ಶನಿವಾರ, ಮೇ 15, 2021
24 °C

ಮೃತನ ಕುಟುಂಬಕ್ಕೆ ಶಾಸಕರಿಂದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ: ಬೀದರ್ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ  ಸಿಡಿಲು ಬಡಿತ, ಹಾವು ಕಡಿತ ಹಾಗೂ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವವರ ವಾರಸುದಾರರಿಗೆ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಭಾನುವಾರ ತಲಾ 10 ಸಾವಿರ ರೂಪಾಯಿ ವೈಯಕ್ತಿಕ ನೆರವು ನೀಡಿದರು.ಜನವಾಡ ಪಟ್ಟಣಕ್ಕೆ ಭೇಟಿ ನೀಡಿದ ಶಾಸಕರು ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಅನಿಲ್ ಶ್ರೀಮಂತ್ ಎಂಬುವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ 10 ಸಾವಿರ ರೂಪಾಯಿ ಸಹಾಯಧನ ನೀಡಿದರು. ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.ಅಲಿಯಂಬರ್ ಗ್ರಾಮದಲ್ಲಿ ಸಿಡಿಲು ಬಿಡಿದು ಮೃತಪಟ್ಟ ಕಾರ್ಮಿಕ ಸಿದ್ಧಪ್ಪ ನರಸಪ್ಪ ಅವರ ಮನೆಗೆ ಭೇಟಿ ನೀಡಿ ಪರಿವಾರದ ಸದಸ್ಯರಲ್ಲಿ ಆತ್ಮಸ್ಥೈರ್ಯ ತುಂಬಿದರು. ಗಂಡನೇ ಕುಟುಂಬಕ್ಕೆ ಆಧಾರವಾಗಿದ್ದರು. ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ಬದುಕು ಸಾಗಿಸುವುದು ಹೇಗೆ ಎಂದು ದಿಕ್ಕು ತೋಚದಂತಾಗಿದೆ ಎಂದು ಮೃತರ ಪತ್ನಿ ಅನಿತಾ ಅಳಲು ತೋಡಿಕೊಂಡರು.ಇದಕ್ಕೆ ಸ್ಪಂದಿಸಿದ ಶಾಸಕರು 10 ಸಾವಿರ ರೂಪಾಯಿ ನಗದು ಪರಿಹಾರ ನೀಡಿದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಒಂದೂವರೆ ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಯರನಳ್ಳಿ ಗ್ರಾಮದಲ್ಲಿ ಹಾವು ಕಡಿದು ಮೃತಪಟ್ಟ ಶ್ರೀದೇವಿ ಶಿವಪ್ಪ ಕಡ್ಯಾಳೆ ಅವರ ವಾರಸುದಾರರಿಗೆ 10 ಸಾವಿರ ವೈಯಕ್ತಿಕ ನೆರವು ಒದಗಿಸಿದರು. ಶ್ರೀದೇವಿ ಅವರಿಗೆ ಪಿಯುಸಿ ಓದುತ್ತಿರುವ ಆಶಾ ಎಂಬ ಮಗಳಿದ್ದು, ಅವಳಿಗೆ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಕೊಡಿಸಲಾಗುವುದು. ಅಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪರಿಹಾರ ಮಂಜೂರು ಮಾಡಿಸಲಾಗುವುದು ಎಂದು ಆಶ್ವಾಸನೆ ನೀಡಿದರು.ಸಿದ್ಧಾಪುರ ಗ್ರಾಮದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಅಮೃತರಾವ್ ಅಟ್ಟಂಗೆ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ, ಯುವ ಮುಖಂಡ ಸಂಗಮೇಶ್ ಪಾಟೀಲ್ ಅಲಿಯಂಬರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಚಂದ್ರಶೇಖರ್ ಗಾದಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಮಶೆಟ್ಟಿ ಘೋಡಂಪಳ್ಳಿ, ಚಂದ್ರಕಾಂತ್ ಪೋದ್ದಾರ್, ಭಕ್ತರಾಜ್ ಪಾಟೀಲ್, ಧನರಾಜ್ ಪಾಟೀಲ್, ಗಣಪತಿ ಬಿರಾದಾರ್, ಬಸವರಾಜ  ಇದ್ದರು.ಪ್ರತಿಭಟನೆ: ಪಡಿತರ ಚೀಟಿ ಹಾಗೂ ಸೀಮೆ ಎಣ್ಣೆ ವಿತರಣೆಯಲ್ಲಿ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜನವಾಡ ಬಳಿಯ ಬೀದರ್-ಔರಾದ್ ರಸ್ತೆಯಲ್ಲಿ ದಿಢೀರ್ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿದರು. ಸಮಸ್ಯೆ ಬಗೆಹರಿಸಬೇಕು ಎಂದು ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿದರು. ನಂತರ ಪ್ರತಿಭಟನೆ ವಾಪಸು ಪಡೆಯಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.