ಸೋಮವಾರ, ಜನವರಿ 20, 2020
18 °C
ಸಾಹಿತ್ಯ ಸಮ್ಮೇಳನ ನಿರೀಕ್ಷೆ ಏನು?

ಮೂರು ದಿನಗಳ ಸ್ವಪ್ನ!

ಪ್ರೊ.ಕೆ.ಎಸ್‍. ನಿಸಾರ್‍ ಅಹಮದ್‍ Updated:

ಅಕ್ಷರ ಗಾತ್ರ : | |

ಮಡಿಕೇರಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸಜ್ಜಾಗುತ್ತಿದೆ. ಈ ಸಾಹಿತ್ಯ  ಸಮ್ಮೇಳನ ಹೇಗಿರಬೇಕು? ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತಿಯೇ ವಿಜೃಂಭಿಸಬೇಕೆಂಬ ಆಶಯ ಈಡೇರುವುದು ಸಾಧ್ಯವೇ? ಉನ್ನತ ಸಾಹಿತ್ಯ ಚಿಂತನೆಗಳು ಭಿನ್ನ ನೆಲೆಗಳಲ್ಲಿ ಮೂಡಲು ಸಾಹಿತ್ಯ ಸಮ್ಮೇಳನ ವೇದಿಕೆಯಾಗುವುದು ಹೇಗೆ? ಇತ್ಯಾದಿ ಪ್ರಶ್ನೆಗಳ ಸುತ್ತ ಖ್ಯಾತ ಸಾಹಿತಿ ಪ್ರೊ.ಕೆ.ಎಸ್‍. ನಿಸಾರ್‍ ಅಹಮದ್‍ ಅವರು ಮಂಡಿಸಿರುವ ವಿಚಾರಗಳು ಇಲ್ಲಿವೆ...

ಕನ್ನಡ ಸಾಹಿತ್ಯ ಪರಿಷತ್ತು ಏಕೆ ಹುಟ್ಟಿತು ಎಂಬು­ದನ್ನು ಈ ಲೇಖನದ ಆರಂಭ­ದಲ್ಲಿ ಮೆಲುಕು ಹಾಕಬೇಕು. ಒಂದು ಶತಮಾನವನ್ನು ಪೂರೈಸುತ್ತಿರುವ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‍ ಅವರ ಒತ್ತಾಸೆ­ಯಿಂದ, ಸರ್‍ ಎಂ. ವಿಶ್ವೇಶ್ವರಯ್ಯ ಮತ್ತು ಸರ್‍ ಮಿರ್ಜಾ ಇಸ್ಮಾಯಿಲ್ ಅವರ ಪ್ರಯತ್ನಗಳಿಂದಾಗಿ ಆರಂಭವಾಯಿತು. ಆ ಕಾಲ ದಲ್ಲಿ ಕನ್ನಡದ ಪರಿಸ್ಥಿತಿ ಶೋಚನೀಯವಾಗಿತ್ತು. ಈಗ ನಾವು ಇಂಗ್ಲಿಷ್‌ನಿಂದಾಗಿ ಸವಾಲು ಎದುರಿಸುತ್ತಿರಬಹುದು. ಆದರೆ ಅಂದಿನ ಕಾಲದಲ್ಲಿ ಕನ್ನಡ ಭಾಷಿಕರ ಪ್ರದೇಶಗಳು ಬೇರೆ ರಾಜ್ಯ-ಪ್ರಾಂತ್ಯಗಳಿಗೆ ಸೇರಿಹೋಗಿದ್ದವು. ಅಲ್ಲಿನವರು ನಮ್ಮವರನ್ನು ಶೋಷಿಸುತ್ತಿದ್ದ ಸಂದರ್ಭಗಳೂ ಇತ್ತು.ಪರರಿಗೆ ಪಲ್ಲಂಗ ನೀಡಿ, ಪಡಸಾಲೆಯಲ್ಲಿ ಪವಡಿಸುವ ಪರೋಪಕಾರಿಗಳು ನಮ್ಮ ಜನ. ಈ ಔದಾರ್ಯವೇ ನಮಗೆ ಉರುಳಾಗಿತ್ತು. ನಮ್ಮ ನೆಲ ಹರಿದು ಹಂಚುವಂತಾಗುವಲ್ಲಿ ಬ್ರಿಟಿಷರ ಪಾತ್ರವೂ ಇತ್ತು. ಇಂಥ ಪ್ರದೇಶಗಳನ್ನೆಲ್ಲ ಒಗ್ಗೂಡಿಸಬೇಕು ಎಂಬ ಭಾವನೆ ಆ ಕಾಲದ ಪಂಡಿತ ವರ್ಗ ಮತ್ತು ಸಾಹಿತಿಗಳಲ್ಲಿ ಮೂಡಿತು. ಉತ್ತರ ಕರ್ನಾಟಕದಲ್ಲಿ ಮರಾಠಿಗರು, ನಿಜಾಮರ ದಬ್ಬಾಳಿಕೆ ಇತ್ತು.ಬಹುಶಃ ಹಳೆ ಮೈಸೂರು ಪ್ರಾಂತ್ಯವನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆಯಲ್ಲೂ ಪರಭಾಷಿಕ­ರಿಂದ ನಮ್ಮವರ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು. ಹಾಗಾಗಿ, ಮುಂಬೈ– ಕರ್ನಾಟಕ, ಹೈದರಾಬಾದ್‍– -ಕರ್ನಾಟಕ ಪ್ರದೇಶಗಳಲ್ಲಿ ಏಕೀಕರಣದ ನಿಟ್ಟಿನಲ್ಲಿ ಹೋರಾಟ ಆರಂಭವಾಯಿತು. ಏಕೀಕರಣಕ್ಕೆ ಹೋರಾಡಿದ ಮಹನೀಯರ ಸಂಖ್ಯೆ ಅಗಣಿತ. ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯಕ್ಕೆ ಹುಟ್ಟಿದ್ದು ಸಾಹಿತ್ಯ ಪರಿಷತ್ತು.ನಮ್ಮ ಜನರಲ್ಲಿ ಆತ್ಮಾಭಿಮಾನ ಮೂಡಿಸಬೇಕು ಎಂಬ ಉದ್ದೇಶದಿಂದ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ಮತ್ತು ಮೈಸೂರು ಪ್ರಾಂತ್ಯದಲ್ಲಿ ಸಾಹಿತ್ಯ ಪರಿಷತ್ತು ಕೆಲಸ ಮಾಡಲು ಆರಂಭಿಸಿತು. ಬೇರೆಯವರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಈ ಸಂಘಟನೆಗಳು ಮುಂಚೂಣಿಯಲ್ಲಿದ್ದವು. ಜನಸಾಮಾನ್ಯ­ರಲ್ಲಿ ಕನ್ನಡದ ಅಸ್ಮಿತೆಯನ್ನು ಮೂಡಿಸುವ ಕಾಯಕ ಅವರದ್ದಾಗಿತ್ತು. ಈ ಸಂದರ್ಭದಲ್ಲಿ ತಮಿಳರ ದಬ್ಬಾಳಿಕೆಯೂ ಇತ್ತು. ಈ ಭಾಗದ ಅನೇಕ ಉನ್ನತ ಹುದ್ದೆಗಳಲ್ಲಿ ಅವರೇ ತುಂಬಿಕೊಂಡಿದ್ದರು. ಪೊಲೀಸ್‍ ಇಲಾಖೆಯಲ್ಲೂ ಪರಭಾಷಿಕರು ತುಂಬಿಕೊಂಡಿದ್ದರು.ಇಂಥ ಸಂದರ್ಭದಲ್ಲಿ, ನಮ್ಮ ನಾಡಿನ ವೈಭವ ಮರುಕಳಿಸ­ಬೇಕು ಎಂಬ ಅಸಂಖ್ಯ ಜನ ಹೋರಾಟ ಆರಂಭಿಸಿದರು. ಕನ್ನಡಿಗರು ಗಾಂಧೀಜಿ ಜೊತೆ ಸ್ವಾತಂತ್ರ್ಯಕ್ಕೂ, ಇಲ್ಲಿ ಆಲೂರು ವೆಂಕಟರಾಯರಂಥ ಹಿರಿ­ಯರ ಒಡಗೂಡಿ ನಾಡು-ನುಡಿಗಾಗಿಯೂ ಜೊತೆಜೊತೆ­ಯಾಗಿ ಹೆಜ್ಜೆ ಹಾಕಿದರು. ಪರಿಷತ್ತು ಆರಂಭ­ವಾಗಿದ್ದು ನಾಡು-ನುಡಿ ಕುರಿತ ಅಭಿಮಾನ ಮೂಡಿಸಲು, ಒಗ್ಗಟ್ಟು ಮೂಡಿಸಲು. ಸಾಹಿತ್ಯದ ಉದ್ಧಾರಕ್ಕಾಗಿ ಅಲ್ಲ.ಆರಂಭದ ಅನೇಕ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ಆ ಕಾಲದ ಪ್ರಭಾವಿ ಅಧಿಕಾರಿ­ಗಳದ್ದೇ ಆಗಿರುತ್ತಿತ್ತು! ನಂತರದ ದಿನಗಳಲ್ಲಿ ಸಾಹಿತಿಗಳು ಅಧ್ಯಕ್ಷರಾದರು. ಸಮ್ಮೇಳನಕ್ಕೆ ಸಾಹಿತ್ಯದ ಸ್ವರೂಪ ದೊರೆಯತೊಡಗಿತು. ಮೊದಲು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ ಸಮ್ಮೇಳನ ಬೇರೆ ಊರುಗಳಲ್ಲೂ ನಡೆಯುವಂತೆ ಆಯಿತು. ಆಗ ಅಲ್ಲಿನವರಿಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಆಸಕ್ತಿ ಮೂಡಿತು. ಜಿ. ನಾರಾಯಣ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಜಿಲ್ಲಾ ಮಟ್ಟದಲ್ಲೂ ಸಮ್ಮೇಳನ ಆರಂಭವಾಯಿತು.ಸಮ್ಮೇಳನಗಳಿಗೆ ಈಗ ಜನಸಾಮಾನ್ಯ, ಕಾರ್ಮಿಕ,  ಕೃಷಿಕ ಹೀಗೆ ಎಲ್ಲರೂ ಹೋಗುತ್ತಾರೆ. ಅಲ್ಲಿ ಸಂಭ್ರಮಿಸುತ್ತಾರೆ. ಸಮ್ಮೇಳನಗಳು ಪಂಡಿತವರ್ಗಕ್ಕೆ ಮಾತ್ರ ಸೀಮಿತವಾಗ­ಬಾರದು. ಸಾಹಿತ್ಯ ಸಮ್ಮೇಳನ ಅಕಾಡೆಮಿಕ್‍ ಕಸರತ್ತಲ್ಲ. ಅದು ಜನಸಾಮಾನ್ಯರ ಹಬ್ಬ. ಬೌದ್ಧಿಕ ಕಸರತ್ತುಗಳ ಹೆಸರಿನಲ್ಲಿ ಅಲ್ಲಿಗೆ ಜನಸಾಮಾನ್ಯ ಹೋಗದಿರುವಂತೆ ಮಾಡುವುದು ಸಲ್ಲ. ಅಂಥ ಅಕಾಡೆಮಿಕ್‍ ಶಿಸ್ತಿನ ಗೋಷ್ಠಿ-ಸಮ್ಮೇಳನಗಳನ್ನು ವಿಶ್ವವಿದ್ಯಾಲಯಗಳಲ್ಲಿ ನಡೆಸಲಿ. ಸಾಹಿತ್ಯ ಪರಿಷತ್ತಿಗೆ ಸಾಕಷ್ಟು ಇತಿಮಿತಿಗಳಿವೆ. ಸಮ್ಮೇಳನಕ್ಕೆ ಉತ್ಸವದ ಸ್ವರೂಪವೂ ಇರಬೇಕು.ಜನರಿಗೆ ಬೇಕಿರುವುದನ್ನು ಸಮ್ಮೇಳನದ ಗೋಷ್ಠಿಗಳು ನೀಡುತ್ತಿವೆಯೇ ಎಂಬ ಪ್ರಶ್ನೆ ಇರುವುದು ನಿಜ. ಆದರೆ ಗೋಷ್ಠಿಗಳಿಗೂ ಒಂದು ಸೀಮಿತ ವ್ಯಾಪ್ತಿ ಇದೆ. ಅಲ್ಲಿಗೆ ಜನರು ಮಾತ್ರ ಬಾರದಿರುವುದಲ್ಲ, ಸಾಹಿತಿಗಳೂ ಹಲ­ವಾರು ಸಂದರ್ಭಗಳಲ್ಲಿ ಬರುವುದಿಲ್ಲ. ಬಂದವರೆಲ್ಲರೂ ಗೋಷ್ಠಿಗಳಲ್ಲಿ ಭಾಗವಹಿಸದೇ ಇರಬಹುದು. ಆದರೆ ಸಮ್ಮೇ­ಳನಕ್ಕೆ ಬಂದವರು ಕನ್ನಡದ ಹೆಸರಿನಲ್ಲಿ ಸಂಭ್ರಮಿಸುತ್ತಾರೆ. ಜನ ಸಾಹಿತ್ಯ ಪರಿಷತ್ತಿನಿಂದ, ಸಮ್ಮೇಳನಗಳಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಆದರೆ ಅವು ಆದರ್ಶಗಳೇ ವಿನಾ ವಾಸ್ತವ ಅಲ್ಲ.‘ಪರ್ವತಗಳಿರುವುದು ಎಲ್ಲರೂ ಅದನ್ನು ಹತ್ತುತ್ತಾರೆ ಎಂದಲ್ಲ. ಎಲ್ಲರೂ ಅದನ್ನು ಹತ್ತಲಿ ಎಂಬ ಆಶಯದಿಂದ’ ಎಂದು ಕುವೆಂಪು ಹೇಳಿರುವುದು ಸಮ್ಮೇಳನಗಳಿಗೂ ಅನ್ವಯವಾಗುತ್ತದೆ. ಬೌದ್ಧಿಕ ಕಸರತ್ತಿಗೆ ವಿಶ್ವವಿದ್ಯಾಲಯಗಳ ವಿಚಾರ ಸಂಕಿರಣಗಳಿವೆ. ನಮ್ಮ ಅಸ್ಮಿತೆಯನ್ನು ಉಳಿಸಲು, ಬೆಳೆಸಲು ಸಾಹಿತ್ಯ ಸಮ್ಮೇಳನ ಒಂದು ಮುಖ್ಯ ಸಾಧನ. ಅದಕ್ಕಿಂತ ಹೆಚ್ಚಿನದನ್ನು ಅವುಗಳಿಂದ ನಿರೀಕ್ಷಿಸಬಾರದು.ಸಮ್ಮೇಳನದ ಈಗಿನ ಸ್ವರೂಪವನ್ನು ಬದಲಾಯಿಸುವುದು ಬ್ರಹ್ಮನಿಂದಲೂ ಸಾಧ್ಯವಿಲ್ಲ. ತೀರಾ ಮೇಲ್ಮಟ್ಟದ ಬೌದ್ಧಿಕ ಗೋಷ್ಠಿಗಳು ಹೆಚ್ಚಿನ ಜನರನ್ನು ತಲುಪಲಾರವು. ಸಾಹಿತ್ಯ­ವನ್ನು ವೈಯಕ್ತಿಕ ನೆಲೆಯಲ್ಲಿ ಅರಗಿಸಿಕೊಳ್ಳಬೇಕು. ಅದು ಸಾಮೂಹಿಕ­ವಾಗಿ ಆಗಬೇಕಾದದ್ದಲ್ಲ. ಸಮಾಜದ ಬದಲಾವಣೆಗೆ, ಪಲ್ಲಟಗಳಿಗೆ ಸ್ಪಂದಿಸುವ ಶಕ್ತಿ ಸಮ್ಮೇಳನಕ್ಕೆ ಇಲ್ಲ. ಸಮ್ಮೇಳನ ಎಂಬುದು ಮೂರು ದಿನದ ಸುಂದರ ಸ್ವಪ್ನ ಇದ್ದಂತೆ. ಸ್ವಪ್ನ ಕಂಡು ವಾಸ್ತವಕ್ಕೆ ಮರಳಬೇಕು. ಮೂರು ದಿನಗಳ ಸಮ್ಮೇಳನಕ್ಕೆ ಮೌಲ್ಯಗಳನ್ನು ಬದಲಾ­ಯಿ­ಸುವ ಶಕ್ತಿ ಇಲ್ಲ. ನಮ್ಮ  ಜೀವನ ಮೌಲ್ಯಗಳನ್ನು  ಕಾಯ್ದುಕೊಳ್ಳ­ಬೇಕಾ­ಗಿದ್ದು  ನಮ್ಮ ವೈಯಕ್ತಿಕ  ಜವಾಬ್ದಾರಿ.ಜನರ ಅರಿವಿನ ಪರಿಧಿ ಹೆಚ್ಚಿಸಲು ಪರಿಷತ್ತು  ಮತ್ತು ಸಮ್ಮೇಳನ  ಕೆಲಸ  ಮಾಡಬೇಕು.  ವಿಜ್ಞಾನದ ಕುರಿತೂ  ಸಮ್ಮೇಳನಗಳು  ಗಮನಹರಿಸಬೇಕು.  ಸಾಹಿತ್ಯ ಸಮ್ಮೇ­ ಳನಗಳಿಂದ ಕ್ರಾಂತಿ­ ಯಾಗುತ್ತದೆ,  ಏನೋ ಮಹತ್ತರ  ಬದಲಾವಣೆ  ಸಂಭವಿಸುತ್ತದೆ  ಎಂಬ  ನಿರೀಕ್ಷೆಗಳು ಬೇಡ.

ಪ್ರತಿಕ್ರಿಯಿಸಿ (+)