ಬುಧವಾರ, ಮೇ 25, 2022
29 °C

ಮೇರೆ ಮೀರಿದ ಮಾತು: ಅಧಿಕಾರಿಗೆ ಹೈಕೋರ್ಟ್ ಸಮನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಳಚರಂಡಿ ಹಾಗೂ `ಮ್ಯಾನ್‌ಹೋಲ್~ಗಳನ್ನು ಶುಚಿಗೊಳಿಸಲು ಕೇವಲ ಮಷಿನ್‌ಗಳ ಬಳಕೆ ಮಾಡುವುದಾಗಿ ಹೈಕೋರ್ಟ್‌ನಲ್ಲಿ ವಾಗ್ದಾನ ಮಾಡಿ, ಇದುವರೆಗೆ ಅಗತ್ಯ ಇರುವಷ್ಟು ಮಷಿನ್ ಖರೀದಿ ಮಾಡದ ಸರ್ಕಾರ, ಹೈಕೋರ್ಟ್ ಕೆಂಗಣ್ಣಿಗೆ ಸೋಮವಾರ ಗುರಿಯಾಯಿತು.ಬೆಂಗಳೂರಿನಲ್ಲಿ ಕೂಡ ಮಷಿನ್ ಬದಲು ಕಾರ್ಮಿಕರೇ ಮ್ಯಾನ್‌ಹೋಲ್‌ಗಳಲ್ಲಿ ಇಳಿಯುತ್ತಿರುವ ಬಗ್ಗೆ ತಿಳಿದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಬೆಂಗಳೂರು ಜಲ ಮಂಡಳಿ ಆಯುಕ್ತರಿಗೆ ಸಮನ್ಸ್ ಜಾರಿ ಮಾಡಿ ಖುದ್ದು ಹಾಜರಿಗೆ ಆದೇಶಿಸಿದೆ.`ಕೋರ್ಟ್ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡರೆ ಮಾತ್ರ ಪ್ರಕರಣದ ಗಂಭೀರತೆ ತಿಳಿಯುತ್ತದೆ. ಮ್ಯಾನ್‌ಹೋಲ್‌ಗಳಲ್ಲಿ ಇಳಿದು ಕಾರ್ಮಿಕರು ಸಾಯುತ್ತಿರುವ ಗಂಭೀರ ಪ್ರಕರಣಗಳಲ್ಲಿಯೂ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಲ್ಲ~ ಎಂದು ಪೀಠ ಹೇಳಿತು.ಶುಚಿ ಕಾರ್ಯಕ್ಕೆ ಕಾರ್ಮಿಕರ ಬಳಕೆ ಮಾಡುತ್ತಿರುವುದರ ವಿರುದ್ಧ ಹಿರಿಯ ವಕೀಲ

ಆರ್.ಎನ್.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.ಅಧಿಸೂಚನೆ ಬೇಡ: ಮೃತ ಕುಟುಂಬ ವರ್ಗದವರಿಗೆ ಸರ್ಕಾರ ಇದುವರೆಗೆ ಪೂರ್ಣ ಪರಿಹಾರವನ್ನು ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಪೀಠದ ಗಮನಕ್ಕೆ ತಂದರು. ಆಗ ಸರ್ಕಾರದ ಪರ ವಕೀಲರು, `ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ~ ಎಂದರು. ಇದನ್ನು ಕೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು `ಮೃತ ಕುಟುಂಬ ವರ್ಗದವರಿಗೆ ಕಾಗದದಲ್ಲಿನ ಅಧಿಸೂಚನೆ ಬೇಡ. ಅವರಿಗೆ ಹಣ ಬೇಕು. ಅದನ್ನು ಬೇಗ ಬಿಡುಗಡೆಗೊಳಿಸಿ~ ಎಂದರು.ತಾವು ನೀಡಿರುವ ಅವಧಿಯ ಒಳಗೆ ಹಣ ನೀಡದೆ ಹೋದರೆ ಮುಂದಿನ ವಿಚಾರಣೆ ವೇಳೆ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಖುದ್ದು ಹಾಜರು ಇರುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.ಆದೇಶಕ್ಕೆ ಬೆಲೆ ಇಲ್ಲವೆ?: ಮ್ಯಾನ್‌ಹೋಲ್ ಶುಚಿಗೆ ಬೆಂಗಳೂರು ಒಂದರಲ್ಲಿಯೇ 48 ಮಷಿನ್‌ಗಳನ್ನು ಖರೀದಿ ಮಾಡುವುದಾಗಿ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.ಇದಕ್ಕೆ ಆರು ತಿಂಗಳ ಅವಧಿ ಬೇಕು ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ, ಕೋರ್ಟ್ ಕಾಲಾವಕಾಶ ನೀಡಿತ್ತು. ಆದರೆ ನ್ಯಾಯಾಲಯಕ್ಕೆ ವಾಗ್ದಾನ ಮಾಡಿ ವರ್ಷ ಕಳೆಯುತ್ತ ಬಂದರೂ ಇದುವರೆಗೆ ಕೇವಲ ನಾಲ್ಕು ಮಷಿನ್‌ಗಳನ್ನು ಮಾತ್ರ ಖರೀದಿ ಮಾಡಿರುವ ಕ್ರಮಕ್ಕೆ ನ್ಯಾಯಮೂರ್ತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.`ಕಾರ್ಮಿಕರ ಶೋಚನೀಯ ಸ್ಥಿತಿ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನಿಮ್ಮ ಅಧಿಕಾರಿಗಳಿಗೆ ನೋಡಲು ಹೇಳಿ, ಆಗಲಾದರೂ ಪ್ರಕರಣದ ಗಂಭೀರತೆಯ ಅರಿವಾಗುತ್ತದೆ~ ಎಂದು ಸರ್ಕಾರದ ಪರ ವಕೀಲರಿಗೆ ಹೇಳಿದ ಪೀಠ, ವಿಚಾರಣೆಯನ್ನು ಮುಂದೂಡಿತು.

`10 ದಿನಗಳಲ್ಲಿ ಪರಿಹಾರ~
`ಮ್ಯಾನ್‌ಹೋಲ್~ಗಳಲ್ಲಿ ಇಳಿದು ಅದನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬ ವರ್ಗದವರಿಗೆ ಸರ್ಕಾರ ಈಗಾಗಲೇ ಘೋಷಿಸಿರುವಂತೆ ಐದು ಲಕ್ಷ ರೂಪಾಯಿಗಳ ಪರಿಹಾರ ನೀಡಲು ಸರ್ಕಾರಕ್ಕೆ ಕೋರ್ಟ್ 10 ದಿನಗಳ ಗುಡುವು ನೀಡಿದೆ.ಒಂದು ವೇಳೆ ಮೃತ ಕುಟುಂಬದ ವಾರಸುದಾರರು ಯಾರೆಂದು ತಿಳಿಯದೇ ಹೋದರೆ, ಆ ಕುಟುಂಬಕ್ಕೆ ನೀಡಬೇಕಿರುವ ಪರಿಹಾರದ ಹಣವನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕಚೇರಿಯಲ್ಲಿ ಠೇವಣಿ ಇಡುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. `ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ವಾರಸುದಾರರನ್ನು ಕಂಡುಹಿಡಿದು ಪರಿಹಾರದ ಹಣ ಬಿಡುಗಡೆ ಮಾಡುತ್ತದೆ~ ಎಂದು ಅವರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.