ಮಂಗಳವಾರ, ಏಪ್ರಿಲ್ 20, 2021
32 °C

ಮೆಣಸಿನ ಬೆಳೆ ಹಾನಿ:ಪರಿಹಾರಕ್ಕಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನಲ್ಲಿ ಬೀಜ ಕಂಪೆನಿಯೊಂದು ಕಳಪೆ ಮೆಣಸಿನ ಬೀಜಗಳನ್ನು ವಿತರಿಸಿದ್ದರಿಂದ ರೈತರಿಗೆ ಹಾನಿಯಾಗಲು ಕಾರಣವಾಗಿದೆ ಎಂದು ಆರೋಪಿಸಿದ  ರೈತಸಂಘ (ನಂಜುಂಡಸ್ವಾಮಿ)ದ ಬಣ, ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಂ.ಜಯದೇವ ಮಾತನಾಡಿ, ‘ಸೆಮಿನಿಸ್ ಬೀಜ ಕಂಪೆನಿಯ ಸಿತಾರಾ ಹೆಸರಿನ ಮೆಣಸಿನ ಬೀಜಗಳು ಕಳಪೆಯಾಗಿದ್ದು, ಈ ತಳಿಯನ್ನು ಬೆಳೆದ ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಅನೇಕ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ.ಕಾರಣ ಪ್ರತಿ ಎಕರೆ ಹಾನಿಗೆ ಬೀಜ ಕಂಪನಿಯಿಂದ ರೂ.50 ಸಾವಿರ ಪರಿಹಾರವನ್ನು ರೈತರಿಗೆ ಕೊಡಿಸಬೇಕು’ ಎಂದು ಒತ್ತಾಯಿಸಿದರು.‘ತಾಲ್ಲೂಕಿನ ದೂದೀಹಳ್ಳಿ ಗ್ರಾಮದಲ್ಲಿ ಬೆಳೆದ ಮೆಣಸಿನ ಬೆಳೆಯನ್ನು ದೇವಿಹೊಸೂರಿನ ಮೆಣಸಿನಕಾಯಿ ತಳಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದು, ಬೀಜದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೆಳೆ ಹಾಳಾಗಲು ಕಾರಣವಾಗಿದೆ ಎಂದು ವರದಿ ನೀಡಿದ್ದಾರೆ’ ಎಂದು ತಿಳಿಸಿದ ಅವರು, ಅತಿವೃಷ್ಟಿಯಿಂದ ಕಂಗಾಲಾಗಿದ್ದ ತಾಲ್ಲೂಕಿನ ರೈತರು ಬೇಸಿಗೆ ಕಾಲದಲ್ಲಿ ಉತ್ತಮ ಮೆಣಸಿನ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕಳಪೆ ಬೀಜದಿಂದ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ರೈತ ಮುಖಂಡರಾದ ಮಂಜುನಾಥ ತಳವಾರ, ಪಿ.ಆರ್. ಪಾಟೀಲ, ಎಂ.ಕೆ. ಬಣಕಾರ, ಹನುಮಂತಪ್ಪ ದೊಡ್ಡಮನಿ, ಬಸವರಾಜ ಹಾಲಿಕಟ್ಟಿ, ವೈ.ಕೆ. ಮುದಿಗೌಡ್ರ, ರಾಜಶೇಖರ ಮರಿಗೌಡ್ರ, ಭರಮಣ್ಣ ಬಾಲಣ್ಣನವರ, ರುದ್ರಗೌಡ ಪುಟ್ಟತಮ್ಮನವರ, ಶಂಭಣ್ಣ ಗಂಗಾಯಿಕೊಪ್ಪ, ಬಸನಗೌಡ ಬಣಕಾರ, ಶಿವು ಗೊಡಚಿಕೊಂಡ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸದಾಶಿವ ಕೋರಿ ಇತರರು ಹಾಜರಿದ್ದರು.ಜಿಲ್ಲಾ ಉಪನಿರ್ದೇಶಕರಿಗೆ ಮನವಿ


ತಾಲ್ಲೂಕಿನಲ್ಲಿ ಕಳಪೆ ಮೆಣಸಿನ ಬೀಜಗಳನ್ನು ವಿತರಿಸಿ ನಷ್ಟಕ್ಕೆ ಕಾರಣವಾದ ಸಂಬಂಧಪಟ್ಟ ಬೀಜ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.ರೈತ ಮುಖಂಡ ಬಿ.ಎಂ.ಜಯದೇವ ಈ ಸಂದರ್ಭದಲ್ಲಿ ಮಾತನಾಡಿ, ‘ಬೀಜ ಕಂಪೆನಿಯೊಂದು ಕಳಪೆ ಮೆಣಸಿನ ಬೀಜಗಳನ್ನು ರೈತರಿಗೆ ನೀಡಿದ್ದರಿಂದ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಕಾರಣ ಪ್ರತಿ ಎಕರೆ ಹಾನಿಗೆ ಬೀಜ ಕಂಪೆನಿಯಿಂದ ರೂ. 50 ಸಾವಿರ ಪರಿಹಾರವನ್ನು ರೈತರಿಗೆ ಕೊಡಿಸಬೇಕು. ಕಂಪೆನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ತಾ.ಪಂ. ಮಾಜಿ ಸದಸ್ಯ ಮಂಜಪ್ಪ ಬೇವಿನಹಳ್ಳಿ, ಮಂಜುನಾಥ ತಳವಾರ ಇತರರು ಹಾಜರಿದ್ದರು. ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಿ.ಡಿ. ದೊಡ್ಡಗೌಡ್ರ ಮನವಿ ಸ್ವೀಕರಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.