ಬೆಂಗಳೂರು: ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ತೆಗೆದುಕೊಂಡಿದ್ದು ಮೂರು ವರ್ಷ. ಸರ್ವ ಸಿದ್ಧತೆ ನಡೆಸಿ ಸರ್ವಾಂಗ ಸುಂದರಿಯಂತೆ ನಿಂತ ರೈಲಿನ ಸಂಚಾರ ಆರಂಭಿಸಲು ತೆಗೆದುಕೊಂಡ ಅವಧಿ ಎರಡು ವರ್ಷ. ಚಿಣ್ಣರಿಗೆ ರೈಲಿನ ಸಂಚಾರದ ಸವಿ ದೊರಕಿದ್ದು ಮೂರು ತಿಂಗಳು ಮಾತ್ರ!

ಹನುಮಂತನಗರದ ಬೃಂದಾವನ ರಸ್ತೆಯಲ್ಲಿರುವ ಜಿಂಕೆ ಉದ್ಯಾನದಲ್ಲಿನ ಪುಟಾಣಿ ರೈಲಿನ ಕಥೆ– ವ್ಯಥೆ ಇದು. ಗುತ್ತಿಗೆ ಕಂಪೆನಿ ಕೈಕೊಟ್ಟ ಹಿನ್ನೆಲೆಯಲ್ಲಿ ಪುಟಾಣಿ ರೈಲು ಸಂಚಾರ ಮೂರು ತಿಂಗಳಿಗೇ ಸ್ಥಗಿತಗೊಂಡಿದೆ. ಬಿಬಿಎಂಪಿ 11 ಪತ್ರಗಳನ್ನು ಬರೆದರೂ ಉತ್ತರ ನೀಡದ ಟ್ರಾನ್ಸ್ ಇಂಡಿಯಾ ಕಂಪೆನಿಯೊಂದಿಗೆ ಒಪ್ಪಂದವನ್ನು ರದ್ದುಗೊಳಿಸಲಾಗಿದೆ.

ಕಾಮಗಾರಿ ಪೂರ್ಣಗೊಂಡರೂ ಸುಮಾರು ಐದು ವರ್ಷಗಳ ಕಾಲ ರೈಲು ಹಳಿಗಳ ಮೇಲೆ ನಿಂತಿದ್ದ ಪುಟಾಣಿ ರೈಲು ಸಂಚಾರಕ್ಕೆ 2012ರ ಸೆಪ್ಟೆಂಬರ್ ತಿಂಗಳಿನಲ್ಲಿ ಚಾಲನೆ ನೀಡಲಾಗಿತ್ತು. ರೈಲಿಗೆ ವೇಗ ನಿಯಂತ್ರಕ ಅಳವಡಿಸದೆ ಅನನುಭವಿ ಚಾಲಕ ಚಾಲನೆ ಮಾಡಿದ ಕಾರಣ 2012ರ ನ. 4ರಂದು ರೈಲು ಹಳಿ ತಪ್ಪಿ ನಿಂತಿತ್ತು (ಡಿರೇಲ್ ಆಗಿತ್ತು). ಬಳಿಕ ಸಮಸ್ಯೆಯನ್ನು ಸರಿಪಡಿಸಿದರೂ ಕಂಪೆನಿ ರೈಲನ್ನು ಓಡಿಸಿರಲಿಲ್ಲ.

ನುರಿತ ಚಾಲಕರನ್ನು ನೇಮಿಸಿಕೊಳ್ಳುವವರೆಗೆ ಪ್ರತಿದಿನ ಎರಡು ಸುತ್ತು ರೈಲು ಓಡಿಸಲು ಗುತ್ತಿಗೆ ಸಂಸ್ಥೆಗೆ ಪಾಲಿಕೆ ಸೂಚಿಸಿತ್ತು. ಈ ನಡುವೆ, ಎರಡು ಹಾಗೂ ಮೂರನೇ ವರ್ಷದ ಹೊರಗುತ್ತಿಗೆ ಮೊತ್ತವನ್ನೂ ಪಾಲಿಕೆಗೆ ಪಾವತಿಸಿರಲಿಲ್ಲ. ಗುತ್ತಿಗೆ ಸಂಸ್ಥೆಯವರು ಒಂದು ಸಲವೂ ಪಾಲಿಕೆಗೆ ಭೇಟಿ ನೀಡಿರಲಿಲ್ಲ. ಅನ್ಯಮಾರ್ಗ ಕಾಣದ ಪಾಲಿಕೆ 2013ರ ಜುಲೈ 29ರಂದು ಕಂಪೆನಿಯ ಬ್ಯಾಂಕ್ ಖಾತೆಯಿಂದಲೇ ಪಾಲಿಕೆಗೆ ಬರಬೇಕಿದ್ದ ₨2.75 ಲಕ್ಷ ಮೊತ್ತವನ್ನು ವಸೂಲಿ ಮಾಡಿತ್ತು.

2007ರಲ್ಲಿ ಪುಟಾಣಿ ರೈಲು, ರಾಜೀವ್ ಗಾಂಧಿ ಕ್ರೀಡಾ ಸಂಕೀರ್ಣ, ಅಂಬೇಡ್ಕರ್ ಕ್ರೀಡಾಂಗಣ ಸೇರಿದಂತೆ ಆರು ಕಾಮಗಾರಿಗಳಿಗೆ ಟೆಂಡರ್ ನಿಯಮಾವಳಿಗಳನ್ನು ತಯಾರಿಸಲು ಅರ್ಬನ್ ಫಸ್ಟ್ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಯಿತು. ಬೇರೆ ಬೇರೆ ಸ್ವರೂಪದ ಆರು ಕಾಮಗಾರಿಗಳಿಗೆ ಈ ಸಂಸ್ಥೆ ಒಂದೇ ರೀತಿಯ ಟೆಂಡರ್ ಷರತ್ತುಗಳನ್ನು ಹೊಂದಿರುವ ನಿಯಮಾವಳಿಗಳನ್ನು ರೂಪಿಸಿತು.

ಟೆಂಡರ್ ನಿಯಮಾವಳಿಗಳನ್ನು ತಯಾರಿಸಲು ಸಂಸ್ಥೆಯು ಎಂಟು ತಿಂಗಳು ತೆಗೆದುಕೊಂಡಿತು. ಆರು ಕಾಮಗಾರಿಗಳಿಗೂ ಒಂದೇ ರೀತಿ ಷರತ್ತು ಇದ್ದ ಕಾರಣ ಗುತ್ತಿಗೆದಾರರು ಟೆಂಡರ್ನಲ್ಲಿ ಪಾಲ್ಗೊಳ್ಳಲು ಹಿಂಜರಿದರು. ಮೂರು ಬಾರಿ ಕರೆದ ಟೆಂಡರ್ಗೂ ಒಬ್ಬನೇ ಒಬ್ಬ ಗುತ್ತಿಗೆದಾರ ಬಂದಿರಲಿಲ್ಲ. 2009ರಲ್ಲಿ ನಾಲ್ಕನೇ ಬಾರಿ ಕರೆದ ಟೆಂಡರ್ ಪ್ರಕ್ರಿಯೆಯಲ್ಲಿ ಟ್ರಾನ್ಸ್ ಇಂಡಿಯಾ ಸಂಸ್ಥೆ ಭಾಗವಹಿಸಿತ್ತು. ಈ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮತ್ತೆ ಎಂಟು ತಿಂಗಳು ತೆಗೆದುಕೊಳ್ಳಲಾಯಿತು.

ಆಗ ಮಾಡಿಕೊಂಡ ಒಪ್ಪಂದದ ಪ್ರಕಾರ, ಕಂಪೆನಿಯು ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ರೈಲು ಸಂಚಾರ ನಡೆಸಿ ಅದರ ವರದಿಯನ್ನು ನೀಡಬೇಕು. ಆದರೆ, ಕಂಪೆನಿಯು ರೈಲು ಓಡಿಸದೇ ಹಳಿಗಳ ಜೋಡಣೆ ಸರಿಯಿಲ್ಲ ಎಂದು ವರದಿ ಸಲ್ಲಿಸಿದ್ದರಿಂದ ರೈಲು ಸಂಚಾರ ವಿಳಂಬವಾಗಿತ್ತು. ರೈಲು ಹಳಿಗಳನ್ನು ಮರುಜೋಡಣೆ ಮಾಡಿ ದಕ್ಷಿಣ ಪಶ್ಚಿಮ ರೈಲು ವಿಭಾಗದಿಂದ ಅರ್ಹತಾ ಪ್ರಮಾಣಪತ್ರವನ್ನು ಪಡೆದು, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು.

‘ರೈಲು ಓಡಿಸುವ ಸಂದರ್ಭದಲ್ಲಿ ಹಳಿಗಳನ್ನು ಪ್ರತಿದಿನವೂ ಪರೀಕ್ಷಿಸಿ ಪಾಲಿಕೆಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ವೇಗ ನಿಯಂತ್ರಕ ಅಳವಡಿಸುವಂತೆ ನಿರ್ದೇಶನ ನೀಡಲಾಗಿತ್ತು. ಒಟ್ಟು ಎಂಟು ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿತ್ತು. ಆದರೆ, ಸಂಸ್ಥೆ ಯಾವುದೇ ನಿಯಮಗಳನ್ನು ಪಾಲಿಸಿರಲಿಲ್ಲ.

ಪಾಲಿಕೆಯಿಂದ ಬರೆದ 10 ಪತ್ರಗಳಿಗೂ ಸಂಸ್ಥೆ ಪ್ರತಿಕ್ರಿಯೆ ನೀಡಿರಲಿಲ್ಲ. 11ನೇ ಪತ್ರಕ್ಕೂ ಉತ್ತರ ನೀಡದ ಕಾರಣ ಒಪ್ಪಂದವನ್ನು ರದ್ದುಗೊಳಿಸಲಾಯಿತು. ರೈಲು ಸಂಚಾರವನ್ನು ಪುನರಾರಂಭಿಸುವ ನಿಟ್ಟಿನಲ್ಲಿ ರೈಟ್ಸ್ ಸಂಸ್ಥೆಯಿಂದ ವರದಿ ಪಡೆಯಲು ತೀರ್ಮಾನಿಸಲಾಗಿದೆ. ವರದಿಯ ಶಿಫಾರಸುಗಳನ್ನು ಗಮನಿಸಿ ಸಣ್ಣಪುಟ್ಟ ಕಾಮಗಾರಿಗಳನ್ನು ನಡೆಸಿ ಶೀಘ್ರದಲ್ಲಿ ರೈಲು ಸಂಚಾರವನ್ನು ಆರಂಭಿಸಲಾಗುವುದು’ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಪುಟಾಣಿ ರೈಲಿನ ಪಯಣದ ಹಾದಿ...
ನಗರದ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ಮಾತ್ರ ಈ ಹಿಂದೆ ಪುಟಾಣಿ ರೈಲು ವ್ಯವಸ್ಥೆ ಇತ್ತು. ಬೆಂಗಳೂರು ದಕ್ಷಿಣ ಭಾಗದ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಂಕೆ ಉದ್ಯಾನದಲ್ಲಿ ಪುಟಾಣಿ ರೈಲು ಆರಂಭಿಸಲಾಯಿತು. 2006–07ನೇ ಸಾಲಿನಲ್ಲಿ ಹಳಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಇದಕ್ಕಾಗಿ ಪಾಲಿಕೆ ಸದಸ್ಯರ ನಿಧಿಯಿಂದ ₨1.50 ಕೋಟಿ ವೆಚ್ಚ ಮಾಡಲಾಗಿತ್ತು.

ಉದ್ಯಾನದಲ್ಲಿರುವ ನೆಲ, ಸುರಂಗ ಹಾಗೂ ಮೇಲ್ಸೇತುವೆ ಮೂಲಕ ಒಂದು ಕಿ.ಮೀ. ಸಾಗುತ್ತಿತ್ತು. ಗಂಟೆಗೆ ಆರು ಕಿ.ಮೀ. ವೇಗದಲ್ಲಿ ಸಂಚಾರ ನಡೆಸಬೇಕು ಎಂದು ವೇಗ ಮಿತಿ ನಿಗದಿಪಡಿಸಲಾಗಿತ್ತು. ಪ್ರಯಾಣಿಕ ಶುಲ್ಕ ₨25. ಈ ರೈಲಿನಲ್ಲಿ ಮೂರು ಬೋಗಿಗಳಿವೆ. 70 ಮಂದಿ ಕುಳಿತುಕೊಳ್ಳಲು ಅವಕಾಶ ಇದೆ.

ಹೊರಗುತ್ತಿಗೆಯ ಒಪ್ಪಂದದ ಪ್ರಕಾರ ಲಾಭಾಂಶದಲ್ಲಿ ಕಂಪೆನಿಯು ಪಾಲಿಕೆಗೆ ಮೊದಲ ವರ್ಷ ₨1.25 ಲಕ್ಷ, ಎರಡನೇ ವರ್ಷ ₨1.35 ಲಕ್ಷ, ಮೂರನೇ ವರ್ಷ ₨1.40 ಲಕ್ಷ, ನಾಲ್ಕನೇ ವರ್ಷ ₨1.50 ಲಕ್ಷ, ಐದನೇ ವರ್ಷ ₨1.52 ಲಕ್ಷ ಪಾವತಿಸಬೇಕಿತ್ತು. ಮೊದಲ ವರ್ಷದ ಮೊತ್ತವನ್ನು ಮಾತ್ರ ಕಂಪೆನಿ ಪಾವತಿಸಿತ್ತು. ಬಿಬಿಎಂಪಿಯ ಸೂಚನೆಯ ಬಳಿಕವೂ ರೈಲು ಓಡಿಸದ ಹಿನ್ನೆಲೆಯಲ್ಲಿ ಎರಡು ವರ್ಷದ ಮೊತ್ತವನ್ನು ಪಾಲಿಕೆ ವಸೂಲಿ ಮಾಡಿದೆ.

ಅಧಿಕಾರಿಗಳು ಕಾರಣ
‘ಪುಟಾಣಿ ರೈಲು ಸ್ಥಗಿತಗೊಳ್ಳಲು ಪಾಲಿಕೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಕೆಲವು ಅಧಿಕಾರಿಗಳು ಸಹ ಕಾರಣ. ಗುತ್ತಿಗೆ ಸಂಸ್ಥೆಯ ನಡವಳಿಕೆ ಸಹ ಅನುಮಾನ ಮೂಡಿಸುವಂತಹುದು. ರೈಲು ಸಂಚಾರ ಆರಂಭಿಸಲು ಹೊರಗುತ್ತಿಗೆ ವಹಿಸಿಕೊಂಡ ಸಂಸ್ಥೆ ನಾನಾ ಬಗೆಯ ತಕರಾರುಗಳನ್ನು ಎತ್ತಿತ್ತು’ ಎಂದು ಹನುಮಂತನಗರ ವಾರ್ಡ್ ಸದಸ್ಯ ಕೆ.ಚಂದ್ರಶೇಖರ್ ದೂರುತ್ತಾರೆ.

‘ಹಲವು ತಿಂಗಳ ಕಾಲ ರೈಲು ಓಡಿಸದೆಯೇ ಸಂಸ್ಥೆ ‘ಹಳಿ ಸರಿ ಇಲ್ಲ’ ಎಂದು ನೆಪವೊಡ್ಡಿತ್ತು. ಹಳಿಗಳನ್ನು ಸರಿಪಡಿಸಿದ ಬಳಿಕ 2012ರ ಸೆಪ್ಟೆಂಬರ್ನಲ್ಲಿ ಸಂಚಾರ ಆರಂಭಿಸಲಾಗಿತ್ತು. ಆದರೆ, ರೈಲು ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಅನನುಭವಿ ಚಾಲಕನನ್ನು ರೈಲಿನ ಚಾಲಕನನ್ನಾಗಿ ನಿಯೋಜಿಸಲಾಗಿತ್ತು. ಹೀಗಾಗಿ ಮಹತ್ವಾಕಾಂಕ್ಷಿ ಯೋಜನೆ ಕೆಲವೇ ತಿಂಗಳಲ್ಲಿ ಹಳಿ ತಪ್ಪಿತು’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.