ದಾರೆ.2009ರ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಚ್‌.ಡಿ.­ಕುಮಾರ­ಸ್ವಾಮಿ, 2013ರಲ್ಲಿ ರಾಮನಗರದಿಂದ ವಿಧಾನಸಭೆಗೆ ಆಯ್ಕೆ­ಯಾದ ನಂತರ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೇ 2013ರ ಆಗಸ್ಟ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಕ್ಷೇತ್ರವನ್ನು ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡಿತು.ಈ ಬಾರಿ ಕ್ಷೇತ್ರದಿಂದ ತಮ್ಮ  ಕುಟುಂಬದ ಯಾರನ್ನೂ ಇಲ್ಲಿಂದ ಕಣಕ್ಕೆ ಇಳಿಸುವುದಿಲ್ಲ ಎಂದು ದೇವೇಗೌಡರ ಕುಟುಂಬ ನಿರ್ಧರಿಸಿರುವುದೇ ಸದ್ಯದ ವಿಶೇಷಗಳಲ್ಲೊಂದು.ಬಲ ಪ್ರದರ್ಶನದ ಕುಸ್ತಿ ಕಣ: ರಾಮನಗರ ಜಿಲ್ಲೆಯ ವಿಧಾನಸಭಾ ಚುನಾವಣೆಗಳು ಸಾಮಾನ್ಯವಾಗಿ ಎಚ್‌.ಡಿ.­ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಮತ್ತು ಸಿ.ಪಿ.­ಯೋಗೇಶ್ವರ್‌ ನಡುವಿನ ಬಲಾಬಲ ಪ್ರದರ್ಶನಗಳೇ ಆಗಿರುತ್ತವೆ.

ಈ ಮಾತಿಗೆ ಲೋಕಸಭಾ ಚುನಾವಣೆಯೂ ಹೊರತಲ್ಲ. 2002ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್‌.ಡಿ.­ದೇವೇ­ಗೌಡರ ವಿರುದ್ಧ ಕಣಕ್ಕಿಳಿದಿದ್ದ ಡಿ.ಕೆ.­ಶಿವಕುಮಾರ್‌ ಸಚಿವರಾಗಿದ್ದಾಗ್ಯೂ ಸೋಲುಂಡಿ­ದ್ದರು.

2004ರಲ್ಲಿ ತೇಜಸ್ವಿನಿ ಗೌಡ ಅವರ ಎದುರು ದೇವೇಗೌಡರು ಸೋಲು ಅನುಭವಿಸಿದ್ದರು. ಇದು ಶಿವಕುಮಾರ್‌ ಹೆಣೆದಿದ್ದ ರಣತಂತ್ರ ಎಂಬುದು ರಹಸ್ಯ­ವಾಗೇನೂ ಇರಲಿಲ್ಲ.2009ರ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್‌ ಸೋಲುಂಡಿ­ದ್ದರು. 2013ರ ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಎದುರು ಅನಿತಾ ಕುಮಾರಸ್ವಾಮಿ ಪರಾಭವಗೊಂಡರು.ಗೆದ್ದವರು: ಕಾಂಗ್ರೆಸ್‌ನ ಟಿ.ಮಾದಯ್ಯಗೌಡ (1951), ಎಚ್‌.ಸಿ.ದಾಸಪ್ಪ (1957, 1962), ಎಂ.ವಿ.ರಾಜಶೇಖರನ್‌ (1967), ಸಿ.ಕೆ.ಜಾಫರ್‌ ಷರೀಫ್‌ (1971), ಎಂ.ವಿ.ಚಂದ್ರಶೇಖರ ಮೂರ್ತಿ (1977, 1980, 1984, 1989, 1991, 1999), ಜೆಡಿಎಸ್‌ನ ಎಚ್‌.ಡಿ.­ಕುಮಾರಸ್ವಾಮಿ (1996, 2009), ಬಿಜೆಪಿಯ ಎಂ.ಶ್ರೀನಿವಾಸ್‌ (1998), ಜೆಡಿಎಸ್‌ನ ಎಚ್‌.ಡಿ.­ದೇವೇಗೌಡ (2002ರ ಉಪ ಚುನಾವಣೆ) ಕಾಂಗ್ರೆಸ್‌ನ ತೇಜಸ್ವಿನಿ ಗೌಡ (2004), ಡಿ.ಕೆ.ಸುರೇಶ್‌ (2013 ಉಪ ಚುನಾವಣೆ).ಸೋತವರು: ಎಂ.ವಿ.ರಾಜಶೇಖರನ್‌ ಮತ್ತು ರಾಮಚಂದ್ರಗೌಡ ತಲಾ ಮೂರು ಬಾರಿ, ಪಿ.ಜಿ.ಆರ್.ಸಿಂಧ್ಯ ಮತ್ತು  ಎಚ್‌.ಡಿ.ಕುಮಾರ­ಸ್ವಾಮಿ ತಲಾ ಎರಡು ಬಾರಿ, ಎಚ್‌.ಡಿ.­ದೇವೇಗೌಡ, ಎಂ.ವಿ.ಚಂದ್ರಶೇಖರಮೂರ್ತಿ, ಸಿ.ನಾರಾಯಣಸ್ವಾಮಿ, ಡಾ.ಡಿ.ಪ್ರೇಮಚಂದ್ರ ಸಾಗರ್‌, ಎಂ.ಶ್ರೀನಿವಾಸ್‌, ಡಿ.ಕೆ.ಶಿವಕುಮಾರ್‌, ತೇಜಸ್ವಿನಿ ಗೌಡ, ಸಿ.ಪಿ.ಯೋಗೇಶ್ವರ್‌ ಮತ್ತು ಅನಿತಾ ಕುಮಾರಸ್ವಾಮಿ ಒಮ್ಮೆ ಸೋಲಿನ ರುಚಿ ಅನುಭವಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.