ಸೋಮವಾರ, ಮಾರ್ಚ್ 1, 2021
31 °C
ಮೈಸೂರು ರಸ್ತೆ ಯ ಮೆಟ್ರೊ ರೈಲು ನಿಲ್ದಾಣದಲ್ಲಿ ಅವ್ಯವಸ್ಥೆ: ಪ್ರಯಾಣಿಕರ ಆಕ್ರೋಶ

ಮೂಲಸೌಕರ್ಯ ಕಲ್ಪಿಸದೆ ಪಾರ್ಕಿಂಗ್‌ ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲಸೌಕರ್ಯ ಕಲ್ಪಿಸದೆ ಪಾರ್ಕಿಂಗ್‌ ಶುಲ್ಕ

ಬೆಂಗಳೂರು: ವಾಹನ ನಿಲುಗಡೆಗೆ ಸೂಕ್ತ ಮೂಲಸೌಕರ್ಯ ಒದಗಿಸದೆಯೇ ಮೈಸೂರು ರಸ್ತೆ ಮೆಟ್ರೊ ರೈಲು ನಿಲ್ದಾಣದಲ್ಲಿ ವಾಹನ ನಿಲ್ಲಿಸುವ ಪ್ರಯಾಣಿಕರಿಂದ ಜುಲೈ 31ರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಇಲ್ಲಿ ವಾಹನ ನಿಲುಗಡೆಗೆ ಗುರುತಿಸಿರುವ ತಾಣಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಕರ್ನಾಟಕ  ಕಮರ್ಷಿಯಲ್‌ ಆ್ಯಂಡ್‌ ಇಂಡಸ್ಟ್ರಿಯಲ್ ಕಾರ್ಪೊರೇಷನ್‌ (ಕೆಸಿಐಸಿ) ಸಂಸ್ಥೆಗೆ ವಾರ್ಷಿಕ ₹2.6 ಕೋಟಿ  ಮೊತ್ತಕ್ಕೆ ಗುತ್ತಿಗೆ ನೀಡಿದೆ. ಮೂಲಸೌಕರ್ಯ ಒದಗಿಸುವ ಮುನ್ನವೇ ಗುತ್ತಿಗೆದಾರರು   ಶುಲ್ಕ ವಸೂಲಿ ಮಾಡುವುದಕ್ಕೆ ಅವಕಾಶ ಕಲ್ಪಿಸಿರುವ  ಬಿಎಂಆರ್‌ಸಿಎಲ್‌ ಕ್ರಮಕ್ಕೆ   ಈ ನಿಲ್ದಾಣದ ಬಳಿ  ವಾಹನ ನಿಲ್ಲಿಸುವ ಮೆಟ್ರೊ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.‘ಇಲ್ಲಿ ನಾವು ಕೆಸರಿನಲ್ಲೇ ವಾಹನ ನಿಲ್ಲಿಸಬೇಕಾಗಿದೆ. ಇಲ್ಲಿ ಒಂದು ಶೆಡ್‌ ಕೂಡಾ ನಿರ್ಮಿಸಿಲ್ಲ. ವಾಹನ ನಿಲುಗಡೆ ಸ್ಥಳಕ್ಕೆ ಹೋಗುವುದಕ್ಕೂ ಸೂಕ್ತ ವ್ಯವಸ್ಥೆ ಇಲ್ಲ.  ನಿಲ್ಲಿಸಿದ ವಾಹನ ಕಳವಾದರೆ ಅಥವಾ ಅದಕ್ಕೆ ಏನಾದರೂ ಹಾನಿಯಾದರೆ   ಕೆಸಿಐಸಿ ಸಂಸ್ಥೆ ಯಾವುದೇ ಹೊಣೆ ಹೊತ್ತುಕೊಳ್ಳುವುದಿಲ್ಲ. ಆದರೂ, ನಾವೇಕೆ ವಾಹನ ನಿಲುಗಡೆಗೆ ಪ್ರತ್ಯೇಕ ಶುಲ್ಕ ನೀಡಬೇಕು’ ಎಂಬುದು ಇಲ್ಲಿ ವಾಹನ ನಿಲ್ಲಿಸುವ ಮೆಟ್ರೊ ಪ್ರಯಾಣಿಕರ ಪ್ರಶ್ನೆ.‘ಟೆಂಡರ್‌ ಷರತ್ತಿನ ಪ್ರಕಾರ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವಾಹನ ನಿಲುಗಡೆ ಪ್ರದೇಶದಲ್ಲಿ ಸಿಬ್ಬಂದಿ ಇರಬೇಕು. ಆದರೆ, ಮೈಸೂರು ರಸ್ತೆ ನಿಲ್ದಾಣದ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ರಾತ್ರಿ 8 ಗಂಟೆ ವೇಳೆಗೇ ಸಿಬ್ಬಂದಿ ಇರುವುದಿಲ್ಲ. ಇಲ್ಲಿ ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಸುಮಾರು 300 ಮೀಟರ್‌ ದೂರದವರೆಗೆ ರಾತ್ರಿ ಕತ್ತಲೆಯಲ್ಲಿ ನಡೆದುಕೊಂಡು ಹೋಗಬೇಕು. ಟಾರ್ಚ್‌ ಇಲ್ಲದಿದ್ದರೆ ಇಲ್ಲಿ ನಿಲ್ಲಿಸಿದ ಬೈಕ್‌ ಹುಡುಕಲು ಹರಸಾಹಸಪಡಬೇಕು’ ಎನ್ನುತ್ತಾರೆ ಮೆಟ್ರೊ ರೈಲಿನಲ್ಲಿ ನಿತ್ಯ ಪ್ರಯಾಣಿಸುವ ನಾರಾಯಣ. ‘ಮೆಟ್ರೊದಲ್ಲಿ ಪ್ರಯಾಣಿಸುವ ಮುನ್ನ ಎರಡೆರಡು ಬಾರಿ ಯೋಚಿಸಬೇಕು. ನಾನು ಮೆಟ್ರೊ ಟಿಕೆಟ್‌ಗೆ ತಿಂಗಳಿಗೆ ₹ 1,400 ನೀಡಬೇಕು. ನನ್ನ ಕಾರನ್ನು ನಿಲ್ಲಿಸಲು ತಿಂಗಳಿಗೆ ₹ 1,500 ಸಾವಿರ ಖರ್ಚು ಮಾಡಬೇಕು. ಅಲ್ಲದೇ ಕಾರಿನ ಇಂಧನಕ್ಕೂ ವೆಚ್ಚವಾಗುತ್ತದೆ. ಇದಕ್ಕೆ ಹೋಲಿಸಿದರೆ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಅಗ್ಗವಾಗುತ್ತದೆ’ ಎನ್ನುತ್ತಾರೆ ಜೆ.ಎನ್‌. ಸಂದೀಪ್‌. ಅವರು ನಾಗರಬಾವಿಯಿಂದ  ಎಂ.ಜಿ.ರಸ್ತೆಗೆ ನಿತ್ಯ ಪ್ರಯಾಣಿಸುತ್ತಾರೆ.‘ನಿಗಮವು ವಾಹನ ನಿಲುಗಡೆಗೆ ವಿಧಿಸಿರುವ ಶುಲ್ಕವನ್ನು ಕಡಿಮೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.‘ಇಲ್ಲಿ ವಾಹನ ನಿಲ್ಲಿಸಿ ಕಚೇರಿಗೆ ಮೆಟ್ರೊದಲ್ಲಿ ಹೋಗುತ್ತಿದ್ದ ನಾನು ಮಧ್ಯಾಹ್ನ ಊಟಕ್ಕೆ ಮನೆಗೆ ಬಂದು ಹೋಗುತ್ತಿದ್ದೆ. ಇಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಆರಂಭಿಸಿದ ಬಳಿಕ ಮೆಟ್ರೊ ಪ್ರಯಾಣ ದುಬಾರಿಯಾಗಿದೆ.   ಮಾಸಿಕ ಪಾಸ್‌ ವಿತರಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಆರ್‌.ವಿ. ಕಾಲೇಜು ಬಳಿಯ ನಿವಾಸಿ ಲೋಹಿತ್‌ ರಾವ್‌.‘ನಾನು ಮೈಸೂರು ರಸ್ತೆಯಿಂದ ವಿಜಯನಗರಕ್ಕೆ ಹೋಗಲು ಮೆಟ್ರೊ ಬಳಸುತ್ತಿದ್ದೇನೆ. ಕಡಿಮೆ ದೂರ ಪ್ರಯಾಣಿಸುವವರಿಗೆ ಇಷ್ಟೊಂದು ವಾಹನ ನಿಲುಗಡೆ ಶುಲ್ಕ ದುಬಾರಿ. ಮೆಟ್ರೊ ಕೇವಲ ಹಣ ಮಾಡುವ ಉದ್ದೇಶ ಇಟ್ಟುಕೊಂಡಂತಿದೆ. ಇದು ಸರಿಯಲ್ಲ’ ಎಂದು ಕಾರ್ತಿಕ ಪ್ರಭು ತಿಳಿಸಿದರು.

ಹೊಸಹಳ್ಳಿಯ ಬಾಲಗಂಗಾಧರನಾಥ ನಿಲ್ದಾಣದಲ್ಲೂ  160 ಬೈಕ್‌ಗಳ ನಿಲುಗಡೆಗೆ ಅವಕಾಶ ಇದೆ. ಇಲ್ಲೂ ಮೂಲಸೌಕರ್ಯ ಕಲ್ಪಿಸದೆಯೇ ಶುಲ್ಕ ವಸೂಲಿ ಮಾಡಲಾಗುತ್ತಿದೆ.

*

ತಿಂಗಳ ಒಳಗೆ ಸೌಲಭ್ಯ : ಕೆಸಿಐಸಿ ಭರವಸೆ

‘ಮೂಲಸೌಕರ್ಯ ಒದಗಿಸಲು ಬಿಎಂಆರ್‌ಸಿಎಲ್‌ 40 ದಿನಗಳ ಕಾಲಾವಕಾಶ ನೀಡಿದೆ. ತಿಂಗಳ ಒಳಗೆ ಇಲ್ಲಿ ಮೂಲಸೌಕರ್ಯ ಕಲ್ಪಿಸುತ್ತೇವೆ’ ಎನ್ನುತ್ತಾರೆ ಕೆಸಿಐಸಿ ಸಂಸ್ಥೆಯ ಪ್ರಾದೇಶಿಕ ಹಿರಿಯ ವ್ಯವಸ್ಥಾಪಕ (ನಿರ್ವಹಣೆ)  ವಿ.ಎಸ್‌.ಪ್ರಸಾದ್‌.

ದರ ನಿಗದಿಪಡಿಸಿದ್ದು ನಾವಲ್ಲ: ವಾಹನ ನಿಲುಗಡೆಗೆ ದರವನ್ನು ನಿಗದಿ ಪಡಿಸಿದ್ದು ನಾವಲ್ಲ. ಮೆಟ್ರೊ ನಿಗಮದವರು. ಈ ದರದ ಅನ್ವಯವಾಗಿ ನಮಗೆ ಗುತ್ತಿಗೆ ಸಿಕ್ಕಿದೆ. ಹಾಗಾಗಿ, ಇಲ್ಲಿ ವಾಹನ ನಿಲ್ಲಿಸುವವರು ದರ ಕಡಿಮೆ ಮಾಡುವಂತೆ ನಮ್ಮನ್ನು ಒತ್ತಾಯಿಸುವುದು ಸರಿಯಲ್ಲ’ ಎನ್ನುತ್ತಾರೆ  ಅವರು.ಮಾಸಿಕ ಪಾಸ್‌ ವ್ಯವಸ್ಥೆ: ‘ನಿತ್ಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಾಸಿಕ ಪಾಸ್‌ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ನಿತ್ಯ ಪ್ರಯಾಣಿಕರಿಗೆ ಆರ್ಎಫ್‌ಐಡಿ (ರೇಡಿಯೊ ಕಂಪನ ಆಧಾರಿತ ಗುರುತಿನ ಚೀಟಿ)   ವಿತರಿಸುತ್ತೇವೆ’ ಎಂದು ತಿಳಿಸಿದರು.‘ಮಾಸಿಕ ಪಾಸ್‌ಗೆ ಬೈಕ್‌ಗೆ ₹ 777 ಹಾಗೂ ಕಾರಿಗೆ ₹ 1555 ವಿಧಿಸುವ ಚಿಂತನೆ ಇದೆ. ಇದು ದುಬಾರಿ ಎಂಬ ಬಗ್ಗೆ ದೂರು ಬಂದಿದೆ. ಇದನ್ನು ಕಡಿಮೆ ಮಾಡುವ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿಯ ಗಮನಕ್ಕೆ ತರುತ್ತೇನೆ’ ಎಂದರು.‘ಬೆಸ್ಕಾಂಗೆ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಒಂದು ವಾರದೊಳಗೆ ಪಾರ್ಕಿಂಗ್‌ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸುತ್ತೇವೆ. ಸೂರು, ಸಿಸಿಟಿವಿ ಕ್ಯಾಮೆರಾ, ನೆಲಕ್ಕೆ ಇಂಟರ್‌ಲಾಕ್‌ ಮತ್ತಿತರ ಸೌಕರ್ಯಗಳನ್ನು ಕಲ್ಪಿಸುತ್ತೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.