ಮೋದಿಗೆ ನರಹತ್ಯೆ ಕಳಂಕ

ಮೈಸೂರು: ‘ಮೋದಿ ಹರ ಹರ ಅಲ್ಲ, ಅವರು ನರ ನರ ಮೋದಿ. ಏಕೆಂದರೆ ಗೋಧ್ರಾ ನರಮೇಧ ಪ್ರಕರಣದಲ್ಲಿ ದೋಷಮುಕ್ತ ಎಂದು ಹೇಳಿದ್ದರೂ, ಆ ಕಳಂಕದಿಂದ ಅವರು ಪಾರಾಗಿಲ್ಲ. ಹಾಗಾಗಿ, ಇಂಥ ವ್ಯಕ್ತಿ ಖಂಡಿತ ಪ್ರಧಾನಿಯಾಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನರಮೇಧ ನಡೆದಿದ್ದು ಸುಳ್ಳಲ್ಲ. ಅಂತಹ ಘಟನೆ ನಡೆದಾಗ ಮೋದಿ ಗುಜರಾತ್ನ ಮುಖ್ಯಮಂತ್ರಿ ಆಗಿದ್ದರು. ಸಾಕ್ಷಿ, ಪುರಾವೆಗಳ ಕೊರತೆಯಿಂದ ಅವರು ದೋಷಮುಕ್ತ ಎಂದು ಹೇಳಲಾಗಿದೆಯೇ ಹೊರತು, ಅವರು ಆ ಕಳಂಕದಿಂದ ಮುಕ್ತರಲ್ಲ’ ಎಂದರು.
ಮೋದಿ ಕಟ್ಟಾ ಆರ್ಎಸ್ಎಸ್ ಮನುಷ್ಯ. ಆರ್ಎಸ್ಎಸ್ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಚುನಾವಣೆಯಲ್ಲಿ ಹಣ ಚೆಲ್ಲುತ್ತಿದ್ದಾರೆ. ಅದನ್ನು ಅವರೇನೂ ಕೂಲಿ ಮಾಡಿ ದುಡಿದಿದ್ದಲ್ಲ. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಮೋದಿಗೆ ನೆರವಾಗುತ್ತಿವೆ. ಹೀಗಾಗಿ, ಚುನಾವಣಾ ವೆಚ್ಚವನ್ನು ಭರಿಸಲು ಅವರಿಗೆ ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಮೋದಿ ನಾಮಬಲದಿಂದ ಗೆಲ್ಲುತ್ತೇವೆಂದು ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಎಷ್ಟೇ ಅಬ್ಬರದ ಪ್ರಚಾರ ಕೈಗೊಂಡರೂ, ವೈಭವೀಕರಿಸಿದರೂ ಮೋದಿ ಪ್ರಭಾವ ಬೀರುವುದಿಲ್ಲ ಎಂದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ತಮ್ಮ ರಾಜ್ಯದಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲು ಎಷ್ಟು ವರ್ಷ ತೆಗೆದುಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೂ ನ್ಯಾಯಾಲಯ ಆದೇಶ ನೀಡಬೇಕಾಯಿತು. ಅಂತಹ ವ್ಯಕ್ತಿ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರಂತಹ ವ್ಯಕ್ತಿಗಳನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.
‘ಗುಜರಾತು ಮಾದರಿ’ ಎನ್ನುವುದೆಲ್ಲ ಬರೀ ಸುಳ್ಳು. ಅಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಶೇ 60ಕ್ಕೂ ಅಧಿಕ. ಇದು ರಾಷ್ಟ್ರದ ಶೇಕಡಾವಾರುಗಿಂತ ಹೆಚ್ಚು. ಆರೋಗ್ಯಕ್ಕೆ ಕರ್ನಾಟಕದ ಬಜೆಟ್ನಲ್ಲಿ ಶೇ 5ರಷ್ಟು ಹಣ ತೆಗೆದಿರಿಸಿದ್ದೇವೆ. ಗುಜರಾತ್ ರಾಜ್ಯದಲ್ಲಿ ಆ ಪ್ರಮಾಣ ಶೇ 3ರಷ್ಟು ಮಾತ್ರ. ಇಂಥ ಅನೇಕ ಉದಾಹರಣೆಗಳು ಇರುವಾಗ ಗುಜರಾತು ಹೇಗೆ ಮಾದರಿ ಆಗುತ್ತದೆ ಎಂದು ಪ್ರಶ್ನಿಸಿದರು.
ಅಪಪ್ರಚಾರದಲ್ಲಿ ಬಿಜೆಪಿ: ಕಳೆದ ವರ್ಷ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರಾವಳಿಯಲ್ಲಿ ಮೋದಿ ಅವರು ಭಾಷಣ ಮಾಡಿದ್ದರು. ಆದರೆ, 8 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತು. ಲೋಕಸಭಾ ಚುನಾವಣೆಯಲ್ಲಿ ವರ್ಚಸ್ಸು ವೃದ್ಧಿಸಲು ಕಾರಣಗಳಿಲ್ಲ. ಹೀಗಾಗಿ, ಅಪಪ್ರಚಾರದಲ್ಲಿ ಬಿಜೆಪಿ ತೊಡಗಿದೆ. ಆದರೆ, ಈ ದೇಶದ ಬಹುಸಂಖ್ಯಾತ ಜನರು ಜಾತ್ಯತೀತ ಮನೋಭಾವದವರು. ಹೀಗಾಗಿ, ಯುಪಿಎ ಮತ್ತೆ ಬಹುಮತ ಪಡೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಿದ್ಧ: ‘ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ. ಆದರೆ, ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಠಿಣ. ಹಿರಿಯ ನಾಯಕರ ಸಂಖ್ಯೆ ಹೆಚ್ಚು. ಹೀಗಾಗಿ, ಆಕಾಂಕ್ಷಿಗಳೂ ಹೆಚ್ಚು. ಟಿಕೆಟ್ ಸಿಗದೆ ಇರುವವರಿಗೆ ಅಸಮಾಧಾನವಿದೆ. ಹೈಕಮಾಂಡ್ ತೀರ್ಮಾನಿಸಿರುವುದರಿಂದ ಯಾವುದೇ ಗೊಂದಲವಿಲ್ಲ. ಜತೆಗೆ, ಬಂಡಾಯವೂ ಇಲ್ಲ ಎಂದರು.
ಟಿಕೆಟ್ ಸಿಗಲಿಲ್ಲ ಎನ್ನುವುದಕ್ಕೆ ಕುಮಾರ್ ಬಂಗಾರಪ್ಪ ಅವರಿಗೆ ಅಸಮಾಧಾನವಾಗಿದೆ ಎನ್ನುವುದು ಹೈಕಮಾಂಡ್ಗೂ ಗೊತ್ತಿದೆ. ಮಂಜುನಾಥ್ ಭಂಡಾರಿ ಅವರನ್ನು ಆಯ್ಕೆ ಮಾಡಿದ್ದು ಕೂಡಾ ಹೈಕಮಾಂಡ್. ಇದರೊಂದಿಗೆ ಮಂಡ್ಯ ಕ್ಷೇತ್ರದಿಂದ ರಮ್ಯಾ ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಹೈಕಮಾಂಡ್ ತಿಳಿಸಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಸರ್ಕಾರ ಹಾಗೂ ಯುಪಿಎ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ. ಕನಕಪುರದ ಉಪ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಬ್ಬರು, ‘ರೂಪಾಯಿಗೊಂದು ಕಿಲೋ ಅಕ್ಕಿ ಕೊಡುತ್ತಿರುವುದರಿಂದ ತಿಂಗಳಿಗೆ ರೂ.700 ಉಳಿಯುತ್ತಿದೆ. ಇದರಿಂದ ಮಕ್ಕಳನ್ನು ಓದಿಸಲು ಸಾಧ್ಯವಾಗುತ್ತಿದೆ’ ಎಂದು ಹೇಳಿದ್ದರು’ ಎಂಬುದನ್ನು ಸಿದ್ದರಾಮಯ್ಯ ಈ ವೇಳೆ ನೆನಪಿಸಿಕೊಂಡರು.
ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ನಮ್ಮ ಕ್ಷೇತ್ರದವರಲ್ಲ. ಅವರು ಅಭ್ಯರ್ಥಿಯಾಗಿದ್ದಕ್ಕೆ ಬಿಜೆಪಿಯಲ್ಲಿಯೇ ದೊಡ್ಡ ಅಸಮಾಧಾನವಿದೆ. ಇನ್ನು ಜಾಫರ್ ಷರೀಫ್ ಅವರದು ಮುಗಿದ ಅಧ್ಯಾಯ. ಹೀಗಾಗಿ, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯೇ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
ಮೊಯಿಲಿ – ಮೋದಿ
ಮೋದಿ ಹೆಸರು ಹೇಳುವ ಮೊದಲು ಸಿದ್ದರಾಮಯ್ಯ ಅವರು ಮೊಯಿಲಿ ಹೆಸರು ಹೇಳುತ್ತಿದ್ದರು. ಇದು ಎರಡು–ಮೂರು ಬಾರಿ ಪುನರುಚ್ಚರಿಸಿದಾಗ, ಮೊಯಿಲಿ ಹೆಸರು ಜಾಸ್ತಿ ಹೇಳ್ತೇವೆ. ಮೋದಿ ಹೆಸರು ಜಾಸ್ತಿ ಹೇಳಲ್ಲ. ಹೀಗಾಗಿ, ಮೋದಿ ಹೆಸರು ಹೇಳುವಾಗೆಲ್ಲ ಮೊಯಿಲಿ ಎನ್ನುವ ಹೆಸರು ಬರುತ್ತಿದೆ ಎಂದು ನಕ್ಕರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.