ಸೋಮವಾರ, ಮೇ 17, 2021
28 °C

`ಮೇಣದ ಬತ್ತಿ ಹಿಡಿದು ಕಂದನ ಮುಖ ನೋಡಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಮತ್ತು ಮೂಲ ಸೌಕರ್ಯಗಳ ಕೊರತೆ ತಾರಕಕ್ಕೇರಿದ್ದು, ರೋಗಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೆರಿಗೆ ವಾರ್ಡ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರೆ, ಹೆಜ್ಜೆಯಿಡಲಾಗದಷ್ಟು ಶೌಚಾಲಯ ಗಬ್ಬು ನಾರುತ್ತಿದೆ.ಬಾಣಂತಿಯರಿಗೆ ಮತ್ತು ಕಂದಮ್ಮಗಳಿಗೆ ಸೊಳ್ಳೆಗಳ ಕಾಟ ತೀವ್ರವಾಗಿದ್ದರೆ, ಚೇತರಿಸಿಕೊಳ್ಳುತ್ತಿರುವ ರೋಗಿಗಳು ಅಲ್ಲಿನ ಗಲೀಜು ವಾತಾವರಣದಿಂದ ಮತ್ತೆ ಅನಾರೋಗ್ಯಕ್ಕೀಡಾಗುವ ಆತಂಕದಲ್ಲಿದ್ದಾರೆ. `ಆಸ್ಪತ್ರೆಯಲ್ಲಿ ಅಸಹನೀಯ ವಾತಾವರಣವಿದ್ದು, ಒಂದರ್ಥದಲ್ಲಿ ನರಕ ಯಾತನೆ ಅನುಭವಿಸುತ್ತಿದ್ದೇವೆ' ಎಂದು ಬಾಣಂತಿಯರು ನೊಂದು ನುಡಿಯುತ್ತಾರೆ.`ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಕೊಳ್ಳುವಷ್ಟು ಮತ್ತು ಚಿಕಿತ್ಸೆ ಪಡೆದುಕೊಳ್ಳುವಷ್ಟು ನಮ್ಮ ಬಳಿ ಹಣವಿಲ್ಲ. ಸರ್ಕಾರಿ ಆಸ್ಪತ್ರೆಯಾದರೂ ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಇಲ್ಲಿ ಬಂದೆವು. ಆದರೆ ಇಲ್ಲಿ ನೋಡಿದರೆ, ಒಂದು ದಿನ ಕಳೆಯುವುದು ಕಷ್ಟಕರವಾಗಿ ಪರಿಣಮಿಸಿದೆ. ಆಸ್ಪತ್ರೆಯ ಕೆಲ ವಾರ್ಡ್‌ಗಳಲ್ಲಿ ಕರೆಂಟು ಇದ್ದರೂ ಹೆರಿಗೆ ವಾರ್ಡ್‌ನಲ್ಲಿ ಕರೆಂಟು ಇಲ್ಲ.ಕಾರಣ ಕೇಳಿದರೆ, ಸ್ವಿಚ್‌ಬೋರ್ಡ್ ಸುಟ್ಟು ಹೋಗಿದೆ ಎಂದು ಆಸ್ಪತ್ರೆಯವರು ಹೇಳುತ್ತಾರೆ. ನೆಂಟರು ಯಾರಾದರೂ ವಾರ್ಡ್‌ಗೆ ಬಂದರೆ, ಮೇಣದ ಬತ್ತಿ ಹಚ್ಚಿ ಮಗುವಿನ ಮುಖ ತೋರಿಸಬೇಕು' ಎಂದು ಬಾಣಂತಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಒಂದು ಕಡೆ ಕರೆಂಟು ಸಮಸ್ಯೆ ಈ ರೀತಿಯಿದ್ದರೆ, ಮತ್ತೊಂದು ಕಡೆ ಶೌಚಾಲಯಕ್ಕೆ ಹೋಗಲಿಕ್ಕೂ ತುಂಬ ಭಯವಾಗುತ್ತೆ. ತಿಂಗಳುಗಳಿಂದ ಅಲ್ಲಿ ಸ್ವಚ್ಛತೆ ಕೈಗೊಂಡಿಲ್ಲ.ಶೌಚಾಲಯದ ಬಾಗಿಲು ತೆರೆದರೆ ಸಾಕು, ಅಸಹನೀಯವಾದ ದುರ್ನಾತ ಬರುತ್ತದೆ. ಮೂಗು ಮುಚ್ಚಿಕೊಂಡು ಒಳಗಡೆ ಹೆಜ್ಜೆಯಿಡಲಿಕ್ಕೂ ಆಗಲ್ಲ. ಒಂದು ವೇಳೆ ಒಳಗಡೆ ಹೋದರೂ ಜಾರಿ ಅಲ್ಲಿನ ಗಲೀಜಿಗೆ ಜಾರಿ ಬೀಳ್ತೀವಿ. ಶೌಚಾಲಯದಲ್ಲಿ ತುಂಬಿಕೊಂಡಿ   ರುವ ಗಲೀಜು ನೋಡಿಬಿಟ್ಟರೆ, ಊಟ ಮಾಡಲಿಕ್ಕೂ ಮನಸ್ಸು ಬರಲ್ಲ. ತಿಂದಿದ್ದೆಲ್ಲ ವಾಂತಿಯಾಗಿ ಬಿಡುತ್ತದೆ' ಎಂದು ಅವರು ತಿಳಿಸಿದರು.

`ಕರೆಂಟು ಮತ್ತು ಶೌಚಾಲಯದ ವಿಷಯ ಹೇಳಿದರೆ, ಇದಕ್ಕೂ ಮತ್ತು ತಮಗೂ ಏನೂ ಸಂಬಂಧವೇ ಇಲ್ಲ ಎಂದು ಆಸ್ಪತ್ರೆಯವರು ಉತ್ತರಿಸುತ್ತಾರೆ. ಚಿಕಿತ್ಸೆ ಕೊಡೋದು ಅಷ್ಟೇ ನಮ್ಮ ಕೆಲಸ.ಶೌಚಾಲಯ ಶುಚಿಯಾಗಿಡುವುದು ಮತ್ತು ಅದನ್ನು ಸಮರ್ಪಕವಾಗಿ ನಿರ್ವಹಿಸುವುದು ಗುತ್ತಿಗೆದಾರರಿಗೆ ಬಿಟ್ಟಿದ್ದು. ಅವರು ಸರಿಯಾಗಿ ಕೆಲಸ ಮಾಡದಿದ್ದರೆ ನಾವಾದರೂ ಏನು ಮಾಡಲಿಕ್ಕೆ ಆಗುತ್ತೆಂದು ಹೇಳಿ ಆಸ್ಪತ್ರೆಯವರು ಹೊರಟುಬಿಡುತ್ತಾರೆ. ಕಂದಮ್ಮ ಹುಟ್ಟಿದ್ದಕ್ಕೆ ಸಂಭ್ರಮಿಸಬೇಕಾ ಅಥವಾ ಈ ನರಕಯಾತನೆ ಅನುಭವಿಸಬೇಕಾ? ನನಗಂತೂ ದಿಕ್ಕೇ ತೋಚುತ್ತಿಲ್ಲ' ಎಂದು ಅವರು ಅಳಲು ತೋಡಿಕೊಂಡರು.`ಖಾಸಗಿ ಆಸ್ಪತ್ರೆಗೆ ಯಾಕೆ ಹೋಗುತ್ತೀರಾ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಎಲ್ಲರೂ ಹೇಳುತ್ತಾರೆ. ಆದರೆ ಇಲ್ಲಿ ಅನುಭವಿಸುವ ಸಂಕಷ್ಟ-ಸಮಸ್ಯೆ ಯಾರಿಗೆ ಅರ್ಥವಾಗುತ್ತೆ. ಕರೆಂಟು ಇಲ್ಲದಾಗ ಕಂದಮ್ಮಗೆ ಸೊಳ್ಳೆ ಕಚ್ಚಿ ಅಥವಾ ಮತ್ತೇನಾದರೂ ನಡೆದರೆ, ಅದಕ್ಕೆ ಯಾರು ಹೊಣೆ? ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲ ಬಡವರು ಎಂಬ ಕಾರಣಕ್ಕೆ ನಿರ್ಲಕ್ಷ್ಯ ತೋರಲಾಗುತ್ತಿದೆಯೋ ಅಥವಾ ಇಲ್ಲಿ ಯಾವಾಗಲೂ ಹೀಗೆ ಇರುತ್ತದೋ ಗೊತ್ತಿಲ್ಲ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ಬಡವರ ಜೀವಕ್ಕೆ ಬೆಲೆಯೇ ಇಲ್ಲ' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.