ಭಾನುವಾರ, ಜೂನ್ 13, 2021
26 °C

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ತಾಲ್ಲೂಕಿನ ಚಂಗಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೇರೂರು ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ವಿದ್ಯುತ್, ನಿವೇಶನ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ಗ್ರಾ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಪ್ರತಿಭಟನೆ ನಡೆಸಿದರು.  ಒಂದು ದಶಕದಿಂದ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಜನಪ್ರತಿನಿಧಿ ಗಳಿಗೆ, ಅಧಿಕಾರಿಗಳಿಗೆ ಮೇಲಿಂದ ಮೇಲೆ ಅರ್ಜಿಗಳನ್ನು ನೀಡುತ್ತಲೇ ಬಂದಿದ್ದರೂ ಸಹ ಇದುವರೆಗೂ ಯಾರೊಬ್ಬರೂ ಸ್ಪಂದಿಸಿಲ್ಲ. ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರು ಹಾಗೂ ರಸ್ತೆಯನ್ನು ಸರ್ಕಾರದಿಂದ ಪ್ರತಿಯೊಂದು ಕುಟುಂಬಕ್ಕೂ ಒದಗಿಸಬೇಕು. ಗ್ರಾ.ಪಂ. ನಿಂದ ಗ್ರಾಮಕ್ಕೆ ಬೇರೆ ಯಾವುದೇ ಸೌಕರ್ಯ ಬೇಡ, ಕೊನೆ ಪಕ್ಷ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವಿಫಲವಾಗಿದೆ. ಜನರಿಂದ ಆಯ್ಕೆ ಆದ ಜನಪ್ರತಿನಿಧಿಗಳು ಅಭಿವೃದ್ಧಿ ಕಡೆ ಗಮನ ಹರಿಸದೆ ದೇಶದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಗ್ರಾಮದಲ್ಲಿ ಶೇ.30ಕ್ಕೂ ಹೆಚ್ಚು ಮಂದಿ ದಲಿತರು, ಕೂಲಿ ಕಾರ್ಮಿಕರು ಮನೆ ಕಟ್ಟಿಕೊಳ್ಳುವುದಕ್ಕೆ ನಿವೇಶನವಿಲ್ಲ. ಗ್ರಾಮದ ಸ. ನಂ. 49ರಲ್ಲಿ 51 ಎಕರೆ ಸರ್ಕಾರಿ ಗೋಮಾಳವಿದೆ. ಆ ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸಿ ಭೂಮಿ ಇಲ್ಲದೆ ಇರುವವರಿಗೆ ನಿವೇಶನ ಹಂಚಿಕೆ ಮಾಡಬೇಕು.

 

ಗ್ರಾಮಕ್ಕೆ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕೂಡಲೇ ರಸ್ತೆ ಹಾಗೂ ಚರಂಡಿ ಮಾಡಬೇಕು. ವಿದ್ಯುತ್ ಸಂಪರ್ಕ ಇಲ್ಲದೆ ಇರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಬೆಳಿಗ್ಗೆ ಯಿಂದ ಸಂಜೆ ವರೆಗೆ ಧರಣಿ ನಡೆಸಿದರೂ ಸ್ಥಳಕ್ಕೆ ತಾಲ್ಲೂಕು, ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಬರಲಿಲ್ಲ.ತಹಶೀಲ್ದಾರ್ ಚಂದ್ರಮ್ಮ ಅವರು ದೂರವಾಣಿ ಮೂಲಕ ಪ್ರತಿಭಟನಾ ಕಾರರೊಂದಿಗೆ ಮಾತನಾಡಿ, ಬುಧವಾರ (ಮಾ.7ರಂದು) ಗ್ರಾಮಕ್ಕೆ ಭೇಟಿ ನೀಡಿ  ನಿವೇಶನ ಹಂಚಿಕೆ ಸಂಬಂಧ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.ಒಂದು ವಾರದ ಗಡುವು ನೀಡಿದ್ದು, ವಾರದ ಒಳಗೆ ಸಮಸ್ಯೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸದೆ ಇದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಹೇಳಿದರು.ಪ್ರತಿಭಟನೆಯಲ್ಲಿ ರೇಣುಕಾ, ಸೋಮಶೇಖರ್, ಸತೀಶ್, ಜಯಣ್ಣ, ಪ್ರಶಾಂತ, ಗೀರೀಶ್, ಯಸಳೂರು ಗ್ರಾ.ಪಂ. ಸದಸ್ಯ ದೇವೇಂದ್ರ, ಭಾಗ್ಯಮ್ಮ, ಪುಟ್ಟಮ್ಮ ಹಾಗೂ ಮುಂತಾದವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.