ಮಂಗಳವಾರ, ಮಾರ್ಚ್ 28, 2023
31 °C

ಮೇರೆ ಮೀರಿದ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾನ ಬಹಿಷ್ಕಾರ, ಮತಯಂತ್ರಗಳಲ್ಲಿ ದೋಷ, ಕಾರ್ಯಕರ್ತರ ಮಧ್ಯೆ ಗುಂಪು ಘರ್ಷಣೆ, ನಕಲಿ ಮತದಾನಕ್ಕೆ ಯತ್ನ, ಲಾಠಿ ಪ್ರಹಾರದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಒಟ್ಟಾರೆ ಮೊದಲ ಹಂತದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಇದೀಗ ಎರಡನೇ ಹಂತದ ಚುನಾವಣೆಯತ್ತ ಎಲ್ಲರ ಗಮನ ಹರಿದಿದೆ.ಪ್ರಾಥಮಿಕ ವರದಿಗಳ ಪ್ರಕಾರ ಸರಾಸರಿ ಶೇ 63ರಷ್ಟು ಮತದಾನವಾಗಿದೆ. ಸೋಮವಾರ ಅಂತಿಮ ಚಿತ್ರಣ ಸಿಗಲಿದ್ದು, ಒಟ್ಟಾರೆ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರ ಜಿಲ್ಲೆ (ಶೇ 48.4) ಹೊರತುಪಡಿಸಿದರೆ ಉಳಿದ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮತದಾನವಾಗಿದೆ.ಅಭ್ಯರ್ಥಿಗಳ ಚಿಹ್ನೆ ಬದಲಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆ ಸಂಡೂರಿನ ಭುಜಂಗ ನಗರದ ಎಂಟು ಮತಗಟ್ಟೆಗಳಲ್ಲಿ ಚುನಾವಣೆಯನ್ನು 31ಕ್ಕೆ ಮುಂದೂಡಲಾಗಿದೆ.ತುಮಕೂರು ಜಿಲ್ಲೆಯ ಅಸಲೀಪುರ, ಚಿಂತಾಮಣಿ ತಾಲ್ಲೂಕಿನ ಗಡಿಗವಾರಪಲ್ಲಿ ಗ್ರಾಮ ಸೇರಿದಂತೆ ಕೆಲವು ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುವ ಸಾಧ್ಯತೆಗಳಿವೆ. ಆಯೋಗವು ಸೋಮವಾರ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ.12 ಜಿಲ್ಲೆಗಳ 374 ಜಿಲ್ಲಾ ಪಂಚಾಯಿತಿ ಮತ್ತು 1335 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನದ ವೇಳೆ ಕೆಲವು ಮತಗಟ್ಟೆಗಳ ಬಳಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ಮಾರಾಮಾರಿ ನಡೆದಿದ್ದು, ಇದರಿಂದ ಕೆಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ ಎಂದು ಆರೋಪಿಸಿ ಹಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಅಕ್ರಮವಾಗಿ ಮದ್ಯ, ಹಣ ಹಂಚಿರುವ ಪ್ರಕರಣಗಳು ಅಲ್ಲಲ್ಲಿ ನಡೆದಿವೆ. ಹಲವೆಡೆ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವ ಪ್ರಕರಣಗಳು ವರದಿಯಾಗಿವೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಕೋಲಾರ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನ ಸ್ವತಃ ಲಾಠಿ ಹಿಡಿದು ಗುರುತಿನ ಚೀಟಿ ಇಲ್ಲದೆ ಮತ ಚಲಾಯಿಸಲು ಬಂದವರನ್ನು ನಿಯಂತ್ರಿಸಿದರು. ಚಿಂತಾಮಣಿ ತಾಲ್ಲೂಕಿನಲ್ಲಿ 2 ಮತಗಟ್ಟೆಗಳಲ್ಲಿ ಗುಂಪು ಘರ್ಷಣೆ, ಮತಯಂತ್ರ ಧ್ವಂಸ ಘಟನೆಯಿಂದಾಗಿ ಮತದಾನ ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಕೋನಪ್ಪಲ್ಲಿಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ.ಮಂಜುಕವಿದ ವಾತಾವರಣ ಇದ್ದುದರಿಂದ ಬೆಳಿಗ್ಗೆ ಮಂದಗತಿಯಲ್ಲಿ ಆರಂಭವಾದ ಮತದಾನವು, ಚಳಿ ಮರೆಯಾಗಿ ಬಿಸಿಲು ಏರುತ್ತಿದ್ದಂತೆಯೇ ಚುರುಕುಗೊಂಡಿತು.ಕೆಲವು ಮತಗಟ್ಟೆಗಳಲ್ಲಿ ಬೆಳಿಗ್ಗೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂತು. ಮತಗಟ್ಟೆಗೆ ಪೂಜೆ: ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯರಾಂ ಮತದಾನ ಆರಂಭಕ್ಕೂ ಮುನ್ನ ಮತಗಟ್ಟೆಗೆ ಪೂಜೆ ಸಲ್ಲಿಸಿದರು. ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಹಲವೆಡೆ ಅಭ್ಯರ್ಥಿಗಳು ಮತಗಟ್ಟೆಗಳಲ್ಲಿ ಪೂಜೆ ಸಲ್ಲಿಸಿದ್ದರೆ, ಇನ್ನೂ ಕೆಲವು ಅಭ್ಯರ್ಥಿಗಳು ಬೆಳಿಗ್ಗೆ ಎದ್ದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮತಗಟ್ಟೆಗಳತ್ತ ಧಾವಿಸಿದರು.ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೂ ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಿರುವುದರಿಂದ ಕೆಲವು ಅನಕ್ಷರಸ್ಥ ಮತದಾರರು ಯಾವ ರೀತಿ ಮತ ಚಲಾಯಿಸಬೇಕು ಎಂದು ಗಲಿಬಿಲಿಗೆ ಒಳಗಾದರು. ಆದರೆ ಅಂತಹ ಮತದಾರರಿಗೆ ಮತಗಟ್ಟೆ ಸಿಬ್ಬಂದಿ ಸೂಕ್ತ ಮಾಹಿತಿ ನೀಡಿ ಮತ ಚಲಾಯಿಸಲು ನೆರವಾದರು.ಕಣದಲ್ಲಿರುವ ಒಟ್ಟು 6311 ಅಭ್ಯರ್ಥಿಗಳ ಭವಿಷ್ಯ ಈಗ ಮತಯಂತ್ರಗಳಲ್ಲಿ ಅಡಗಿದ್ದು, ಸೋಲು- ಗೆಲುವಿನ ಲೆಕ್ಕಾಚಾರ ನಡೆದಿದೆ. ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಮುಖಂಡರ ಗಮನ ಈಗ ಎರಡನೇ ಹಂತದ ಚುನಾವಣೆಯತ್ತ ನೆಟ್ಟಿದೆ. ಇದೇ 31ರಂದು 17 ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ಪ್ರಚಾರ ಕಾರ್ಯ ಬಿರುಸಿನಿಂದ ನಡೆದಿದೆ.ಬೀದರ್ ವರದಿ: ಮತಗಟ್ಟೆ ಪ್ರವೇಶ ಸಂಬಂಧ ಔರಾದ ತಾಲ್ಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ಘರ್ಷಣೆಯಲ್ಲಿ ನೀಲಕಂಠ ಬಿರಾದಾರ ಎಂಬುವರಿಗೆ ಗಾಯಗಳಾಗಿವೆ. ಭಾಲ್ಕಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ ನಡೆಯಿತು. ಘಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಸೇರಿ ಮೂವರು ಗಾಯಗೊಂಡರು.ಭಾಲ್ಕಿ ತಾಲ್ಲೂಕು ಏಣಕೂರ ಗ್ರಾಮವನ್ನು ಪಂಚಾಯಿತಿ ಕೇಂದ್ರ ಸ್ಥಾನವನ್ನಾಗಿ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದರು. ಇದೇ ತಾಲ್ಲೂಕಿನ ಹಲಬರ್ಗಾ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಜನರು ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದರು. ಶಾಸಕ ಈಶ್ವರ ಖಂಡ್ರೆ ಮಧ್ಯಪ್ರವೇಶದಿಂದ ಮಧ್ಯಾಹ್ನದ ನಂತರ ಮತ ಚಲಾಯಿಸಿದರು.ಯಾದಗಿರಿ ವರದಿ: ಗುರುಮಠಕಲ್ ಮತಕ್ಷೇತ್ರ ವ್ಯಾಪ್ತಿಯ ಮುಸಲೇಪಲ್ಲಿ, ಕೊಂಕಲ್ ಗ್ರಾಮಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು.ಮುಸಲೇಪಲ್ಲಿ, ಸುರಪುರ ತಾಲ್ಲೂಕಿನ ಬಪ್ಪರಗಿ ಗ್ರಾಮಗಳಲ್ಲಿ ಕೆಲಕಾಲ ಮತದಾನ ಬಹಿಷ್ಕರಿಸಲಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮತದಾನ ಆರಂಭಗೊಂಡಿತು. ಶಹಾಪುರ ತಾಲ್ಲೂಕಿನ ನಾಗನಟ್ಟಗಿ ಗ್ರಾಮದಲ್ಲಿ ಮೂಲಸೌಲಭ್ಯಗಳಿಗಾಗಿ ಆಗ್ರಹಿಸಿ ವಾಲ್ಮೀಕಿ ಸಮಾಜದವರು ಚುನಾವಣೆ ಬಹಿಷ್ಕರಿಸಿದರು. ಸುರಪುರ ತಾಲ್ಲೂಕಿನ ಕರ್ನಾಳ ಗ್ರಾಮದಲ್ಲಿ ಒಂದು ಪಕ್ಷಕ್ಕೆ ಮತಹಾಕುವಂತೆ ಪ್ರಚೋದಿಸುತ್ತಿದ್ದ ಚುನಾವಣಾ ಅಧಿಕಾರಿಯನ್ನು ಬೇರೆಡೆ ವರ್ಗಾಯಿಸಿದ ಘಟನೆಯೂ ನಡೆದಿದೆ. ನಾಯ್ಕಲ್ ಗ್ರಾಮದಲ್ಲಿ ಮತದಾರರು ಕರೆತರುತ್ತಿದ್ದ ಟಂಟಂ ಹಾಗೂ ಜೀಪ್ ಅನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.ರಾಯಚೂರು ವರದಿ: ಜಿಲ್ಲೆಯ ವಿವಿಧೆಡೆ ಎಲೆಕ್ಟ್ರಾನಿಕ್ ಮತಯಂತ್ರಗಳು ಕೈಕೊಟ್ಟಿದ್ದರಿಂದ ಮತದಾನ ವಿಳಂಬವಾಯಿತು. ದೇವದುರ್ಗ ತಾಲ್ಲೂಕು ಕೊಪ್ಪರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಡಿ.ಕರಡಿಗುಡ್ಡ, ಹುಲಿಗುಡ್ಡ-ಕಾಟಮಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ಸಿಂಧನೂರು ತಾಲ್ಲೂಕಿನ ಗೊರೇಬಾಳ ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರಿಗೆ ಉಪಹಾರ ವ್ಯವಸ್ಥೆ ಮಾಡಿದ್ದ ಹಿನ್ನೆಲೆಯಲ್ಲಿ ಪಿಡಿಒ, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಪಕ್ಷಗಳ ವಿರುದ್ಧ ದೂರು ಸಲ್ಲಿಸಿದ್ದಾರೆ.ಶಿವಮೊಗ್ಗ ವರದಿ: ಸೊರಬದ ತತ್ತೂರು ಜಿಲ್ಲಾ ಪಂಚಾಯ್ತಿಯ ಮಂಚಿ ಮತ್ತು ತೀರ್ಥಹಳ್ಳಿಯ ಮೇಗರವಳ್ಳಿ ಜಿಲ್ಲಾ ಪಂಚಾಯ್ತಿ ಚಂಗಾರು ಗ್ರಾಮಸ್ಥರು ಮತದಾನವನ್ನು ಸಂಪೂರ್ಣ ಬಹಿಷ್ಕರಿಸಿದರು.ಮಂಚಿಯಲ್ಲಿ ಮೂಲ ಸೌಕರ್ಯಕ್ಕಾಗಿ ಹಾಗೂ ಚಂಗಾರುವಿನಲ್ಲಿ ಮಾಲತಿ ನದಿಗೆ ಸೇತುವೆ ನಿರ್ಮಿಸದ ಹಿನ್ನೆಲೆಯಲ್ಲಿ ಈ ಎರಡೂ ಗ್ರಾಮಗಳಲ್ಲಿ ಯಾರೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಮಂಚಿಯಲ್ಲಿ ಸುಮಾರು 400 ಹಾಗೂ ಚಂಗಾರು ಗ್ರಾಮದಲ್ಲಿ 346 ಮತದಾರರಿದ್ದಾರೆ.ಚಿತ್ರದುರ್ಗ ವರದಿ: ತಾಲ್ಲೂಕಿನ ಕುರುಮರಡಿಕೆರೆ ಮತಗಟ್ಟೆ ಸಮೀಪವೇ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಮತ ಚಲಾಯಿಸದ ಕುಮಾರಸ್ವಾಮಿ: ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ಮತ ಚಲಾಯಿಸಲು ಆಗಮಿಸಲಿಲ್ಲ. ಬಿಡದಿ ಸಮೀಪದ ಕೇತಿಗಾನಹಳ್ಳಿಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿಯವರು ಒಬ್ಬರೇ ಮತಚಲಾಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.