ಶನಿವಾರ, ಜೂನ್ 12, 2021
24 °C

ಮೋದಿ ಭೇಟಿಗೆ ಕೇಜ್ರಿವಾಲ್ ಹಠಾತ್ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿನಗರ (ಪಿಟಿಐ): ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಿರಂತರವಾಗಿ ಟೀಕಿಸುತ್ತಿದ್ದ ಎಎಪಿ ನಾಯಕ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಅನಿಲ ಬೆಲೆ ಮತ್ತು ಗುಜರಾತ್ ಅಭಿವೃದ್ಧಿ ವಿಚಾರದ ಚರ್ಚೆಗಾಗಿ ಗುಜರಾತ್ ಮುಖ್ಯಮಂತ್ರಿ ಜೊತೆಗೆ ಭೇಟಿಗೆ ಹಠಾತ್ ಯತ್ನ ನಡೆಸಿದರು. ಆದರೆ ನರೇಂದ್ರ ಮೋದಿ ಭೇಟಿ ಅವಕಾಶ ಪಡೆಯುವಲ್ಲಿ ವಿಫಲರಾದರು.ಮನಿಶ್ ಸಿಸೋಡಿಯಾ ಸೇರಿದಂತೆ ಇತರ ಎಎಪಿ ನಾಯಕರಾದ ಕಳೆದ ಎರಡು ದಿನಗಳಿಂದ 'ಗುಜರಾತ್ ಅಭಿವೃದ್ಧಿಯ ಪರಿಶೀಲನೆ' ಮಾಡುತ್ತಿರುವ ಕೇಜ್ರಿವಾಲ್ ಈದಿನ ಬೆಳಗ್ಗೆ ಹಠಾತ್ತನೆ ಮೋದಿ ಭೇಟಿ ಬಯಸಿ ಗಾಂಧಿನಗರಕ್ಕೆ ಆಗಮಿಸಿದರು.ಆದರೆ ಗುಜರಾತ್ ಮುಖ್ಯಮಂತ್ರಿಯವರ ಅಧಿಕೃತ ಕಚೇರಿಯಿಂದ 5 ಕಿ.ಮೀ. ದೂರದಲ್ಲಿಯೇ ಕೇಜ್ರಿವಾಲ್ ಅವರನ್ನು ತಡೆದ ಪೊಲೀಸರು, ಮೋದಿ ಅವರ ಜೊತೆಗೆ ಭೇಟಿ ನಿಶ್ಚಯ ಮಾಡಿಕೊಳ್ಳುವಂತೆ ಸೂಚಿಸಿದರು.ನಂತರ ಪೊಲೀಸ್ ಭದ್ರತೆಯೊಂದಿಗೆ ಸಿಸೋಡಿಯಾ ಅವರು ಮುಖ್ಯಮಂತ್ರಿಯವರ ಅಧಿಕೃತ ಕಚೇರಿಗೆ ಮೋದಿ-ಕೇಜ್ರಿವಾಲ್ ಭೇಟಿ ನಿಶ್ಚಯಕ್ಕಾಗಿ ತೆರಳಿದರು.ಮೋದಿ ಅವರನ್ನು 'ಅಂಬಾನಿ ಪಾಕೆಟ್' ಎಂಬುದಾಗಿ ಜರೆದಿದ್ದ ಕೇಜ್ರಿವಾಲ್ ಸಾರ್ವಜನಿಕ ಸಭೆಗಳಲ್ಲಿ ಮುಂದಿನ ತಿಂಗಳಲ್ಲಿ ದುಪ್ಪಟ್ಟುಗೊಳ್ಳಲಿರುವ ನೈಸರ್ಗಿಕ ಅನಿಲ ಬೆಲೆ ಏರಿಕೆಯನ್ನು ಮೋದಿ ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಈ ಬೆಲೆ ಏರಿಕೆಯ ಪ್ರಮುಖ ಫಲಾನುಭವಿ ರಿಲಯನ್ಸ್ ಇಂಡಸ್ಟ್ರೀಸ್ ಎಂದು ಅವರು ಹೇಳಿದ್ದರು.'ಮೋದೀಜಿ ಅವರ ಭೇಟಿ ಕೋರಲು ಹೋಗುತ್ತಿದ್ದೇನೆ. ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಭೇಟಿ ನಿಶ್ಚಯಕ್ಕೆ ಕೋರಿದ್ದೇನೆ. ಮೋದೀಜಿ ಅವರು ಈ ಬಗ್ಗೆ ನಿರ್ಧರಿಸಿ ಶೀಘ್ರವೇ ನಮಗೆ ತಿಳಿಸಲಿದ್ದಾರೆ ಎಂದು ಆಪ್ತ ಕಾರ್ಯದರ್ಶಿ ಹೇಳಿದ್ದಾರೆ' ಎಂದು ಮುಖ್ಯಮಂತ್ರಿ ಮನೆಯತ್ತ ತೆರಳಿದ ಬಳಿಕ ಸಿಸೋಡಿಯಾ 'ಟ್ವೀಟ್' ಮಾಡಿದರು.'ಕೇಜ್ರಿವಾಲ್ ಅವರ ಕಾರನ್ನು ತಡೆ ಹಿಡಿದಿಲ್ಲ. ಆದರೆ ಅವರೇ ಇಲ್ಲಿ ವಾಹನ ನಿಲ್ಲಿಸಿದ್ದಾರೆ. ನಾನು ಸಿಸೋಡಿಯಾ ಅವರನ್ನು ಮುಖ್ಯಮಂತ್ರಿಯವರ ಕಚೇರಿಗೆ ಕರೆದೊಯ್ದೆ. ಸಿಸೋಡಿಯಾ ಅವರು ಅಲ್ಲಿ ಭೇಟಿ ನಿಶ್ಚಯಕ್ಕೆ ಲಿಖಿತ ಮನವಿ ಸಲ್ಲಿಸಿದರು. ಎರಡು ಅಥವಾ ಮೂರು ದಿನದಲ್ಲಿ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ತಿಳಿಸಲಾಯಿತು' ಎಂದು ಗಾಂಧಿ ನಗರದ ಪೊಲೀಸ್ ವರಿಷ್ಠಾಧಿಕಾರಿ ಶರದ್ ಸಿಂಘಾಲ್ ನುಡಿದರು.ನಂತರ ಜೈಪುರಕ್ಕೆ ತೆರಳುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದ ಕೇಜ್ರಿವಾಲ್ 'ಮೋದಿ ಅವರ ಬಳಿ ನನ್ನಂತಹ ಸಾಮಾನ್ಯ ವ್ಯಕ್ತಿಗಾಗಿ ಸಮಯವಿಲ್ಲ. ಸಾರ್ವಜನಿಕವಾಗಿ ಭಾಷಣ ಮಾಡುವುದರ ಹೊರತು ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ' ಎಂದು ದೂರಿದರು.ಅದಕ್ಕೆ ಮುನ್ನ ದೆಹಲಿಯ ಮಾಜಿ ಮುಖ್ಯಮಂತ್ರಿ ಗುಜರಾತ್ ಅಭಿವೃದ್ಧಿ ಪ್ರತಿಪಾದನೆ ಸಂಬಂಧ 16 ಪ್ರಶ್ನೆಗಳನ್ನು ಎತ್ತಿ, ಮೋದಿ ಅವರ ಜೊತೆಗೆ ಚರ್ಚಿಸಬಯಸುವುದಾಗಿ ಹೇಳಿದ್ದರು. ಅನಿಲ ಬೆಲೆ ಏರಿಕೆ ನಿಗದಿ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.