ಸೋಮವಾರ, ಮೇ 23, 2022
21 °C

ಮೃತ್ಯುಕೂಪಗಳಾದ ಕೊಳವೆಬಾವಿಗಳು: ಯಾರು ಹೊಣೆ?

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಹರಿಯಾಣಾದ ಗುಡಗಾಂವ್‌ನಲ್ಲಿ ನಾಲ್ಕು ವರ್ಷದ ಹಸುಳೆ ಮಾಹಿ ಕೊಳವೆಬಾವಿಯಲ್ಲಿ ಬಿದ್ದು ಸತ್ತಿರುವ ಘಟನೆ, ಆಕೆಯನ್ನು ಜೀವಂತವಾಗಿ ಮೇಲಕ್ಕೆತ್ತಲು ನಾಲ್ಕು ದಿನಗಳ ಕಾಲ ಅಲ್ಲಿನ ಸರ್ಕಾರ, ಸ್ಥಳೀಯ ಆಡಳಿತ ನಡೆಸಿದ ವ್ಯರ್ಥ ಪ್ರಯತ್ನ ನೋಡಿದ ಮೇಲೆ ಒಟ್ಟಿಗೆ ಹಲವು ಪ್ರಶ್ನೆಗಳು ಕಾಡತೊಡಗಿವೆ.ಮಾಹಿಯ ಪಾಲಕರಿಗೆ ಆದ ನಷ್ಟವನ್ನು ತುಂಬಿಕೊಡುವುದು ಹೇಗೆ? ಸರ್ಕಾರ ನೀಡುವ ಆರ್ಥಿಕ ಪರಿಹಾರದಿಂದ ಆ ಮುದ್ದುಮಗು ವಾಪಸು ಬರಲು ಸಾಧ್ಯವೆ? ಕೊಳವೆ ಬಾವಿ ಮಾಲೀಕನ ಮೇಲೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಿದಲ್ಲಿ ಸಮಸ್ಯೆ ಪರಿಹಾರವಾಗುತ್ತದೆಯೆ? ಇಂತಹ ಘಟನೆಗಳಲ್ಲಿ ಸರ್ಕಾರದ ಅಥವಾ ಸ್ಥಳೀಯ ಆಡಳಿತದ ಪಾಲು ಇಲ್ಲವೆ?ಕೊಳವೆಬಾವಿಗೆ ಬಿದ್ದು ಸತ್ತಿರುವ ಮಕ್ಕಳ ಪೈಕಿ ಮಾಹಿ ಮೊದಲನೆಯವಳಲ್ಲ. ಇದಕ್ಕೂ ಮುನ್ನ 2008ರಲ್ಲಿ ಹರಿಯಾಣಾದ ಕುರುಕ್ಷೇತ್ರದಲ್ಲಿ ಕೊಳವೆ ಬಾವಿಗೆ ಬಿದ್ದ ಪ್ರಿನ್ಸ್ ಎಂಬ ಬಾಲಕನನ್ನು 48 ಗಂಟೆಗಳ ಬಳಿಕ ಜೀವಂತವಾಗಿ ಮೇಲಕ್ಕೆ ಎತ್ತಲಾಗಿತ್ತು. ಇಂತಹದ್ದೇ ಘಟನೆಗಳು ರಾಜಸ್ತಾನದಲ್ಲಿಯೂ ವರದಿಯಾಗಿದ್ದವು.ನಮ್ಮ ರಾಜ್ಯದಲ್ಲಿ ನಡೆದ ಇಂತಹ ಸಾವಿನ ಪ್ರಕರಣಗಳನ್ನು ನೆನಪಿಸಿಕೊಳ್ಳುವುದಾದರೆ 12 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಕರಿಯ ಎಂಬ 7 ವರ್ಷದ ಬಾಲಕ ಕೊಳವೆಬಾವಿಯಲ್ಲಿ ಬಿದ್ದ ಘಟನೆ ನಡೆದಿತ್ತು. ಈ ಪ್ರಕರಣದಿಂದ ಇಡೀ ರಾಜ್ಯದ ಜನತೆ ಬೆಚ್ಚಿಬಿದ್ದಿತ್ತು. ನೀರಿಲ್ಲದ, ಹಾಳಾದ ತೆರೆದ ಕೊಳವೆಬಾವಿಗಳನ್ನು ಕೂಡಲೇ ಮುಚ್ಚಬೇಕು ಎಂಬ ಜನಾಭಿಪ್ರಾಯ ವ್ಯಕ್ತವಾಗಿತ್ತು.ಅದಾದ ಮೂರು ವರ್ಷಗಳ ಅಂತರದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ತಿಮ್ಮ ಎಂಬ ಬಾಲಕ ಕೊಳವೆಬಾವಿಯಲ್ಲಿ ಬಿದ್ದು ಸತ್ತಿದ್ದ. 2007ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆಯಿತು. ಸಂದೀಪ್ ಎಂಬ ಬಾಲಕನ ಪಾಲಿಗೆ ಕೊಳವೆಬಾವಿ ಮೃತ್ಯುಕೂಪವಾಯಿತು. ಸುದ್ದಿವಾಹಿನಿಗಳು ಪೈಪೋಟಿಗೆ ಬಿದ್ದು ಈ ಘಟನೆ ವರದಿ ಮಾಡಿದವು.ಸಂದೀಪನನ್ನು ಮೇಲಕ್ಕೆತ್ತಲು ನಡೆಸಿದ ಕಾರ್ಯಾಚರಣೆಯ ಇಂಚಿಂಚೂ ಮಾಹಿತಿಯನ್ನು ವರ್ಣರಂಜಿತವಾಗಿ ಬಿತ್ತರಿಸಿದವು. ಆದರೆ, ಕಾರ್ಯಾಚರಣೆ ಮುಗಿದ ಮೇಲೆ ಎಂದಿನಂತೆ ಎಲ್ಲರಿಗೂ ಆ ಘಟನೆ ಮರೆತುಹೋಯಿತು. ಸಂದೀಪನ ಕುಟುಂಬಕ್ಕೆ ಪರಿಹಾರ ನೀಡಿದ ಮೇಲೆ ತನ್ನ ಜವಾಬ್ದಾರಿ ಮುಗಿಯಿತು ಎಂಬಂತೆ ಸರ್ಕಾರವೂ ವರ್ತಿಸಿತು. ರಾಜ್ಯದಲ್ಲಿ, ದೇಶದಲ್ಲಿ ಇಂತಹ ಘಟನೆ ಸಂಭವಿಸಬಾರದು. ಸಂಭವಿಸದಂತೆ ನಾವು ನೋಡಿಕೊಳ್ಳಬೇಕು. ಜೀವಾಮೃತವಾದ ನೀರನ್ನು ಉಣಿಸುವ ಕೊಳವೆಬಾವಿಗಳು ಎಳೆಯರ ಪಾಲಿಗೆ ಮೃತ್ಯಕೂಪವಾಗದಂತೆ ನೋಡಿಕೊಳ್ಳಬೇಕು ಎಂಬ ಕಾಳಜಿ ಮಾತ್ರ ಯಾರಲ್ಲೂ ಕಾಣಲಿಲ್ಲ.ಕಾರಣ ಏನು: ತೆರೆದ ಕೊಳವೆಬಾವಿಗಳನ್ನು ಮುಚ್ಚಬೇಕು ಎಂಬ ಕಡ್ಡಾಯ ನಿಯಮ ಇಲ್ಲದಿರುವುದೇ ಇಂತಹ ಘಟನೆಗಳು ಪದೇಪದೇ ಮರುಕಳಿಸಲು ಕಾರಣವಾಗಿದೆ. 

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈನಂತಹ ಮಹಾನಗರಗಳಲ್ಲಿ ಕೊಳವೆಬಾವಿ ತೆರೆಯಲು ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗುತ್ತದೆ. ಗುಡಗಾಂವ್ ಪ್ರಕರಣದಲ್ಲಿ ಬಾವಿ ತೆರೆಯಲು ಮಾಲೀಕ ಅನುಮತಿ ಪಡೆದಿರಲಿಲ್ಲ ಹಾಗೂ ತೆರೆದ ಬಾವಿ ಮುಚ್ಚಿರಲಿಲ್ಲ.ಆದರೆ, ನಮ್ಮ ರಾಜ್ಯವೂ ಸೇರಿದಂತೆ ಹಲವು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೊಳವೆಬಾವಿ ತೊಡಿಸುವಾಗ ಅನುಮತಿ ಪಡೆಯಲು ಯಾವುದೇ ಕಾಯ್ದೆ, ಶಾಸನ ಇಲ್ಲ.  ತಮ್ಮ  ಹೊಲಕ್ಕೆ ನೀರು ಬೇಕು ಅಂದಾಗಲೆಲ್ಲ ರೈತರು ಕೊಳವೆಬಾವಿ ತೊಡಿಸುತ್ತಾರೆ. ಬಾವಿಯಲ್ಲಿ ನೀರು ಬರದೇ ಇದ್ದಲ್ಲಿ ಮುಚ್ಚುವುದಿಲ್ಲ. ತೆರೆದ ಕೊಳವೆಬಾವಿಗಳ ಸುತ್ತ ಬೇಲಿ, ತಡೆಗೋಡೆ ಹಾಕುವ ಕೆಲಸವನ್ನೂ ಮಾಡುವುದಿಲ್ಲ. ಆಟದ ಭರದಲ್ಲಿ ಪುಟ್ಟ ಮಕ್ಕಳು ಬಾವಿಯೊಳಗೆ ಬೀಳುತ್ತಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಇಲ್ಲಿ ತೊಡಕಾಗಿರುವುದು ಆಡಳಿತದ ಸಮಸ್ಯೆ. ಜಲ ಸಂಪನ್ಮೂಲಗಳ ಗುರುತಿಸುವಿಕೆ, ಅಭಿವೃದ್ಧಿ ಇತ್ಯಾದಿ ವಿಚಾರಗಳು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ. ಆದರೆ, ಜಲ ಸಂಪನ್ಮೂಲಗಳ ನಿರ್ವಹಣೆಯ ಹೊಣೆ ರಾಜ್ಯ ಪಟ್ಟಿಯಲ್ಲಿದ್ದು, ಆಯಾ ರಾಜ್ಯ ಸರ್ಕಾರಗಳೇ ಅದನ್ನು ನಿರ್ವಹಿಸಬೇಕಿದೆ.ಅಂತರ್ಜಲ ಮಟ್ಟ ಕಾಪಾಡುವ ನಿಟ್ಟಿನಲ್ಲಿ ಸಮಗ್ರವಾದ ಕಾಯ್ದೆ ರೂಪಿಸುವಂತೆ ಕೇಂದ್ರ ಸರ್ಕಾರ ದಶಕಗಳ ಹಿಂದೆಯೇ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಕಳುಹಿಸಿದೆ. ಆದರೆ, ಹಲವು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸುವ ಗೋಜಿಗೆ ಹೋಗಿಲ್ಲ.ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಇತ್ತೀಚೆಗೆ ಹೆಜ್ಜೆ ಇಟ್ಟಿದೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಚಿಸಲು ಶೀಘ್ರವೇ ಅಧಿಸೂಚನೆ ಹೊರಡಿಸುವ ಲಕ್ಷಣವಿದೆ. ಪ್ರಾಧಿಕಾರ ರಚನೆಯಾದಲ್ಲಿ ಅಂತರ್ಜಲ ಮಟ್ಟ ಅತಿಯಾಗಿ ಕುಸಿದಿರುವ ರಾಜ್ಯದ 35 ತಾಲ್ಲೂಕುಗಳು ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಆ ತಾಲ್ಲೂಕುಗಳಲ್ಲಿ ಕೊಳವೆಬಾವಿ ತೊಡಿಸಲು ಅನುಮತಿ ಪಡೆಯುವುದು, ನೋಂದಣಿ ಕಡ್ಡಾಯವಾಗಲಿದೆ. ಆದರೆ, ಇತರ ತಾಲ್ಲೂಕುಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.ಕೊಳವೆಬಾವಿಗಳಿಗೆ ಮಕ್ಕಳು ಬೀಳುವ ಘಟನೆಗಳು ಪದೇಪದೇ ವರದಿಯಾಗುತ್ತಿರುವುದರಿಂದ ಅಂತರ್ಜಲ ಮಟ್ಟ ಯಾವ ಪ್ರಮಾಣದಲ್ಲೇ ಇರಲಿ, ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಕೊಳವೆಬಾವಿಗಳ ನೋಂದಣಿ ಕಡ್ಡಾಯವಾಗಿಸುವ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ನೀರು ಬತ್ತಿದ್ದಲ್ಲಿ ಅದನ್ನು ಮಾಲೀಕರು ಪೂರ್ಣವಾಗಿ ಮುಚ್ಚಬೇಕು.ಹಾಗೆ ಮಾಡದಿದ್ದಲ್ಲಿ ದಂಡ ವಿಧಿಸುವ ಅವಕಾಶ ಕಾಯ್ದೆಯಲ್ಲಿ ಇರಬೇಕು ಅಥವಾ ಕೊಳವೆಬಾವಿಗಳ ನೋಂದಣಿಯ ಅಧಿಕಾರ ಹಾಗೂ ಅದರ ಮೇಲ್ವಿಚಾರಣೆಯ ಹೊಣೆಯನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡಬೇಕು.ಇಡೀ ದೇಶಕ್ಕೆಲ್ಲ ಏಕರೂಪದಲ್ಲಿ ಕಾನೂನು ಜಾರಿಗೊಳಿಸಬೇಕಾದರೆ ಕೇಂದ್ರ ಸರ್ಕಾರವೇ ಎಚ್ಚೆತ್ತುಕೊಳ್ಳಬೇಕು. ಈ ವಿಚಾರ ರಾಜ್ಯಪಟ್ಟಿಗೆ ಸೇರುತ್ತದೆ ಎಂಬ ಕಾರಣಕ್ಕೆ ಅದು ತನ್ನ ಹೊಣೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಯಾವುದಾದರೂ ತಿದ್ದುಪಡಿಯ ಮೂಲಕ ಕಾಯ್ದೆ ಜಾರಿಗೊಳಿಸಬೇಕು ಅಥವಾ ಕೊಳವೆಬಾವಿಗಳಿಗೆ ಸಂಬಂಧಿಸಿ ನಿರ್ದಿಷ್ಟ ಕಾಲಮಿತಿಯಲ್ಲಿ ಶಾಸನ ರೂಪಿಸುವಂತೆ ಎಲ್ಲ ರಾಜ್ಯಗಳಿಗೆ ತಾಕೀತು ಮಾಡಬೇಕು.ಇದಕ್ಕೆ ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ ಮಾತ್ರ.ಕೊಳವೆಬಾವಿಗಳಿಗೆ ಮಕ್ಕಳು ಬೀಳುವ ಘಟನೆಗಳಲ್ಲಿ ಪಾಲಕರ, ಸಮುದಾಯದ ದಿವ್ಯ ನಿರ್ಲಕ್ಷ್ಯವೂ ಎದ್ದು ಕಾಣುತ್ತದೆ. ಇಂತಹ ಘಟನೆಗಳು ಪದೇಪದೇ ನಡೆಯುತ್ತಿದ್ದರೂ ಕುರುಡರಂತೆ ವರ್ತಿಸಿ, ಮಕ್ಕಳನ್ನು ಕಳೆದುಕೊಂಡ ಮೇಲೆ ಶೋಕಿಸುವುದರಲ್ಲಿ ಅರ್ಥವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.