ಸೋಮವಾರ, ಜನವರಿ 20, 2020
27 °C

ಮೈಸೂರಿನಲ್ಲಿ ‘ಬುಡಕಟ್ಟು ಉತ್ಸವ’

ಪ್ರಜಾವಾಣಿ ವಾರ್ತೆ / ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಆದಿವಾಸಿಗಳ ವಿಶಿಷ್ಟ ಸಂಸ್ಕೃತಿ ಬಿಂಬಿಸುವ ‘ರಾಜ್ಯ ಮಟ್ಟದ ಬುಡಕಟ್ಟು ಉತ್ಸವ’ವನ್ನು ಪಾರಂಪರಿಕ ನಗರಿ ಮೈಸೂರಿನಲ್ಲಿ ನಡೆಸಲು ನಿರ್ಧರಿಸ­ಲಾಗಿದೆ. ಮೈಸೂರಿನ ‘ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ’ಯು, ನವದೆಹಲಿಯ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾ­ಲಯಕ್ಕೆ ‘ಬುಡಕಟ್ಟು ಉತ್ಸವ’ ನಡೆಸುವ ಬಗ್ಗೆ ಪ್ರಸ್ತಾವ ಸಲ್ಲಿಸಿತ್ತು.

ಇದನ್ನು ಅನು­ಮೋದಿಸಿದ ಮಂತ್ರಾಲಯವು ‘ಸಂಶೋಧನಾ ಮಾಹಿತಿ ಮತ್ತು ಸಾರ್ವತ್ರಿಕ ಶಿಕ್ಷಣ’ ಯೋಜನೆಯಡಿ ಒಟ್ಟು ₨ 9.40 ಲಕ್ಷವನ್ನು ಮಂಜೂರು ಮಾಡಿದೆ. ಶೇ 75ರಷ್ಟು ಹಣವಾದ ₨ 7.5 ಲಕ್ಷ­ವನ್ನು ಮೊದಲ ಕಂತಿನಲ್ಲಿ ಬಿಡುಗಡೆಯನ್ನೂ ಮಾಡಿದೆ. ಹಲವು ಸಂಸ್ಕೃತಿಗಳ ಕಣಜವಾದ ಕರ್ನಾಟಕ­ದಲ್ಲಿ ಸೋಲಿಗ, ಕೊರಗ, ಜೇನುಕುರುಬ, ಕಾಡುಕುರುಬ, ಯರವ, ಸಿದ್ಧಿ, ಹಕ್ಕಿಪಿಕ್ಕಿ, ಇರುಳಿಗ, ಮಲೆಕುಡಿಯ, ಮೇದ ಸೇರಿದಂತೆ 50 ಬಗೆಯ ಬುಡಕಟ್ಟು ಪಂಗಡಗಳಿದ್ದು, ಅಂದಾಜು 50 ಲಕ್ಷ ಜನಸಂಖ್ಯೆಯಿದೆ. ಪ್ರತಿಯೊಂದು ಪಂಗಡವೂ ತನ್ನದೇ ಆದ ಜೀವನ ಶೈಲಿ ಮತ್ತು ಸಂಸ್ಕೃತಿಯನ್ನು ಹೊಂದಿದೆ.ವಿವಾಹ, ನಾಮ­ಕರಣ, ಹಬ್ಬ, ಹರಿದಿನ ಮುಂತಾದ ವಿಶೇಷ ಸಂದರ್ಭದಲ್ಲಿ ತಮ್ಮ ಸಂಪ್ರದಾಯ­ಗಳನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಆದಿವಾಸಿ­ಗಳು ಬರುತ್ತಿದ್ದಾರೆ. ಆದರೆ, ನಾಗರಿಕ ಸಮಾಜಕ್ಕೆ ಬುಡಕಟ್ಟು ಜನಾಂಗದ ಆಚಾರ–ವಿಚಾರಗಳು ಅಷ್ಟು ಪರಿಚಿತ­ವಾಗಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಉದ್ದೇಶವನ್ನು ‘ಬುಡಕಟ್ಟು ಉತ್ಸವ’ ಹೊಂದಿದೆ.ಸಂಸ್ಕೃತಿ ಅನಾವರಣ: ಸೋಲಿಗರ ರೊಟ್ಟಿ ಹಬ್ಬ, ಸೋಬಾನೆ ಹಾಡು, ಮಾರಿ ಕುಣಿತ, ಪಿಣಸಿ ನೃತ್ಯ, ಕೊರಗ ಜನಾಂಗದ ಬೋಮಿ ಹಬ್ಬ, ಕಾಡು­ಕುರುಬರ ಡೋಲು ಕುಣಿತ, ಕರಿ ಕೊರಳು, ಜೇನು ಕುರುಬರ ಕೋಲಾಟ, ಬಿದಿರು ಕುಣಿತ, ಕರಡಿ ಕುಣಿತ, ಕುಂಡೆ ಹಬ್ಬ, ಇರುಳಿಗರ ಜನಪದ ನೃತ್ಯ ಮತ್ತು ಹಾಡು, ಸಿದ್ಧಿ ಜನಾಂಗದ ಬೇಟೆ ನೃತ್ಯ, ಕಾಡುಕುರುಬ ಮತ್ತು ಜೇನುಕುರುಬರ ಜೇನು ಸಂಗ್ರಹಣೆ ಪ್ರಾತ್ಯಕ್ಷಿಕೆ, ಮೇದ ಜನಾಂಗದ ಬಿದಿರು ತಯಾರಿಸುವ ಕೌಶಲ ಮುಂತಾದ ಕಲಾಪ್ರಕಾರಗಳು ‘ಬುಡಕಟ್ಟು ಉತ್ಸವ’ದಲ್ಲಿ ಅನಾ­ವರಣ­ಗೊಳ್ಳಲಿವೆ.

ಬುಡಕಟ್ಟು ಜನಾಂಗ­ಗಳ ಸಾಂಸ್ಕೃತಿಕ ಕಾರ್ಯಕ್ರಮ­ಗಳ ಪರಿಚಯ, ಆಹಾರ, ಉಡುಗೆ–ತೊಡುಗೆ ಪ್ರದರ್ಶನ, ಕುಲಕಸುಬು, ಕಲೆ, ಕಸೂತಿ ಬಗ್ಗೆ ಮಾಹಿತಿ, ಕ್ರೀಡಾ ಚಟುವಟಿಕೆಗಳು, ವಿಚಾರ­ಗೋಷ್ಠಿ, ಸಂವಾದ ಹಾಗೂ ಆದಿವಾಸಿಗಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸೇರಿ­ದಂತೆ ಹಲವು ಕಾರ್ಯಕ್ರಮ­ಗಳನ್ನು ಆಯೋಜಿಸಲು ಸಿದ್ಧತೆ ನಡೆಯುತ್ತಿವೆ.ಆದಿವಾಸಿಗಳು ಇರುವ ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡಗಳನ್ನು ಆಯ್ಕೆಗೊಳಿಸಿ, ಸೂಕ್ತ ತರಬೇತಿ ನೀಡಿ ಉತ್ಸವಕ್ಕೆ ಕಳುಹಿಸಿಕೊಡುವಂತೆ, ಆಯಾ ಜಿಲ್ಲೆಗಳ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳೊಂದಿಗೆ ಗಿರಿಜನ ಸಂಶೋಧನಾ ಸಂಸ್ಥೆ ನಿರ್ದೇಶಕರು ಶೀಘ್ರದಲ್ಲೇ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ನಮ್ಮ ರಾಜ್ಯದ ಸಂಸ್ಕೃತಿ ವೈಶಿಷ್ಟ್ಯವನ್ನು ಇತರರಿಗೂ ತಿಳಿಸುವ ಉದ್ದೇಶದಿಂದ, ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿರುವ ಬುಡಕಟ್ಟು ಜನಾಂಗಗಳ ಪ್ರತಿನಿಧಿ ಹಾಗೂ ಸಂಘ–ಸಂಸ್ಥೆಗಳಿಗೆ ಆಹ್ವಾನ ನೀಡಲಾಗುತ್ತದೆ.

ಒಟ್ಟು 3 ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ ಈ ಉತ್ಸವದಲ್ಲಿ 200 ಬುಡಕಟ್ಟು ಪ್ರತಿನಿಧಿಗಳು ಭಾಗ­ವಹಿಸಲಿದ್ದಾರೆ. ಉತ್ಸವಕ್ಕೆ ಬರುವ ಪ್ರತಿನಿಧಿಗಳಿಗೆ ಉಚಿತ ಊಟ, ವಸತಿ ಹಾಗೂ ಸ್ಪರ್ಧೆಗಳಲ್ಲಿ ವಿಜೇತ­ರಾದ­ವರಿಗೆ ಬಹುಮಾನ ನೀಡಲಾಗುತ್ತದೆ. ಬುಡಕಟ್ಟು ಉತ್ಸವವನ್ನು 3 ತಿಂಗಳ ಒಳಗೆ ಆಯೋಜಿಸಲು ಕೇಂದ್ರ ಬುಡ­ಕಟ್ಟು ವ್ಯವಹಾರಗಳ ಮಂತ್ರಾಲ­ಯವು ಸೂಚಿಸಿರುವ ಮೇರೆಗೆ ಮೈಸೂರಿನ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ಭರದ ಸಿದ್ಧತೆಗಳನ್ನು ನಡೆಸಿದೆ. ಹೆಚ್ಚಿನ ಮಾಹಿತಿಗೆ ದೂ. 0821–2560275 ಸಂಪರ್ಕಿಸಬಹುದು.

ಸಂಸ್ಕೃತಿ ವಿನಿಮಯಕ್ಕೆ ವೇದಿಕೆ?

ವೈವಿಧ್ಯಮಯ ಬುಡಕಟ್ಟು ಸಂಸ್ಕೃತಿಗಳು ಒಂದೇ ವೇದಿಕೆಯಲ್ಲಿ ಅನಾವರಣ­ಗೊಳ್ಳಲಿವೆ. ಇದರಿಂದ ಆದಿವಾಸಿಗಳ ಕಲೆ, ಸಂಸ್ಕೃತಿಯನ್ನು ಉಳಿಸಿ–ಬೆಳೆಸುವ ದೃಷ್ಟಿ­ಯಿಂದ ಈ ಉತ್ಸವ ಮಹತ್ವದ್ದಾಗಿದೆ. ಜತೆಗೆ, ನಮ್ಮ ರಾಜ್ಯದ ಮತ್ತು ನೆರೆ ರಾಜ್ಯಗಳ ಸಂಸ್ಕೃತಿ ವಿನಿಮಯಕ್ಕೆ ಉತ್ತಮ ವೇದಿಕೆಯಾಗಲಿದೆ. ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ.

– ಡಾ.ಟಿ.ಟಿ. ಬಸವನಗೌಡ, ನಿರ್ದೇಶಕ,ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ, ಮೈಸೂರು.

ಪ್ರತಿಕ್ರಿಯಿಸಿ (+)